ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್ ಬಡ್ಡಿ ರಹಿತ ಸಾಲ ವಿತರಣಾ ಸಮಾರಂಭ ಕಸಬಾ ವ್ಯಾಪ್ತಿಯ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಾಲ ವಿತರಿಸಿ ಸಂದೇಶ
ಶ್ರೀನಿವಾಸಪುರ: ಬಡ್ಡಿ ರಹಿತ ಸಾಲ ಪಡೆದ ಫಲಾನುಭವಿಗಳುಮರುಪಾವತಿ ಮಾಡಬೇಕು. ಇನ್ನಷ್ಟು ಫಲಾನುಭವಿಗಳಿಗೆ ಅಭಿವೃದ್ಧಿ ಸಾಲ ನೀಡಲು ಅನುವು ಮಾಡಿಕೊಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಗಫಾರ್ ಖಾನ್ ಮೊಹಲ್ಲಾದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಬಡ್ಡಿ ರಹಿತ ಸಾಲ ವಿತರಣಾ ಸಮಾರಂಭದಲ್ಲಿ ಕಸಬಾ ವ್ಯಾಪ್ತಿಯ 129 ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ರೂ.5.80 ಕೋಟಿ ಸಾಲ ವಿತರಿಸಿ ಮಾತನಾಡಿ, ಸಮಾಜದಲ್ಲಿ ಒಳ್ಳೆ ಕೆಲಸ ಮಾಡುವವರಿಗೆ ತೊಂದರೆ ಕೊಡುವ ಜನ ಇದ್ದೇ ಇರುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಕರುಣೆ ಇಲ್ಲದವನು ಕಾಡು ಪ್ರಾಣಿಗಿಂತ ಕಡೆ ಎಂದು ಹೇಳಿದರು.
ಮಹಿಳೆಯರು ಮಾನಕ್ಕೆ ಅಂಜಿ ಜೀವನ ನಡೆಸುತ್ತಾರೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ರಕ್ಷಣೆ ಇತ್ಯಾದಿಗಳಿಗೆ ಆರ್ಥಿಕ ಶಕ್ತಿ ಬೇಕಾಗುತ್ತದೆ. ಇಲ್ಲಿನ ಡಿಸಿಸಿ ಬ್ಯಾಂಕ್ ನೀಡುತ್ತಿರುವ ಆರ್ಥಿಕ ನೆರವು ದೇಶದಲ್ಲಿಯೇ ಮಾದರಿಯಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಇಂಥ ಕಾರ್ಯ ನಡೆಯುತ್ತಿಲ್ಲ. ಕೂಲಿ ಮಾಡಿ ಬದುಕುವ ಕುಟುಂಬಗಳು ತಮ್ಮ ಮಕ್ಕಳಿಗೆ ಒಳ್ಳೆಯ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.
ದೇಶದ ಪರಿಸ್ಥಿತಿ ಸರಿಯಾಗಿಲ್ಲ. ಜಾತಿ ಮತದ ಆಧಾರದ ಮೇಲೆ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ಟಿವಿಗಳಲ್ಲಿ ಕಿರುಚಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಬಡವರ ಬದುಕಿನಲ್ಲಿ ಬೆಳಕು ತುಂಬುದು ರಾಜಕಾರಣಿಯ ಕೆಸಲವಾಗಬೇಕು. ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಕಾಲ ಚಕ್ರ ಬದಲಾಗುತ್ತದೆ. ಆಗ ಎಲ್ಲರಿಗೂ ಒಂದು ಅವಕಾಶ ಸಿಗುತ್ತದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಡಿಸಿಸಿ ಬ್ಯಾಂಕ್ನಲ್ಲಿ ಠೇವಣಿ ಇಡಬೇಕು. ಮೊತ್ತ ಎಷ್ಟಾದರೂ ಸರಿ, ಅದರಿಂದ ಇನ್ನಷ್ಟು ಜನರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಇಂದು ಬ್ಯಾಂಕ್ ಉಳಿದಿರುವುರು ಸಾಲ ಪಡೆದ ಮಹಿಳೆಯರ ಪ್ರಾಮಾಣಿಕತೆಯಿಂದ. ಅವರು ಕಾಲ ಕಾಲಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿರುವುದರಿಂದ ಹೊಸ ಸಾಲ ನೀಡಲಾಗುತ್ತಿದೆ. ಸೀಮೆ ಹಸು ಖರೀದಿಸಲು ಸಾಲ ನೀಡುವುದರ ಮೂಲಕ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮುಖಂಡರಾದ ದಿಂಬಾಲ ಅಶೋಕ್, ಸಂಜಯ್ ರೆಡ್ಡಿ, ಅಯ್ಯಪ್ಪ, ವೆಂಕಟರೆಡ್ಡಿ, ಅಕ್ಬರ್ ಷರೀಫ್, ಮುನ್ಸಿಪಲ್ ಕೌನ್ಸಿಲರ್ ಕೆ ಅನೀದ್ ಅಹ್ಮದ್, ಸರ್ದಾರ್, ಮುನಿವೆಂಕಟರೆಡ್ಡಿ, ಖಾದರ್, ಅಪ್ಪಿರೆಡ್ಡಿ, ಕೃಷ್ಣೇಗೌಡ, ಸುಬ್ಬಿರೆಡ್ಡಿ, ನಾರಾಯಣಸ್ವಾಮಿ, ರಾಮಚಂದ್ರಪ್ಪ, ಕೆ.ಕೆ.ಮಂಜು, ಶಬ್ಬೀರ್ ಅಹಮ್ಮದ್ ನಿರ್ದೇಶಕರು ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತ ಶ್ರೀನಿವಾಸಪುರ , ಲಕ್ಷ್ಮಣರೆಡ್ಡಿ, ಬಾನುಪ್ರಕಾಶ್, ವೆಂಕಟರಾಮಪ್ಪ, ನಂಜುಂಡರೆಡ್ಡಿ, ಗುರಪ್ಪ, ಕೆ.ಆರ್.ವೆಂಕಟಶಿವಾರೆಡ್ಡಿ, ಸೊಣ್ಣೇಗೌಡ, ಸಿಇಒ ಸಿ.ಎಸ್.ಶಿವಾರೆಡ್ಡಿ, ಆರ್.ಶ್ರೀನಾಥ್, ಪ್ರಭಾಕರ ರೆಡ್ಡಿ ಇದ್ದರು.