ಕೋಲಾರ:- ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಪರೀಕ್ಷೆಗೆ ಕುಳಿತಿದ್ದ 19282 ಮಂದಿ ವಿದ್ಯಾರ್ಥಿಗಳ ಪೈಕಿ 14450 ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಶೇ.74.94 ಫಲಿತಾಂಶದೊಂದಿಗೆ 17ನೇ ಸ್ಥಾನ ಬಂದಿದ್ದು, ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿನಿ ಎ.ದರ್ಶಿತಾ 623 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಹಾಗೂ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಈ ಬಾರಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 19282 ಮಂದಿ ಪೈಕಿ 14450 ಮಂದಿ ಉತ್ತೀರ್ಣರಾಗಿ ಶೇ.74.94 ಫಲಿತಾಂಶ ಬಂದಿದೆ. ಇದರಲ್ಲಿ ಪರೀಕ್ಷೆಗೆ ಕುಳಿತದ್ದ 9618 ಬಾಲಕಿಯರ ಪೈಕಿ 7818 ಮಂದಿ ಉತ್ತೀರ್ಣರಾಗುವ ಮೂಲಕ ಶೇ.81.28 ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಪರೀಕ್ಷೆಗೆ ಕುಳಿತಿದ್ದ 9664 ಬಾಲಕರಲ್ಲಿ 6630 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 68.62 ಮಂದಿ ತೇರ್ಗಡೆಯಾಗಿದ್ದಾರೆ.
ದರ್ಶಿತಾಗೆ 623 ಇಬ್ಬರಿಗೆ 621 ಅಂಕ
ಜಿಲ್ಲೆಗೆ ಟಾಫರ್ ಆಗಿ ಹೊರಹೊಮ್ಮಿರುವ ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿನಿ ಎ.ದರ್ಶಿತಾ 623 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದು, ಈ ವಿದ್ಯಾರ್ಥಿನಿ ಕೆಜಿಎಫ್ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಎ.ಆನಂದ್ ಹಾಗೂ ಕ್ಯಾಸಂಬಳ್ಳಿ ಸರ್ಕಾರಿ ಶಾಲೆ ಶಿಕ್ಷಕಿ ಜಿ.ಎಸ್.ಪದ್ಮಶ್ರೀ ಅವರ ಪುತ್ರಿಯಾಗಿದ್ದು, ಈಗಾಗಲೇ ಐಐಟಿ ಕೋಚಿಂಗ್ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು 621 ಅಂಕ ಗಳಿಸುವ ಮೂಲಕ ಜಿಲ್ಲೆಗೆ 2ನೇ ಸ್ಥಾನ ಪಡೆದುಕೊಂಡಿದ್ದು, ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಮೇದಾ ಕೆ.ಎಂ. ಹಾಗೂ ಮುಳಬಾಗಿಲು ಪಟ್ಟಣದ ಸೆಂಟ್ಆನ್ಸ್ ಶಾಲೆಯ ಆಯಿಷಾ ಖಾನಂ ಈ ಸಾಧನೆ ಮಾಡಿದ್ದಾರೆ.
ಉಳಿದಂತೆ ಮೂವರು ವಿದ್ಯಾರ್ಥಿನಿಯರು 620 ಅಂಕಗಳೊಂದಿಗೆ ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡಿದ್ದು, ನಗರ ಹೊರವಲಯದ ಬೆಗ್ಲಿ ಹೊಸಹಳ್ಳಿಯ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯ ಹೆಚ್.ವಿ.ಹರ್ಷಿತಾ, ಶ್ರೀನಿವಾಪುರ ಪಟ್ಟಣದ ವೇಣು ವಿದ್ಯಾಸಂಸ್ಥೆಯ ಪಿ.ಆರ್.ಸೃಜನಶ್ರೀ ಹಾಗೂ ಮುಳಬಾಗಿಲು ಸೆಂಟ್ಆನ್ಸ್ ಶಾಲೆಯಜೆ.ಪೂರ್ಣವಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮುಳಬಾಗಿಲು ಪಟ್ಟಣದ ಅಮರಜ್ಯೋತಿ ಶಾಲೆಯ ಎಸ್.ಧನ್ಯ ಹಾಗೂ ಸುಂದರಪಾಳ್ಯದ ಅಪೋಲೋ ಪಬ್ಲಿಕ್ ಶಾಲೆಯ ಕೆ.ಶೃತಿ 619 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ತಾಲ್ಲೂಕಿನ ಮದನಹಳ್ಳಿ ಮೊರಾರ್ಜಿದೇಸಾಯಿ ವಸತಿ ಶಾಲೆಯ ವಸಂತ ಕುಮಾರ್, ಪಿಸಿಬಡಾವಣೆ ಸೆಂಟ್ಆನ್ಸ್ ಶಾಲೆಯ ಶ್ರೇಯಸ್, ಮುಳಬಾಗಿಲು ಸೆಂಟ್ಆನ್ಸ್ನ ಆಯಿಷಾಬಾನು 618 ಅಂಕ ಗಳಿಸಿದ್ದು, ಮಾಲೂರಿನ ವಿವೇಕಾನಂದ ಶಾಲೆಯ ವಿವೇಕ್ ಎಂ.ಪಂಚಾಲ್,ಚಿನ್ಮಯ ಶಾಲೆಯ ಎಸ್.ಭೂಮಿಕಾ, ಬೈರವೇಶ್ವರ ಶಾಲೆಯ ಟಿ.ಎಸ್.ಪ್ರಜ್ಞ 617 ಅಂಕಗಳೊಂದಿಗೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ.
ವಸತಿ 12 ಶಾಲೆಗಳಿಗೆ ಶೇ.100 ಫಲಿತಾಂಶ
ಜಿಲ್ಲೆಯ 10 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ಏಕಲವ್ಯ ವಸತಿ ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದ್ದು, ಇದರೊಂದಿಗೆ ಕೆಲವು ಸರ್ಕಾರಿ ಶಾಲೆಗಳು ಶೇ.100 ಸಾಧನೆಯೊಂದಿಗೆ ಗಮನ ಸೆಳೆದಿವೆ.
ಮೊರಾರ್ಜಿದೇಸಾಯಿ ವಸತಿ ಶಾಲೆಗಳಾದ ಗಟ್ಟಗುಡಿ, ಮದನಹಳ್ಳಿ,ಮಾಲೂರು,ಗೌನಪಲ್ಲಿ, ಸೋಮಯಾಹಲಪಲ್ಲಿ.ಕೂತಾಂಡ್ಲಹಳ್ಳಿ, ಘಟ್ಟ ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ಉಳಿದಂತೆ ಚಲ್ದಿಗಾನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ,ರೋಣೂರಿನ ಅಂಬೇಡ್ಕರ್ ವಸತಿ ಶಾಲೆ, ಶ್ರೀನಿವಾಸಪುರದ ಏಕಲವ್ಯ ವಸತಿ ಶಾಲೆ,ಕುರುಡುಮಲೆ ಕಿತ್ತೂರು ರಾಣಿ ವಸತಿ ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ.
ಸರ್ಕಾರಿ ಶಾಲೆಗಳು ಶೇ.100 ಸಾಧನೆ
ಶೇ.100 ಸಾಧನೆಯಲ್ಲಿ ಸರ್ಕಾರಿ ಶಾಲೆಗಳು ಮುಂಚೂಣಿಯಲ್ಲಿದ್ದು, ಇಮರಕುಂಟೆ ಸರ್ಕಾರಿ ಪ್ರೌಢಶಾಲೆ, ತಾಡಿಗೋಳು ಸರ್ಕಾರಿ ಪ್ರೌಢಶಾಲೆ, ಶ್ರೀನಿವಾಸಪುರ ಪಟ್ಟಣದ ರಂಗಾರಸ್ತೆ ಸರ್ಕಾರಿ ಪಿಯು ಕಾಲೇಜು, ಪುಲುಗೂರುಕೋಟೆ ಸರ್ಕಾರಿ ಪ್ರೌಢಶಾಲೆಗಳು ಶೇ.100 ಸಾಧನೆ ಮಾಡಿ ಗಮನ ಸೆಳೆದಿವೆ.
ಶೂನ್ಯ ಸಾಧನೆಯನ್ನು ಜಿಲ್ಲೆಯ ಯಲ್ದೂರಿನ ಶ್ರೀನಿವಾಸ ಪಬ್ಲಿಕ್ ಶಾಲೆ, ಕೆಜಿಎಫ್ನ ನಾಚಪಲ್ಲಿಯ ವಿಶ್ವೇಶ್ವರಯ್ಯ ಮೆಮೊರಿಯಲ್ ಶಾಲೆ ಶೂನ್ಯ ಸಾಧನೆ ಮಾಡಿವೆ ಎಂದು ತಿಳಿಸಿದ್ದಾರೆ.
ಜಿಲ್ಲೆಗೆ ಗುಣಾತ್ಮಕ ಫಲಿತಾಂಶ ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಬಿಇಒಗಳಾದ ಕನ್ನಯ್ಯ, ಮುನಿವೆಂಕಟರಾಮಾಚಾರಿ,ಗಂಗರಾಮಯ್ಯ, ಚಂದ್ರಕಲಾ, ಮುನಿಲಕ್ಷ್ಮಯ್ಯ, ಸುಕನ್ಯಾ, ಶಿಕ್ಷಣಾಧಿಕಾರಿಗಳಾದ ಸಗೀರಾ ಅಂಜುಂ, ಭಾಗ್ಯವತಮ್ಮ, ಡಿವೈಪಿಸಿಗಳಾದ ಗುರುಮೂರ್ತಿ, ಚಂದ್ರಕಲಾ, ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಗಾಯತ್ರಿ,ಶಶಿವಧನ ಅಭಿನಂದನೆ ಸಲ್ಲಿಸಿದ್ದಾರೆ.