ತಹಸೀಲ್ದಾರನಿಂದ 72 ಸಾವಿರ ರೂ ದಂಡ- ಬಡ ಅನ್ನದಾತ ಹೃದಯಾಘಾತಕ್ಕೆ ಬಲಿ,ರೈತ ಬಲಿಯಾದಕ್ಕೆ, ಕ್ರಮ ಜರುಗಿಸಬೇಕು : ಶಾಸಕಿ ರೂಪಶಶಿಧರ್ ಆಗ್ರಹ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೃಷಿಭೂಮಿಯ ಫಲವತ್ತತೆಗಾಗಿ ಕೆರೆಯಲ್ಲಿ ಮಣ್ಣು ತೆಗೆಯುತ್ತಿದ್ದ ರೈತನಿಗೆ 72 ಸಾವಿರ ದಂಡ ಹಾಕಿ ಅನ್ನದಾತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಲು ಕಾರಣರಾದ ಕೆಜಿಎಫ್ ತಹಸೀಲ್ದಾರ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕಿ ರೂಪಕಲಾ ಶಶಿಧರ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಘಟನೆ ಹಿನ್ನಲೆಯಲ್ಲಿ ನೊಂದ ರೈತ ಕುಟುಂಬದ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರನ್ನು ಭೇಟಿಯಾದ ರೂಪಕಲಾ ಶಶಿಧರ್, ತೋಟದ ಫಲವತ್ತತೆಗಾಗಿ ತೋಟಕ್ಕೆ ಮಣ್ಣು ಹೊಡೆದುಕೊಂಡ ಅಮಾಯಕ ರೈತನನ್ನು ತಹಸೀಲ್ದಾರ್ ಅವರ ಅಮಾನವೀಯ ವರ್ತನೆ ಬಲಿ ಪಡೆದಿದೆ ಎಂದು ಆರೋಪಿಸಿದರು.
ಕಳೆದ ಒಂದು ವಾರದ ಹಿಂದೆ ಕೆಜಿಎಫ್ ತಾಲೂಕಿನ ಚಕ್ರಬಂಡೆ ಗ್ರಾಮದ ದೊಡ್ಡ ಕೆರೆಯಲ್ಲಿ ಅದೇ ಗ್ರಾಮದ ಚಂಗಾರೆಡ್ಡಿ ಎಂಬ ಮಣ್ಣು ತೆಗೆಯುತ್ತಿದ್ದರು. ಈ ವೇಳೆ ಸ್ಥಳಕ್ಕೆ ತೆರಳಿದ್ದ ತಹಸೀಲ್ದಾರ್ ಸುಜಾತ 2 ಟ್ರಾಕ್ಟರ್ ಹಾಗೂ ಜೆಸಿಬಿ ವಾಹನವನ್ನು ವಶಕ್ಕೆ ಪಡೆದುಕೊಂಡು, ಪೊಲೀಸರಿಗೆ ದೂರು ನೀಡಿದ್ದರು.
ಈ ವೇಳೆ ವಾಹನಗಳನ್ನು ಬಿಡಿಸಿಕೊಳ್ಳಲು ದಲ್ಲಾಳಿಯೊಬ್ಬರ ಮೂಲಕ 11 ಸಾವಿರರೂಗಳನ್ನು ತಹಸೀಲ್ದಾರ್‍ಗೆ ಲಂಚವಾಗಿ ನೀಡಲಾಗಿತ್ತು. ಆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ 72 ಸಾವಿರರೂ ದಂಡ ಹಾಕಲಾಗಿದ್ದು, ದಂಡದ ಮೊತ್ತ ಕೇಳಿ ರೈತ ಚಂಗಾರೆಡ್ಡಿ ಹೃದಯಾಘಾತದಿಂದ ಮೃತಪಟ್ಟಿದ್ದರು.
ಬಳಿಕ ಚಂಗಾರೆಡ್ಡಿ ಭಾವಮೈದ ಅಶೋಕ್‍ರೆಡ್ಡಿ ಮೀಟರ್ ಬಡ್ಡಿಗೆ ಹಣ ಪಡೆದು ದಂಡ ಕಟ್ಟಿ ಗಾಡಿಗಳನ್ನು ಬಿಡಿಸಿಕೊಂಡಿದ್ದಾರೆ. ರೈತನ ಸಾವಿಗೆ ಕಾರಣವಾಗಿರುವ ತಹಸೀಲ್ದಾರ್ ಸುಜಾತ ವಿರುದ್ಧ ಕ್ರಮಕೈಗೊಂಡು, ಪಾವತಿಸಿರುವ ದಂಡವನ್ನು ಮಾನವೀಯತೆಯಿಂದ ವಾಪಸ್ಸು ಕೊಡಿಸಬೇಕೆಂದು ಶಾಸಕಿ ಮತ್ತು ರೈತನ ಕುಟುಂಬಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಕೆರೆಯಲ್ಲಿ ಮಣ್ಣು ತೆಗೆಯುವುದಕ್ಕೆ ಅನುಮತಿ ಪಡೆದುಕೊಳ್ಳುವ ಸಂಬಂಧ ಮಾಹಿತಿ ಇಲ್ಲದೆ ಅವರು ಕೃಷಿ ಜಮೀನು ಫಲವತ್ತತೆಗಾಗಿ ಮಣ್ಣು ಕೊಂಡೊಯ್ಯಲು ಬಂದಿದ್ದರು. ಆಗ ತಹಸೀಲ್ದಾರ್ ಅವರು ದಾಳಿ ನಡೆಸಿ, ವಾಸ್ತವಾಂಶ ತಿಳಿಯದೆ ಈ ರೀತಿ ತೊಂದರೆಯನ್ನುಂಟು ಮಾಡಿದ್ದಾರೆ.
ತಹಸೀಲ್ದಾರ್ ವರ್ತನೆಯಿಂದ ರೈತನ ಕುಟುಂಬಕ್ಕೆ ತೊಂದರೆಯಾಗಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಹಸೀಲ್ದಾರ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಂಗಾರು ಮಳೆ ಆರಂಭವಾಗಿರುವುದರಿಂದ ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ, ಇಂತಹ ಸಂದರ್ಭದಲ್ಲಿ ಫಲವತ್ತತೆ ಕಾಪಾಡುವ ದೃಷ್ಟಿಯಿಂದ ಕೆರೆಯ ಮಣ್ಣನ್ನು ತೋಟಕ್ಕೆ ಸಾಗಿಸಲು ಪ್ರಯತ್ನಿಸಿದ್ದು ತಪ್ಪೇ ಎಂದು ಪ್ರಶ್ನಿಸಿದ ಅವರು, ಕಾನೂನಿನ ಅರಿವಿಲ್ಲದ ರೈತರ ವಿರುದ್ದ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇಂತಹ ಅಮಾನವೀಯ ವರ್ತನೆ ತೋರಿರುವ ತಹಸೀಲ್ದಾರ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ಮನವಿ ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಕೆರೆಗಳಲ್ಲಿ ಮಣ್ಣು ತೆಗೆಯುವುದಕ್ಕೆ ಗ್ರಾಮ ಪಂಚಾಯಿತಿಗಳಿಂದ ಅನುಮತಿ ನೀಡುವಂತಿಲ್ಲ. ಒಂದು ವೇಳೆ ಯಾರಾದರೂ ಪಿಡಿಒಗಳು ನೀಡಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು.
ರೈತರು ತಮ್ಮ ಕೃಷಿ ಜಮೀನುಗಳಿಗೆ ಮಣ್ಣು ಪಡೆದುಕೊಳ್ಳಬೇಕಾದರೆ ಹಣ ಕಟ್ಟುವಂತಿಲ್ಲ. ಬದಲಿಗೆ ನಮ್ಮ ಕಚೇರಿಯಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಇಟ್ಟಿಗೆ ಕಾರ್ಖಾನೆ ಇನ್ನಿತರೆ ವಾಣಿಜ್ಯ ಕೆಲಸಗಳಿಗೆ ಬೇಕಾದರೆ ಪ್ರತಿ ಟನ್‍ಗೆ 90ರೂ ಶುಲ್ಕ ನೀಡಬೇಕಾಗುತ್ತದೆ ಎಂದು ವಿವರಿಸಿದರು.
ಅಲ್ಲದೆ ರೈತ ಮೃತಪಟ್ಟಿರುವುದರಿಂದಾಗಿ ಮಾನವೀಯತೆ ದೃಷ್ಠಿಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರೊಂದಿಗೆ ಚರ್ಚಿಸಿ 72 ಸಾವಿರರೂ ಹಣ ವಾಪಸ್ಸು ಕೊಡಿಸುವುದಾಗಿ ಭರವಸೆ ನೀಡಿದರು.
ರೈತರ ವಿಷಯದಲ್ಲಿ ಇಂತಹ ಅಮಾನವೀಯ ವರ್ತನೆಗೆ ಅವಕಾಶವಿಲ್ಲದಂತೆ ಆದೇಶ ಹೊರಡಿಸುವ ಭರವಸೆಯನ್ನು ಡಿಸಿಯವರು ನೀಡಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮೃತ ರೈತ ಚಂಗಾರೆಡ್ಡಿ ಭಾಮೈದ ಅಶೋಕ್‍ರೆಡ್ಡಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಅ.ಮು.ಲಕ್ಷ್ಮಿನಾರಾಯಣ್, ಮುಖಂಡರಾದ ವಿಜಯಣ್ಣ, ವಿಜಯರಾಘವರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.