ಕೋಲಾರ:- ಪ್ರತಿಯೊಬ್ಬರೂ ಜಾತಿ ಮತ ಧರ್ಮಗಳನ್ನು ಮೀರಿ ಭಾರತೀಯರೆಂಬ ಭಾವನೆಯಲ್ಲಿ ದೇಶದ ಅಖಂಡತೆ ಮತ್ತು ಸಾರ್ವಭೌಮತ್ವತೆಯನ್ನು ಕಾಪಾಡಬೇಕೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ, ಹಳೇ ಮಾಧ್ಯಮಿಕ ಶಾಲೆ, ಉರ್ದು ಮಾಧ್ಯಮಿಕ ಶಾಲೆ ಹಾಗೂ ರೋಟರಿ ಸೆಂಟ್ರಲ್ವತಿಯಿಂದ ಆಯೋಜಿಸಲಾಗಿದ್ದ 78 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡು ನಿವೃತ್ತರಾಗಲಿರುವ ಬಿಇಒ ಕನ್ನಯ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸುಲೇಮಾನ್ ಖಾನ್ರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯಾನಂತರ ಸಂವಿಧಾನದಡಿ ಏಕತೆಯನ್ನು ಸಾಸಿರುವ ಭಾರತ ದೇಶವು ಇಡೀ ಜಗತ್ತೇ ಗಮನಿಸುವಂತೆ ಹಲವಾರು ಸಾಧನೆಗಳನ್ನು ಮಾಡಿದ್ದರೂ, ಇನ್ನೂ ಸಾಸಬೇಕಾದುದು ಸಾಕಷ್ಟಿರುವುದನ್ನು ಅರಿತು, ದೇಶವನ್ನು ಒಗ್ಗಟ್ಟಿನಿಂದ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.
ಕೇಂದ್ರ ಸರಕಾರವು ಪ್ರತಿ ಮನೆಯಲ್ಲೂ ತ್ರಿವರ್ಣ ಆಚರಿಸುವ ಕಾರ್ಯಕ್ರಮ ಕ್ಕೆ ಕರೆ ನೀಡಿರುವುದು ಸ್ವಾಗತಾರ್ಹ ಆದರೆ, ಸ್ವಾತಂತ್ರ್ಯೋತ್ಸವದ ನಂತರ ಅದೇ ತ್ರಿವರ್ಣ ಧ್ವಜಗಳು ಹಾದಿ ಬೀದಿಯಲ್ಲಿ ಕಸವಾಗುವುದಕ್ಕೆ ಬಿಡಬಾರದು, ಇದರಿಂದ ಹೆಮ್ಮೆಯ ರಾಷ್ಟ್ರಧ್ವಜಕ್ಕೆ ಅವಮಾನವಾದಂತಾಗುತ್ತದೆ ಎನ್ನುವುದರ ಅರಿವಿರಬೇಕೆಂದರು.
ಕ್ಷೇತ್ರ ಶಿಕ್ಷಣಾಕಾರಿ ಕನ್ನಯ್ಯ ಮಾತನಾಡಿ, ದೇಶವು ಸ್ವಾತಂತ್ರ್ಯವಾದ ನಂತರ ಎತ್ತಿನ ಗಾಡಿಯಿಂದ ಆರಂಭಿಸಿ ಇದೀಗ ಚಂದ್ರಲೋಕಕ್ಕೆ ರಾಕೆಟ್ ಕಳುಹಿಸುವವರೆವಿಗೂ ಅಗಾಧವಾದ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ, ದೇಶವಾಸಿಗಳಾದ ನಾವುಗಳು ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ಕಡ್ಡಾಯವಾಗಿ ಪಾಲಿಸುವಂತಾಗಬೇಕೆಂದರು.
ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅನೇಕರ ತ್ಯಾಗ ಬಲಿದಾನಗಳಿಂದ ದೇಶವು ಸ್ವಾತಂತ್ರ್ಯವನ್ನು ಗಳಿಸಿದ್ದು, ಹೊಸ ಪೀಳಿಗೆ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ಅರಿತುಕೊಂಡು, ಭಾರತ ಸೇವಾದಳದ ಸೇವೆಗಾಗಿ ಬಾಳು ತತ್ವದಡಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರ ಲಾಂಛನಕ್ಕೆ ಗೌರವ ನೀಡಬೇಕು, ಈ ಮೂಲಕ ಸದೃಢ ರಾಷ್ಟ್ರ ನಿರ್ಮಾಣದ ಭವ್ಯ ಪ್ರಜೆಗಳಾಬೇಕೆಂದರು.
ಇದೇ ಅಗಸ್ಟ್ ಅಂತ್ಯಕ್ಕೆ ಸೇವೆಯಿಂದ ನಿವೃತ್ತಿಯಾಗುತ್ತಿರುವ ಕ್ಷೇತ್ರ ಶಿಕ್ಷಣಾಕಾರಿ ಕನ್ನಯ್ಯ ಹಾಗೂ ನಿವೃತ್ತರಾಗಿ ಸಾರ್ಥಕ ಬದುಕು ಸಾಗಿಸುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಸುಲೇಮಾನ್ ಖಾನ್ರನ್ನು ಸನ್ಮಾನಿಸಲಾಯಿತು.
ಶಾಲಾ ಮಕ್ಕಳು ಸ್ವಾತಂತ್ರ್ಯೋತ್ಸವ ಕುರಿತು ಕಿರು ಭಾಷಣ ಮಾಡಿದರು.
ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ಖಜಾಂಚಿ ನಾಗರಾಜ್, ಜಿಲ್ಲಾ ಸಮಿತಿ ಸದಸ್ಯ ಬಹಾದ್ದೂರ ಸಾಬ್, ಕೆ.ಜಯದೇವ್, ಅಪ್ಪಿ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಶ್ರೀರಾಮ್ , ರಾಜೇಶ್ಸಿಂಗ್, ಗೋಕುಲ ಚಲಪತಿ, ಮುನಿವೆಂಕಟ ಯಾದವ, ರೋಟರಿ ಸೆಂಟ್ರಲ್ ಪದಾಕಾರಿಗಳಾದ ಕೆ.ಎನ್.ಎನ್.ಪ್ರಕಾಶ್, ಚಂಪಕ್ ರಮೇಶ್, ದೈಹಿಕ ಶಿಕ್ಷಣಾಕಾರಿ ಚೌಡಪ್ಪ, ಪೈಂಟರ್ ಬಷೀರ್, ಶ್ರೀನಿವಾಸ್, ಬಿಇಒ ಕಚೇರಿ ಸಿಬ್ಬಂದಿಗಳಾದ ಗಿರೀಶ್ ಹಾಗೂ ಎರಡೂ ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ರಾಷ್ಟ್ರಧ್ವಜಾರೋಹಣ ಜವಾಬ್ದಾರಿ ನಿರ್ವಹಿಸಿದರು.