ಮುಂಬಯ್,ಮಾ. 3: ಮಹಾರಾಷ್ಟ್ರದ ಔರಂಗಾಬಾದ್ನ ಕಂಟೋನ್ಮೆಂಟ್ನ ದಾನಾ ಬಜಾರ್ ಪ್ರದೇಶದಲ್ಲಿ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ಬೆಂಕಿ ಹೊತ್ತಿಕೊಂಡ ಅಂಗಡಿಯಲ್ಲಿ ಮಲಗಿದ್ದ ಎಂಟನೇ ವ್ಯಕ್ತಿಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಮೃತರನ್ನು ಹಮೀದಾ ಬೇಗಂ (49), ಅವರ ಇಬ್ಬರು ಮಕ್ಕಳಾದ ವಸೀಂ (29), ಸೋಹೆಲ್ (27), ಅವರ ಪತ್ನಿಯರಾದ ತನ್ವೀರ್ (25), ರೇಷ್ಮಾ (23) ಮತ್ತು ಐದು ವರ್ಷದ ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಚಾರ್ಜಿಂಗ್ಗಾಗಿ ಪ್ಲಗ್ ಮಾಡಿದ ಎಲೆಕ್ಟ್ರಿಕ್ ಬೈಕ್ನಿಂದ ಬೆಂಕಿ ಕಾಣಿಸಿಕೊಂಡು, ಟೈಲರ್ ಅಂಗಡಿಗೆ ವ್ಯಾಪಿಸಿದ್ದು, ಆ ಪ್ರದೇಶದ ಜೈನ ದೇವಾಲಯದ ಸಮೀಪದಲ್ಲಿರುವ ಅಂಗಡಿಯ ಮೇಲಿರುವ ಎರಡು ಮಹಡಿಗಳನ್ನು ಆವರಿಸಿದೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುವ ಮುನ್ನವೇ ಕುಟುಂಬದ ಕೆಲವರು ಬೆಂಕಿಗೆ ಆಹುತಿಯಾಗಿದ್ದಾರೆ.ಉಪ ಪೊಲೀಸ್ ಆಯುಕ್ತ ನಿತಿನ್ ಬಾಗೇಟ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಾಥಮಿಕ ಸ್ಥಳ ಪರಿಶೀಲನೆಯು ಅಂಗಡಿಯಿಂದ ಉಂಟಾದ ಹೊಗೆ ಮತ್ತು ಜ್ವಾಲೆಯ ಪರಿಣಾಮವಾಗಿ ಉಸಿರುಗಟ್ಟುವಿಕೆಯಿಂದ ಸಂತ್ರಸ್ತರು ಪ್ರಜ್ಞಾಹೀನರಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದ ದೇಹ ಹಸ್ತಾಂತರ ಮಾಡುವುದಾಗಿ ಹೇಳಿದ್ದಾರೆ.