“ಸತ್ಯ ಮತ್ತು ಪ್ರಾಮಾಣಿಕತೆ ಸದಾಕಾಲ ಬಾಳುವ ಸದ್ಗುಣಗಳು. ಇವುಗಳಿಂದಾಗಿ ನವಸಮಾಜ ನಿರ್ಮಾಣ ಸಾಧ್ಯ. ಕೌಟುಂನಿಕ ಬದುಕಿನಲ್ಲೂ ಇದರ ಅಗತ್ಯ ನಮಗಿದೆ. ಶಾಂತಿ ಹಾಗೂ ಪ್ರೀತಿಯಿಂದ ಬದುಕಿದಾಗ, ನಾವು ದೇವರಿಗೆ ಸಾಕ್ಷಿಯಾಗಲು ಸಾಧ್ಯ” ಹೀಗೆಂದರು ಬೆಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ| ಬರ್ನಾರ್ಡ್ ಮೋರಸ್ರವರು. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಐದನೆಯ ಹಾಗೂ ಕೊನೆಯ ದಿನವಾದ ಗುರುವಾರದಂದು ಪ್ರಮುಖ ಬಲಿಪೂಜೆಯನ್ನು ಅರ್ಪಿಸಿ ಪ್ರಬೋಧನೆಯನ್ನು ನೀಡುತ್ತಿದ್ದರು.
ಜನವರಿ 22 ರಂದು ಆರಂಭಗೊಂಡ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವವು ಭಕ್ತಿ ಸಂಭ್ರಮದೊಂದಿಗೆ ತೆರೆ ಕಂಡಿತು. ಕೊನೆಯ ದಿನದಂದು ಭಕ್ತಾದಿಗಳಿಗಾಗಿ ವಿಶೇಷ ಪೂಜೆ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು.
ದಿನದ ಪ್ರಮುಖ ಬಲಿಪೂಜೆಯನ್ನು ಬೆಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ| ಬರ್ನಾರ್ಡ್ ಮೋರಸ್ರವರು ನೆರವೇರಿಸಿದರು. ದಿನದ ಇತರ ಬಲಿಪೂಜೆಗಳನ್ನು ವಂದನೀಯ ಬೇಸಿಲ್ ವಾಜ್, ಮಡಂತ್ಯಾರ್; ವಂದನೀಯ ಲಾರೆನ್ಸ್ ಡಿಸೋಜಾ, ಶಿವಮೊಗ್ಗ; ವಂದನೀಯ ಕ್ಲಿಫರ್ಡ್ ಪಿಂಟೊ, ಬೆಳ್ತಂಗಡಿ; ವಂದನೀಯ ರೋಬರ್ಟ್ ಕ್ರಾಸ್ತಾ, ಗುಲ್ಬರ್ಗಾ; ವಂದನೀಯ ಜೋಸೆಫ್ ಮಾರ್ಟಿಸ್, ದೆರೆಬಯ್ಲ್ ಇವರು ನೆರವೇರಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ಅತಿ ವಂದನೀಯ ಪಾವ್ಲ್ ರೇಗೊ, ಮಿಯಾರ್ ಇವರು ನೆರವೇರಿಸುವುದರೊಂದಿಗೆ ಮಹೋತ್ಸವದ ಐದನೇ ಹಾಗೂ ಅಂತಿಮ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು.
ಮಹೋತ್ಸವದ ಸಂದರ್ಭದಲ್ಲಿ ಪ್ರತಿದಿನ 7 ಬಲಿಪೂಜೆಗಳು ಮತ್ತು ಒಟ್ಟು 35 ಬಲಿಪೂಜೆಗಳು ನೆರವೇರಿದವು. ಮಂಗಳವಾರ, ಬುಧವಾರ ಹಾಗೂ ಗುರುವಾರದಂದು ಲಕ್ಷಾಂತರ ಭಕ್ತರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಅನುಗ್ರಹವನ್ನು ಪಡೆದು ಕೃತಾರ್ಥರಾದರು. ತಮ್ಮ ಹರಕೆಗಳನ್ನು ಸಲ್ಲಿಸಿ, ತಮ್ಮ ಕೋರಿಕೆಗಳಿಗಾಗಿ ಪ್ರಾರ್ಥಿಸಿದರು. ಉಡುಪಿ, ಮಂಗಳೂರು, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರುಗಳು ಪಾಪ ನಿವೇದನೆಯ ಸಂಸ್ಕಾರದಲ್ಲಿ ಸಹಕರಿಸಿದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಜೆರಾಲ್ಡ್ ಲೋಬೊರವರ ಮಾರ್ಗದರ್ಶನದಲ್ಲಿ, ಬಸಿಲಿಕಾದ ನಿರ್ದೇಶಕರಾದ ಅತಿ ವಂದನೀಯ ಆಲ್ಬನ್ ಡಿಸೋಜಾರವರ ನೇತೃತ್ವದಲ್ಲಿ ಈ ವಾರ್ಷಿಕ ಮಹೋತ್ಸವವು ಅತ್ಯಂತ ಭಕ್ತಿ ಹಾಗೂ ಸಡಗರದಿಂದ ಸುಸೂತ್ರವಾಗಿ ನಡೆಯಿತು. ಕಾರ್ಕಳ ನಗರ ಹಾಗೂ ಗ್ರಾಮಾಂತರ ಪೆÇೀಲಿಸರು, ಸ್ವಯಂ ಸೇವಕ ವರ್ಗ, ಅತ್ತೂರು ಬಸಿಲಿಕಾದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ವಾರ್ಷಿಕ ಮಹೋತ್ಸವವು ವ್ಯವಸ್ಥಿತವಾಗಿ ನಡೆಸಲು ಸಹಕರಿಸಿದರು. ಅತಿ ವಂದನೀಯ ಆಲ್ಬನ್ ಡಿಸೋಜಾ ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.