

ಶ್ರೀನಿವಾಸಪುರ; ಫೆ.16: ರಾಜ್ಯ ಬಜೆಟ್ನಲ್ಲಿ ಮಾವು ಬೆಳೆಗಾರರಿಗೆ ಹೆಚ್ಚಿನ ಆದ್ಯತೆ ಜೊತೆಗೆ ಮಾರುಕಟ್ಟೆ ಔಷಧಿ ಹಾಗೂ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 300 ಕೋಟಿ ಅನುದಾನ ಮೀಸಲಿಡಬೇಕೆಂದು ರೈತಸಂಘದಿಂದ ಉಪ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಮನವಿ ನೀಡಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ವಿಶ್ವ ವಿಖ್ಯಾತಿ ಮಾವಿನ ನಗರಿ ಶ್ರೀನಿವಾಸಪುರ ವ್ಯಾಪ್ತಿಯಲ್ಲಿ ಅತಿ ಹೆಚ್ಚಾಗಿ ಮಾವು ಬೆಳೆದು ದೇಶ ವಿದೇಶಗಳಿಗೆ ರಫ್ತು ಮಾಡುವ ಮಾವು ಬೆಳೆಗಾರರ ಸ್ಪಂದನೆಗೆ ಯಾವುದೇ ಬಜೆಟ್ನಲ್ಲಿ ಅನುದಾನ ನೀಡದೇ ಇರುವುದು ವಿಷಾಧಕರ ಸಂಗತಿ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅದರಂತೆ ಇತ್ತೀಚೆಗೆ ಹವಾಮಾನ ವೈಫರೀತ್ಯ ಮುಂಗಾರುಮಳೆ ಆರ್ಭಟಕ್ಕೆ ಮಾವಿನ ಫಸಲು ಸಹ ಬರುತ್ತಿಲ್ಲ. ಹೆಚ್ಚುತ್ತಿರುವ ರೋಗಗಳ ನಿಯಂತ್ರಣಕ್ಕೆ ಔಷಧಿ ಖರೀದಿ ಮಾಡಲು ರೈತರು ಪರದಾಡುವ ಜೊತೆಗೆ ಪ್ರಧಾನಮಂತ್ರಿ ಫಸಲ್ ಭಿಮಾ ವಿಮಾ ಕಂಪನಿ ಸಹ ರೈತರಿಗೆ ಅಷ್ಟಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಮಾವು ಮಾರುಕಟ್ಟೆಯ ಜಾಗದ ಸಮಸ್ಯೆಯಿಂದ ಅಭಿವೃದ್ಧಿಯಾಗದೆ ಪ್ರತಿವರ್ಷ ಕುಡಿಯುವ ನೀರಿನಿಂದ ಊಟದವರೆಗೂ ಪರದಾಡುವ ಜೊತೆಗೆ ಬದುಕು ಕಟ್ಟಿಕೊಳ್ಳಲು ಕೂಲಿಗಾಗಿ ಬರುವ ಕಾರ್ಮಿಕರಿಗೆ ಮಾರುಕಟ್ಟೆಯಲ್ಲಿ ಉಚಿತವಾದ ಅನಾರೋಗ್ಯ ನೀಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾವು ಬೆಲೆ ಕುಸಿತವಾದಾಗ ಫಸಲನ್ನು ಸಂರಕ್ಷಣೆ ಮಾಡಲು ಮಾವು ಸಂಸ್ಕರಣಾ ಘಟಕವಿಲ್ಲ ಹಾಗೂ ಮಾವು ಆಧಾರಿತ ಕೈಗಾರಿಕೆಗಳಿಲ್ಲದೆ ಬೆಲೆ ಇಲ್ಲದಾಗ ಮಾವನ್ನು ರಸ್ತೆಗಳಲ್ಲಿ ಸುರಿಯಬೇಕಾದ ಪರಿಸ್ಥಿತಿಯಿದೆ. ಈ ಬಜೆಟ್ನಲ್ಲಾದರೂ ಮಾವು ಬೆಳೆಗಾರರಿಗೆ ರಕ್ಷಣೆಗೆ 300 ಕೋಟಿ ಅನುದಾನವನ್ನು ಮೀಸಲಿಟ್ಟು ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ರಕ್ಷಣೆಗೆ ಸರ್ಕಾರ ನಿಲ್ಲಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್, ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಷೇಕ್ ಶಫೀಉಲ್ಲಾ, ಆಲವಾಟ ಶಿವ, ಸಂತೋಷ್, ಹರೀಶ್, ವೆಂಕಟೇಶ್, ಗಂಗಾಧರ್, ಯಲ್ದೂರು ಮೋಹನ್ ಗೌಡ, ಸಹದೇವಣ್ಣ, ವೆಂಕಟ್ ಮುಂತಾದವರಿದ್ದರು.