ಕೋಲಾರ:- ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಂಕಲ್ಪವಾದರೆ ಮಾತ್ರವೇ ಸಮಾಜದಲ್ಲಿ ಉತ್ತಮ ಆರೋಗ್ಯ, ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಜಗದೀಶ್ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬರೂ ಕನಿಷ್ಟ ಒಂದೊಂದು ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡೋಣ ಇದರಿಂದ ಪಕ್ಷಿಗಳ ಕಲರವ ಕೇಳಬಹುದು, ನೀಲಗಿರಿ ನಾಶಪಡಿಸುವ ಮೂಲಕ ಅಂತರ್ಜಲ ಅಭಿವೃದ್ದಿಗೆ ಕೈಜೋಡಿಸೋಣ,ಪ್ರತಿಯೊಬ್ಬರೂ ಗಿಡ ನೆಡುವ ಪ್ರತಿಜ್ಞೆ ಮಾಡೋಣ ಎಂದು ತಿಳಿಸಿದರು.
ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು, ದಿನವೂ ಆಚರಿಸಬೇಕು, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸೋಣ, ಬಟ್ಟೆ ಬ್ಯಾಗ್ ಬಳಸೋಣ, ಹಸಿ ಕಸ,ಒಣಕಸ ಬೇರ್ಪಡಿಸೋಣ, ತಲಾ 5 ಗಿಡ ನೆಟ್ಟು ಪೋಷಿಸೋಣ ಎಂದರು.
ಪ್ಲಾಸ್ಟಿಕ್ ಬಳಕೆ ತಡೆಯದಿದ್ದರೆ ಹೆಚ್ಚಿನ ಅನಾಹುತ ಎಂದು ಎಚ್ಚರಿಸಿದ ಅವರು, ಇಂದು ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆಯಾಗುತ್ತಿದೆ, ಇ-ವೇಸ್ಟ್ ಸಮರ್ಪಕ ವಿಲೇವಾರಿ ಮಾಡದಿದ್ದರೆ ಕ್ಯಾನ್ಸರ್ ಕಾರಕವಾಗುವ ಭೀತಿಯೂ ಇದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಂಗವಾಗಿ ಡಿಹೆಚ್ಒ ಕಚೇರಿ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ರವಿಕುಮಾರ್, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಸಹಾಯಕ ಆಡಳಿತಾಧಿಕಾರಿ ಉಮಾದೇವಿ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ರೇಣುಕಾದೇವಿ ಹಾಗೂ ಎಲ್ಲಾ ಕಚೇರಿಯ ಅಧಿಕಾರಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ;(ಫೋಟೊ-6ಕೋಲಾರ2)ಕೋಲಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಜಗದೀಶ್ ಚಾಲನೆ ನೀಡಿದರು.