

ಕೋಲಾರ:- ಕರ್ನಾಟಕ ಗಾಂಧಿ ಹೆಸರಿನಿಂದ ಖ್ಯಾತಿ ಪಡೆದಿರುವ ನಾ.ಸು.ಹರ್ಡೀಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶಿಸ್ತು, ಧೈರ್ಯ ಹಾಗೂ ತ್ಯಾಗ ಮನೋಭಾವನೆಯನ್ನು ಹಿಂದೂಸ್ತಾನಿ ಸೇವಾದಳದ ಮೂಲಕ ಪರಿಚಯಿಸಿ ಸ್ವಾತಂತ್ರ್ಯ ಸಂಗ್ರಾಮವನ್ನು ಚುರುಕುಗೊಳಿಸಿದ ಮಹನೀಯರಲ್ಲಿ ಪ್ರಮುಖರೆಂದು ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಾ.ಸು.ಹರ್ಡೀಕರ್ ಅವರ 48 ನೇ ಪುಣ್ಯ ಸ್ಮರಣೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ಬಾಲ್ಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡರೂ, ಸ್ವಾತಂತ್ರ್ಯ ಸಂಗ್ರಾಮದತ್ತ ಆಕರ್ಷಿತರಾದರು, ಬಾಲಗಂಗಾಧರ ತಿಲಕ್‍ರ ಕೇಸರಿ ಪತ್ರಿಕೆಯ ಲೇಖನಗಳನ್ನು ಕನ್ನಡದಲ್ಲಿ ಅನುವಾದಿಸಿ ಕನ್ನಡಿಗರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸುತ್ತಿದ್ದರು. ವಿದೇಶದಲ್ಲಿ ವ್ಯಾಸಂಗ ಮಾಡಿ, ವೈದ್ಯರಾಗಿ ರೋಗಿಗಳ ಸೇವೆ ಮಾಡುತ್ತಲೇ ಮಹಾತ್ಮಗಾಂೀಜಿಯತ್ತ ಆಕರ್ಷಿತರಾದರು.
ರಾಷ್ಟ್ರಧ್ವಜ ಸಂಹಿತೆ ರೂಪಿಸುವುದರ ಜೊತೆಗೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಿಸ್ತು ಮೂಡಿಸುವ ಸಲುವಾಗಿಯೇ ಹಿಂದೂಸ್ತಾನಿ ಸೇವಾದಳವನ್ನು ನೂರು ವರ್ಷಗಳ ಹಿಂದೆ ಆರಂಭಿಸಿದ್ದರು. ಸ್ವಾತಂತ್ರ್ಯ ನಂತರ ಭಾರತ ಸೇವಾದಳ ರಾಜಕೀಯ ರಹಿತ ಸಂಘಟನೆಯಾಗಿ ಸೇವೆ ಮಾಡಲು ಯೋಜಿಸಿದರೆಂದರು. ಇಂತ ಸೇವಾದಳ ಚಟುವಟಿಕೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಾ.ಸು.ಹರ್ಡೀಕರ್ ಸ್ಥಾಪಿತ ಸೇವಾದಳ ಚಟುವಟಿಕೆಗಳು ನಡೆಯುವಂತಾಗಬೇಕೆಂದರು.
ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಸೇವಾದಳ ಚಟುವಟಿಕೆಗಳು ಹಾಗೂ ನಾ.ಸು.ಹರ್ಡೀಕರ್ ವ್ಯಕ್ತಿ ಚಿತ್ರಣವು ಪಠ್ಯಪುಸ್ತಕಗಳಲ್ಲಿ ಸೇರಿಸುವಂತಾಗಬೇಕೆಂದರು.
ಶ್ರೀನಿವಾಸಪುರ ಅಧ್ಯಕ್ಷ ಬಂಗವಾದಿ ನಾಗರಾಜ್ ಮಾತನಾಡಿ, ಸೇವಾದಳದ ಸೇವೆಗಾಗಿ ಬದುಕು ಧ್ಯೇಯವನ್ನು ಶಾಲಾ ಮಕ್ಕಳಿಗೆ ಬದುಕಾಗಿಸಬೇಕೆಂದರು.
ಕೋಲಾರ ಅಧ್ಯಕ್ಷ ಶ್ರೀರಾಮ್ ಮಾತನಾಡಿ, ರಾಷ್ಟ್ರಗೀತೆ, ರಾಷ್ಟ್ರಧ್ವಜ ಮಾಹಿತಿ ತರಬೇತಿ, ನಾಯಕತ್ವ ಶಿಬಿರಗಳ ಮೂಲಕ ಸೇವಾದಳ ಚಟುವಟಿಕೆಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆಯೆಂದರು.
ಬಂಗಾರಪೇಟೆ ಜಿಲ್ಲಾ ಪ್ರತಿನಿಧಿ ಚಿನ್ನಿ ವೆಂಕಟೇಶ್ ಮಾತನಾಡಿ, ಶೀಘ್ರವೇ ಬಂಗಾರಪೇಟೆ ತಾಲೂಕಿನಲಿ ಸೇವಾದಳ ಶಿಕ್ಷಕರ ಮಿಲಾಪ್ ಶಿಬಿರವನ್ನು ಆಯೋಜಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಸೇವಾದಳ ಪದಾಧಿಕಾರಿಗಳಾದ ಕೆ.ಜಯದೇವ್, ಚಾನ್‍ಪಾಷಾ, ಫಲ್ಗುಣ, ರಾಜೇಶ್‍ಸಿಂಗ್ ಇತರರು ಭಾಗವಹಿಸಿದ್ದರು.
ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರೂಪಿಸಿದರು. ಸರ್ವಧರ್ಮ ಪ್ರಾರ್ಥನೆ, ರಾಷ್ಟ್ರಗೀತೆಗಾಯನ ನೆರವೇರಿತು.
ಉತ್ತಮ ಶಿಕ್ಷಕರ ಆಯ್ಕೆ
ಭಾರತಸೇವಾದಳ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ನೀಡುವ ಸೇವಾದಳ ಉತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಶ್ರೀನಿವಾಸಪುರದ ಶಿಕ್ಷಕ ಅಶೋಕ್‍ರನ್ನು ಆಯ್ಕೆ ಮಾಡಲಾಯಿತು.
ಕೋಲಾರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಶೋಕ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.