ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ಹಾಗೂ ಮೆರಿಟ್-ಕಂ-ಮೀನ್ಸ್ ಶುಲ್ಕ ಮರುಪಾವತಿ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ

ಸಂವಿಧಾನ ಜಾಗೃತಿ ಜಾಥಾ ಕುರಿತು ಜಿಲ್ಲಾಧಿಕಾರಿ ಅಕ್ರಂ ಪಾಷ ವಿಶೇಷ ಸಂದರ್ಶನ

ಕೋಲಾರ : ಕೋಲಾರ ಜಿಲ್ಲೆಯಲ್ಲಿ ಜ. 26ರಿಂದ ಸಂವಿಧಾನ ಜಾಗೃತಿ ಜಾಥಾ ಆರಂಭವಾಗಿದ್ದು, 120ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿದೆ. ಹೋದ ಕಡೆಯಲ್ಲೆಲ್ಲಾ ಜನರಿಂದ ಅಭೂತಪೂರ್ವವಾದ ಸ್ವಾಗತ ಸಿಕ್ಕಿದೆ. ಕೋಲಾರ ಜಿಲ್ಲೆಯ ಸಂವಿಧಾನ ಜಾಗೃತಿ ಜಾಥಾದ ವಿಶೇಷತೆಗಳ ಕುರಿತು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

  • ಸಂವಿಧಾನ ಜಾಗೃತಿ ಜಾಥಾ ನಡೆಸುವ ಉದ್ದೇಶ ಏನು?

ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದೇ ಇದರ ಮೂಲ ಉದ್ದೇಶ. ಮುಖ್ಯವಾಗಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸರ್ವರಿಗೂ ನ್ಯಾಯವನ್ನು ನೀಡುವ, ಎಲ್ಲರನ್ನೂ ಒಳಗೊಳ್ಳುವ ಸಂವಿಧಾನವಾಗಿದೆ. ಈ ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಂವಿಧಾನದ ಶ್ರೇಷ್ಠತೆಯು ಮರೆಗೆ ಸಂದುತ್ತಿರುವ ಈ ಹೊತ್ತಿನಲ್ಲಿ ಇಂತಹದ್ದೊಂದು ಜಾಥಾ ಅಗತ್ಯ ಮಾತ್ರವಲ್ಲ ಅವಶ್ಯಕತೆಯೂ ಆಗಿತ್ತು.

  • ಎಲ್ಲ ಜಿಲ್ಲೆಗಳಲ್ಲೂ ಈ ಜಾಥಾ ನಡೆಯುತ್ತಿದೆ. ನಮ್ಮ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಜಾಥಾದ ವಿಶೇಷತೆ ಏನು?

ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಾಥಾ ನಡೆಯುತ್ತಿದೆ. ಆದರೆ, ಕೋಲಾರ ಜಿಲ್ಲೆ ಹೇಗೆ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವೈಶಿಷ್ಟತೆಗಳನ್ನು ಹೊಂದಿದೆಯೋ ಹಾಗೆಯೇ ಸಂವಿಧಾನ ಜಾಗೃತಿ ಜಾಥಾದಲ್ಲೂ ಕೂಡ ತನ್ನದೆಯಾದ ವೈಶಿಷ್ಟ್ಯತೆಯನ್ನು ಹೊಂದಿದೆ. ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಗಾಧ ಮತ್ತು ಅನನ್ಯವಾದುದು. ವಿಶ್ವದಲ್ಲೆ ಶ್ರೇಷ್ಠ ಸಂವಿಧಾನ ಭಾರತಕ್ಕೆ ದೊರೆಯುವಲ್ಲಿ ಅವರ ಪಾತ್ರ ಮಹತ್ವಪೂರ್ಣವಾದುದು. ಅವರ ಕೊಡುಗೆ ಹಾಗೂ ಅವರಿಗೆ ಜೊತೆಯಾಗಿ ಸಹಕಾರ ನೀಡಿದ ಸಂವಿಧಾನ ಕರಡು ರಚನಾ ಸಮಿತಿಯ ಮೈಸೂರು ಭಾಗದ ಪ್ರತಿನಿಧಿ ಶ್ರೀ ಟಿ ಚನ್ನಯ್ಯನವರು ಕೋಲಾರದವರು ಎಂಬುದೇ ಹೆಮ್ಮೆ

  • ಜಾಥಾದಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳಲಾಗುತ್ತಿದೆಯೇ?

ಈಗಾಗಲೇ ಸಂವಿಧಾನದ ಕುರಿತು ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗಿಯಾಗಿದ್ದು, ವಿಜೇತರಾದವರನ್ನು ಗೌರವಿಸಲಾಗುತ್ತಿದೆ.

  • ಜಾಥಾ ಕೇವಲ ಮೆರವಣಿಗೆಗೆ ಮಾತ್ರ ಸೀಮಿತವಾಗಿದೆಯೇ?

ಸಂವಿಧಾನ ಜಾಗೃತಿ ಜಾಥಾ ಎಂದರೆ ಅದು ಕೇವಲ ಮೆರವಣಿಗೆಯಷ್ಟೇ ಅಲ್ಲ. ಅದೊಂದು ಬಗೆಯ ಅರಿವಿನ ಜಾಥಾ. ಸಂವಿಧಾನ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಜಾಥಾ. ಜೊತೆಗೆ ಪ್ರಧಾನ ಆಕರ್ಷಣೆಯಾದ ಸ್ಥಬ್ದ ಚಿತ್ರದಲ್ಲಿ ‘ಎಲ್‌ಇಡಿ’ ಪರದೆ ಇದ್ದು, ಸಂವಿಧಾನದ ಮಹತ್ವ ಕುರಿತ ವಿಡಿಯೊಗಳನ್ನು ಪ್ರದರ್ಶಿಸಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಹಾಗೂ ಬುದ್ಧ ಅವರ ಭಾವಚಿತ್ರಗಳನ್ನು ಇರಿಸಿ, ಅವರ ಸಂದೇಶಗಳನ್ನು ಬರೆಯಲಾಗಿದೆ. ಸಂವಿಧಾನದ ಪ್ರಸ್ತಾವನೆಯ ಪ್ರತಿಗಳನ್ನು ವಿತರಿಸಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಕುರಿತು ವಿಶೇಷ ಉಪನ್ಯಾಸ ನೀಡಲಾಗುತ್ತಿದೆ.

  • ಜಾಥಾಕ್ಕೆ ಕೋಲಾರದ ಜನರಿಂದ ಸ್ಪಂದನೆ ಹೇಗಿದೆ?

ನಿಜಕ್ಕೂ ಜಾಥಾಕ್ಕೆ ಜನರು ಈ ಪ್ರಮಾಣದಲ್ಲಿ ಸ್ಪಂದಿಸುತ್ತಾರೆ ಎಂದುಕೊಂಡಿರಲಿಲ್ಲ. ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಜನರು ಸಾಂಪ್ರದಾಯಿಕ ಹಾಗೂ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯ ಸ್ವಾಗತ ಕೋರಿದ್ದಾರೆ. ಬೈಕ್, ಸೈಕಲ್, ಆಟೊ ರ್ಯಾಲಿ ಮೂಲಕ ಭವ್ಯ ಸ್ವಾಗತ ನೀಡಿದ್ದಾರೆ. ಜನರೇ ಸ್ವಯಂಪ್ರೇರಿತರಾಗಿ ಬಂದು ಜಾಗೃತಿ ರಥವನ್ನು ವೀಕ್ಷಿಸಿದ್ದಾರೆ. ಮತ್ತೂ ವಿಶೇಷ ಸಂಗತಿ ಎಂದರೆ, ಜಾಥಾದಲ್ಲಿ ನಡೆಯುವ ಸಂವಿಧಾನ ಕುರಿತ ವಿಶೇಷ ಉಪನ್ಯಾಸ ಮುಗಿಯುವವರೆಗೂ ಇದ್ದು, ನಂತರ ಹೊರಡುತ್ತಿದ್ದಾರೆ. ಜನರಿಂದ ಇದುವರೆಗೂ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದೆ. ಜಾಥಾದ ಯಶಸ್ಸು ಕೋಲಾರದ ಸಮಸ್ತ ಸಜ್ಜನ ನಾಗರಿಕ ಬಂಧುಗಳಿಗೆ ಸಲ್ಲಬೇಕಿದೆ.

ಕೋಲಾರ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾದ ಸ್ತಬ್ದಚಿತ್ರ ಜಾಥಾದಿಂದ ಏನಾದರೂ ಪ್ರಯೋಜನವಾಗುತ್ತದೆಯೆ?

ಜಾಥಾದಿಂದ ಹೆಚ್ಚಿನ ಪ್ರಯೋಜನ ವಿಶೇಷವಾಗಿ ಯುವ ಸಮುದಾಯದವರಿಗೆ ಆಗುತ್ತಿದೆ. ಹಿರಿಯರಿಗೆ ಸಂವಿಧಾನದ ಕುರಿತು ಒಂದಿಷ್ಟು ತಿಳಿವಳಿಕೆ ಇದೆ. ಆದರೆ, ನಮ್ಮ ಯುವ ತಲೆಮಾರಿಗೆ ಈ ಕುರಿತು ಜಾಗೃತಿ ತೀರಾ ಕಡಿಮೆ ಇದೆ. ಅವರಿಗೆ ಅವರ ಮೂಲಭೂತ ಹಕ್ಕುಗಳು ಹಾಗೂ ಮಾಡಲೇ ಬೇಕಾದ ಕರ್ತವ್ಯಗಳನ್ನು ಕುರಿತು ಈ ಜಾಥಾದ ಮೂಲಕ ಹೇಳಲಾಗುತ್ತಿದೆ. ಜೊತೆಗೆ, ಸಂವಿಧಾನದಡಿ ಸಿಗಬಹುದಾದ ಸೌಲಭ್ಯಗಳ ಕುರಿತೂ ಮಾಹಿತಿ ನೀಡಲಾಗುತ್ತಿದೆ.

ಜಾಥಾ ಎಲ್ಲಿಯವರೆಗೆ ನಡೆಯುತ್ತದೆ? ಮುಕ್ತಾಯ ಹೇಗಿರುತ್ತದೆ.

ಕೋಲಾರದಲ್ಲಿ ಫೆ. 23ಕ್ಕೆ ಜಾಥಾ ಮುಗಿಯುತ್ತದೆ. 25ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಸ್ಥಬ್ದ ಚಿತ್ರ ತೆರಳಲಿದೆ.

ಜೆರೋಸಾ ಹೈಸ್ಕೂಲ್ ಪ್ರಕರಣ:ಪೋಲಿಸರ ವರದಿಯಲ್ಲಿ ಶಿಕ್ಷಕಿಯ ಮೇಲಿನ ಆಪಾದನೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ-ಹೈಕೋರ್ಟಿನ ನಿವೃತ್ತ ನ್ಯಾಯಧೀಶರಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು- ಕಥೊಲಿಕ್ ಸಭಾ ಆಗ್ರಹ