ಕೋಲಾರ:- ನಗರದ 14 ಕೇಂದ್ರಗಳಲ್ಲಿ ಭಾನುವಾರ ಯಾವುದೇ ಗೊಂದಲವಿಲ್ಲದೇ ಸುಗಮವಾಗಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಯ ಎರಡು ಅಧಿವೇಶನಗಳಿಗೆ ಒಟ್ಟು 520 ಮಂದಿ ಗೈರಾಗಿದ್ದು ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಎಲ್ಲಾ 14 ಕೇಂದ್ರಗಳಲ್ಲೂ ಪರೀಕ್ಷೆ ನಡೆದಿದ್ದು, ಬೆಳಗ್ಗೆ ನಡೆದ ಮೊದಲ ಅಧಿವೇಶನದ ಪರೀಕ್ಷೆಯ ಪತ್ರಿಕೆ-1ಕ್ಕೆ ನೋಂದಾಯಿಸಿದ್ದ 2141 ಮಂದಿ ಪೈಕಿ 1891 ಮಂದಿ ಹಾಜರಾಗಿ 251 ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮಧ್ಯಾಹ್ನ ನಡೆದ 2ನೇ ಅಧಿವೇಶನದ ಪತ್ರಿಕೆ-2ಕ್ಕೆ ನೋಂದಾಯಿಸಿದ್ದ 3394 ಮಂದಿ ಪೈಕಿ 3125 ಮಂದಿ ಹಾಜರಾಗಿದ್ದು, 269 ಮಂದಿ ಗೈರಾಗುವ ಮೂಲಕ ಎರಡೂ ಅಧಿವೇಶನಗಳಿಗೂ ಸೇರಿ ಒಟ್ಟು 520 ಅಭ್ಯರ್ಥಿಗಳು ಗೈರಾದಂತಾಗಿದೆ.
ಕೈಕೊಟ್ಟ ವಿದ್ಯುತ್ ಜನರೇಟರ್ ಸೌಲಭ್ಯ
ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಯಾವುದೇ ಅವ್ಯವಹಾರ,ಗೊಂದಲಗಳಿಗೆ ಅವಕಾಶವಿಲ್ಲದಂತೆ ನಡೆದ ಪರೀಕ್ಷೆಯಲ್ಲಿ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿತ್ತು ಮತ್ತು ವೆಬ್ ಕಾಸ್ಟಿಂಗ್ಗೂ ಕ್ರಮವಹಿಸಿದ್ದು, ಇಂದು ತುರ್ತು ದುರಸ್ಥಿ ಕಾರ್ಯದಿಂದಾಗಿ ಕರೆಂಟ್ ಕೈಕೊಟ್ಟ ಕಾರಣ ಕೇಂದ್ರಗಳಲ್ಲಿ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೋಲಾರ ನಗರದ ಒಟ್ಟು 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗಿನ ಅಧಿವೇಶನ 9-30ರಿಂದ 12ರವರೆಗೂ ಪತ್ರಿಕೆ-1ರ ಪರೀಕ್ಷೆ 9 ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ 2 ರಿಂದ 4-30 ರವರೆಗೂ ಪತ್ರಿಕೆ-2ರ ಪರೀಕ್ಷೆ 14 ಕೇಂದ್ರಗಳಲ್ಲಿ ನಡೆಯಿತು.
144ನೇ ಸೆಕ್ಷನ್ ನಿಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಲಗಿತ್ತು. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ 200 ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ 8-30 ರಿಂದ ಸಂಜೆ 4-30 ರವರೆಗೂ ಮುಚ್ಚಿಸಿದ್ದು, 14 ಪರೀಕ್ಷಾ ಕೇಂದ್ರಗಳಿಗೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಗೌಪ್ಯ ಸಾಮಗ್ರಿಗಳನ್ನು ಖಜಾನೆಯಲ್ಲಿ ಸಂರಕ್ಷಿಸಲು ಜಿಲ್ಲಾಧಿಕಾರಿಗಳೇ ರಚಿಸಿದ್ದ ತ್ರಿಸದಸ್ಯ ಸಮಿತಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಯನ್ನು ಪೊಲೀಸ್ ಬಂದೋಬಸ್ತ್ನಲ್ಲಿ ತಲುಪಿಸುವ ಕಾರ್ಯ ನಡೆಸಿದ್ದು, ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಡಿಡಿಪಿಐ ಕೃಷ್ಣಮೂರ್ತಿ ಇದ್ದರು.
ಪರೀಕ್ಷಾ ಉಸ್ತುವಾರಿಯನ್ನು ಡಿಡಿಪಿಐ,ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ ವಹಿಸಿದ್ದು, ಡಯಟ್ ಪ್ರಾಂಶುಪಾಲ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು.
ಒಟ್ಟಾರೆ ಪರೀಕ್ಷೆ ಸುಗಮವಾಗಿ ನಡೆದಿದ್ದು, ಇದಕ್ಕೆ ಕಾರಣರಾದ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಲ್ಲಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಸಿಬ್ಬಂದಿಗೆ ಡಿಡಿಪಿಐ ಕೃಷ್ಣಮೂರ್ತಿ ಧನ್ಯವಾದ ಸಲ್ಲಿಸಿದ್ದಾರೆ.