ಕೋಲಾರ:- ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದ ರೀತಿ ಕರ್ತವ್ಯ ನಿರ್ವಹಿಸಿ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ ಮುಖ್ಯಅಧೀಕ್ಷಕರೂ ಆದ ಉಪಪ್ರಾಂಶುಪಾಲರಾದ ರಾಧಮ್ಮ ಸಲಹೆ ನೀಡಿದರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಜೂ.14 ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನಲೆಯಲ್ಲಿ ಗುರುವಾರ ಪೂರ್ವಭಾವಿ ಸಭೆ ಹಾಗೂ ನೋಂದಣಿ ಸಂಖ್ಯೆ ದಾಖಲಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಆತಂಕ,ಭಯ ಮೂಡಿಸುವ ಕೆಲಸ ಬೇಡ, ಆತ್ಮಸೈರ್ಯ ತುಂಬುವ ಕೆಲಸ ಮಾಡೋಣ ಮೊದಲ ದಿನ ಆತಂಕದಿಂದ ಬರುವ ಮಕ್ಕಳಿಗೆ ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬುದರ ಮಾಹಿತಿಯನ್ನು ಒದಗಿಸಿ ಅವರನ್ನು ನಗುತ್ತಾ ಸ್ವಾಗತಿಸುವ ಕೆಲಸ ಮಾಡೋಣ ಎಂದರು.
ಕೊಠಡಿಮೇಲ್ವಿಚಾರಕರು ಸಮಯಪಾಲನೆ ಮಾಡಿ, ಪರೀಕ್ಷಾ ಕಾರ್ಯಕ್ಕೆ ನಿಗಧಿಯಾದ ಬೆಳಗ್ಗೆ 9-30 ಗಂಟೆ ಸಮಯಕ್ಕೆ ನೀವು ಹಾಜರಾಗಬೇಕು, ಪಕ್ಕದ ಕೊಠಡಿಗಳ ಶಿಕ್ಷಕರೊಂದಿಗೆ ಮಾತನಾಡುವುದು, ಮಕ್ಕಳು ಪರೀಕ್ಷೆ ಬರೆಯಲು ನಾವೇ ಅಡಚಣೆಯುಂಟು ಮಾಡುವುದು ಬೇಡ ಎಂದ ಅವರು, ಇಲಾಖೆ ನಿಯಮಗಳಂತೆ ಕೇಂದ್ರಕ್ಕೆ ಎಲೆಕ್ಟ್ರಾನಿಕ್ ವಾಚ್, ಸಲಕರಣೆ ತರಲು ಅವಕಾಶವಿಲ್ಲ, ಅದರ ಪರಿಶೀಲನೆ ನಡೆಸಿ ಎಂದರು.
ನಕಲು ಮಾಡಲು ಅವಕಾಶ ನೀಡದಿರಿ, ಮಕ್ಕಳಿಗೆ ಉತ್ತರ ಪತ್ರಿಕೆ ನೀಡಿದ ತಕ್ಷಣ ಅದನ್ನು ಹೇಗೆ ತುಂಬುವುದು ಎಂಬುದರ ಮಾಹಿತಿ ನೀಡಿದರು.
ಈ ಕೇಂದ್ರದಲ್ಲಿ ಕನ್ನಡ,ಇಂಗ್ಲೀಷ್,ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದರಿಂದ ಪ್ರಶ್ನೆಪತ್ರಿಕೆ ವಿತರಿಸುವಾಗ ಹೆಚ್ಚಿನ ನಿಗಾ ವಹಿಸಿ, ಆಯಾ ಮಾಧ್ಯಮದ ಪ್ರಶ್ನೆಪತ್ರಿಕೆ ಆಯಾ ಮಧ್ಯಮದ ವಿದ್ಯಾರ್ಥಿಗೆ ನೀಡಬೇಕು ಎಂದು ತಿಳಿಸಿದರು.
ಕಸ್ಟೋಡಿಯನ್ ಹಾಗೂ ಮದನಹಳ್ಳಿ ಸರ್ಕಾರಿ ಪಿಯುಕಾಲೇಜಿನ ಉಪಪ್ರಾಂಶುಪಾಲ ವಿಜಯಾನಂದ್, ಸುಗಮ ಪರೀಕ್ಷೆಗೆ ಹಲವು ಸಲಹೆ ನೀಡಿ, ಗೊಂದಲವಿಲ್ಲದೇ ಪರೀಕ್ಷೆ ನಡೆಸಿ, ಪ್ರಶ್ನೆಪತ್ರಿಕೆ ವಿತರಿಸಿದ ನಂತರ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿ ಹೊರ ಹೋಗದಂತೆ ನೋಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಕೆಂಪೇಗೌಡ, ಉತ್ತರ ಪತ್ರಿಕೆ ನೀಡುವಾಗ ಮತ್ತು ವಾಪಸ್ಸು ಪಡೆಯುವಾಗ ಸಹಿ ಪಡೆಯಿರಿ ಎಂದು ಸಲಹೆ ನೀಡಿ, ಅವರ ಪ್ರವೇಶಪತ್ರ ಮತ್ತು ನಿಮಗೆ ನೀಡಿರುವ ಎಎಂಎಲ್ ಪರಿಶೀಲಿಸಿ ದೃಢಪಡಿಸಿಕೊಳ್ಳಿ ಎಂದರು.
ಶಿಕ್ಷಕರಾದ ಕೆಂಪೇಗೌಡ,ಮುರಳಿಮೋಹನ್, ಕೆ.ಲೀಲಾ, ಧನಲಕ್ಷ್ಮಿ, ಶಶಿಕಲಾ, ಬಿ.ವಿ.ಮಂಜುಳಾ, ರತ್ನಮ್ಮ, ಮುರಳೀಧರ್, ಧನಂಜಯ್,ವೆಂಕಟೇಶ್, ಗಿರಿಜಮ್ಮ, ನಾಗರಾಜ್,ಶ್ರೀನಿವಾಸಲು ಮತ್ತಿತರರಿದ್ದರು.