ಕೋಲಾರ:- ಜಿಲ್ಲಾದ್ಯಂತ ಜೂ.14 ರಿಂದ 22 ರವರೆಗೂ 17 ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲೆಯ 385 ಪ್ರೌಢಶಾಲೆಗಳ 5346 ವಿದ್ಯಾರ್ಥಿಗಳು ಕುಳಿತಿದ್ದು,ಸುಗಮ ಪರೀಕ್ಷೆಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಎಲ್ಲಾ ಕೊಠಡಿಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಿದ್ದು, ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನಲೆಯಲ್ಲಿ ಗುರುವಾರ ಕೋಲಾರದ ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜಿನಲ್ಲಿ ಉಪಪ್ರಾಂಶುಪಾಲರಾದ ರಾಧಮ್ಮ ನೇತೃತ್ವದಲ್ಲಿ ಶಿಕ್ಷಕರು ಡೆಸ್ಕ್ಗಳಿಗೆ ನೋಂದಣಿ ಸಂಖ್ಯೆ ದಾಖಲಿಸುವ ಕಾರ್ಯ ನಡೆಸುತ್ತಿದ್ದುದನ್ನು ವೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡುತ್ತಿದ್ದರು.
ತಾಲ್ಲೂಕುವಾರು ಕೇಂದ್ರಗಳ ವಿವರ
ಬಂಗಾರಪೇಟೆ ತಾಲ್ಲೂಕಿನ 3 ಕೇಂದ್ರಗಳಲ್ಲಿ ಒಟ್ಟು 994 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಕೆಜಿಎಫ್ ತಾಲ್ಲೂಕಿನ 3 ಕೇಂದ್ರಗಳಲ್ಲಿ 1198 ವಿದ್ಯಾರ್ಥಿಗಳು, ಕೋಲಾರದ 5 ಕೇಂದ್ರಗಳಲ್ಲಿ 1107 ಮಂದಿ, ಮಾಲೂರಿನ 2 ಕೇಂದ್ರಗಳಲ್ಲಿ 865 ಮಂದಿ, ಮುಳಬಾಗಿಲಿನ 3 ಕೇಂದ್ರಗಳಲ್ಲಿ 829 ಮಂದಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 1 ಕೇಂದ್ರದಲ್ಲಿ 353 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅಗತ್ಯ ಸಿದ್ದತೆ ಮಾಡಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕಾರ್ಯಕ್ಕೆ 500ಕ್ಕೂ ಹೆಚ್ಚು ಮಂದಿ
ಜಿಲ್ಲೆಯ ಆರು ಕ್ಷೇತ್ರ ವಲಯಗಳಿಗೆ ಸಂಬಂಧಿಸಿದಂತೆ ಎಲ್ಲಾ ತಾಲ್ಲೂಕಿನಲ್ಲಿ ಸುಗಮ ಪರೀಕ್ಷೆಗಾಗಿ ಜಿಲ್ಲೆಯ ಎಲ್ಲಾ 17 ಕೇಂದ್ರಗಳಲ್ಲೂ ಪರೀಕ್ಷೆ ಸುಗಮವಾಗಿ ನಡೆಯಲು 17 ಮಂದಿ ಮುಖ್ಯ ಅಧೀಕ್ಷಕರು, 17 ಮಂದಿ ಅಭಿರಕ್ಷರು,ಪ್ರತಿ ಕೇಂದ್ರಕ್ಕೆ ತಲಾ ಒಬ್ಬರು ಸ್ಥಾನಿಕ ಜಾಗೃದಳ ಸಿಬ್ಬಂದಿ, ಕೊಠಡಿ ಮೇಲ್ವಿಚಾರಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಶ್ನೆಪತ್ರಿಕೆಗಳನ್ನು ಕೇಂದ್ರಕ್ಕೆ ತಲುಪಿಸಲು ಹಾಗೂ ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಡಿಡಿಪಿಐ ಕಚೇರಿಗೆ ತಲುಪಿಸಲು 7 ಮಾರ್ಗಗಳಿಗೆ ತಂಡಗಳನ್ನು ನೇಮಿಸಿರುವುದಾಗಿ ತಿಳಿಸಿದರು.
ಕೇಂದ್ರ ಪ್ರವೇಶಿಸಲು ಗುರುತಿನ ಚೀಟಿ ಕಡ್ಡಾಯ
ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವಾಟರ್ಬಾಯ್ಯಿಂದ ಮುಖ್ಯ ಅಧೀಕ್ಷಕರವರೆಗೂ ಎಲ್ಲರಿಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಗುರುತಿನ ಚೀಟಿ ಮುದ್ರಿಸಿ ಕಳುಹಿಸಿದೆ, ಗುರುತಿನ ಚೀಟಿ ಇಲ್ಲದೇ ಯಾರಿಗೂ ಒಳಗೆ ಪ್ರವೇಶ ನೀಡಬಾರದು ಎಂದು ತಿಳಿಸಲಾಗಿದೆ ಎಂದರು.
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದಾರೆಂದು ತಿಳಿಸಿದರು.
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ 200 ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ ಎಂದು ವಿವರ ನೀಡಿದರು.