ಕೇಂದ್ರ ಸರ್ಕಾರದ ಅಧೀನದಲ್ಲಿರುವ ನ್ಯಾಷನಲ್ ಕ್ರೈಮ್ ಬ್ಯುರೋ ವರದಿ ಪ್ರಕಾರ, ಕಳೆದ ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕದಲ್ಲಿ ಮಹಿಳೆಯರ ಮೇಲೆ ನಡೆದ 17,813 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅದರ ಹಿಂದಿನ ವರ್ಷ 2021ರಲ್ಲಿ 14, 468 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು. ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಏನು ಮಾಡುತ್ತಿದ್ದರು? ವನವಾಸದಲ್ಲಿದ್ದರಾ? ಎಂದು ಪ್ರಶ್ನಿಸಿದರು.
ಬೆಳಗಾವಿ ಮಹಿಳೆಯೊಬ್ಬರ ಮೇಲೆ ನಡೆದ ದೌರ್ಜನ್ಯದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ಸಾಲುಸಾಲು ದೌರ್ಜನ್ಯದ ಪ್ರಕರಣಗಳು ನಡೆಯುತ್ತಿದ್ದಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಕಣ್ಣು ಮುಚ್ಚಿ ಕೂತಿದ್ದರು. ಆದರೆ ಬೆಳಗಾವಿಯಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಮಾತ್ರ ಅವರ ಕಣ್ಣಿಗೆ ಕಂಡಿದ್ದು, ಅದರಲ್ಲಿ ರಾಜಕೀಯ ಬೇಳೆ ಬೇಯಿಸಲು ಮುಂದಾಗಿದ್ದಾರೆ’ ಎಂದರು.