ಡಾ.ಎ. ರಂಜಿತ್‍ಕುಮಾರ್ ಶೆಟ್ಟಿಯವರ “ನೆನಪಿನಾಳದಿಂದ” ಪುಸ್ತಕ ಬಿಡುಗಡೆ ಕರ್ತವ್ಯನಿಷ್ಠ ವೈದ್ಯರ ಅನುಭವಗಳು ಸಮಾಜಕ್ಕೆ ಪಾಠ : ಡಾ. ಎಂ. ಮೋಹನ ಆಳ್ವ

JANANUDI.COM NETWORK

 

 

ಡಾ.ಎ. ರಂಜಿತ್‍ಕುಮಾರ್ ಶೆಟ್ಟಿಯವರ “ನೆನಪಿನಾಳದಿಂದ” ಪುಸ್ತಕ ಬಿಡುಗಡೆ
ಕರ್ತವ್ಯನಿಷ್ಠ ವೈದ್ಯರ ಅನುಭವಗಳು ಸಮಾಜಕ್ಕೆ ಪಾಠ : ಡಾ. ಎಂ. ಮೋಹನ ಆಳ್ವ 

 

ವೈದ್ಯರ ಜೀವನದಲ್ಲಿ ನೋವು ನಲಿವುಗಳ ಅಪಾರ ಅನುಭಗಳು ಉಂಟಾಗುತ್ತವೆ. ಕರ್ತವ್ಯನಿಷ್ಠ ವೈದ್ಯ, ಸಮಾಜಕ್ಕೆ ಅನುಕೂಲವಾಗುವ ಸೇವೆಯನ್ನೇ ನೀಡುತ್ತಾನೆ. ಹಲವು ಮನೋಭಾವದ ಜನರೊಂದಿಗೆ ಸ್ಪಂದಿಸಿದಾಗ ಇಲ್ಲಿ ತಾಳ್ಮೆ, ವೃತ್ತಿ ಪ್ರಜ್ಞೆ ಎರಡೂ ಬೇಕಾಗುತ್ತದೆ. ಅಂತಹ ಅಪೂರ್ವ ಅನುಭವಗಳನ್ನು ಸ್ವಾರಸ್ಯಕರವಾಗಿ ತನ್ನ “ನೆನಪಿನಾಳದಿಂದ” ಕೃತಿಯಲ್ಲಿ ಕುಂದಾಪುರದ ಖ್ಯಾತ ವೈದ್ಯ ಡಾ| ಎ. ರಂಜಿತ್ ಕುಮಾರ್ ಶೆಟ್ಟಿ ನಿರೂಪಿಸಿದ್ದಾರೆ. ಇದು ಸಮಾಜದ ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ. ವೈದ್ಯರ ಹಾಗೂ ಸಮಾಜದ ಕೆಲವರ ನಡುವೆ ಸಂಬಂಧಗಳು ಸಡಿಲವಾಗುತ್ತಿರುವಾಗ ಇಂತಹ ಕೃತಿ ಓದಿದರೆ ತಿಳುವಳಿಕೆ ಮೂಡುತ್ತದೆ” ಎಂದು ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೇಳಿದರು.
ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ “ಕುಂದಪ್ರಭ” ಆಶ್ರಯದಲ್ಲಿ ನಡೆದ ಡಾ.ಎ. ರಂಜಿತ್ ಕುಮಾರ್ ಶೆಟ್ಟಿಯವರ “ನೆನಪಿನಾಳದಿಂದ” ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವೈದ್ಯಕೀಯ ಸೇವೆಯಲ್ಲಿ ತನ್ನ ಅನುಭವಗಳ ಬುತ್ತಿ ಬಿಚ್ಚಿ ಹೇಳಿದ ಅವರು ಹಲವು ಕಾನೂನು ನಿಯಮಗಳು, ಎಲ್ಲ ರೀತಿಯ ಮಾನವೀಯ ಸೇವೆ ಮಾಡಲು ಅವಕಾಶ ನೀಡುವುದಿಲ್ಲ. ಆದರೂ ವೈದ್ಯರ ಪ್ರಾಮಾಣಿಕ ಸೇವೆಗೆ ಗೌರವ ದೊರಕುತ್ತದೆ. ಡಾ. ರಂಜಿತ್ ಕುಮಾರ್ ಶೆಟ್ಟಿಯವರು ಪತ್ನಿ ಬೀನಾ ಶೆಟ್ಟಿ ಹಾಗೂ ಕುಟುಂಬ ಸದಸ್ಯರ ಸಹಕಾರದಿಂದ ಇಂತಹ ಹಲವು ಕಾರ್ಯಕ್ರಮ ನಡೆಸುವಂತಾಗಲಿ ಎಂದು ಹಾರೈಸಿದರು.

ಗುರುಗಳ ಮಾರ್ಗದರ್ಶನದ ಸ್ಪೂರ್ತಿ : “ನೆನಪಿನಾಳದಿಂದ” ಪುಸ್ತಕ ಬಿಡುಗಡೆ, “ಜಯಂತಣ್ಣನಿಗಾಗಿ” ಕಾದಂಬರಿ ದ್ವಿತೀಯ ಮುದ್ರಣ ಅನಾವರಣಗೊಳಿಸಿ ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಚಿತ್ರನಟ ನಿರ್ದೇಶಕ ರಿಷಬ್ ಶೆಟ್ಟಿ, ಕುಂದಾಪುರ ಬೋರ್ಡ್ ಹೈಸ್ಕೂಲ್‍ನಲ್ಲಿ ಮೂರುವರ್ಷ ಕಲಿತ ನಾನು, ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿಗೆ ಸೇರಿದೆ. ಕಾಲೇಜಿನ ಪದವಿ ಪೂರ್ವ ಶಿಕ್ಷಣ ಸೇರಿದೆ. ಇಲ್ಲಿ ಶಿಕ್ಷಣ ಪಡೆಯು ವಾಗ ಅಶಸ್ತಿನ ವಿದ್ಯಾರ್ಥಿಯಾಗಿದ್ದೆ. ಶಿಕ್ಷಣಕ್ಕಿಂತ ಪಾಠೇತರ ಚಟುವಟಿಕೆಗಳ ಮೇಲೇಯೇ ಹೆಚ್ಚು ಒಲವಿತ್ತು. ಕೀಟಲೆ ಮಾಡುತ್ತಿದ್ದ ನನ್ನನ್ನು ಹಂದೆ ಗುರುಗಳು ಕರೆದು ನಿನ್ನ ಇದೆ ಉತ್ಸಾಹ ಕ್ರಿಯಾಶೀಲತೆಯನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದರೆ ಜೀವನದಲ್ಲಿ ತುಂಬ ಉಪಯೋಗವಾಗುತ್ತದೆ ಅಂದರು ಹಂದೆ, ವಸಂತ ಬನ್ನಾಡಿ, ದೋಮಚಂದ್ರಶೇಖರ , ಎ.ಸಿ.ತುಂಗ ಮುಂತಾದವರನ್ನು ನೆನೆದ ಅವರು ಶಿಕ್ಷಕರ ಮಾರ್ಗದರ್ಶನ ಅನುಸರಿಸಿದರೆ ಜೀವನದ ನೋವು ನಲಿವುಗಳನ್ನು ಎದುರಿಸಿ ಯಶಸ್ವಿಯಾಗಲು ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ” ಎಂದರು.
ಜಯಂತಣ್ಣನಿಗಾಗಿ ಚಲನಚಿತ್ರ :
ಡಾ. ರಂಜಿತ್ ಕುಮಾರ್ ಶೆಟ್ಟಿಯವರ ಜಯಂತಣ್ಣನಿಗಾಗಿ ಕಾದಂಬರಿಯನ್ನು “ಚಲನಚಿತ್ರ” ಮಾಡುವುದಾಗಿ ರಿಷಬ್ ಶೆಟ್ಟಿ ಘೋಷಿಸಿದರು. ಜಯಂತಣ್ಣನಿಗಾಗಿ ಕಾದಂಬರಿ ಒಂದು ಅದ್ಭುತ ಕೃತಿಯಾಗಿದ್ದು ಒಂದು ಉತ್ತಮ ಚಲನಚಿತ್ರ ಮಾಡಬಲ್ಲ ಕತೆ ಹೊಂದಿದೆ. ಈಗ ಇರುವ ಒತ್ತಡಗಳನ್ನು ಕಡಿಮೆ ಮಾಡಿಕೊಂಡ ಮೇಲೆ ಡಾ.ಎ.ರಂಜಿತಣ್ಣನವರಿಗಾಗಿ “ಜಯಂತಣ್ಣನಿಗಾಗಿ” ಚಲನಚಿತ್ರ ಮಾಡಿಯೇ ಮಾಡುತ್ತೇನೆ. ಸೂಕ್ತ ಕಲಾವಿದರನ್ನೇ ಇದಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದರು.
ಅಭಿನಂದನ ಭಾಷಣ ಮಾಡಿದ ಮಂಗಳೂರು, ಶ್ರೀರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ, ಮಾತನಾಡಿ “ಡಾ. ಎ. ರಂಜಿತ್ ಕುಮಾರ್ ಶೆಟ್ಟಿಯವರ “ನೆನಪಿನಾಳ”ದಿಂದ ಕೃತಿ ವಿದ್ಯಾರ್ಥಿಗಳಿಗೆ ಒಂದು ಪಠ್ಯವಾಗಿ ಉಪಯೋಗಿಸುವಂತಿದೆ. ಸಮಾಜಕ್ಕೂ ವೈದ್ಯಕೀಯ ಲೋಕದ ವಿಸ್ಮಯದ ಘಟನೆಗಳು ಮಾನವೀಯ ಸಂಬಂಧಗಳೊಂದಿಗೆ, ವ್ಯದ್ಯರನ್ನೇ ಬೆಚ್ಚಿ ಬೀಳಿಸುವಂತ ಜನರ ನಡವಳಿಕೆಯನ್ನೂ ತೋರಿಸುತ್ತದೆ” ಎಂದು ಹಲವು ಸನ್ನಿವೇಶಗಳನ್ನು ವಿವರಿಸಿದರು. ಡಾ. ಎ. ರಂಜಿತ್ ಕುಮಾರ್ ಶೆಟ್ಟಿಯವರ ಹೃದಯಂಗಮ ಕಾದಂಬರಿ ಚಲನಚಿತ್ರವಾಗಿಸುವಂತೆ ಅವರು ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಕೋರಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಡಾ.ಎ.ರಂಜಿತ್ ಕುಮಾರ್ ಶೆಟ್ಟಿ” ಇಂದು ವೈದ್ಯರು ಕಬ್ಬಿಣದ ಎದೆ, ಐಸ್‍ಕೂಲ್ ತಲೆ, ಸ್ವೀಟ್ ನಾಲಿಗೆ ಹೊಂದಿರಬೇಕು. ವೈದ್ಯಕೀಯ ಬದುಕಿನ ನಾಲ್ಕು ದಶಕದಲ್ಲಿ ವೈದ್ಯರಲ್ಲೂ, ಜನಸಾಮಾನ್ಯರ ಮನೋಭಾವದಲ್ಲೂ ಬಹಳ ಬದಲಾವಣೆಯಾಗಿದೆ. ಇಂದಿನ ಸಾಮಾಜಿಕ ಸ್ಥಿತಿಯಲ್ಲಿ ಪ್ರಾಮಾಣಿಕ ವೈದ್ಯಕೀಯ ಸೇವೆಯೂ ಕೆಲವೊಮ್ಮೆ ಸಂಕಟಕ್ಕೆ ಸಿಲುಕಿದರೂ, ಜನಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ವೈದ್ಯರು ಹಣದ ಅತಿ ಮೋಹ ಸಹ ಬಿಡಬೇಕಾಗುತ್ತದೆ ಎಂದರು.
ತನ್ನ ಬರಹಗಳನ್ನು ಪ್ರಕಟಿಸಲು ಸಹಕರಿಸಿದವರು, ಓದಿ ಬೆನ್ನುತಟ್ಟಿದವರು ಸಹ ನನಗೆ ಸ್ಫೂರ್ತಿ ” ಎಂದರು.
ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಆರ್.ಎನ್.ರೇವಣ್‍ಕರ್ ಅಭಿನಂದನಾ ಪತ್ರ ವಾಚಿಸಿದರು.
ಶ್ರೀಮತಿ ಬೀನಾಶೆಟ್ಟಿ, ಶ್ರೀಮತಿ ಲಕ್ಷ್ಮೀ ಶೆಟ್ಟಿ, ಅನಿಕಾ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಡಾ. ಗಣೇಶ್ ಪೈ, ಡಾ. ಸಿದ್ದಾರ್ಥ ಶೆಟ್ಟಿ, ಡಾ.ಸುಷ್ಮಾ ಶೆಣೈ ಸ್ಮರಣಿಕೆ ನೀಡಿದರು.
ಕೆ.P.É ರಾಮನ್ , ಕಿರಣ್ ಭಟ್ ,ಎಚ್.ಸೋಮಶೇಖರ್ ಶೆಟ್ಟಿ ಸಹಕರಿಸಿದರು. ತೆಂಕನಿಡಿಯೂರು ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ನಿರೂಪಿಸಿದರು.
ಪಿ.ಜಯವಂತ ಪೈ ವಂದಿಸಿದರು.
ಡಾ. ಕಾಶಿನಾಥ ಪೈ, ಡಾ. ಪ್ರಕಾಶ್ ಕಾಮತ್, ಡಾ.ಸತೀಶ್ ಪೂಜಾರಿ, ಕು|ಶಿಪ್ರಾ ಚಾತ್ರ, ವಿನೂಶ್ ಭಾರದ್ವಾಜ್ ಸಂಗೀತ ಕಾರ್ಯಕ್ರಮ ನೀಡಿದರು.