ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆಗೆ, ಇನ್ನೂ 50 ಎಕರೆ ಜಮೀನು ಮಂಜೂರು ಮಾಡಿ ಅಭಿವೃದ್ಧಿಪಡಿಸಿ:ರೈತಸಂಘ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆಯೆಂದು ಹೆಸರು ಪಡೆದಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ 50 ಎಕರೆ ಜಮೀನು ಮಂಜೂರು ಮಾಡಿ ಅಭಿವೃದ್ಧಿಪಡಿಸಿ, ರೈತರು-ವ್ಯಾಪಾರಾಸ್ಥರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಬೇಕೆಂದು ಗುರುವಾರದಂದು ಸಾಮೂಹಿಕ ನಾಯಕತ್ವದ ರೈತಸಂಘದಿಂದ ಎಪಿಎಂಸಿ ಅಧಿಕಾರಿ ವಿಜಯಲಕ್ಷ್ಮೀ ರವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲೆಯ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿಗೆ ಏಷ್ಯಾದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಲು ಇಚ್ಛಾಶಕ್ತಿ ಕೊರತೆಯಿದೆ.
ಸತತವಾಗಿ 10 ವರ್ಷಗಳಿಂದ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸುವಂತೆ ಹೋರಾಟಗಳ ಮುಖಾಂತರ ಒತ್ತಾಯ ಮಾಡುತ್ತಿದ್ದರೂ ನೆಪ ಮಾತ್ರಕ್ಕೆ ಮಂಗಸಂದ್ರ, ಮಡೇರಹಳ್ಳಿ ಚೆಲುವನಹಳ್ಳಿ ಸುತ್ತಮುತ್ತಲ ಜಮೀನು ನೋಡಿ ಆ ನಂತರ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮಡೇರಹಳ್ಳಿ, ಚೆಲುವನಹಳ್ಳಿ ಜಾಗಗಳು ಮುಳುಗಡೆ ಪ್ರದೇಶ, ಅರಣ್ಯ ಭೂಮಿ ಎಂದು ವರದಿ ನೀಡಿದರೆ ಮಂಗಸಂದ್ರ ಬಳಿ ರೈತರು ಭೂಮಿ ನೀಡುತ್ತಿಲ್ಲವೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಜಿಲ್ಲೆಯ ರೈತರು ಖಾಸಗಿ ಸಾಲ ಮಾಡಿ ಸಮೃದ್ಧವಾಗಿ ಬೆಳೆದಿರುವ ಬೆಳೆಯನ್ನು ಮಾರುಕಟ್ಟೆಗೆ ತಂದರೆ ಸಮರ್ಪಕವಾದ ಜಾಗ ಸಮಸ್ಯೆಯ ನೆಪದಲ್ಲಿ ಪ್ರತಿ ಬಾಕ್ಸ್‍ನ ಮೇಲೆ 50 ರಿಂದ 100ರೂಪಾಯಿ ಕಡಿತವಾಗುತ್ತಿದೆ. ಕಣ್ಣಮುಂದೆಯೇ ಬೆಳೆಯ ಬೆಲೆ ಕಡಿತ ರೈತನ ಕಣ್ಣೀರಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಮಂಡಿ ಮಾಲೀಕರು ಜಾಗವಿಲ್ಲದೆ ಖಾಸಗಿ ಜಮೀನಿನಲ್ಲಿ ಭೋಗ್ಯಕ್ಕೆ ಪಡೆದು ಶೆಡ್‍ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಂದೆಡೆ ವ್ಯಾಪಾರಸ್ಥರೂ ಸಹ ಹರಾಜು ಮಾಡುವ ಟೊಮೇಟೊ ಸಮರ್ಪಕವಾಗಿ ಖಾಲಿ ಮಾಡಲು ಜಾಗದ ಸಮಸ್ಯೆ, ಪಾರ್ಕಿಂಗ್ ವ್ಯವಸ್ಥೆ, ಮಳೆ ಬಂದರೆ ಎಪಿಎಂಸಿ ಕೆರೆ ಕುಂಟೆಗಳಾಗಿ ಮಾರ್ಪಟ್ಟು ಸಮಯಕ್ಕೆ ಸರಿಯಾಗಿ ಬೇರೆ ರಾಜ್ಯಗಳಿಗೆ ತಲುಪಿಸಲಾಗದೆ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ದೂರಿದರು.

ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಇನ್ನು ಮಾರುಕಟ್ಟೆಯ ಜಾಗದ ಸಮಸ್ಯೆ ಬಗ್ಗೆ ಗಮನಹರಿಸದೆ ಆಡಳಿತ ಮಂಡಳಿ ಕಾಂಪೌಂಡ್‍ಗಳು, ಚರಂಡಿಗಳು, ಹಾಗೂ ಮತ್ತಿತರ ರೈತರ ಹಣ ದುಂಧು ವೆಚ್ಚ ಮಾಡುವ ಕಾಮಗಾರಿಗಳಿಗೆ ಮುಂದಾಗಿದ್ದಾರೆ. ಜೊತೆಗೆ 63 ಲಕ್ಷರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ, ಪಾದಚಾರಿ ರಸ್ತೆಯನ್ನು ಅಭಿವೃದ್ಧಿ ಮಾಡುವ ಅವಶ್ಯಕತೆಯಿತ್ತೇ.
ಈಗಾಗಲೇ ಮಾರುಕಟ್ಟೆಯ ಜಾಗಕ್ಕೆ ಗುರುತಿಸಿರುವ ಜಮೀನನ್ನು ಸರ್ಕಾರದ ಮೇಲೆ ಒತ್ತಡ ಹಾಕಿ ಅಭಿವೃದ್ಧಿಪಡಿಸುವುದನ್ನು ಬಿಟ್ಟು ಬೇರೆಬೇರೆ ಕಾಮಗಾರಿಗಳಲ್ಲಿ ತೊಡಗಿರುವುದು ನೋಡಿದರೆ ಎಪಿಎಂಸಿಯನ್ನು ಖಾಸಗೀ ಮಾರುಕಟ್ಟೆಯ ಮಾಲೀಕರಿಗೆ ಗುತ್ತಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಜೊತೆಗೆ ಸರಕು ಸೇವಾ ಶುಲ್ಕವನ್ನು ಪಾವತಿ ಮಾಡುತ್ತಿರುವ ಮಂಡಿ ಮಾಲೀಕರು ಸಮರ್ಪಕವಾದ ಜಾಗ ಕೊಡದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಹರಾಜು ಆಗದ ಟೊಮೇಟೊವನ್ನು ಸಮರ್ಪಕವಾಗಿ ನಿರ್ವಹಿಸದೆ ಜಿಲ್ಲೆಯ ಯಾವ ರಸ್ತೆಯಲ್ಲಿ ನೋಡಿದರೂ ಟೊಮೇಟೊ ಸುರಿದು ಪರಿಸರ ಹಾಳು ಮಾಡುವಷ್ಟರ ಮಟ್ಟಿಗೆ ಆಡಳಿತ ಮಂಡಳಿ ಹದಗೆಟ್ಟಿದೆ ಆದ್ದರಿಂದ ಮಾನ್ಯ ಕಾರ್ಯದರ್ಶಿಯವರು ಆಡಳಿತ ಮಂಡಳಿಯವರ ಗಮನಕ್ಕೆ ತಂದು ಟೊಮೇಟೊ ಮಾರುಕಟ್ಟೆಗೆ ಅವಶ್ಯಕತೆಯಿರುವ ಜಾಗವನ್ನು ಗುರುತಿಸಿ ವ್ಯಾಪಾರಸ್ಥರು, ರೈತರು, ಮಂಡಿ ಮಾಲೀಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಅವಶ್ಯಕತೆಯಿಲ್ಲದ ಕಾಮಗಾರಿಗಳನ್ನು ಮಾಡಿ ಜನರ ತೆರಿಗೆ ಹಣವನ್ನು ದುರುಪಯೋಗ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧಿಕಾರಿ ವಿಜಯಲಕ್ಷ್ಮೀ ರವರು ಮಾರುಕಟ್ಟೆ ಜಾಗದ ಕಡತ ಮಂಜೂರಾತಿ ಕಡತ ಸರ್ಕಾರದ ಮಟ್ಟದಲ್ಲಿದೆ. ಅರಣ್ಯ ವ್ಯಾಪ್ತಿಗೆ ಸೇರುವ ಜಮೀನು ಇರುವುದರಿಂದ ಅವರಿಗೆ ಪರ್ಯಾಯ ಜಮೀನು ನೀಡಿ ಮಾರುಕಟ್ಟೆಯ ಅಭಿವೃದ್ಧಿ ಮಾಡುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಬಂಗವಾದಿ ನಾಗರಾಜ್ ಗೌಡ, ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ತೆರ್ನಹಳ್ಳಿ ಆಂಜಿನಪ್ಪ, ಮರಗಲ್ ಮುನಿಯಪ್ಪ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವಕ್ಕಲೇರಿ ಹನುಮಯ್ಯ, ಕುವ್ವಣ್ಣ, ಅಶ್ವತ್ಥಪ್ಪ, ಚಂದ್ರಪ್ಪ ಮುಂತಾದವರಿದ್ದರು
.