ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಬಿಜೆಪಿ ಸರ್ಕಾರ ಪ್ರತಿ ಪಕ್ಷಗಳೊಂದಿಗೆ ಚರ್ಚಿಸದೇ ಅವೈಜ್ಞಾನಿಕವಾಗಿ ಲಾಕ್‍ಡೌನ್ ಘೋಷಿಸಿದ್ದರಿಂದಾಗಿ ಕೊರೋನಾಗಿಂತ ಹೆಚ್ಚು ಮಂದಿ ಹಸಿವಿನಿಂದ ಸಾವನ್ನಪ್ಪಿದ್ದಾರೆ: ಬಿ.ಕೆ.ಹರಿಪ್ರಸಾದ್
ಕೋಲಾರ:- ಬಿಜೆಪಿ ಸರ್ಕಾರ ಪ್ರತಿ ಪಕ್ಷಗಳೊಂದಿಗೆ ಚರ್ಚಿಸದೇ ಅವೈಜ್ಞಾನಿಕವಾಗಿ ಲಾಕ್‍ಡೌನ್ ಘೋಷಿಸಿದ್ದರಿಂದಾಗಿ ಕೊರೋನಾಗಿಂತ ಹೆಚ್ಚು ಮಂದಿ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಸಭಾ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದರು.
ನಗರದ ಹಾರೋಹಳ್ಳಿಯಲ್ಲಿ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರ ನಿವಾಸದ ಬಳಿ ರಂಜಾನ್ ಪ್ರಯುಕ್ತ ಮುಸ್ಮಿಂ ಭಾಂದವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾವಿರಾರು ಮೈಲಿ ನಡೆದು ಹೋಗುತ್ತಿದ್ದ ಬಡ ಕಾರ್ಮಿಕರನ್ನು ತಾವು ಕಣ್ಣಾರೆ ಕಂಡು ತಮ್ಮ ಪಕ್ಷದ ಮುಖಂಡರಿಗೆ ಅವರಿಗೆ ಊಟದ ವ್ಯವಸ್ಥೆ ಮಾಡಿದ ಪ್ರಕರಣವನ್ನು ಹಾಗೂ ತನ್ನ ತಂದೆಯನ್ನು ಸೈಕಲ್ ಮೇಲೆ ಕೂರಿಸಿ ಕೊಂಡು ನೊರಾರು ಮೈಲಿ ಹೋದ ಯುವತಿ ಕನೆಗೆ ತನ್ನ ಗ್ರಾಮದ 20 ಕಿ,ಮಿ ಅಂತರದಲ್ಲಿ ಹೊಟ್ಟೆ ಹಸಿವೆಯಿಂದ ಸಾವನ್ನಾಪ್ಪಿದ್ದನ್ನು ವಿವರಿಸಿದರು.
ಪುಲ್ವಾಮ ಪಿಚ್ಚರ್‍ಗೆ
ಜನತೆ ಮರಳಾದರು
ಮೋದಿ ಅವರು ಜನರನ್ನು ಮರಳು ಮಾಡುವಲ್ಲಿ ನಿಸ್ಸೀಮರು, ಯಾವ ಸಿನಿಮ ನಟನಗಿಂತ ಚೆನ್ನಾಗಿ ಅಭಿನಯಿಸುತ್ತಾರೆ. ಚುನಾವಣೆಯಲ್ಲಿ ಪುಲ್ವಮದ ಪಿಚ್ಚರ್ ತೋರಿಸಿದರು. ಅದರೆ ಅದರಲ್ಲಿ ಪಾಕಿಸ್ತಾನಿಯ ಸೈನಿಕರನ್ನಾಗಲಿ, ಭಯೋತ್ಪಾದಕರನ್ನಾಗಲಿ ಸಾಯಿಸಿದ ಚಿತ್ರಣವೇ ಇರಲಿಲ ಎಂದು ಟೀಕಿಸಿದರು.
ಮೋದಿ ಮೊನ್ನೆ ಘೋಷಿಸಿದ 20 ಲಕ್ಷ ಪ್ರಾಕೇಜ್‍ನಲ್ಲಿ 16 ಲಕ್ಷ ಕೋಟಿ ಕಳೆದ ಬಜೆಟ್‍ನಲ್ಲಿ ಮಂಡಿಸಿದ ಯೋಜನೆಗಳಾಗಿದೆ ಹೊರತಾಗಿದ್ದು ವಿಶೇಷವಾದದ್ದು ಏನಿಲ್ಲ ಎಂದು ವ್ಯಂಗ್ಯವಾಡಿದರು.
ಕೆ.ಎಚ್.ಮುನಿಯಪ್ಪ ಸಣ್ಣ ಜಾತಿಯವರಾಗಿರುವುದರಿಂದ ಅವರು ಇನ್ನು ಹಾಗೇ ಇದ್ದಾರೆ. ಅವರೇನಾದರೂ ಉನ್ನತ ಜಾತಿಯವರಾಗಿದ್ದರೇ ಈಗಾಗಲೇ ರಾಜ್ಯದ ಮುಖ್ಯ ಮಂತ್ರಿಯಾಗಿರುತ್ತಿದ್ದರು ಎಂದು ಅಭಿಪ್ರಾಯ ಪಟ್ಟರು.
ಬಂಡವಾಳಗಾರರ
68ಸಾವಿರಕೋ.ಮನ್ನಾ
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಬಿಜೆಪಿ ಸರ್ಕಾರ ಅಗರ್ಭ ಶ್ರೀಮಂತ ಬಂಡಾವಳಶಾಹಿಗಳ 68 ಸಾವಿರ ಕೋಟಿ ರೂ ಮನ್ನಾ ಮಾಡಿದೆ ಹೊರತಾಗಿ ಬಡರೈತರ ಕೃಷಿ ಸಾಲ,ಬಡ್ಡಿಗಳನ್ನು ಮನ್ನ ಮಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ಮೋದಿಜಿ ಅವರು ಜನ್‍ಧನ್‍ನಲ್ಲಿ ಮಹಿಳೆಯರ ಖಾತೆಗೆ 500 ರೂ ಜಮೆ ಮಾಡಿದ್ದು ಹೊರತು ಪಡಿಸಿ ಬೇರೆ ಯಾವೂದೇ ನೆರವು ನೀಡಲ್ಲ. ಕೊರೋನಾ ಬಗ್ಗೆ ಎನ್.ಜಿ.ಓಗಳಿಗೆ ಇರುವಷ್ಟು ಕಾಳಜಿಯೂ ಸಹ ಬಿಜೆಪಿಗಿಲ್ಲ ಎಂದರು.
ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 20 ಲಕ್ಷ ಮಂದಿಗೂ ಕೊರೋನಾ ಟೆಸ್ಟ್‍ಗಳನ್ನು ಸಮರ್ಪಕವಾಗಿ ಮಾಡಿಲ್ಲ. ಸಮರ್ಪವಾಗಿ ಮಾಡಿದಲ್ಲಿ ಭಾರತದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಸೊಂಕಿತರು ಇದ್ದಾರೆ ಎಂದರು.
ಕೋಮು ಭಾವನೆಯಡಿ
ಮೋದಿ ರಾಜಕಾರಣ
ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನರೇಂದ್ರ ಮೋದಿಯವರು ಚುನಾವಣಾ ಸಂದರ್ಭಗಳಲ್ಲಿ ಹಿಂದು-ಮುಸ್ಲಿಂ ಎಂದು ಕೋಮುವಾದವನ್ನು ಮುಂದೆ ಮಾಡಿ ರಾಜಕಾರಣ ಮಾಡುವ ಮೂಲಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರೆ ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದರು.
ಯಾಮಾರಿಸಿಯೇ
ರಾಜಕಾರಣ-ವಿಆರ್‍ಎಸ್
ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಕೇಂದ್ರದ ಮೋದಿ ಸರ್ಕಾರ ಆಡಳಿತದ ಜವಾಬ್ದಾರಿ ಮರೆತು ಜನರನ್ನು ಕುತಂತ್ರದಿಂದ ಯಾಮಾರಿಸಿ ಕೊಂಡು ತನ್ನ ಕೈಗೊಂಬೆಗಳಂತೆ ಆಟವಾಡಿಸುತ್ತಾ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಚುನಾವಣೆ ಬಂದರೆ ಪಾಕಿಸ್ತಾನವನ್ನು ತೋರಿಸಿ ಜನರನ್ನು ಬೆದರಿಸಿ ಬುಟ್ಟಿಗೆ ಹಾಕಿ ಕೊಳ್ಳುವ ಕಲೆಯನ್ನು ಮೋದಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡೆಸಿದರು.
20 ಲಕ್ಷ ಕೋಟಿಯ
ಸುಳ್ಳಿನ ಕಂತೆ-ಸಲೀಂ
ಕಾಂಗ್ರೆಸ್ ಮುಖಂಡ ಸಲೀಂ ಅಹಮದ್ ಮಾತನಾಡಿ, 20 ಲಕ್ಷ ಕೋಟಿ ರೂಗಳ ಪ್ಯಾಕೇಜ್‍ಗಳ ಸುಳ್ಳಿನ ಕಂತೆ ಬುರುಡೆಯನ್ನು ಬಿಟ್ಟಿದ್ದಾರೆ, ಕದರಲ್ಲಿ ಬಜೆಟ್‍ನದ್ದೇ 16 ಲಕ್ಷ ಕೋಟಿ ಇದೆ ಎಂದು ವ್ಯಂಗವಾಡಿದರು.
ಮೋದಿಯವರು ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುತ್ತೇನೆ, ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ ಜಮೆ ಮಾಡುವುದಾಗಿ ಅಧಿಕಾರದ ಚುಕ್ಕಾಣೆ ಹಿಡಿದಂತೆ ಎಲ್ಲವೂ ಮರೆತು ಹೋಯಿತು ಎಂದರು.
ರಾಜ್ಯ ಸರ್ಕಾರವು ಕಳೆದ 2 ತಿಂಗಳಿಂದ ಕೊರೋನಾ ನಿಯಂತ್ರಿಸುವಲ್ಲಿ ವಿಫಲರಾಗಿದೆ, ಕಾಂಗ್ರೇಸ್ ಸೇರಿದಂತೆ ಎಲ್ಲಾ ಪಕ್ಷಗಳು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ. ವಿಪಕ್ಷಗಳ ಸಭೆಯಲ್ಲಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದೇವೆ. ಅದರೆ ಪ್ರತಿ ಪಕ್ಷಗಳ ವಿಶ್ವಾಸ ಮತ್ತು ಸಹಕಾರವನ್ನು ಬಳಸಿಕೊಳ್ಳುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಶಾಸಕ ಕೆ.ವೈ.ನಂಜೇಗೌಡ, ಮಾಜಿ ಸಚಿವ ಕೆ.ಎ. ನಿಸ್ಸಾರ್ ಆಹಮದ್, ಅಂಜುಮಾನ್ ಅಧ್ಯಕ್ಷ ಜಮೀರ್ ಆಹಮದ್ ಹಾಗೂ ನಗರಸಭಾ ಸದಸ್ಯ ಬಿ.ಎಂ. ಮುಬಾರಕ್ ಮಾತನಾಡಿದರು.
ವೇದಿಕೆಯಲ್ಲಿ ಕೆ.ಪಿ.ಸಿ.ಸಿ. ಮಹಿಳಾ ವಕ್ತಾರರಾದ ವಸಂತ ಕವಿತ ಕೆ.ಸಿ.ರೆಡ್ಡಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಎಲ್.ಎ. ಮಂಜುನಾಥ್ ಮತ್ತಿತರರಿದ್ದರು.
ಚಿತ್ರಶೀರ್ಷಿಕೆ;(ಫೋಟೊ-23ಕೋಲಾರ2):ಕೋಲಾರದ ಹಾರೋಹಳ್ಳಿಯಲ್ಲಿ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರ ನಿವಾಸದ ಬಳಿ ರಂಜಾನ್ ಪ್ರಯುಕ್ತ ಮುಸ್ಮಿಂ ಭಾಂದವರಿಗೆ ರಾಜ್ಯ ಸಭಾ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್, ಕೆ.ಎಚ್.ಮುನಿಯಪ್ಪ ಮತ್ತಿತರರು ದಿನಸಿ ಕಿಟ್ ವಿತರಿಸಿದರು.