ಬಜೆಟ್‍ನಲ್ಲಿ ಎತ್ತಿನಹೊಳೆಗೆ 3 ಸಾವಿರ ಕೋಟಿ ಸ್ವಾಗತಾರ್ಹ ಮಾವು ಬೆಳೆಗಾರರಿಗೆ ಕೈಕೊಟ್ಟ ಸರ್ಕಾರ-ಬ್ಯಾಲಹಳ್ಳಿ ಗೋವಿಂದಗೌಡ


ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಎತ್ತಿನಹೊಳೆ, ಯೋಜನೆಗೆ 3 ಸಾವಿರ ಕೋಟಿ ಬಜೆಟ್‍ನಲ್ಲಿ ಇಟ್ಟಿರುವುದು ಸ್ವಾಗತಾರ್ಹವಾದರೂ ಜಿಲ್ಲೆಯಲ್ಲಿ ಮಾವು ಸಂಸ್ಕರಣೆ ಘಟಕ ಸ್ಥಾಪನೆಯನ್ನು ನಿರೀಕ್ಷಿಸಿದ್ದ ಮಾವು ಬೆಳೆಗಾರರ ಹಿತ ರಕ್ಷಣೆಗೆ ಮುಂದಾಗಿಲ್ಲ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ಕೆಸಿವ್ಯಾಲಿ 2ನೇ ಹಂತದ ಯೋಜನೆಗೆ 450 ಕೋಟಿ ನಿಗಧಿ ಶ್ಲಾಘನೀಯ ಕಾರ್ಯವಾಗಿದ್ದು, ತಾಂತ್ರಿಕ ತೊಂದರೆ ನಿವಾರಿಸಿಕೊಂಡು ಅತಿ ಶೀಘ್ರ ಎತ್ತಿನಹೊಳೆ, ಕೆಸಿ ವ್ಯಾಲಿ ನೀರು ಹರಿಸಲು ಕಾಮಗಾರಿಯ ವೇಗ ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಯಾದ ಮಾವು ಬೆಳೆಗಾರರ ರಕ್ಷಣೆಗೆ ಸರ್ಕಾರ ಬರುತ್ತದೆ ಎಂದು ಆಶಿಸಲಾಗಿತ್ತು. ಆದರೆಬಜೆಟ್‍ನಲ್ಲಿ ಮಾವುಸಂಸ್ಕರಣ ಘಟಕ ಸ್ಥಾಪಿಸುವ ಪ್ರಸ್ತಾಪವೇ ಇಲ್ಲ.
ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿಯ ಮೂಲಕ ಸಹಕಾರ ರಂಗದಲ್ಲಿ ಸದಸ್ಯತ್ವ ಹೊಂದಿರುವ ಕುಟುಂಬಗಳ ಆರೋಗ್ಯ ರಕ್ಷಣೆಗೆ ಸರ್ಕಾರ ಮುಂದಾಗಿರುವುದನ್ನು ಸ್ವಾಗತಿಸಿರುವ ಅವರು, ಯೋಜನೆಯನ್ನು ಅತಿಶೀಘ್ರ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ್ದಾರೆ.
ಸಹಕಾರ ಸಂಘಗಳಿಗೆ ಮಹಿಳೆಯರು ರೈತರಿಗೆ ನೀಡುತ್ತಿದ್ದ ಬಡ್ಡಿರಹಿತ ಸಾಲದ ಪ್ರಮಾಣ ಹೆಚ್ಚಳವಾಗುವ ಆಶಯವಿತ್ತು. ಮಹಿಳೆಯರಿಗೆ 1 ಲಕ್ಷ ರೈತರಿಗೆ 5 ಲಕ್ಷದವರೆಗೂ ಬಡ್ಡಿರಹಿತ ಸಾಲ ಯೋಜನೆಯನ್ನು ಬಜೆಟ್‍ನಲ್ಲಿ ನೀಡುತ್ತಾರೆ ಎಂಬುದು ಸುಳ್ಳಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಈ ಸಾಲಿನ ಬಜೆಟ್‍ನಲ್ಲಿಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ಮರೆತಿಲ್ಲ ಎಂಬುದೇ ಸಮಾಧಾನ ತರುವ ವಿಷಯ ಎಂದು ತಿಳಿಸಿದ್ದಾರೆ.