ಕೋಲಾರ:- ಜಿಲ್ಲಾದ್ಯಂತ ಮಾ.25 ರಿಂದ ಏ.6ರವರೆಗೂ 65 ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 20479 ವಿದ್ಯಾರ್ಥಿಗಳು ಕುಳಿತಿದ್ದು, ಯಾವುದೇ ಗೊಂದಲಕ್ಕೆಡೆ ಇಲ್ಲದಂತೆ ಅಗತ್ಯ ಮೂಲಸೌಲಭ್ಯ ಒದಗಿಸಿ, ಗೊಂದಲಕ್ಕೆ ಅವಕಾಶ ಬೇಡ, ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚನೆ ನೀಡಿದರು.
ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು,ಶೌಚಾಲಯ ವ್ಯವಸ್ಥೆ, ಡೆಸ್ಕ್, ಗಾಳಿ,ಬೆಳಕು ಸರಿಯಾಗಿದೆ ಎಂಬುದನ್ನು ದೃಢಪಡಿಸಿಕೊಳ್ಳಿ, ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕುವಾರು ಕೇಂದ್ರಗಳ ವಿವರ
ಬಂಗಾರಪೇಟೆಯ 8, ಕೆಜಿಎಫ್ನಲ್ಲಿ 9, ಕೋಲಾರದ 18, ಮಾಲೂರಿನ 8, ಮುಳಬಾಗಿಲಿನ 12 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 10 ಕೇಂದ್ರಗಳು ಸೇರಿದಂತೆ ಒಟ್ಟು 65 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ, ಎಲ್ಲಾ ಕೇಂದ್ರಗಳಲ್ಲೂ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ಅಗತ್ಯ ಸೌಲಭ್ಯಗಳಿರುವುದನ್ನು ದೃಢಪಡಿಸಿಕೊಳ್ಳಿ ಎಂದರು.
ಪರೀಕ್ಷಾ ಕಾರ್ಯಕ್ಕೆ 2250 ಮಂದಿ ನೇಮಕ
ಜಿಲ್ಲೆಯ ಆರು ಕ್ಷೇತ್ರ ವಲಯಗಳಿಗೆ ಸಂಬಂಧಿಸಿದಂತೆ ಎಲ್ಲಾ ತಾಲ್ಲೂಕಿನಲ್ಲಿ ಸುಗಮ ಪರೀಕ್ಷೆಗಾಗಿ ಮುಖ್ಯ ಅಧೀಕ್ಷಕರು, ಅಭಿರಕ್ಷಕರು, ಸ್ಥಾನಿಕ ಜಾಗೃತದಳ, ಕೊಠಡಿ ಮೇಲ್ವಿಚಾರಕರು ಸೇರಿದಂತೆ ಸುಮಾರು 2250 ಮಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಗೊಂದಲಕ್ಕೆಡೆ ಮಾಡದಿರಿ, ಮಕ್ಕಳು ಖುಷಿಯಿಂದ ಪರೀಕ್ಷೆ ಬರೆಯುವ ವಾತಾವರಣ ಇರಲಿ, ನಕಲು,ಅವ್ಯವಹಾರಕ್ಕೆ ಅವಕಾಶ ನೀಡದಿರಿ ಎಂದರು.
ಮುಖ್ಯ ಅಧೀಕ್ಷಕರು ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡಲ್ಗಳನ್ನು ಡಿಡಿಪಿಐ ಕಚೇರಿಯ ಭದ್ರತಾ ಕೊಠಡಿಗೆ ಸಂಜೆ 4 ಗಂಟೆಯೊಳಗೆ ತಲುಪಿಸಬೇಕು ಎಂದು ಸೂಚಿಸಲಾಗಿದ್ದು, ಭದ್ರತಾ ಕೊಠಡಿ ಹಾಗೂ ಪ್ರಶ್ನೆಪತ್ರಿಕೆ ಸಾಗಾಟ, ಪ್ರತಿ ಕೇಂದ್ರಗಳ ಬಳಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಪೊಲೀಸ್ ಇಲಾಖೆಗೆ ಸೂಚಿಸಿರುವುದಾಗಿ ಡಿಸಿಯವರು ತಿಳಿಸಿದರು.
144ನೇ ಸೆಕ್ಷನ್ ನಿಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಿದ್ದು, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ 200 ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ 8 ರಿಂದ ಸಂಜೆ 3ರವರೆಗೂ ಮುಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದರು.ಸುಗಮ ಪರೀಕ್ಷೆಗಾಗಿ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆಶಾ ಕಾರ್ಯಕರ್ತೆಯರು,ಆರೋಗ್ಯ ಸಿಬ್ಬಂದಿಯನ್ನು ನೇಮಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಅವರಿಗೆ ಸೂಚಿಸಿದರು.
ಚುನಾವಣಾ ಕರ್ತವ್ಯ ಆದ್ಯತೆಯಾಗಿರಲಿ
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುಖ್ಯ ಅಧೀಕ್ಷಕರಾಗಿರುವ ಕೆಲವು ಮುಖ್ಯ ಶಿಕ್ಷಕರು ಚುನಾವಣಾ ಕಾರ್ಯದಲ್ಲಿ ಸೆಕ್ಟರ್ ಅಧಿಕಾರಿಗಳಾಗಿಯೂ ಕೆಲಸ ಮಾಡುತ್ತಿದ್ದು, ಅವರನ್ನು ಆದ್ಯತೆ ಮೇರೆಗೆ ಪರೀಕ್ಷಾ ಕಾರ್ಯದಿಂದ ಬಿಡುಗಡೆ ಮಾಡಿ, ಅವರ ಜಾಗಕ್ಕೆ ಬೇರೊಬ್ಬರನ್ನು ನೇಮಿಸಿ ಎಂದು ಸೂಚನೆ ನೀಡಿದರು.
ಒಟ್ಟಾರೆ ಜಿಲ್ಲೆಯಲ್ಲಿ ಸುಗಮ ಪರೀಕ್ಷೆ ನಡೆಸಲು ಅನುವಾಗುವಂತೆ ತಾಲ್ಲೂಕು ಅಥವಾ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪ್ರತಿತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಯಾಗಿ ನೇಮಿಸುವುದಾಗಿ ಡಿಸಿಯವರು ಸಮಯಪ್ರಜ್ಞೆ ಇರಲಿ ಎಂದು ತಿಳಿಸಿದರು.
ಸತತ ವಿದ್ಯುತ್ ಒದಗಿಸಲು ತಾಕೀತು
ಪರೀಕ್ಷೆ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಎದುರಾಗದಂತೆ ಕ್ರಮವಹಿಸಲು ಬೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದ ಡಿಸಿಯವರು, ದ್ವಿತೀಯ ಪಿಯು ಪರೀಕ್ಷೆ ಸಂದರ್ಭದಲ್ಲಿ ಕರೆಂಟ್ ತೆಗೆದಿದ್ದರ ಕುರಿತು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಪರೀಕ್ಷಾ ಸಂದರ್ಭದಲ್ಲಿ ಸಮರ್ಪಕ ಬಸ್ ಸೇವೆ ಒದಗಿಸಲು ಡಿಟಿಒ ಜಯಶಾಂತಕುಮಾರ್ ಅವರಿಗೆ ಸೂಚಿಸಿದರು.
ಕುಡಿಯುವ ನೀರಿಗೆ ಒದಗಿಸಲು ತಾಕೀತು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಬಸವಂತಪ್ಪ ಅವರು ಮಾತನಾಡಿ, ಬೇಸಿಗೆಯಾಗಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಪ್ರತಿ ಕೊಠಡಿಯಲ್ಲೂ ಗೋಡೆ ಗಡಿಯಾರ ಇರುವಂತೆನೋಡಿಕೊಳ್ಳಿ, ಎಂದು ಸೂಚಿಸಿದರು.
ಪ್ರವೇಶದ್ವಾರ, ಕೇಂದ್ರದ ಕಾರಿಡಾರ್, ಬಂಡಲ್ ಕಟ್ಟುವ ಕಚೇರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವ ಕುರಿತು ಖಾತ್ರಿಪಡಿಸಿಕೊಳ್ಳಿ, ಯಶಸ್ವಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಗೆ ಹಾಗೂ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಅವರು ಶುಭ ಕೋರಿದರು.
ಪರೀಕ್ಷೆ ಕುರಿತು ಭಯ ಹೋಗಲಾಡಿಸಿ
ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಾಣಿಕ್ಯಾಳ್ ಮಾತನಾಡಿ, ಪರೀಕ್ಷೆಗೆ ಬರುವ ಮಕ್ಕಳಲ್ಲಿ ಆತಂಕ ಭಯ ಮೂಡದಂತೆ ಎಚ್ಚರವಹಿಸಿ, ಗೊಂದಲದಲ್ಲಿ ಕೇಂದ್ರಕ್ಕೆ ಬರುವ ಮಕ್ಕಳನ್ನು ಖುಷಿಯಿಂದ ಸ್ವಾಗತಿಸಿ, ಅವರಿಗೆ ಆತ್ಮಸ್ಥೈರ್ಯ ತುಂಬಿ ಎಂದು ಶುಭ ಹಾರೈಸಿದರು.
65ಪರೀಕ್ಷಾ ಕೇಂದ್ರ ಡಿಡಿಪಿಐ ಕೃಷ್ಣಮೂರ್ತಿ
ಸಭೆಯಲ್ಲಿ ಸ್ವಾಗತಿಸಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಜಿಲ್ಲೆಯಲ್ಲಿ ಒಟ್ಟು 65 ಪರೀಕ್ಷಾ ಕೇಂದ್ರಗಳ ಪೈಕಿ ಗ್ರಾಮೀಣ ಕೇಂದ್ರಗಳು 35, ನಗರ ಕೇಂದ್ರಗಳು 30 ಇದೆ ಎಂದ ಅವರು, ಪ್ರಶ್ನೆಪತ್ರಿಕೆಗಳನ್ನು ಕೇಂದ್ರಕ್ಕೆ ತಲುಪಿಸಲು ಹಾಗೂ ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಡಿಡಿಪಿಐ ಕಚೇರಿಗೆ ತಲುಪಿಸಲು ಮಾರ್ಗಾಧಿಕಾರಿಗಳ ತಂಡಗಳನ್ನು ನೇಮಿಸಿರುವುದಾಗಿ ತಿಳಿಸಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿ, ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಪ್ರತಿ ಕೇಂದ್ರಕ್ಕೆ ತಲಾ ಒಬ್ಬರು ಸ್ಥಾನಿಕ ಜಾಗೃದಳ ಸಿಬ್ಬಂದಿಯನ್ನು ನೇಮಿಸಲಾಗಿದೆ,
ಇದಲ್ಲದೇ ಡಿಡಿಪಿಐ, ಡಿವೈಪಿಸಿ, ನೇತೃತ್ವದಲ್ಲಿ ಎರಡು ಸಂಚಾರಿ ಜಾಗೃತದಳ ಕಾರ್ಯನಿರ್ವಹಿಸಲಿದೆ, ಪ್ರತಿ ತಾಲೂಕಿನಲ್ಲೂ ಬಿಇಒ, ನೇತೃತ್ವದಲ್ಲಿ ತಲಾ 1 ಜಾಗೃತದಳ ರಚಿಸಲಾಗಿದೆ ಎಂದ ಅವರು, ಇದಲ್ಲದೇ ಅಂತರ್ಜಿಲ್ಲಾ ಜಾಗೃತದಳ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಜಾಗೃತದಳ ಬರಲಿದೆ ಎಂದು ತಿಳಿಸಿ, ಮುಖ್ಯಅಧೀಕ್ಷಕರನ್ನು ಹೊರತುಪಡಿಸಿ ಎಲ್ಲರಿಗೂ ಮೊಬೈಲ್ ನಿಷೇಧವಿದೆ, ಕೇಂದ್ರದಲ್ಲಿ ಎಲ್ಲರಿಗೂ ಗುರುತಿನ ಚೀಟಿ ಕಡ್ಡಾಯವಾಗಿದೆ ಎಂದರು.
ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂಬಂಧ ಪ್ರಶ್ನೆಪತ್ರಿಕೆಗಳ ಭದ್ರತೆ ಕುರಿತಂತೆ ಅಗತ್ಯ ಕ್ರಮವಹಿಸಿದ್ದು, ಈ ಸಂಬಂಧ ತಾಲ್ಲೂಕು ಖಜಾನೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಅವರೊಂದಿಗೆ ತಾಲ್ಲೂಕು ಖಜಾನಾಧಿಕಾರಿಗಳಾದ ಶಂಕರ್, ನಾರಾಯಣಮೂರ್ತಿ, ಸತೀಶ್ಬಾಬು, ವೀಣಾ, ಸೋಮಶೇಖರ್ ಇದ್ದರು.
ಸಭೆಯಲ್ಲಿ ಪಿಯು ಡಿಡಿ ರಾಮಚಂದ್ರಪ್ಪ, ಡಿಹೆಚ್ಒ ಡಾ.ಜಗದೀಶ್, ಸಾರಿಗೆ ಸಂಸ್ಥೆ ಡಿಟಿಒ ಜಯಶಾಂತಕುಮಾರ್, ಡಯಟ್ ಪ್ರಾಂಶುಪಾಲ ಜಯಣ್ಣ, ಡಿವೈಪಿಸಿ ಚಂದ್ರಕಲಾ, ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಮುನಿವೆಂಕಟರಾಮಾಚಾರಿ, ಸುಕನ್ಯಾ,ಮುನಿಲಕ್ಷ್ಮಯ್ಯ, ಎವೈಪಿಸಿ ಮೋಹನ್ಬಾಬು,ಎಸ್ಸೆಸ್ಸೆಲ್ಸಿ ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣಪ್ಪ, ವಿಷಯಪರಿವೀಕ್ಷಕರಾದ ಶಂಕರೇಗೌಡ, ಗಾಯತ್ರಿ,ಶಶಿವಧನ, ತಾಲ್ಲೂಕು ನೋಡಲ್ ಅಧಿಕಾರಿಗಳಾದ ಸಿ.ಎಂ.ವೆಂಕಟರಮಣಪ್ಪ, ಮುನಿರತ್ನಯ್ಯಶೆಟ್ಟಿ, ಲಕ್ಷ್ಮೀಕಾಂತ್, ಬಾಬಾಜಾನ್, ಕಾರ್ತಿಕ್, ಲಕ್ಷ್ಮೀನಾರಾಯಣ ಮತ್ತಿತರರಿದ್ದರು.