

ಕೋಲಾರ,ಆ.05: ಕೋಲಾರ ಜಿಲ್ಲೆಯ ಅಭಿವೃದ್ದಿಗೆ ಸಚಿವರ ಅನುದಾನದಲ್ಲಿ 74 ಕೋಟಿ ರೂ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿರುವುದಾಗಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಘೋಷಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜಿಲ್ಲಾ ಕೇಂದ್ರವಾದ ಕೋಲಾರಕ್ಕೆ 26 ಕೋಟಿ ರೂ, ಕೆ.ಜಿ.ಎಫ್ ನಗರಕ್ಕೆ 15 ಕೋಟಿ ರೂ, ಬಂಗಾರಪೇಟೆಗೆ 10 ಕೋಟಿ ರೂ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 74 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು ಅಗಿರುವ ಎತ್ತಿನ ಹೊಳೆಯ ಯೋಜನೆಯೂ ತುಮಕೂರಿನ ಬೈರಗೊಂಡ್ಲಹಳ್ಳಿ ಬಳಿಯ ಜಮೀನಿಗೆ ಸಂಬಂಧಿಸಿದಂತೆ ಅಡೆತಡೆಗಳಿರುವುದನ್ನು ಬಗೆಹರಿಸುವ ಪ್ರಯತ್ನ ಮಂದುವರೆದಿದೆ. ಕೋಲಾರ ಜಿಲ್ಲೆಗೆ 5 ಟಿ.ಎಂ.ಸಿ. ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜಿಲ್ಲೆಯ 138 ಕೆರೆಗಳಿಗೆ ಅರ್ಧ ಭಾಗ ತುಂಬಿಸುವ ಕುರಿತು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ಕೆ.ಸಿ.ವ್ಯಾಲಿಯ ಮೂರನೇ ಹಂತದ ಶುದೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಅನುದಾನದಲ್ಲಿ ಜಿಲ್ಲೆಯ ರಸ್ತೆಗಳನ್ನು ಉನ್ನತೀಕರಣ ಮುಖ್ಯ ಮಾಡಲಾಗುವುದು, ರಿಂಗ್ ರಸ್ತೆಗೆ ಈಗಾಗಲೇ ಡಿ.ಪಿ.ಅರ್. ಸಿದ್ದಪಡಿಸಲಾಗುತ್ತಿದೆ. ಯರ್‍ಗೋಳ್ ಯೋಜನೆಯು 375 ಎಕರೆ ಪ್ರದೇಶವನ್ನು ಹೊಂದಿದೆ. ಇದರಲ್ಲಿ ಸರ್ಕಾರಕ್ಕೆ ಸೇರಿರುವುದು 95 ಎಕರೆ ಅಗಿದೆ. ಅರಣ್ಯ ಇಲಾಖೆಗೆ 150 ಎಕರೆ ಸ್ವಾಧೀನಕ್ಕೆ ಪಡೆದುಕೊಳ್ಳಲು ವಿಳಂಭವಾಯಿತು ಎಂದರು.
ಯರಗೋಳ್ ಯೋಜನೆಯಲ್ಲಿ 45 ಗ್ರಾಮಗಳಿಗೆ, 4 ಪಟ್ಟಣಗಳಿಗೆ, 4 ಲಕ್ಷ ಜನಕ್ಕೆ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ. ಈಗಾಗಲೇ ಶೇ 87 ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. 4 ಓವರ್ ಹೆಡ್ ಟ್ಯಾಂಕ್‍ಗಳಲ್ಲಿ ನೀರು ಶೇಖರಣೆ ಮಾಡಲಾಗುವುದು. ಈಗಾಗಲೇ ಎರಡು ಓವರ್ ಹೆಡ್ ಟ್ಯಾಂಕ್‍ಗಳು ಪೂರ್ಣಗೊಂಡಿರುವುದರಿಂದ 4 ಓವರ್ ಹೆಡ್ ಟ್ಯಾಂಕ್‍ಗಳು ಪೂರ್ಣಗೊಳ್ಳುವವರೆಗೂ ಕಾಯುವುದು ಬೇಡಾ, ಎರಡು ಓವರ್ ಹೆಡ್ ಟ್ಯಾಂಕ್ ಪೂರ್ಣಗೊಂಡಿರುವುದಕ್ಕೆ ಚಾಲನೆ ನೀಡಲು ಸೂಚಿಸಿದೆ. ಈ ನೀರಾವರಿ ಯೋಜನೆಗಳು ಸಿದ್ದರಾಮಯ್ಯ ಅವರಿಂದಲೇ ಪ್ರಾರಂಭವಾಗಿದ್ದು, ಇದು ಪೂರ್ಣಗೊಳ್ಳುವುದು ಸಹ ಸಿದ್ದರಾಮಯ್ಯ ಅವರಿಂದಲೇ ಅಗುತ್ತದೆ ಎಂದು ಖಚಿತ ಪಡಿಸಿದರು.
ಪ್ರಶ್ನೆಯೊಂದಕ್ಕೆ ಕೆ.ಸಿ. ವ್ಯಾಲಿ ನೀರು ಯರಗೋಳ್ ನೀರಿಗೆ ಸೇರ್ಪಡೆಯಾಗುತ್ತಿಲ್ಲ. ಸೇರ್ಪಡೆಯಾಗಲು ಬಿಡುವುದಿಲ್ಲ ಯರಗೋಳ ಕುಡಿಯುವ ನೀರು, ಕೆ.ಸಿ.ವ್ಯಾಲಿ ನೀರು ಬಳಕೆ ಹಾಗೂ ಕೃಷಿಯ ಅಂತರ್ಜಲ ಅಭಿವೃದ್ದಿಗೆ ಬಳಿಸುವ ನೀರು ಅಗಿದೆ. ಈ ಬಗ್ಗೆ ಈಗಾಗಲೇ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿಯನ್ನು ಪಡೆಯಲಾಗಿದೆ. ಈ ಕುರಿತು ಯಾವೂದೇ ಸಂಶಯ ಬೇಡ, ಇದರಿಂದ ಯಾವೂದೇ ಬೆಳೆಗೂ ಹಾನಿಯಾಗುತ್ತಿಲ್ಲ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೂ ಕೆ.ಸಿ.ವ್ಯಾಲಿ ನೀರಿಗೂ ಸಂಬಂಧವಿಲ್ಲ ಎಂದು ಪ್ರತಿ ಪಾದಿಸಿದರು.
ರೋಗಗಳು ಬರುತ್ತಿರುವುದು ಕಳಪೆ ಭಿತ್ತನೆಯಿಂದಾಗಿ, ಕಳಪೆ ಮಟ್ಟದ ನರ್ಸರಿಗಳ ಸಸಿಗಳಿಂದಾಗಿ ಬೆಳೆಗಳು ಹಲವಾರು ರೋಗಗಳಿಗೆ ಗುರಿಯಾಗುತ್ತಿದೆ. ಕೆಲವರು ಇದನ್ನು ತಿರುಚುವ ಮೂಲಕ ಕೆ.ಸಿ.ವ್ಯಾಲಿ ನೀರಿನ ಮೇಲೆ ಆರೋಪಿಸಲಾಗುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ನರ್ಸರಿಗಳು ತೋಟಗಾರಿಕೆ ಅನುಮತಿ ಪಡೆಯದೆ ಸಸಿಗಳನ್ನು ಮಾರಾಟ ಮಾಡುವಂತಿಲ್ಲ ಎಂದರು.
ಜಿಲ್ಲೆಯ ಹಲವಾರು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವುದು ನಿಜ. ಶೇ 60 ರಷ್ಟು ಮಾತ್ರ ಭರ್ತಿ ಇದೆ. ಉಳಿದಂತೆ ಭರ್ತಿ ಮಾಡಲು ಪ್ರಸ್ತಾವನೆ ಸರ್ಕಾರದ ಮುಂದಿದೆ ಗುತ್ತಿಗೆ, ಹೊರಗುತ್ತಿಗೆ ಅಧಾರದ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂಬ ಸಚಿವರ ಸ್ವಷ್ಟನೆಗೆ ಧ್ವನಿಗೊಡಿಸಿದ ಶಾಸಕ ಕೊತ್ತೂರು ಮಂಜುನಾಥ್ ಅವರು ಕೋಲಾರ ನಗರಸಭೆಯಲ್ಲಿ ಈಗಾ 15 ಮಂದಿ ಸಿಬ್ಬಂದಿಗಳ ನೇಮಕ ಮಾಡಲು ಸರ್ಕಾರದಿಂದ ಅನುಮತಿ ಪಡೆದಿದ್ದು ಪೌರಾಯುಕ್ತರಿಗೆ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರಸಭೆ ಮತ್ತು ಪುರಸಭೆಗಳಿಗೆ ಸಂಬಂಧಿಸಿದಂತೆ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಲು ಆಯುಕ್ತರಿಗೆ ಹಾಗೂ ಮುಖ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತೆರಿಗೆ ಪಾವತಿಸದ ವಿರುದ್ದ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲು ಅದೇಶಿಸಲಾಗಿದೆ. ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ ತೋರುವಂತ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದರು.
ಈಗಾಗಲೇ ನಗರದ ಶ್ರೀ ದೇವರಾಜ್ ವೈದ್ಯಕೀಯ ಕಾಲೇಜು ಹಾಗೂ ಆರ್.ಎಲ್ ಜಾಲಪ್ಪ ಆಸ್ಪತ್ರೆಯು ಸುಮಾರು 11 ಕೋಟಿ ರೂ ತೆರಿಗೆಯನ್ನು ನಗರಸಭೆಗೆ ಬಾಕಿ ಇರಿಸಿಕೊಂಡಿದೆ. ಇದರ ಜೂತೆಗೆ ನಗರ ಹೊರವಲಯದ ಕಲ್ಯಾಣ ಮಂದಿರಗಳು, ರೆಸಾರ್ಟ್‍ಸ್ಸ್‍ಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಬಳಕೆಯ ಕಟ್ಟಡಗಳು ನಗರಸಭೆಗೆ ತೆರಿಗೆಯನ್ನು ಪಾವತಿ ಮಾಡದೆ ಇರುವುದು ಗಮನಕ್ಕೆ ಬಂದಿದ್ದು, ಇವುಗಳ ವಿರುದ್ದ ನೋಟಿಸ್ ಜಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರರನ್ನೆ ವಾರ್ಡನ್ ಹುದ್ದೆಯನ್ನು ನಿರ್ವಹಿಸಲು ನೀಡಿರುವ ಹಿನ್ನಲೆಯಲ್ಲಿ ಬಹಳಷ್ಟು ವ್ಯಾತ್ಯಾಸಗಳು ಆಗುತ್ತಿದೆ ಎಂಬ ದೂರುಗಳು ಬಂದಿದೆ. ಈ ಸಂಬಂಧವಾಗಿ ಯಾವೂದೇ ಕಾರಣಕ್ಕೂ ಡಿ ಗ್ರೂಪ್ ಸಿಬ್ಬಂದಿಗೆ ವಾರ್ಡನ್ ಹುದ್ದೆ ನೀಡಬಾರದು. ವಿದ್ಯಾರ್ಥಿ ನಿಲಯಗಳು ಯಾವೂದೇ ಕಾರಣಕ್ಕೂ ಮೂಲ ಭೂತ ಸೌಲಭ್ಯಗಳಿಮದ ವಂಚಿತವಾಗಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೆಲವು ಜಮೀನುಗಳನ್ನು ಅನುಮತಿ ಇಲ್ಲದೆ ಲೇಔಟ್‍ಗಳಾಗಿ ಪರಿವರ್ತಿಸಲಾಗಿದೆ, ಭೂ ಪರಿವರ್ತನೆ ಅಗಿದ್ದರೆ ಬಿ ಖಾತೆ ನೀಡಬಹುದಾಗಿದೆ. ಲೇಔಟ್‍ಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರೆ ಮಾತ್ರ ಅನುಮತಿ, ಪರವನಾಗಿಗಳನ್ನು ನೀಡಬೇಕು ಎಂದ ಅವರು ಕಟ್ಟಡಗಳಿಗೆ ಖಾತೆ ಇಲ್ಲದ ಮಾತ್ರಕ್ಕೆ ತೆರಿಗೆ ಪಾವತಿಸಬಾರದು ಎಂದು ಕಾನೂನಿನಲ್ಲಿ ಇಲ್ಲ. ತೆರಿಗೆಯನ್ನು ಮುಲಾಜಿಲ್ಲದೆ ವಸೂಲಾತಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದೆ. ತೆರಿಗೆಗೆ ಸಂಬಂಧಿಸಿದಂತೆ ಆನ್‍ಲೈನ್ ವ್ಯವಸ್ಥೆ ಬಳಿಸಿಕೊಳ್ಳುವ ಜೂತೆಗೆ ಸ್ಯಾಟ್ ಲೈಟ್ ಬಳಕೆಯಿಂದಲೂ ತೆರಿಗೆ ವಂಚಿತರನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಸ್ವಷ್ಟಪಡಿಸಿದರು.
ಕೋಲಾರಮ್ಮ ಕೆರೆಯನ್ನು ಅಭಿವೃದ್ದಿಪಡಿಸಿ ಪ್ರವಾಸಿತಾಣವಾಗಿ ಪರಿವರ್ತಿಸಲು 20 ಕೋಟಿ ರೂ ಅನುದಾನ ಮಂಜೂರು ಮಾಡಿದೆ. ಇದರ ಜೂತೆಗೆ ಉದ್ಯಾನವನಗಳನ್ನು ಮಾಡಲಾಗುತ್ತಿದೆ. ಈ ಕಾಮಗಾರಿಗಳು ಕಳಪೆ ಇದ್ದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕಾಗಿರುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ ಇಲ್ಲದಿದ್ದರೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರದ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕೆಂದಟ್ಟಿ ಬಳಿ 15 ಎಕರೆ ಜಮೀನು ಗುರುತಿಸಲಾಗಿದೆ. ಈ ಹಿಂದೆ ಹಲವಾರು ಅಡೆತಡೆಗಳಿದ್ದ ಕಾರಣಕ್ಕೆ ತ್ಯಾಜ್ಯ ಘಟಕ ಸ್ಥಾಪನೆ ಸಾಧ್ಯವಾಗಲಿಲ್ಲ. ಶೀಘ್ರದಲ್ಲಿ ಅದಕ್ಕೆ ಚಾಲನೆ ನೀಡಲು ಕ್ರಮ ಕೈಗೊಳ್ಳುವುದು ಎಂದು ಸಚಿವರು ನುಡಿದರು.
ನಗರ ಹೊರವಲಯದ 500 ಎಕರೆ ಜಾಗದಲ್ಲಿ ಕೆ.ಯು.ಡಿ.ಎ. ಲೇಔಟ್ ಅಭಿವೃದ್ದಿಪಡಿಸಿ ಮನೆ ಇಲ್ಲದ ಬಡವರಿಗೆ ಹಂಚಿಕೆ ಮಾಡಲು ಚಿಂತಿಸಲಾಗಿದೆ. ಇದರಲ್ಲಿ ಜಮೀನು ನೀಡುವಂತ ರೈತರಿಗೆ ಶೇ 50 ನಿವೇಶಗಳನ್ನು ನೀಡಲಾಗುವುದು, ಉಳಿದ ಶೇ 50 ನಿವೇಶಗಳು ಕೆ.ಯು.ಡಿ.ಎ. ಸ್ವಾಧೀನಕ್ಕೆ ಪಡೆಯುವಂತ ಯೋಜನೆ ರೂಪಿಸಿದೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಲ್ಲು ಮತ್ತು ಮರಳು, ಮಣ್ಣು ಗಣಿಗಾರಿಕೆಗಳಿಂದ ಕೆರೆಗಳು, ರಸ್ತೆಗಳು ಹಾಳಾಗುತ್ತಿದೆ. ಬೆಟ್ಟಗುಡ್ಡಗಳು ನಾಶವಾಗುತ್ತಿದೆ. ಒಂದು ಕಡೆ ಅನುಮತಿ ಪಡೆದು ಹತ್ತು ಕಡೆ ಗಣಿಗಾರಿಕೆ ನಡೆಸುತ್ತಿದ್ದಾರೆ, ಕ್ರಷರ್‍ಗಳ ಹಾವಳಿ ತೀವ್ರವಾಗಿದೆ. ಇದರ ಜೂತೆ ಹೊರ ರಾಜ್ಯಗಳಿಂದ ಲಾರಿಗಳಲ್ಲಿ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾಗಿ ತುಂಬಿ ಸಂಚರಿಸುವುದರಿಂದ ರಸ್ತೆಗಳು ಹಾಳಾಗುತ್ತಿದೆ. ಬೆಟ್ಟಗುಡ್ಡಗಳಲ್ಲಿ ಬಂಡೆಗಳನ್ನು ಸಿಡಿಸುವ ಸಂದರ್ಭದಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡರು ಸಹ ಗಮನಕ್ಕೆ ಬಾರದಂತೆ ಮರೆಮಾಚಲಾಗುತ್ತಿದೆ ಇದರ ವಿರುದ್ದ ಹಲವಾರು ಹೋರಾಟಗಳು, ದೂರುಗಳು ನೀಡಿದ್ದರೂ ಯಾವೂದೇ ಕ್ರಮ ಇಲ್ಲ ಎಂಬ ಆರೋಪಗಳು ಹಿಂದಿನ ಸರ್ಕಾರದಲ್ಲಿತ್ತು. ಅದರೆ ಕಾಂಗ್ರೇಸ್ ಸರ್ಕಾರ ಬಂದ ನಂತರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವೂದಾದರೂ ಖಚಿತವಾದ ಪ್ರಕರಣಗಳು ದಾಖಲೆ ಸಮೇತ ನೀಡಿದಲ್ಲಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಜಿಲ್ಲೆಯ ಸಮಸ್ಯೆಗಳು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಚಟುವಟಿಕೆಗಳ ಕುರಿತು ಸಚಿವರಿಗೆ ಪರಿಚಯಿಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಹಾಗೂ ಜಿಲ್ಲಾ ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ಜಿಲ್ಲೆಯ ಸಮಸ್ಯೆಗಳ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಸಂವಾದದಲ್ಲಿ ಅನೇಕ ಪತರಕರ್ತರು ಮಾತನಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಆಹಮದ್, ಶಾಸಕರಾದ ಶ್ರಿಮತಿ ರೂಪಕಲಾ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ಅಂಜನಪ್ಪ ಉಪಸ್ಥಿತರಿದ್ದರು.


