

ಬೆಂಗಳೂರು: ಕಲ್ಪತರ ನಾಡು ತುಮಕೂರಿನಲ್ಲಿ ಜ.18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಗೃಹ ಸಚಿವ ಜಿ.ಪರಮೇಶ್ವರ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆ ಮಾಡಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಆಯೋಜಿಸುತ್ತಿರುವ ರಾಜ್ಯ ಸಮ್ಮೇಳನದ ಉದ್ಘಾಟನೆಗೆ ಆಗಮಿಸಬೇಕು ಎಂದು ಸ್ವಾಗತ ಸಮಿತಿ ಅಧ್ಯಕ್ಷರು ಮತ್ತು ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಆಹ್ವಾನಿಸಿದಾಗ ಮುಖ್ಯಮಂತ್ರಿಗಳು ಸಮ್ಮತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಳೆದ ಬಾರಿಯೂ ಸಮ್ಮೇಳನ ಉದ್ಘಾಟನೆಗೆ ಬಂದಿದ್ದೇನೆ. ಈ ಬಾರಿಯೂ ಬರುತ್ತೇನೆ. ಸಮ್ಮೇಳನಕ್ಕೆ ಅಗತ್ಯವಾದ ಸಹಕಾರವನ್ನು ನೀಡುತ್ತೇನೆ ಎಂದು ತಿಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಡಿಸೆಂಬರ್ನಲ್ಲಿ ಸಮ್ಮೇಳನ ಮಾಡಲು ಉದ್ದೇಶಿಸಲಾಗಿತ್ತು. ತಾವು ನೀಡಿದ ಸಲಹೆ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಯಿತು ಎಂದು ಹೇಳಿದಾಗಲೂ ಪ್ರತಿಕ್ರಿಯಿಸಿದ ಸಿಎಂ, ಪತ್ರಕರ್ತರ ಸಮ್ಮೇಳನ ಚೆನ್ನಾಗಿ ಆಯೋಜಿಸಿ. ಚರ್ಚೆಗಳಾಗಲಿ. ಖಂಡಿತವಾಗಿ ಬರುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚಿ.ನಿ.ಪುರುಶೋತ್ತಮ್, ಪ್ರಧಾನ ಕಾರ್ಯದರ್ಶಿ ರಘುರಾಮ್, ರಾಷ್ಟ್ರೀಯ ಮಂಡಳಿ ಸದಸ್ಯರಾದ ಡಿ.ಎಂ.ಸತೀಶ್, ಟಿ.ಎನ್.ಮಧುಕರ್, ಅನು ಶಾಂತರಾಜು, ಜಿಲ್ಲಾ ಪದಾಧಿಕಾರಿಗಳಾದ ಸತೀಶ್ ಹಾರೋಗೆರೆ, ಪರಮೇಶ್, ಯಶಸ್, ಹರೀಶ್ ಆಚಾರ್ಯ, ಕೆ.ವಿ.ಪುರುಷೋತ್ತಮ ಹಾಜರಿದ್ದರು.

