ಶ್ರೀನಿವಾಸಪುರ 1 : ರೈತರು ತಮ್ಮ ಬಂಜರು ಭೂಮಿಯಲ್ಲಿ ಈ ಬೆಳೆಯನ್ನು ಬೆಳೆದು ತಮ್ಮ ಅರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕೆಂದು ತಿಳಿಸಿದರು. ರೈತರು ಬದಲಾದ ಪರಿಸ್ಥಿತಿಯಲ್ಲಿ ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆಯುವುದರ ಮೂಲಕ ಅರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಗೋಡಂಬಿ ಒಣ ಪ್ರದೇಶಕ್ಕೆ ಸೂಕ್ತವಾದ ಬೆಳೆ. ಅದು ಯಾವುದೇ ಮಣ್ಣಿಗೆ ಹೊಂದಿಕೊಂಡು ಬೆಳೆಯಬಲ್ಲದು ಹಾಗೂ ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಪಡೆದಿದೆ ಎಂದು ಕೋಲಾರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ವೆಂಕಟೇಶ್ವರಲು ಹೇಳಿದರು.
ತಾಲೂಕಿನ ಗಂಜಿಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಬುಧವಾರ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ . ಬಾಗಲಕೋಟೆ, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ . ಹೊಗಳಗೆರೆ ಹಾಗೂ ಅಖಿಲ ಭಾರತ ಸಮನ್ವಯ ಗೋಡಂಬಿ ಸಂಶೋಧನಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಗೋಡಂಬಿ ಬೆಳೆಯಲ್ಲಿ ಅಧಿಕ ಇಳುವರಿಗಾಗಿ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆ ವಿಷಯದ ಬಗ್ಗೆ ರೈತರಿಗಾಗಿ ಒಂದು ದಿನ ತರಬೇತಿ ಕಾರ್ಯಾಗಾರವನ್ನು ಉದ್ಗಾಟಿಸಿ ಮಾತನಾಡಿದರು.
ರೈತರು ಕನಿಷ್ಟ ಒಂದು ಎಕರೆ ಪ್ರದೇಶದಲ್ಲಿ 10 ಗಿಡಗಳಾದರು ಬದುವಿನ ಮೇಲೆ ನೆಟ್ಟು ಬೆಳಿಸಿದರೆ ಅದರಿಂದ ಮಣ್ಣು ಮತ್ತು ನೀರು ಸಂರಕ್ಷಣೆ , ಪರಿಸರ ರಕ್ಷಣೆ , ರೈತರು ಆದಾಯ ದ್ವಿಗುಣಗೊಳಿಸಲು ಕೂಡಾ ಉಪಯೋಗವಾಗುತ್ತದೆ ಎಂದು ಸಲಹೆ ನೀಡಿದರು. ಹೆಚ್ಚು ಲಾಭ ತರುವ ಬೆಳೆಯಾಗಿರುವುದರಿಂದ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ರೈತರು ಈ ಸ್ವಯಂ ಪ್ರೇರಣೆಯಿಂದ ಗೋಡಂಬಿ ಬೆಳೆಯಲು ಮುಂದೆ ಬರಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ಮಾತನಾಡಿ ಮಾವು ಬೆಳೆಗಾರರು ವರ್ಷ ಒಂದಲ್ಲ ಒಂದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ . ತೋಟಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿದೆ. ಆದರೆ ಗೋಡಂಬಿ ಬೆಳೆ ಬೆಳೆಯುವುದು ಹೆಚ್ಚು ವೆಚ್ಚದಾಯಕವಲ್ಲ. ಇದಕ್ಕೆ ರೋಗ ಬಾಧೆ ಹೆಚ್ಚಾಗಿ ತಟ್ಟುವುದಿಲ್ಲ. ಬೆಳೆಯನ್ನು ಮೂರು ವರ್ಷ ಚೆನ್ನಾಗಿ ನೋಡಿಕೊಂಡರೆ ಸುಮಾರು 30 ವರ್ಷ ಉತ್ತಮ ಫಸಲು ನೀಡುತ್ತದೆ. ವರ್ಷದಿಂದ ವರ್ಷಕ್ಕೆ ಸಹಜವಾಗಿಯೇ ಫಸಲಿನ ಪ್ರಮಾಣ ಹೆಚ್ಚುತ್ತದೆ ಎಂದು ಹೇಳಿದರು.
ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ.ಎನ್.ಅಶ್ವತನಾರಾಯಣರೆಡ್ಡಿ ಮಾತನಾಡಿ ದೇಶದಾದ್ಯಂತ ಗೋಡಂಬಿ ಸಂಸ್ಕರಣ ಘಟಕಗಳಿವೆ. ಹಣ್ಣನ್ನು ವೈನ್ ಮತ್ತು ತಂಪು ಪಾನೀಯ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಗೋಡಂಬಿ ಬೀಜವನ್ನು ದಾಸ್ತಾನು ಮಾಡಿ ಲಾಭದಾಯಕ ಬೆಲೆ ಬಂದಾಗ ಮಾರಾಟ ಮಾಡಬಹುದಾಗಿದೆ. ದೇಶ ವಿದೇಶಗಳಲ್ಲಿ ಗೋಡಂಬಿಗೆ ಬೇಡಿಕೆ ಇದೆ ಎಂದು ಹೇಳಿದರು.
ಬೆಂಗಳೂರಿನ ಜಿಕೆವಿಕೆ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾದ್ಯಾಪಕ ಡಾ.ಜಿಎಂ.ವರದರಾಜು, ಉಪವಲಯ ಅರಣ್ಯಾಧಿಕಾರಿ ಭರತ್ಕುಮಾರ್, ಹಿರಿಯ ತೋಟಗಾರಿಕೆ ಇಲಾಖಾ ಸಹಾಯಕ ನಿರ್ದೇಶಕ ರಮೇಶ್, ವೆಂಕಟಗಿರಿಯಪ್ಪ, ಗ್ರಾ.ಪಂ ಸದಸ್ಯೆ ವಸಂತಮ್ಮ , ಸುಧಾ , ಶಾಲೆಯ ಮುಖ್ಯ ಶಿಕ್ಷಕಿ ರೆಡ್ಡಮ್ಮ , ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ವಿಜ್ಞಾನಿಗಳಾದ ಡಾ.ಡಿ.ಶ್ರೀಕಂಠ ಪ್ರಸಾದ್, ಡಾ. ಜಗದೀಶ್ ಇದ್ದರು.
Month: February 2024
ಜಾತಿ ಗಣತಿ ವರದಿ ಕೆ ಜಯಪ್ರಕಾಶ್ ಹೆಗ್ಡೆ ಅವರಿಂದ ಹಸ್ತಾಂತರ-ವರದಿ ಸ್ವೀಕಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಆಸಕ್ತಿಗೆ ಕಾರಣವಾಗಿದ್ದ ಜಾತಿ ಗಣತಿ (ಕರ್ನಾಟಕ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ತೀವ್ರ ವಿರೋಧದ ನಡುವೆಯೂ ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ಸಿದ್ದಪಡಿಸಿದ ವರದಿಯನ್ನು ಅಧಿಕೃತವಾಗಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದರು
ಮಧ್ಯಾಹ್ನ ವಿಧಾನಸೌಧಕ್ಕೆ ಎರಡು ಬಾಕ್ಸ್ ವರದಿ ಪ್ರತಿಗಳ ಜೊತೆಗೆ ಆಗಮಿಸಿದ ಕೆ ಜಯಪ್ರಕಾಶ್ ಹೆಗ್ಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ತೆರಳಿ ವರದಿಯ ಪ್ರತಿಯನ್ನು ಹಸ್ತಾಂತರಿಸಿದರು.
ವರದಿ ಸ್ವೀಕಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಸ್ವೀಕರಿಸಿದ್ದೇನೆ. ವರದಿಯಲ್ಲಿ ಏನಿದೆ ಎಂದು ನಾನು ನೋಡಿಲ್ಲ. ಕ್ಯಾಬಿನೆಟ್ನಲ್ಲಿ ಜಾತಿಗಣತಿ ವರದಿ ಚರ್ಚೆ ಮಾಡುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳತ್ತೇವೆ ಎಂದು ಹೇಳಿದರು.
ಸಮುದ್ರ ಮಧ್ಯೆ 7 ಮಂದಿ ಮೀನುಗಾರರ ಅಪಹರಣ : ಲಕ್ಷಾಂತರ ಮೌಲ್ಯದ ಮೀನು, ಡೀಸೆಲ್ ಸಹಿತ ದರೋಡೆ
ಮಲ್ಪೆ : ಮೀನುಗಾರಿಕೆ ಮುಗಿಸಿ ವಾಪಸು ಬರುತ್ತಿರುವ ಬೋಟನ್ನು ತಡೆದು ನಿಲ್ಲಿಸಿ ಬೋಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಮೀನು, ಡೀಸೆಲ್ ಸಹಿತ 7 ಮಂದಿ ಮೀನುಗಾರರನ್ನು 25 ಜನರ ತಂಡ ಅಪಹರಿಸಿದ ಘಟನೆ ಭಟ್ಕಳದ ಮಾವಿನ ಕುರ್ವೆ ಬಂದರಿನಲ್ಲಿ ನಡೆದಿದೆ.
ಮಲ್ಪೆಯ ಚೇತನ್ ಸಾಲ್ಯಾನ್ ಅವರಿಗೆ ಸೇರಿದ ಕೃಷ್ಣನಂದನ ಆಳಸಮುದ್ರ ಬೋಟಿನಲ್ಲಿ ಈ ಘಟನೆ ನಡೆದಿದ್ದು ಅದರಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಗರಾಜ್ ಹರಿಕಾಂತ್, ನಾಗರಾಜ್ ಎಚ್., ಅರುಣ್ ಹರಿಕಾಂತ ಅಂಕೋಲ, ಅಶೋಕ ಕುಮಟಾ, ಕಾರ್ತಿಕ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಹ್ಮಣ್ಯ ಖಾರ್ವಿ ಅವರನ್ನು ಬಂಧನದಲ್ಲಿರಿಸಿಕೊಂಡಿದ್ದರು.
ಫೆ. 26ರ ತಡರಾತ್ರಿ ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರು ಕಡೆ ಬರುತ್ತಿರುವಾಗ ಭಟ್ಕಳ ಸಮೀಪ ಬೋಟಿನ ಬಲೆ ಎಂಜಿನ್ ಫ್ಯಾನಿಗೆ ಸಿಲುಕಿ ಎಂಜಿನ್ ಸ್ಥಗಿತಗೊಂಡು ಬೋಟು ನಿಂತಿತ್ತು, ಈ ಸಮಯದಲ್ಲಿ ಸುಮಾರು 25 ಮಂದಿ ಒಮ್ಮಿಂದೊಮ್ಮೆಲೆ ಬಂದು ಅಕ್ರಮಣಗೈದು ಬೋಟನ್ನು ತೀರ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಬೋಟಿನಲ್ಲಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಮೀನು, 7,500 ಲೀ ಡೀಸೆಲ್ ಅನ್ನು ದೋಚಿದ್ದಲ್ಲದೆ ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು ಎನ್ನಲಾಗಿದೆ.
ಬೋಟಿನ ಮೀನುಗಾರರ ಮೊಬೈಲಿಗೆ ಕರೆ ಮಾಡಿದಾಗ ಸ್ವಿಚ್ಆಫ್ ಅಗಿದ್ದು ಅಪಹರಣಕಾರರು ಮೀನುಗಾರರನ್ನು ಬಂಧನದಲ್ಲಿರಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಈ ಸಂಬಂಧ ಭಟ್ಕಳಕ್ಕೆ ತೆರಳಿರುವ ಮಲ್ಪೆ ಪೊಲೀಸರು, ಅಪಹರಿಸಲ್ಪಟ್ಟ ಬೋಟು ಮತ್ತು ಮೀನು ಗಾರರನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ – 100 ಯೂನಿಟ್ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ
ಬೆಂಗಳೂರು : ಹೊಸ ದರ ಪರಿಷ್ಕರಣೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ವಿದ್ಯುತ್ ದರ ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಲೋಕಸಭೆ ಚುನಾವಣೆ ಬೆನ್ನಲ್ಲೇ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ. 100 ಯೂನಿಟ್ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆದಾರರಿಗೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಲಾಗಿದೆ.
ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯೂನಿಟ್ಗೆ 40 ಪೈಸೆ ಕಡಿತ ಮಾಡಲಾಗಿದ್ದು, ಖಾಸಗಿ ಏತ ನೀರಾವರಿ ಬಳಕೆದಾರರಿಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. 100 ಯೂನಿಟ್ಗಿಂತ ಹೆಚ್ಚು ಬಳಸುವವರಿಗೆ ಮಾತ್ರ ಹೊಸ ದರ ಮಾರ್ಚ್ 1ರಿಂದಲೇ ಅನ್ವಯವಾಗಲಿದೆ. ದರ ಹೆಚ್ಚಳ ಆಗಬಹುದು ಎಂದು ವದಂತಿ ಹಬ್ಬಿತ್ತು. ಆದರೆ ಇದೀಗ ಗ್ರಾಹಕರಿಗೆ ವಿದ್ಯುತ್ ದರದಲ್ಲಿ ಭಾರಿ ಕಡಿತ ಮಾಡಲಾಗಿದೆ. ಪರಿಷ್ಕೃತ ದರ ಮಾರ್ಚ್ 1 ರಿಂದ ಅನ್ವಯವಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಎಸ್ಕಾಂಗಳಿಗೆ 259 ಕೋಟಿ ರೂ. ಲಾಭವಾಗಿದೆ. ಇದರ ಲಾಭವನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ದರವನ್ನು ಇಳಿಸಲಾಗಿದೆ ಎಂದು ಕೆ.ಇ.ಆರ್.ಸಿ ಹೇಳಿದೆ. ಇಳಿಕೆಯ ಪ್ರಮುಖಾಂಶ ಇಲ್ಲಿವೆ. ಗೃಹಬಳಕೆ ವಿದ್ಯುತ್ ಬಳಕೆದಾರರಿಗೆ ಶುಭ ಸುದ್ದಿ: 100 ಯೂನಿಟ್ಗಳಿಗಿಂತ ಹೆಚ್ಚಿನ ಯೂನಿಟ್ಗೆ 1 ರೂಪಾಯಿ 10 ಪೈಸೆ ಇಳಿಕೆ. ಅಂದರೆ ಇದರ ಲಾಭ 100 ಯುನಿಟ್ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಮಾತ್ರ ಸಿಗಲಿದೆ. ವಾಣಿಜ್ಯ ಬಳಕೆದಾರರಿಗೆ ಒಂದು ಯುನಿಟ್ ವಿದ್ಯುತ್ಗೆ 1 ರೂಪಾಯಿ 25 ಪೈಸೆ ಇಳಿಕೆ, ಕೈಗಾರಿಕೆಗಳಿಗೆ ಬಳಸುವ ವಿದ್ಯುತ್ ದರದಲ್ಲಿ ಯುನಿಟ್ಗೆ 50 ಪೈಸೆ ಇಳಿಕೆ ಮಾಡಲಾಗಿದೆ.
ಆಸ್ಪತ್ರೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವ ವಿದ್ಯುತ್ ದರ ಒಂದು ಯುನಿಟ್ಗೆ 40 ಪೈಸೆ ಇಳಿಕೆ, ಖಾಸಗಿ ಆಸ್ಪತ್ರೆಗಳು ಹಾಗು ಖಾಸಗಿ ಶಾಲೆಗಳಿಗೆ – 50 ಪೈಸೆ ಇಳಿಕೆ, ಖಾಸಗಿ ಏತ ನೀರಾವರಿ ವಿದ್ಯುತ್ ಬಳಕೆದಾರರಿಗೆ ಗರಿಷ್ಠ ಲಾಭ ನೀಡಲಾಗಿದ್ದು, ಒಂದು ಯುನಿಟ್ಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. ಅಪಾರ್ಟ್ಮೆಂಟ್ಗಳಿಗೆ ಡಿಮ್ಯಾಂಡ್ ಚಾರ್ಜಸ್ನಲ್ಲಿ 10 ರೂ. ಇಳಿಕೆ ಪ್ರಕಟಿಸಲಾಗಿದೆ.
ಕಾರ್ಕಳ – ಮನೆಯಿಂದ ಹೊರಗೆ ಹೋದ ಯುವತಿ ನಾಪತ್ತೆ
ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಅಸಲ್ಜಡ್ಡು ನಿವಾಸಿ ಪ್ರಮೀಳಾ (24) ಎಂಬ ಯುವತಿ ಫೆಬ್ರವರಿ 24ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು, ಇಂಗ್ಲೀಷ್ ಹಾಗೂ ಕುಡುಬಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಅಜೆಕಾರು ಪೊಲೀಸ್ ಠಾಣೆ ದೂ.ಸಂಖ್ಯೆ: 08253-271100, ಪೊಲೀಸ್ ಉಪನಿರೀಕ್ಷಕರು ಮೊ.ನಂ: 9480805470, 9480805471, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 08258-231083, ಮೊ.ನಂ: 9480805435, ಜಿಲ್ಲಾ ಪೊಲೀಸ್ ಕಚೇರಿ ದೂ.ಸಂಖ್ಯೆ: 0820-2534777ಅನ್ನು ಸಂಪರ್ಕಿಸಬಹುದು ಎಂದು ಅಜೆಕಾರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತ ಭೂಮಿಯಾದರೆ ರೈತರಿಗೆ ಬಿಟ್ಟುಕೊಡಲು ಸರ್ಕಾರ ನಿಶ್ಚಯ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾಹಿತಿ
ಶ್ರೀನಿವಾಸಪುರ 2 : ಹೋರಾಟಗಳ ಮೂಲಕ ಸರ್ಕಾರದ ಗಮನಕ್ಕೆ ತಂದ ಮೇಲೆ ಸರ್ಕಾರ ಮಧ್ಯೆ ಪ್ರವೇಶಿಸಿ ಅರಣ್ಯ ಹಾಗು ಕಂದಾಯ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಿ , ರೈತ ಭೂಮಿಯಾದರೆ ರೈತರಿಗೆ ಬಿಟ್ಟುಕೊಡಲು ಸರ್ಕಾರ ನಿಶ್ಚಿಯಿಸಲಾಯಿತು ಎಂದು ಎಂದು ಜಿಲ್ಲಾ ಅರಣ್ಯಣಾಧಿಕಾರಿ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾಹಿತಿ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರವರನ್ನ ಕೆಲಸದಿಂದ ವಜಾ ಮಾಡಬೇಕು ಹಾಗು ಕ್ರಿಮಿನಲ್ ಮೊಕದ್ದಮೆ ಹಾಕಿ ಬಂದಿಸಬೇಕೆಂದು ಸರ್ಕಾರಕ್ಕೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ರವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದರು.
ಜಿಲ್ಲಾ ಅರಣ್ಯಣಾಧಿಕಾರಿ ಏಡುಕೊಂಡಲು ರವರು ಇತ್ತೀಚಿಗೆ ತಾಲೂಕಿನ 97 ಗ್ರಾಮಗಳ 166 ಸವೇ ನಂಬರ್ಗಳಲ್ಲಿ ಇರತಕ್ಕಂತಹ 25 ಸಾವಿರ ಎಕರೆ ಭೂಮಿಯನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿ, ರೈತರ ಭೂದಾಖಲೆಗಳನ್ನು ಪರಿಶೀಲಿಸದೆ , ಸರ್ಕಾರ ಗಮನಕ್ಕೆ ತರದೆ , ಅರಣ್ಯ ಇಂಡೀಕರಣಕ್ಕಾಗಿ ರಾತ್ರೋತ್ರಿ ಕಾರ್ಯಾಚರಣೆ ನಡೆಸಿ ನೂರಾರು ಜೆಸಿಬಿ ಮೂಲಕ ಹಾಗೂ ನೂರಾರು ಪೊಲೀಸರ ಬಂದೊಬಸ್ತ್ನಲ್ಲಿ ಕಾರ್ಯಾಚರಣೆ ನಡೆಸುತ್ತಾರೆ ಆಕ್ರೋಶ ವ್ಯಕ್ತಪಡಿಸಿದರು.
ಇಂತಹುದರಲ್ಲಿ 70 ವರ್ಷಗಳಿಂದ ಆ ಭೂಮಿಗಳಲ್ಲಿ ಕಷ್ಟಪಟ್ಟು ವ್ಯವಸಾಯ ಮಾಡಿ ಬೆಳಸಿದ ಮರಗಳನ್ನು ಜೆಸಿಬಿ ಮೂಲಕ ಕೆಡವಿಲಾಗಿದೆ. ಕಂದಾಯ ಇಲಾಖಾ ಅಧಿಕಾರಿಗಳಿಂದ ನಾವು ಸರ್ಕಾರದಿಂದ ಕಾನೂನು ರೀತ್ಯ ಪಹಣಿ ,ಪಟ್ಟ ಇತರೆ ಭೂದಾಖಲೆಗಳು ಇಲ್ಲವೂ ಪಡೆದಿದ್ದರು ಸಹ ರೈತರ ಭೂಮಿಯನ್ನು ಕಾರ್ಯಾಚರಣೆ ಮೂಲಕ ಬೆಳೆ ನಾಶಮಾಡುವುದು ಎಷ್ಟು ಸರಿ ಎಂದು ಪ್ರಶ್ನೆಸಿದರು. ಇದು ಸರಿಯಲ್ಲ ನಮ್ಮ ಬಳಿ ಕಂದಾಯ ಇಲಾಖೆಯು ನೀಡಿರುವ ಭೂ ದಾಖಲೆಗಳು ಇದೆ ಎಂದರು ತಿಳಿಸಿದರೂ ಭೂಮಿಯ ಒಳಗೆ ಪ್ರವೇಶ ಮಾಡಲು ಬಿಡಲಿಲ್ಲ ಹಾಗು ಹೈಕೋರ್ಟ್ ನಿಂದ ಸ್ಟೇ ಆರ್ಡರ್ ತಂದರು ಪರಿಗಣಿಸಲಿಲ್ಲ. ಎಂದರು.
ನಂತರ ಹೈಕೋರ್ಟ್ ಜಿಲ್ಲಾ ಸಂರಕ್ಷಣಾಧಿಕಾರಿಗೆ ಯಾವದೇ ದಾಖಲೆಗಳನ್ನು ಪ್ರಸ್ತುತ ಪಡಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ನ ನ್ಯಾಯದೀಶರು ಅಧಿಕಾರಿಗೆ ಛೀಮಾರಿಯನ್ನು ಹಾಕಿದೆ ಎಂಬುದಾಗಿ ಮಾಹಿತಿ ನೀಡಿದರು. ಅಲ್ಲದೆ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಬೇಕೆಂದು ಹೋರಾಟ ಸಮಿತಿಯು ಒತ್ತಾಯಿಸಲಾಗುತ್ತಿದೆ ಎನ್ನುತ್ತಾ, ಕೋರ್ಟ್ನಲ್ಲಿ ಕೇಸು ನಡೆಯುತ್ತಿದ್ದು, ಅರಣ್ಯ ಇಲಾಖೆಯಿಂದ ಯಾವುದೇ ಕಾರಣಕ್ಕೂ ಕಾರ್ಯಾಚರಣೆ ಮಾಡಬಾರದು ಎಂದು ಎಚ್ಚರಿಸಿ, ಮುಂದಿನ ದಿನಗಳಲ್ಲಿ ನಮ್ಮ ಭೂಮಿ ನಮಗೆ ಕೊಡುವ ವ್ಯವಸ್ಥೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್ ಮಾತನಾಡಿ ಅರಣ್ಯ ಇಲಾಖೆಯು ರೈತರ ಜಮೀನನ್ನು ಅಕ್ರಮ ಕಾರ್ಯಚರಣೆಯಿಂದ ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ರೈತರಿಗೆ ವಾಪಸ್ಸು ಕೊಡಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ಅರಣ್ಯ ಇಲಾಖೆಯಿಂದ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಎಚ್ಚರವಹಿಸಿಬೇಕೆಂದು ಒತ್ತಾಯಿಸಿದರು.
ಇದೇ ಸಮಯದಲ್ಲಿ ಪಟ್ಟಣದ ಅರಣ್ಯ ಇಲಾಖಾ ಕಛೇರಿಯಿಂದ ಅರಣ್ಯ ಅಧಿಕಾರಿಯ ವಿರುದ್ಧ ಘೋಷಣೆಗಳನ್ನು ಕೂಗಿ, ರ್ಯಾಲಿಯ ಮೂಲಕ ತಹಶೀಲ್ದಾರ್ ಕಛೇರಿ ಮುಂಭಾಗ ಧರಣಿ ನಡೆಸಿ, ಡಿಎಫ್ಓ ಏಡುಕೊಂಡಲು ರವರ ಬಾವಚಿತ್ರಕ್ಕೆ ಚಪ್ಪಲಿ ಹಾರವನ್ನು ಹಾಕಿ , ಬಾವಚಿತ್ರಕ್ಕೆ ಅಗ್ನಿಸ್ಪರ್ಶ ಮಾಡಿ ಹೋರಾಟಗಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎ.ಸೈಯದ್ಫಾರೂಕ್, ಬಗರ್ ಹುಕಂ ಸಾಗುವಳಿ ಹೋರಾಟ ಸಮಿತಿಯ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಆರ್.ವೆಂಕಟೇಶ್, ಸಹಕಾರ್ಯದರ್ಶಿ ಎನ್.ಮಂಜುಳ, ಹೋರಾಟ ಸಮಿತಿ ಸದಸ್ಯರಾದ ಕೇತಗಾನಹಳ್ಳಿ ನಾಗರಾಜ್, ಪಾಳ್ಯ ಗೋಪಾಲರೆಡ್ಡಿ, ಕೆ.ವಿ.ಆದಿರೆಡ್ಡಿ, ಪಾತಪಲ್ಲಿ ಚೌಡರೆಡ್ಡಿ, ಉಪ್ಪರಪಲ್ಲಿ ಗುಲ್ಜಾರ್ಪಾಷ, ಚಲಪತಿ, ನಾಗರಾಜ್, ಶಂಕರಪ್ಪ ಇದ್ದರು.
ಯಾವುದೇ ಧಾರ್ಮಿಕ ಸ್ಥಳಗಳ, ಶಾಲೆಗಳ ಸಮೀಪ ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ಇಲಾಖೆ ತೆರಯಲು ಅನುಮತಿ ನೀಡದಂತೆ ಗ್ರಾ.ಪಂ.ಮಾಜಿ ಸದಸ್ಯ ರಮೇಶ್ಬಾಬು ಒತ್ತಾಯ
ಶ್ರೀನಿವಾಸಪುರ : ಯಾವುದೇ ಧಾರ್ಮಿಕ ಸ್ಥಳಗಳ , ಶಾಲೆಗಳ ಸಮೀಪ ಯಾವುದೇ ಕಾರಣಕ್ಕೂ ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ತೆರಯಲು ಅನುಮತಿ ನೀಡದಂತೆ ಇಲಾಖೆಯನ್ನು ಗ್ರಾ.ಪಂ.ಮಾಜಿ ಸದಸ್ಯ ರಮೇಶ್ಬಾಬು ಒತ್ತಾಯಿಸಿದರು.
ತಾಲೂಕಿನ ಗೌನಿಪಲ್ಲಿಯ ಧರ್ಗಾದ ಬಳಿ ವಿವಿಧ ಸಮುದಾಯಗಳ ಮುಖಂಡರ ಸಮ್ಮುಖದಲ್ಲಿ ಧರಣಿ ನಡೆಸಿ ಗ್ರಾ.ಪಂ.ಪಿಡಿಒ ನಾರಾಯಣಸ್ವಾಮಿ ರವರಿಗೆ ಮನವಿ ಪತ್ರ ನೀಡಿ ಮಾತನಾಡಿದರು.
ಸುಮಾರು ಒಂದು ವರ್ಷದಿಂದಲೂ ಸಹ ನಿರಂತರವಾಗಿ ತಳ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ , ಆದರೂ ಸಹ ಸಾರ್ವಜನಿಕರ ಮನವಿಗೆ ಸ್ಪಂದಿಸದೆ ಇಲಾಖೆ ಅನುಮತಿ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ಸಂಬಂದಪಟ್ಟ ಅಧಿಕಾರಿಗಳು ಬಂದು ಬಾರ್ ಅಂಡ್ ರೆಸ್ಟೋರೆಂಟ್ನ್ನು ಅನುಮತಿ ಹಿಂಪಡೆಯುವ ತನಕ ಪ್ರತಿಭಟನೆ ಹಿಂಪಡೆಯುವದಿಲ್ಲ ವೆಂದು ಆಗ್ರಹಿಸಿದರು.
ಗ್ರಾಮಸ್ಥ ಅಮ್ಮಜದ್ಖಾನ್ ಮಾತನಾಡಿ ಗ್ರಾಮದಲ್ಲಿ ಎಲ್ಲಾ ಸಮುದಾಯದವರೂ ಜಾತಿ ಮತ ಬೇದವಿಲ್ಲದೆ ಭಾತೃತ್ವದ ಬಾವದೊಂದಿಗೆ ಇದ್ದೇವೆ. ಆದರೆ ಇಂದು ಎಲ್ಲಾ ಸಮುದಾಯಕ್ಕೂ ಬೇಕಾಗಿರುವ ಧಾರ್ಮಿಕ ಕ್ಷೇತ್ರವಾದ ಧರ್ಗಾದ ಬಳಿ ಬಾರ್ ಅಂಡ್ ರೆಸ್ಟೋರೆಂಟ್ಗೆ ಅಧಿಕಾರಿಗಳು ಅನುಮತಿ ನೀಡಿರುವುದು ಖಂಡನೀಯ . ಇಲ್ಲಿ ಯಾವುದೇ ಕಾರಣಕ್ಕೂ ಗ್ರಾಮಸ್ಥರ ಸಹಯೋಗದೊಂದಿಗೆ ಇಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ಗೆ ಪ್ರಾರಂಭಿಸಲು ಬಿಡುವುದಿಲ್ಲ ಎಂದು ಹೇಳಿದರು.
ಗ್ರಾ.ಪಂ.ಮಾಜಿ ಸದಸ್ಯ ಎಚ್.ಆರ್.ಹರಮತ್ತುಲ್ಲಾ, ಮುಖಂಡರಾದ ಎ.ಅಮೀರ್ಜಾನ್, ಜಿ.ಕೆ.ಸುಬ್ರಮಣಿ, ಆರೀಪ್, ಬಾಬು, ಅಮೀರ್ಜಾನ್, ಶೌಕತ್ಪಾಷ, ಅಯಾಜ್, ನವೀದ್ಪಾಷ, ಮಾಲಿಕ್ಪಾಷ, ಜಿ.ಕೆ.ಮಹಮ್ಮದ್ ರಫಿ ಇದ್ದರು.
ಕುಂದಾಪುರ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ
ಕುಂದಾಪುರ, ಫೆ.28: ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ಇಲ್ಲಿ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯನ್ನು ನಡೆಸಲಾಯಿತು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಡೋರಾ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಮತ್ತು ಪ್ರೀತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ತೀರ್ಪುಗಾರರಾಗಿ ಸಂತ ಮೇರಿಸ್ ಸಂಸ್ಥೆಗಳ ವಿಜ್ಞಾನ ಶಿಕ್ಷಕಿಯರಾದ ಸ್ಮಿತಾ ಡಿಸೋಜ, ರಮ್ಯ, ಪ್ರಫುಲ್ಲ ಮತ್ತು ಪಲ್ಲವಿ ಇವರು ಆಗಮಿಸಿ ವಿದ್ಯಾರ್ಥಿಗಳು ಸಿಧ್ಧಪಡಿಸಿದ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಸಹಕರಿಸಿದರು. ಶಿಕ್ಷಕಿ ಶಾಂತಿ ರಾಣಿ ಸ್ವಾಗತಿಸಿ, ಶಿಕ್ಷಕಿಯರಾದ ಜ್ಯೋತಿ ಡಿಸಿಲ್ವಾ, ಗೀತಾ ನೊರೊನ್ಹಾ, ಸುರೇಖಾ ಸಹಕರಿಸಿದರು.
ಗುಜರಾತ್ ಕರಾವಳಿಯಲ್ಲಿ ಭಾರೀ ಬೆಲೆಯ ಚರಸ್, ಮೆಥಾಂಫೆಟಮೈನ್, ಮಾರ್ಫಿನ್ ವಶಪಡಿಸಿಕೊಂಡ ನೌಕಾಪಡೆ
ಪೋರಬಂದರ್: ಜಂಟಿ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮಂಗಳವಾರ ಗುಜರಾತ್ನ ಪೋರಬಂದರ್ ಬಳಿ ಹಡಗೊಂದರಿಂದ ಸುಮಾರು 3,300 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದೆ. ಇದು ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಮಾದಕವಸ್ತುಗಳಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಮಂಗಳವಾರ, ನೌಕಾಪಡೆಯು ಸಣ್ಣ ಹಡಗನ್ನು ತಡೆದು 3089 ಕೆಜಿ ಚರಸ್, 158 ಕೆಜಿ ಮೆಥಾಂಫೆಟಮೈನ್ ಮತ್ತು 25 ಕೆಜಿ ಮಾರ್ಫಿನ್ ಅನ್ನು ವಶಪಡಿಸಿಕೊಂಡಿದೆ. ಹಡಗಿನ ಐವರು ಸಿಬ್ಬಂದಿ, ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ.
ವಶಪಡಿಸಿಕೊಂಡ ಡ್ರಗ್ಸ್ನ ಒಟ್ಟು ಮೌಲ್ಯವನ್ನು ಅಧಿಕಾರಿಗಳು ಇನ್ನೂ ನಿರ್ದಿಷ್ಟಪಡಿಸದಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಚರಸ್ನ ಬೆಲೆ ₹ 7 ಕೋಟಿ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿದೆ.
ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ ಬಳಿ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪೋರಬಂದರ್ ಬಳಿ ಸಮುದ್ರದಲ್ಲಿ ಅನುಮಾನಾಸ್ಪದ ಧೋವ್ (ನೌಕಾಯಾನ ಹಡಗು) ಕಣ್ಗಾವಲು ವಿಮಾನದ ಮೂಲಕ ಕಂಡುಬಂದಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.