ಕೋಲಾರ:- ನಗರದ ಕಾರಂಜಿಕಟ್ಟೆಯ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಕಳೆದ ರಾತ್ರಿ ಅಪಾರ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ನೂರಾರು ವರ್ಷಗಳಿಂದ ಅಪಾರ ಜನಮನ್ನಣೆ ಗಳಿಸಿರುವ ಕಾರಂಜಿಕಟ್ಟೆಯ ಹೂವಿನ ಕರಗ ಮಹೋತ್ಸವದಲ್ಲಿ ಕಳೆದ ಹಲವಾರು ವರ್ಷಗಳಿಂದ ಕರಗ ಹೊರುತ್ತಿರುವ ಬೇತಮಂಗಲದ ಖ್ಯಾತ ಕರಗದ ಪೂಜಾರಿ ನಾಗರಾಜ್ರಿಗೆ ವಯಸ್ಸಾದ ಹಿನ್ನೆಲೆ ಅವರ ಪುತ್ರ ಮುನಿರಾಜು ಎರಡನೇ ಬಾರಿ ದೇವಾಲಯದ ಮುಂಭಾಗದ ಆವರಣದಲ್ಲಿ ನಿರ್ಮಿಸಿದ್ದ ಪುಷ್ಪಾಲಂಕೃತ ಸುಂದರ ವೇದಿಕೆಯಲ್ಲಿ ಮಂಗಳ ವಾದ್ಯ, ಹಲಗೆಗಳ ಲಯಬದ್ದ ತಾಳಕ್ಕೆ ತಕ್ಕಂತೆ ನರ್ತಿಸುವ ಮೂಲಕ ಸೇರಿದ್ದ ಬೃಹತ್ ಜನಸ್ತೋಮ ಹರ್ಷದಲ್ಲಿ ತಲ್ಲೀನರಾಗುವಂತೆ ಮಾಡಿದರು.
ವೀರ ಕುಮಾರರ ಗೋವಿಂದಾ ಗೋವಿಂದಾ ಉದ್ಗಾರಗಳ ನಡುವೆ ಕರಗ ನೃತ್ಯಕ್ಕೆ ಜನರ ಶಿಳ್ಳೆ ಮತ್ತು ಜೈಕಾರಗಳ ಕರತಾಡನ ಮುಗಿಲು ಮುಟ್ಟಿತ್ತು.
ಕರಗದ ಪೂಜಾರಿ ಮುನಿರಾಜು ತಮ್ಮ ಅನುಭವವನ್ನು ಕೃತಿಗಿಳಿಸಿ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದ್ದ ಇಡೀ ಕಾರಂಜಿಕಟ್ಟೆ ಬಡಾವಣೆ ಅವಿಸ್ಮರಣೀಯ ಅನುಭವದಲ್ಲಿ ಮುಳುಗಿ ಹೋಯಿತು.
ಜಿಲ್ಲೆಯಲ್ಲೇ ಅತ್ಯಾಕರ್ಷಣೆಗೆ ಹೆಸರಾಗಿರುವ ಕಾರಂಜಿ ಕಟ್ಟೆಯ ಹೂವಿನ ಕರಗ ನಗರದ ನಾಗರೀಕರಿಗೆ ವಿವಿಧ ನೃತ್ಯ ಭಂಗಿಗಳ ರಸದೌತಣ ನೀಡುವಲ್ಲಿ ಸಫಲವಾಯಿತು.
ಕಾರಂಜಿ ಕಟ್ಟೆಯ ತಿಗಳ ಜನಾಂಗ ಕರಗವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಭಕ್ತಿಯಿಂದ ನಡೆಸಿಕೊಂಡು ಬಂದಿದ್ದು, ಇವರು ಮಾತ್ರವಲ್ಲದೇ ಸಮಾಜದ ಅನೇಕ ಮಂದಿ ಕರಗಕ್ಕೆ ಪೂಜೆ ಸಲ್ಲಿಸಿ ನಮಿಸಿ ಭಕ್ತಿ ಪ್ರದರ್ಶಿಸಿದರು.
ವೀರಕುಮಾರರ
ಸಾಹಸದ ಮೆರಗು
ಹೂವಿನ ಕರಗದೊಂದಿಗೆ ರಕ್ಷಕ ಭಟರಂತೆ ಕತ್ತಿ ಹಿಡಿದು ಸಂಚರಿಸುವ ವೀರಕುಮಾರರಿ ಕರಗ ನೃತ್ಯದ ವೇದಿಕೆಯ ಮೇಲೆ ಕತ್ತಿ ಝಳುಪಿಸುತ್ತಾ ನೀಡಿದ ಹಲಗು ಸೇವೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು.
ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಕರಗಕ್ಕೆ ಜನತೆ ಪೂಜೆ ಸಲ್ಲಿಸಿದರು. ಇದಾದ ನಂತರ ಸೋಮವಾರ ಮಧ್ಯಾಹ್ನ ದೇವಾಲಯದ ಮುಂಭಾಗ ಅಗ್ನಿಕುಂಡ ಪ್ರವೇಶ ನಡೆಯಿತು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ದ್ರೌಪತಾಂಭ ದೇವಿ ಸೇರಿದಂತೆ ವಿವಿಧ ದೇವರುಗಳ ಪುಷ್ಪಪಲ್ಲಕ್ಕಿ ಉತ್ಸವವೂ ನಡೆಯಿತು. ದೇವಾಲಯ,ಆವರಣ ಸೇರಿದಂತೆ ಇಡೀ ಕಾರಂಜಿಕಟ್ಟೆ ಮುಖ್ಯರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಕರಗ ನೃತ್ಯಕ್ಕೆ ಜಾನಪದ ಕಲಾ ತಂಡಗಳು ಮೆರಗು ನೀಡಿದ್ದು, ನಗರ ಸೇರಿದಂತೆ ವಿವಿಧೆಡೆಗಳಿಂದ ಬಂದ ಸಹಸ್ರಾರು ಮಂದಿ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು.
ಕರಗ ಮಹೋತ್ಸವಕ್ಕೆ ಮಾಜಿ ಸಚಿವ ವರ್ತೂರು ಪ್ರಕಾಶ್, ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್, ಸಹ್ಯಾದ್ರಿ ಉದಯಕುಮಾರ್, ಸಮುದಾಯದ ಮುಖಂಡ ಎಲ್.ಎ.ಮಂಜುನಾಥ್, ಪಾಲ್ಗುಣ ಸೇರಿದಂತೆ ನಗರಸಭಾ ಸದಸ್ಯರು, ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.