ಕೋಲಾರ,ಮೇ.23: ಖಾಸಗಿ ಶಾಲೆಗಳ ದುಬಾರಿ ಶುಲ್ಕ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡಿ ಜಿಲ್ಲಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಸಕಾಲಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ಪೂರೈಕೆ ಮಾಡಿ ಖಾಲಿ ಇರುವ ಶಿಕ್ಷಕರ ನೇಮಕ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕೆಂದು ರೈತಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ನಗರಸಭೆ ಆವರಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ರವರು ದೇಶದ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸದೇ ಹೋದರೆ ಮುಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿ ಯುವಕರು ರಾಜಕಾರಣಿಗಳ ವಿರುದ್ಧ ಕಂಡಕಂಡಲ್ಲಿ ಕಲ್ಲಿನಿಂದ ಹೊಡೆಯುವ ಕಾಲ ದೂರವಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇದ್ದರೆ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿ ಜವಾನನಿಂದ ದಿವಾನನವರೆಗೂ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಖಾಸಗಿ ಶಾಲೆಗಳಲ್ಲಿ ಅನಧೀಕೃತ ಸಿ.ಬಿ.ಎಸ್.ಸಿ ಐ.ಸಿ ಎಸ್.ಸಿ ಹೆಸರಿನಲ್ಲಿ ಹಾಜರಾತಿ ಮಾಡಿಕೊಂಡು ವಂಚನೆ ಮಾಡುವ ಜೊತೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಯಲ್ಲಿ ಪಠ್ಯಪುಸ್ತಕ ಸಮವಸ್ತ್ರ, ಶೂ,ಖರೀದಿ ಮಾಡಬೇಕೆಂಬ ನಿಯಮ ಜಾರಿ ಮಾಡಿ ಅಧಿಕಾರಿಗಳ ಕಣ್ಣುಮುಂದೆಯೇ ದಂದೆ ನಡೆಯುತ್ತಿದ್ದರೂ ಸಂಬಂಧಪಟ್ಟ ಶಿಕ್ಷಣ ಇಲಾಖೆಯವರು ಇದ್ದು ಇಲ್ಲದಂತಾಗಿದ್ದಾರೆಂದು ಕಿಡಿಕಾರಿದರು.
ಸಾವಿರಾರು ಬಡ ರೈತ ಕೂಲಿ ಕಾರ್ಮಿಕರ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನೇ ಅವಲಂಭಿಸಿದ್ದಾರೆ. ನಮ್ಮನ್ನಾಳುವ ಸರ್ಕಾರಗಳು ದೇಶದ ಭವಿಷ್ಯ ರೂಪಿಸುವ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡುವ ಬದಲು ಕೆಲಸಕ್ಕೆ ಬಾರದ ವಿಚಾರಗಳನ್ನು ಚರ್ಚೆ ಮಾಡಿ ಶೈಕ್ಷಣಿಕ ಶಾಲೆಗಳ ಡೋನೇಷನ್ ಹಾವಳಿ ಮರೆತು ಶಿಕ್ಷಣದಲ್ಲೂ ರಾಜಕೀಯ ಮಾಡುವ ಮುಖಾಂತರ ಖಾಸಗಿ ಶಾಲೆಗಳ ಕಾವಲುಗಾರರಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಪ್ರತಿ ಬಾರಿಯೂ ಶೈಕ್ಷಣಿಕ ವರ್ಷ ಪ್ರಾರಂಭವಾದಾಗ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಜೊತೆಗೆ ಹಾಳು ಬಿದ್ದಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ಕೊಡಬೇಕಾದ ಸರ್ಕಾರ ಅನುದಾನದ ಕೊರತೆ ನೆಪದಲ್ಲಿ ಖಾಸಗಿ ಶಾಲೆಗಳಿಗೆ ಹಿಂಬಾಗಿಲಿನಿಂದ ಕುಮ್ಮಕ್ಕು ನೀಡುವ ಮುಖಾಂತರ ಬಡವರ ಶಿಕ್ಷಣವನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಅನವಶ್ಯಕವಾಗಿ ಕೆಲಸಕ್ಕೆ ಬಾರದ ಕಾಮಗಾರಿಗಳಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡುವ ಸರ್ಕಾರ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಹಿಂದೇಟು ಹಾಕುತ್ತಿರುವುದು ಏಕೆ ? ಭೀಕರವಾದ ಮಳೆ ಸುರಿಯುವಾಗ ಸರ್ಕಾರಿ ಶಾಲೆಗಳು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದೆ.
ಒಂದು ದಿನ ಗೋಡೆ ಬಿದ್ದರೆ ಮತ್ತೊಂದು ದಿನ ಕಾಂಪೌಂಡ್ ಆನಂತರ ಛಾವಣಿ ಕುಸಿಯುತ್ತಿರುವುದರಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕಿ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಕಾಲಕ್ಕೆ ಪೂರೈಕೆಯಾಗದ ಸಮವಸ್ತ್ರ, ಪಠ್ಯ ಪುಸ್ತಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ನೂರೊಂದು ಭಾಗ್ಯಗಳನ್ನು ನೀಡುವ ಮುಖಾಂತರ ಬಡವರ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿಯಾಗುತ್ತಿದೆ. ಪ್ರತಿವರ್ಷ ಶಾಲೆ ಆರಂಭಕ್ಕೆ ಮುನ್ನ ಮಕ್ಕಳಿಗೆ ಬೇಕಾಗುವ ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆ ಮಾಡಬೇಕಾದ ಸರ್ಕಾರ ಜಾಣ ನಿದ್ರೆಯಲ್ಲಿದ್ದು, ಶಾಲೆ ಪ್ರಾರಂಭವಾದ ನಂತರ ಸರ್ಕಾರದಿಂದ ಅನುಮತಿಯಿಲ್ಲ. ಟೆಂಡರ್ ಕರೆದಿಲ್ಲ ಎಂದು ಬೇಜವಾಬ್ದಾರಿಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ನೂರಾರು ಶಾಲೆಗಳು ಮಕ್ಕಳ ಹಾಜರಾತಿ ಇಲ್ಲದೆ ಮುಚ್ಚಿದ್ದರೂ ಅಲ್ಲಿನ ಶಿಕ್ಷಕರು ಹೆಚ್ಚಿನ ಹಾಜರಾತಿ ಇರುವ ಶಾಲೆಗಳಿಗೆ ನಿಯೋಜನೆ ಮಾಡುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಇನ್ನು ಖಾಲಿ ಇರುವ ಶಿಕ್ಷಕರು ನಿಯೋಜನೆಗೊಂಡಿರುವ ಶಾಲೆಗಳಿಗೆ ಹೋಗದೆ ರಾಜಕೀಯ ಒತ್ತಡ ತಂದು ಬಡ್ಡಿ, ರಿಯಲ್ ಎಸ್ಟೇಟ್, ರಾಜಕೀಯದಲ್ಲಿ ತೊಡಗಿಕೊಳ್ಳುವ ಮುಖಾಂತರ ಗುರುಕುಲಕ್ಕೆ ಅಪಮಾನ ಮಾಡುತ್ತಿದ್ದಾರೆ.
ಅಲ್ಲದೆ ಲಕ್ಷ ಲಕ್ಷ ಸಂಬಳ ಪಡೆದು ಶಾಲೆಗೆ ಹೋಗದೆ ನೂರೊಂದು ನೆಪ ಹೇಳುತ್ತಿರುವ ಶಿಕ್ಷಕರು ಶಾಲೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಕಡ್ಡಾಯವಾಗಿ ಬಯೋಮೆಟ್ರಿಕ್ ಅಳವಡಿಸುವ ಮೂಲಕ ಶಿಕ್ಷಕರ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಪತ್ರಿಕಾ ಹೇಳಿಕೆ ನೀಡುವ ಸಂದರ್ಭದಲಿ ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಗೌಡ, ಗೀರೀಶ್, ಪುತ್ತೇರಿ ರಾಜು, ಮುಂತಾದವರಿದ್ದರು.