ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ತಮ್ಮ ನಿರಂತರ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಕೆಜಿಎಫ್ ತಾಲ್ಲೂಕಿಗೆ ಪ್ರತ್ಯೇಕವಾಗಿ ರಾಜ್ಯದಲ್ಲೇ ಮಾದರಿಯಾದ ಸುಸಜ್ಜಿತ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಿಸಲು 40 ಎಕರೆ ಜಮೀನು ಗುರುತಿಸಲಾಗಿದೆ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.
ಕೆಜಿಎಫ್ ತಾಲ್ಲೂಕಿನ ಬೇತಮಂಗಲ-ವಿ.ಕೋಟೆ ಮುಖ್ಯ ರಸ್ತೆಯಲ್ಲಿನ ಹುಲ್ಕೂರು ಬಳಿ ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ನಿರ್ಮಿಸಲು ಗುರುತಿಸಿ ಕಾಯ್ದಿರಿಸಿರುವ ಕದಿರಿಗಾನಕುಪ್ಪ ಗ್ರಾಮದ ಸ.ನಂ. 3 ಮತ್ತು ಎನ್.ಜಿ.ಹುಲ್ಕೂರು ಗ್ರಾಮದ ಸರ್ವೆ ನಂಬರ್ 81ರಲ್ಲಿನ 40 ಎಕರೆ ಜಮೀನಿನ ಅಳತೆ ಕಾರ್ಯ ವೀಕ್ಷಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಜಮೀನಿನ ಅಳತೆ ಕಾರ್ಯ ಶೀಘ್ರ ಮುಗಿಸಿಕೊಡಿ, ಜಾಗದ ನಕ್ಷೆ ತಯಾರಿಸಿ ಪೂರ್ಣ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ಕಡತ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಶೀಘ್ರ ಮಾರುಕಟ್ಟೆ ನಿರ್ಮಾಣ ಕಾರ್ಯ ಆರಂಭಿಸುವ ಅಗತ್ಯವಿದೆ ಎಂದರು.
ಹಾಲಿ ಗುರುತಿಸಿರುವ ಸ್ಥಳದಲ್ಲಿ ಎ.ಪಿ.ಎಂ.ಸಿ. ಮಾರುಕಟ್ಟೆ ಸ್ಥಾಪನೆಗೊಂಡಲ್ಲಿ ನೆರೆ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡಿನಿಂದ ಸಹಾ ರೈತರು ತಮ್ಮ ಉತ್ಪನ್ನಗಳನ್ನು ಇಲ್ಲಿ ತರುವುದರಿಂದ ಸ್ಥಳೀಯವಾಗಿ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.
ಕೆಜಿಎಫ್ ತಾಲ್ಲೂಕು ತಮಿಳುನಾಡು,ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದೆ, ಎರಡು ರಾಜ್ಯಗಳ ಗಡಿ ಭಾಗದ ರೈತರು ಬರುವುದರಿಂದ ಮಾರುಕಟ್ಟೆಗೆ ಉತ್ತಮ ಆದಾಯವೂ ಸಿಗುವುದಲ್ಲದೇ ಗ್ರಾಹಕರಿಗೂ ಲಾಭವಾಗಲಿದೆ ಎಂದರು.
ಈ ಎಪಿಎಂಸಿ ಮಾರುಕಟ್ಟೆಯನ್ನು ಮಾದರಿಯಾಗಿ ಅಭಿವೃದ್ದಿಪಡಿಸುವುದಾಗಿ ತಿಳಿಸಿ, ವಿಧಾನಸಭೆಯಲ್ಲಿ ಈ ಬಗ್ಗೆ ಧ್ವನಿಯೆತ್ತಿದ್ದಲ್ಲದೇ ಸಂಬಂಧಿಸಿದ ಸಚಿವರಿಗೂ ಮನವಿ ಮಾಡಿರುವುದಾಗಿ ತಿಳಿಸಿದರು.
ಮಾರುಕಟ್ಟೆ ಅಭಿವೃದ್ದಿಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಒದಗಿಸಲು ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕುವುದಾಗಿ ತಿಳಿಸಿದ ಅವರು, ಬಂಗಾರಪೇಟೆ ತಾಲ್ಲೂಕು ಆಗಿದ್ದ ಸಂದರ್ಭದಲ್ಲಿ ಅಲ್ಲಿನ ಎಪಿಎಂಸಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದೆವು, ಆದರೆ ಈಗ ನಮ್ಮದು ಹೊಸ ತಾಲ್ಲೂಕು ಆಗಿದೆ, ಇಲ್ಲಿ ತಾಲ್ಲೂಕೊಂದರಲ್ಲಿ ಇರಬೇಕಾದ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡುವುದು ನನ್ನ ಧೈಯವಾಗಿದೆ ಎಂದು ತಿಳಿಸಿದರು.
ಕೆಜಿಎಫ್ ತಾಲ್ಲೂಕಿನ ಸಮಗ್ರ ಅಭಿವೃದ್ದಿ ತಮ್ಮ ಮೊದಲ ಆದ್ಯತೆಯಾಗಿದೆ, ನನಗೆ ಮತ ನೀಡಿ ಗೆಲ್ಲಿಸಿದ ಮತದಾರರ ಋಣ ತೀರಿಸುವ ಬದ್ದತೆಯೂ ನನಗಿದೆ, ಜನರ ಆಶಯ,ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ, ನನ್ನ ಶಕ್ತಿ ಮೀರಿ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ನುಡಿದರು.
ಗಡಿಗೆ ಹತ್ತಿರವಿರುವ ಈ ಜಾಗದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣವಾಗುವುದರಿಂದ ಈ ಭಾಗದ ಜನತೆಯ ಆರ್ಥಿಕತೆ ಸುಧಾರಣೆಗೂ ಅವಕಾಶ ಸಿಗಲಿದೆ, ವ್ಯಾಪಾರ,ವಹಿವಾಟು ಹೆಚ್ಚುವುದರಿಂದ ಜನತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶವೂ ಒದಗಿ ಬರಲಿದೆ ಎಂದರು.
ಕೆಜಿಎಫ್ ನಗರದಲ್ಲಿನ ಜನರ ನಿರುದ್ಯೋಗ ನಿವಾರಣೆ, ಬಡತನ ನಿರ್ಮೂಲನೆಗಾಗಿ ಅಗತ್ಯ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೂ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ, ಇಲ್ಲಿನ ಜನರ ಜೀವನಮಟ್ಟ ಸುಧಾರಣೆಯಾಗುವುದು ಮುಖ್ಯ ಎಂದು ತಿಳಿಸಿದರು.
ಕೃಷಿಯನ್ನೇ ನಂಬಿ ಬದುಕುತ್ತಿರುವ ಕೆಜಿಎಫ್ ತಾಲ್ಲೂಕಿನ ಗ್ರಾಮೀಣ ಭಾಗದ ಜನತೆಗೆ ಬೆಳೆ ಇಡಲು ಅಗತ್ಯ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ನೆರವು ಪಡೆಯುವುದಾಗಿ ತಿಳಿಸಿದ ಅವರು, ಗಡಿ ಭಾಗದಲ್ಲಿ ನಡೆಯುವ ಮೀಟರ್ ಬಡ್ಡಿ ಶೋಷಣೆಯಿಂದ ಇಲ್ಲಿನ ಜನರನ್ನು ರಕ್ಷಿಸುವ ಬದ್ದತೆ ನನ್ನದಾಗಿದೆ ಎಂದರು.
ಈ ಸಂದರ್ಭದಲ್ಲಿ ಈ ಭಾಗದ ಮುಖಂಡರಾದ ರಾಮಚಂದ್ರ, ಎಂ.ಬಿ.ಎ., ಪ್ರಭಾಕರ್, ಎನ್.ಟಿ.ಆರ್, ಅಪ್ಪಾಜಿ ಗೌಡ, ಪದ್ಮನಾಭರೆಡ್ಡಿ, ರಾಜೇಂದ್ರ, ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕರು, ಭೂಮಪಕರಾದ ಮೌಲಾ ಖಾನ್, ಹರೀಶ್, ಗ್ರಾಮ ಲೆಕ್ಕಾಧಿಕಾರಿ ಸತೀಶ್, ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.