ಕೋಲಾರ,ಜೂ.24: ಜುಲೈ 1ರ ಪತ್ರಿಕಾ ದಿನಾಚರಣೆ ಕೊಡುಗೆಯಾಗಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆರ್.ಎಲ್.ಜಾಲಪ್ಪ ನಾರಾಯಣ ಹೃದಯಾಲಯವು ೧೪ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಆದ್ಯತೆ ಮೇಲೆ ಹಾಗೂ ರಿಯಾಯಿತಿ ದರದ ಚಿಕಿತ್ಸೆಗಾಗಿ ಪ್ರಿವಿಲೇಜ್ ಕಾರ್ಡ್ (ಹೆಲ್ತ್ ಕಾರ್ಡ್) ಅನ್ನು ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿತು.
ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಹಂತದಲ್ಲಿ ಕೋಲಾರ ನಗರದ ಪತ್ರಕರ್ತರಿಗೆ ಈ ಕಾರ್ಡ್ಗಳನ್ನು ನೀಡಲಾಯಿತು.
ಆಸ್ಪತ್ರೆಯ ತಜ್ಞ ವೈದ್ಯ ಡಾ.ಮುರಳಿ ಬಾಬು ಮಾತನಾಡಿ, ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ನಾರಾಯಣ ಹೃದಯಾಲಯ ಘಟಕವು 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 8 ತಿಂಗಳ ಮಕ್ಕಳಿಂದ ಹಿಡಿದು 72 ವರ್ಷ ವಯೋವೃದ್ಧರವರೆಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆ ನೀಡಿದ್ದೇವೆ. 11 ಸಾವಿರ ಆ್ಯಂಜಿಯೊಗ್ರಾಂ, 8 ಸಾವಿರ ಸ್ಟೆಂಟ್ ನೆರವೇರಿಸಿದ್ದೇವೆ. ಹೊರ ಹಾಗೂ ಒಳರೋಗಿಗಳು ಸೇರಿದಂತೆ 1.2 ಲಕ್ಷ ಮಂದಿಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ವಿವಿಧ ರೀತಿಯ ಚಿಕಿತ್ಸೆ ನೀಡಲಾಗಿದೆ ಎಂದರು.
ಪತ್ರಕರ್ತರಿಗೆ ಶೇ 10 ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಹೃದಯ ತಪಾಸಣೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುತ್ತೇವೆ. ನಮ್ಮ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಆರೋಗ್ಯ ವಿಮೆ ಸೌಲಭ್ಯ ಇದೆ ಎಂದರು.
ಯಶಸ್ವಿನಿ ಯೋಜನೆ ಇನ್ನೂ ನಮ್ಮಲ್ಲಿ ಶುರುವಾಗಿಲ್ಲ. ಸರ್ಕಾರದಿಂದ ನಿರ್ದೇಶನ ಬಂದ ತಕ್ಷಣ ಶುರು ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ಬಳಿಕ ಹೃದಯಾಘಾತ ಪ್ರಕರಣ ಹೆಚ್ಚಿದೆಯೇ ಎಂಬ ಪ್ರಶ್ನೆಗೆ, ಕೊರೊನಾ ಲಸಿಕೆಯೇ ಇದಕ್ಕೆ ನಿಶ್ಚಿತ ಕಾರಣವಲ್ಲ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಪ್ರಿವಿಲೇಜ್ ಕಾರ್ಡುಗಳನ್ನು ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ನೀಡಿರುವುದು ಶ್ಲಾಘನೀಯ. ಹಾಗಯೇ ಯಾವುದೇ ಪತ್ರಕರ್ತರು ತಮ್ಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ಆತ್ಮೀಯವಾಗಿ ಸ್ಪಂದಿಸಿ ಅವರಿಗೆ ಸೂಕ್ತ ಚಿಕ್ಸತೆ ನೀಡುವಂತೆ ಕೊರಿದರು.
ಮೊದಲ ಹಂತದಲ್ಲಿ ನಗರದಲ್ಲಿರುವ ಪತ್ರಕರ್ತರಿಗೆ ಕಾರ್ಡ್ಗಳನ್ನು ವಿತರಿಸಲಾಗಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪತ್ರಕರ್ತರ ಸಂಘದ ಸದಸ್ಯರಿಗೆ ಜುಲೈ ಮೊದಲ ವಾರದಲ್ಲಿ ಆಯಾ ತಾಲ್ಲೂಕುಗಳಲ್ಲಿಯೇ ಕಾರ್ಡುಗಳ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ತಜ್ಞ ವೈದ್ಯರಾದ ಡಾ.ಭರತ್ ಕಿರಣ್, ಪೆಸಿಲಿಟಿ ಡೈರಕ್ಟರ್ ನಾಗರಾಜ್, ಮಾರ್ಕೆಂಟಿಂಗ್ ಮ್ಯಾನೇಜರ್ ಶಶಿಧರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಜಿಲ್ಲಾ ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಹಾಗೂ ಪತ್ರಕರ್ತರು, ಪಿ.ಆರ್.ಓಗಳಾದ ನರೇಶ್, ವೆಂಕಟರಾಮರೆಡ್ಡಿ ಇದ್ದರು.