ಕೋಲಾರ:- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ 2022ನೇ ಸಾಲಿನ 6 ರಿಂದ 8ನೇ ತರಗತಿಗಳಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ವೃಂದ ನೇರ ನೇಮಕಾತಿಯಡಿ ಜಿಲ್ಲಾಮಟ್ಟದ ಸಂಯುಕ್ತ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರೀಶೀಲನೆಗೆ ಬಿ ದರ್ಜೆಯ ಅಧಿಕಾರಿಗಳ 5 ತಂಡಗಳನ್ನು ರಚಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ ತಿಳಿಸಿದರು.
ನಗರದ ಡಿಡಿಪಿಐ ಕಚೇರಿಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಯಿಂದ ನಡೆಯುತ್ತಿರುವ ದಾಖಲೆಗಳ ಪರಿಶೀಲನೆ ವೀಕ್ಷಿಸಿ ಮಾತನಾಡಿದ ಅವರು, ಯಾವುದೇ ಗೊಂದಲ ಎದುರಾಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಪರಿಶೀಲನೆಗಾಗಿ 5 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಮೂವರು ಬಿ ದರ್ಜೆ ಅಧಿಕಾರಿಗಳು ಹಾಗೂ ಓರ್ವ ತಾಂತ್ರಿಕ ಸಹಾಯಕರು ಇದ್ದಾರೆ ಎಂದರು.
ಇದು ಆನ್‍ಲೈನ್ ಪರಿಶೀಲನೆಯಾಗಿದ್ದು, ಜಿಲ್ಲಾಮಟ್ಟದ ಸಂಯುಕ್ತ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳನ್ನು ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:2 ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಕರೆಯಲಾಗಿದೆ, ಹುದ್ದೆಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಸಲ್ಲಿಸಿರುವ ಜೆರಾಕ್ಸ್ ಪ್ರತಿಗಳಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲನೆ ಸಂದರ್ಭದಲ್ಲಿ ಹಾಜರುಪಡಿಸಬೇಕಾಗಿದೆ ಎಂದರು.
195 ಹುದ್ದೆಗಳು 320 ಅಭ್ಯರ್ಥಿಗಳು
ಒಟ್ಟು 195 ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾಮಟ್ಟದ ಸಂಯುಕ್ತ ಸ್ವರ್ಧಾತ್ಮಕ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವ ಒಟ್ಟು 320 ಮಂದಿಯ ಮೂಲ ದಾಖಲೆಗಳ ಪರಿಶೀಲನೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
6 ರಿಂದ 8ನೇ ತರಗತಿ ಬೋಧನೆಗಾಗಿ ಈ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಗಣಿತ, ವಿಜ್ಞಾನ, ಸಮಾಜವಿಜ್ಞಾನ, ಆಂಗ್ಲ ಭಾಷೆ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರ ಹಾಗೂ ಶಾಲಾ ಶಿಕ್ಷಣಮತ್ತು ಸಾಕ್ಷರತಾ ಇಲಾಖೆ ನಿರ್ದೇಶನದಂತೆ ಈ ದಾಖಲಾತಿಗಳ ಪರಿಶೀಲನೆ ನಡೆದಿದೆ ಎಂದು ತಿಳಿಸಿದರು.
ಗುರುವಾರ ಜಿಲ್ಲಾಮಟ್ಟದ ಸಂಯುಕ್ತ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 1 ರಿಂದ 100 ರವರೆಗೂ ಮೂಲದಾಖಲೆಗಳ ಪರಿಶೀಲನೆಗೆ ಆಹ್ವಾನಿಸಿದ್ದು, ಬೆಳಗ್ಗೆ ಸರ್ವರ್ ಸಮಸ್ಯೆಯಿಂದಾಗಿ ಸ್ವಲ್ಪ ನಿಧಾನಗತಿಯಲ್ಲಿ ನಡೆದ ಪರಿಶೀಲನೆ ಮಧ್ಯಾಹ್ನದ ನಂತರ ಚುರುಕುಗೊಂಡಿದೆ ಎಂದು ತಿಳಿಸಿದರು.
ದಾಖಲೆಗಳ ಪರಿಶೀಲನೆಯ ಉಸ್ತುವಾರಿಯನ್ನು ತಮ್ಮೊಂದಿಗೆ ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್ ವಹಿಸಿಕೊಂಡಿದ್ದಾರೆ, ಬಿ ದರ್ಜೆ ಅಧಿಕಾರಿಗಳು ನಡೆಸುತ್ತಿರುವ ಪರಿಶೀಲನೆಯ ಮೇಲುಸ್ತುವಾರಿ ಮಾಡುತ್ತಿದ್ದಾರೆ ಎಂದರು.
ಅ.7 ಮತ್ತು 10 ದಾಖಲೆ ಪರಿಶೀಲನೆ
ಅ.7 ರಂದು ಬೆಳಗ್ಗೆ 10 ಗಂಟೆಗೆ ಕ್ರಮಸಂಖ್ಯೆ 101 ರಿಂದ 144 ರವರೆಗಿನ ಗಣಿತ,ವಿಜ್ಞಾನ ವಿಷಯದ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗತಕ್ಕದ್ದು. ಇದೇ ದಿನ ಬೆಳಗ್ಗೆ 10 ಗಂಟೆಗೆ ಕ್ರಮ ಸಂಖ್ಯೆ 1 ರಿಂದ 10 ರವರೆಗಿನ 10 ಮಂದಿ ಸಮಾಜ ವಿಷಯದ ಅಭ್ಯರ್ಥಿಗಳೂ ದಾಖಲೆಗಳ ಪರಿಶೀಲನೆಗೆ ಹಾಜರಿರತಕ್ಕದ್ದು.
ಅ.7 ಮಧ್ಯಾಹ್ನ 2 ಗಂಟೆಗೆ ಆಯ್ಕೆ ಪಟ್ಟಿಯಲ್ಲಿನ ಕ್ರಮಸಂಖ್ಯೆ 11ರಿಂದ 60 ರವರೆಗಿನ ಸಮಾಜ ವಿಷಯದ ಅಭ್ಯರ್ಥಿಗಳು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಲು ಸೂಚಿಸಲಾಗಿದೆ ಎಂದರು.
ಅ.10 ರಂದು ಬೆಳಗ್ಗೆ 10 ಗಂಟೆಗೆ ಕ್ರಮಸಂಖ್ಯೆ 61ರಿಂದ 97 ರವರೆಗಿನ ಆಂಗ್ಲಭಾಷಾ ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 2 ಗಂಟೆಗೆ ಕ್ರಮಸಂಖ್ಯೆ 25 ರಿಂದ 50 ರವರೆಗಿನ ಆಂಗ್ಲಭಾಷಾ ಅಭ್ಯರ್ಥಿಗಳು ಮತ್ತು 1 ರಿಂದ 31 ರವರೆಗೆ ಜೀವ ವಿಜ್ಞಾನ ಅಭ್ಯರ್ಥಿಗಳು ಹಾಜರಿರಬೇಕು ಎಂದು ಡಿಡಿಪಿಐ ತಿಳಿಸಿದರು.
ದಾಖಲಾತಿಗಳ ಪರಿಶೀಲನೆ ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್,ಸಿ.ಆರ್.ಅಶೋಕ್ ನೇತೃತ್ವದಲ್ಲಿ ಉಪಪ್ರಾಂಶುಪಾಲ ರಾಮಕೃಷ್ಣಪ್ಪ, ಎವೈಪಿಸಿ ಮೋಹನ್‍ಬಾಬು, ಕ್ಷೇತ್ರ ಸಮನ್ವಯಾಧಿಕಾರಿಗಳಾದ ರಾಧಮ್ಮ,ವಸಂತ, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಸುಲೋಚನಾ, ಮುಖ್ಯಶಿಕ್ಷಕರುಗಳಾದ ಸಿದ್ದೇಶ್, ಸಿ.ಎನ್.ಪ್ರದೀಪ್‍ಕುಮಾರ್, ನಾಗರಾಜ್,ಬೈರೆಡ್ಡಿ, ಭಾಗ್ಯಲಕ್ಷ್ಮಿ, ಶ್ರೀಧರ್, ಗಾಯಿತ್ರಿ, ಇಲಾಖೆ ವ್ಯವಸ್ಥಾಪಕ ಗೋವಿಂದಗೌಡ, ಅಧೀಕ್ಷಕ ಮಂಜುನಾಥರೆಡ್ಡಿ, ಚಿರಂಜೀವಿ, ಲಕ್ಷ್ಮಣ್,ಬೂದಿಕೋಟೆ ಮಂಜುನಾಥ್ ಮತ್ತಿತರರು ಕಾರ್ಯ ನಿರ್ವಹಿಸುತ್ತಿದ್ದರು.