ಕೋಲಾರ:- ಕೆರೆಗಳ ಪುನರುಜ್ಜೀವನದ ಮೂಲಕ ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ವೃದ್ದಿಗೆ ಕೊಡುಗೆ ನೀಡಲು ಮುಂದಾಗಿರುವ ಪುಣೆಯ ಭಾರತೀಯ ಜೈನ ಸಂಘಟನೆ `ಬರಮುಕ್ತ ಕರ್ನಾಟಕ ಅಭಿಯಾನ’ ದಡಿ ಪೆಮ್ಮಶೆಟ್ಟಿಹಳ್ಳಿ ಕೆರೆ ಹೂಳೆತ್ತುವ ಕಾರ್ಯದ ಮೂಲಕವೇ ಜಲಕ್ರಾಂತಿಗೆ ಮುನ್ನುಡಿ ಇಟ್ಟಿದೆ ಎಂದು ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಧನ್ಯವಾದ ಸಲ್ಲಿಸಿದರು.
ಪುಣೆಯ ಭಾರತೀಯ ಜೈನ ಸಂಘಟನೆವತಿಯಿಂದ ತಾಲ್ಲೂಕಿನ ಪೆಮ್ಮಶೆಟ್ಟಿಹಳ್ಳಿಯಲ್ಲಿ ಊರ ಮುಂದಿನ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಭಾರತೀಯ ಜೈನ ಸಂಘಟನೆ ಕರ್ನಾಟಕ,ತಮಿಳುನಾಡು, ಛತ್ತೀಸ್ಘಡ್, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಜಲಮೂಲಗಳ ಪುನಶ್ಚೇತನಕ್ಕೆ ಮುಂದಾಗಿದ್ದು, ತಮ್ಮ ಈ ಕಾರ್ಯವನ್ನು ಪೆಮ್ಮಶೆಟ್ಟಿಹಳ್ಳಿ ಮೂಲಕವೇ ಆರಂಭಿಸಿದೆ ಎಂದು ತಿಳಿಸಿದರು.
ಮಹಾವೀರರ ಅಹಿಂಸೆ ಹಾಗೂ ದಾನ ನೀಡುವ ಗುಣಕ್ಕೆ ಪ್ರಸಿದ್ದಿಯಾದ ಜೈನ ಸಂಘಟನೆ ಕೋಲಾರ ಜಿಲ್ಲೆಯ ನೀರಿನ ಜೀವಾಳವಾಗಿರುವ ಕೆರೆಗಳನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಜಿಲ್ಲೆಯ 10 ಕೆರೆಗಳ ಹೂಳೆತ್ತುವ ಮೂಲಕ ತನ್ನ ಸಹಾಯಹಸ್ತ ಚಾಚಿದ್ದು, ಅದರಲ್ಲೂ ಮೊದಲನೆಯದಾಗ ನಮ್ಮೂರ ಕೆರೆಯನ್ನೇ ಆಯ್ಕೆ ಮಾಡಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೆರೆಗಳಲ್ಲಿ ಹೂಳೆತ್ತುವುದರಿಂದ ಮಳೆಗಾಲದಲ್ಲಿ ನೀರು ಹೆಚ್ಚು ನಿಲ್ಲುವುದರಿಂದ ಅಂತರ್ಜಲ ವೃದ್ದಿಗೆ ಸಹಕಾರಿಯಾಗಲಿದೆ ಎಂದ ಅವರು, ಕೆಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಹಲವುಕೆರೆಗಳಿಗೆ ನೀರು ಹರಿದಿದ್ದರಿಂದಾಗಿ ಇದೀಗ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಮರುಪೂರಣಗೊಂಡಿದೆ ಎಂದರು.
ಕೋಲಾರ ಜಿಲ್ಲೆಯನ್ನು ಕೆರೆಗಳ ತವರು ಎಂದೇ ಕರೆಯಲಾಗಿದೆ, ಇಲ್ಲಿ ಸಾವಿರಾರು ಕೆರೆಗಳಿದ್ದು, ಸರಪಳಿಯಂತೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಗುರುತ್ವಾಕರ್ಷಣೆ ಮೂಲಕವೇ ಹರಿದು ಹೋಗುವ ರೀತಿ ನಮ್ಮ ಪೂರ್ವಜರು ನಿರ್ಮಿಸಿದ್ದಾರೆ ಅವರ ಆಶಯಗಳ ಮಹತ್ವ ನಮಗೆ ಇಂದು ಅರಿವಾಗುತ್ತಿದೆ ಎಂದರು.
ನಮ್ಮ ಹಿರಿಯರು ಅತ್ಯಂತ ದೂರದೃಷ್ಟಿಯಿಂದ ನಿರ್ಮಿಸಿರುವ ಅಂತಹ ಕೆರೆಗಳು ಇಂದು ಹೂಳಿನಿಂದ ಭರ್ತಿಯಾಗಿವೆ, ಮಳೆ ಬಂದರೂ ನೀರಿನ ಸಂಗ್ರಹ ಸಾಮಥ್ರ್ಯ ಕಳೆದುಕೊಂಡಿದ್ದು, ಕೆಲವೇ ತಿಂಗಳಲ್ಲಿ ಒಣಗಿಹೋಗುತ್ತಿವೆ ಇಂತಹ ಸಂದರ್ಭದಲ್ಲಿ ಬರಪೀಡಿತ ಕೋಲಾರ ಜಿಲ್ಲೆಯ ಜನರ ನೆರವಿಗೆ ಬಂದಿರುವ ಜೈನ ಸಂಘಟನೆ ಮತ್ತಷ್ಟು ಕೆರೆಗಳ ಅಭಿವೃದ್ದಿಗೆ ನೆರವಾಗಲಿ ಎಂದು ಆಶಿಸಿದರು.
ಭಾರತೀಯ ಜೈನ್ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತಿಲಾಲ್ ಜೈನ್ ಮಾತನಾಡಿ, ಕೆರೆಯ ಹೂಳು ತೆಗೆಯುವ ಉದ್ದೇಶ ಜಲಮೂಲಗಳನ್ನು ಹೆಚ್ಚಿಸುವುದಾಗಿದ್ದು, ಇಂತಹ ಮಹತ್ಕಾರ್ಯವನ್ನು ನಾವು ಪೆಮ್ಮಶೆಟ್ಟಹಳ್ಳಿ ಗ್ರಾಮದ ಕೆರೆಯಿಂದ ಪ್ರಾರಂಭ ಮಾಡಿದ್ದು, ಕೆರೆಗಳ ಹೂಳು ತೆಗೆಯುವುದರಿಂದ ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹವಾಗುವುದರಿಂದ ಅಂತರ್ಜಲಮಟ್ಟ ಹೆಚ್ಚಾಗಲಿದೆ. ಇದರಿಂದ ಸುತ್ತಮುತ್ತಲಿನ ಕೊಳವೆಬಾವಿಗಳು, ಕೈಪಂಪುಗಳು ಮತ್ತು ರೈತರ ಕೃಷಿಹೊಂಡಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೆರೆಗಳಲ್ಲಿನ ಹೂಳನ್ನು ರೈತರು ತಮ್ಮ ಹೊಲಗಳ ಅಭಿವೃದ್ಧಿಗಾಗಿ ತೆಗೆದುಕೊಂಡು ಹೋಗಲು ಸಹಕಾರ ನೀಡಿ, ಇದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಲಿದೆ ಎಂದು ತಿಳಿಸಿ, ಕೆರೆಗಳ ಹೂಳೆತ್ತುವುದರಿಂದ ಕೃಷಿ ಮಾತ್ರವಲ್ಲ ಪ್ರಾಣಿಪಕ್ಷಿಗಳಿಗೂ ನಿರಂತರವಾಗಿ ಕುಡಿಯಲು ನೀರು ಸಿಗಲಿದೆ ಎಂದು ತಿಳಿಸಿದರು.
ಜೈನ ಸಂಘಟನೆ ಮತ್ತಷ್ಟು ಸಾಮಾಜಿಕ ಕಾರ್ಯಗಳಿಗೂ ಕೈಜೋಡಿಸಲಿದ್ದು, ಸಮುದಾಯದ ಜನತೆ ತಮ್ಮ ಆಧಾಯದ ಸ್ವಲ್ಪ ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವ ಸಂಕಲ್ಪದೊಂದಿಗೆ ಸಂಘಟನೆ ಕಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜೈನ ಸಂಘಟನೆಯ ಮುಖಂಡರಾದ ಲಲಿತ್ಕುಮಾರ್ ಜೈನ್, ದಿಲೀಪ್ ಕುಮಾರ್ ಜೈನ್, ಜಿತೇಂದರ್, ಹೇಮಂತಕುಮಾರ್, ಸುನೀಲ್ ಜೈನ್, ಜಿಲ್ಲಾ ಯೋಜನಾ ಸಂಯೋಜಕ ಸುಭಾಷ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಾಲಾಜಿ, ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮ ಮುನೇಗೌಡ, ವಕೀಲ ಮುನಿರಾಜು, ಮಾಜಿ ಸದಸ್ಯ ಚಿನ್ನಸ್ವಾಮಿ, ಹಾಗೂ ಪೆಮ್ಮಶಟ್ಟಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.