ಶೈಕ್ಷಣಿಕ ಇತಿಹಾಸದಲ್ಲೇ ಇದೇ ಮೊದಲು-ದ್ವಿತೀಯ ಪಿಯುಸಿಗೆ 2ನೇ ಪೂರಕ ಪರೀಕ್ಷೆ – ನೋಂದಣಿ-ಅಕ್ರಂ ಪಾಷಾ

ಕೋಲಾರ:- ಶೈಕ್ಷಣಿಕ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿಗೆ 2ನೇ ಪೂರಕ ಪರೀಕ್ಷೆ ನಡೆಸಲು ಸರ್ಕಾರ ಆದೇಶಿಸಿದ್ದು, ಅದರಂತೆ ಆ.21 ರಿಂದ ಜಿಲ್ಲೆಯ ಒಟ್ಟು 6 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿರುವುದರಿಂದ ಸಕಲ ಸಿದ್ದತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕಳೆದ ಮಾರ್ಚ್ ವಾರ್ಷಿಕ ಪರೀಕ್ಷೆ, ಮೇ ಪೂರಕ ಪರೀಕ್ಷೆ ಹಾಗೂ ಹಿಂದಿನ ವರ್ಷಗಳಲ್ಲಿ ದ್ವಿತೀಯ ಪಿಯುಸಿ ಅನುತ್ತೀರ್ಣರಾದ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದು, ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್,ಮುಳಬಾಗಿಲು ಮತ್ತು ಶ್ರೀನಿವಾಸಪುರಗಳಲ್ಲಿ ತಲಾ ಒಂದೊಂದು ಕೇಂದ್ರದಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸುಗಮ ಪರೀಕ್ಷೆಗಾಗಿ ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದ್ದು, ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯಗಳ ಕುರಿತು ಗಮನಹರಿಸಲಾಗಿದೆ ಎಂದು ತಿಳಿಸಿದ್ದಾರೆ.

200ಮೀ.ವ್ಯಾಪ್ತಿ ನಿಷೇಧಾಜ್ಞೆ ಜಾರಿ


ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದು, ಈ ಭಾಗದಲ್ಲಿನ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ನಡೆಯುವ ಸಂದರ್ಭದಲಿ ಬಂದ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ಗುರುತಿನ ಚೀಟಿ ಹೊಂದಿರುವ ಪರೀಕ್ಷಾ ಸಿಬ್ಬಂದಿ,ಪ್ರವೇಶಪತ್ರ ಇರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್, ಕೈಗಡಿಯಾರ, ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದಕ್ಕೂ ನಿಷೇಧವಿದ್ದು, ಮುಖ್ಯ ಅಧೀಕ್ಷಕರು ಮಾತ್ರ ಬೇಸಿಕ್ ಸೆಟ್ ಮೊಬೈಲ್ ಬಳಸಲು ಅವಕಾಶವಿದೆ, ಇತರೆ ಪರೀಕ್ಷಾ ಸಿಬ್ಬಂದಿಯೂ ಮೊಬೈಲ್ ತರುವಂತಿಲ್ಲ, ಪರೀಕ್ಷಾ ಕೇಂದ್ರಗಳಿಗೆ ಫೋಟೋಗ್ರಾಫರ್, ವೀಡಿಯೋ ಗ್ರಾಫರ್‍ಗಳಿಗೂ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕಾರ್ಯಕ್ಕೆ ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸಕರನ್ನು ಆಯಾ ದಿನ ನೇಮಿಸಿಕೊಳ್ಳಬಾರದು ಎಂದು ತಿಳಿಸಿರುವ ಅವರು, ಪರೀಕ್ಷಾ ದುರಾಚಾರಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ಮಾತನಾಡಿ, ಸುಗಮ ಪರೀಕ್ಷೆಗಾಗಿ ಕೇಂದ್ರ ಕಚೇರಿಯ ಜಾಗೃತದಳ, ಉಪನಿರ್ದೇಶಕರ ಕಚೇರಿಯ ಜಾಗೃದಳ, ಪದವಿ ಪೂರ್ವ ಶಿಕ್ಷಣ ಇಲಾಖೆಯ ತಾಲ್ಲೂಕು ಜಾಗೃದಳ ಹಾಗೂ ಪ್ರತಿ ಕೇಂದ್ರಕ್ಕೂ ಸ್ಥಾನಿಕ ಜಾಗೃತಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.

ವೇಳಾಪಟ್ಟಿ ಪ್ರಕಟ


ಆ.21 ಕನ್ನಡ, ಆ.22 ರಂದು ಐಚ್ಚಿಕ ಕನ್ನಡ, ರಸಾಯನ ಶಾಸ್ತ್ರ, ಬೇಸಿಕ್ ಗಣಿತ, ಆ.23 ರಂದು ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಆ.24 ರಂದು ಲಾಜಿಕ್, ಹಿಂದೂಸ್ತಾನಿ ಮ್ಯೂಸಿಕ್, ಬ್ಯುಸಿನೆಸ್ ಸ್ಟಡೀಸ್, ಆ.25 ರಂದು ಇತಿಹಾಸ, ಸ್ಟಾಟಿಸ್ಟಿಕ್ಸ್, ಆ.26 ರಂದು ಇಂಗ್ಲೀಷ್, ಆ.28 ರಂದು ಜಿಯಾಗ್ರಫಿ, ಪಿಸಿಯಾಲಜಿ, ಭೌತಶಾಸ್ತ್ರ, ಆ.29 ರಂದು ಅಕೌಂಟೆನ್ಸಿ, ಜಿಯಾಲಜಿ, ಎಜುಕೇಷನ್, ಹೋಂ ಸೈನ್ಸ್, ಆ.30 ರಂದು ರಾಜ್ಯಶಾಸ್ತ್ರ ಮತ್ತು ಗಣಿತ, ಜೂ.1 ರಂದು ಲಾಜಿಕ್, ಹಿಂದೂಸ್ತಾನಿ ಮ್ಯೂಸಿಕ್, ಬಿಸಿನೆಸ್ ಸ್ಟಡೀಸ್, ಆ.31 ರಂದು ಹಿಂದಿ, ಸೆ.1 ರಂದು ಅರ್ಥಶಾಸ್ತ್ರ, ಬಯಾಲಜಿ, ಆ.2 ರಂದು ತಮಿಳು, ತೆಲುಗು, ಮಲಯಾಳಂ,ಮರಾಠಿ, ಉರ್ದು, ಸಂಸ್ಕøತ, ಫ್ರೇಂಚ್ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಪರೀಕ್ಷೆ ಬರೆಯಲು ಸಲಹೆ ನೀಡಿರುವ ಅವರು, ಸರ್ಕಾರ ಒಂದು ಶೈಕ್ಷಣಿಕ ವರ್ಷದಿಂದ ಮಕ್ಕಳು ವಂಚಿತರಾಗಬಾರದು ಎಂದು ಕಲ್ಪಿಸಿರುವ ಈ ಸುವರ್ಣಾವಕಾಶವನ್ನು ಬಳಸಿಕೊಂಡು ಉತ್ತೀರ್ಣರಾಗಿ ಮುಂದಿನ ಕಲಿಕೆ ಮುಂದುವರೆಸಲು ತಿಳಿಸಿ ಶುಭ ಕೋರಿದ್ದಾರೆ.

ಕುಂದಾಪುರದಲ್ಲಿ “ಜ್ಞಾನೋದಯ” ಸ್ಪರ್ಧೆ

ಭಂಡಾರ್‍ಕಾರ್ಸ್ ಪ.ಪೂ.ಕಾಲೇಜು ಕುಂದಾಪುರ ಹಾಗೂ ಕುಂದಪ್ರಭ ಸಂಸ್ಥೆಯ ಸಹಯೋಗದಲ್ಲಿ “ಜ್ಞಾನೋದಯ” ಎಂಬ ಸಾಮಾನ್ಯ ಜ್ಞಾನ ಸ್ಪರ್ಧೆ ಸೆ.9 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಭಂಡಾರ್‍ಕಾರ್ಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದ್ದು ಪ್ರತಿಯೊಂದು ಪ್ರೌಢಶಾಲೆಯಿಂದ ಕನಿಷ್ಟ 5 ಹಾಗೂ ಗರಿಷ್ಟ 10 ಮಂದಿ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ.
ಈ ಸಾಮಾನ್ಯಜ್ಞಾನ ಸ್ಪರ್ಧೆ ಕುಂದಾಪುರ-ಬೈಂದೂರು ತಾಲೂಕಿನ ವಿಷಯದಲ್ಲೇ ನಡೆಯುತ್ತದೆ. ಸ್ಪರ್ಧೆಯ ಪ್ರಶ್ನೆಗಳು ತಾಲೂಕಿನ ಪ್ರಕೃತಿ, ಭೌಗೋಳಿಕ, ಇತಿಹಾಸ, ರಾಜಕೀಯ, ವೃತ್ತಿ, ಉದ್ಯಮ, ಸಾಹಿತ್ಯ, ಸಂಗೀತ, ಸಂಸ್ಕøತಿ, ಚಲನಚಿತ್ರ, ಮಹಾಪುರುಷರು, ನದಿ, ಸಾಗರ ವಿಷಯಗಳೊಂದಿಗೆ ನಿತ್ಯೋಪಯೋಗಿ ವಸ್ತುಗಳು ಹೂವು, ಹಣ್ಣು ಆಹಾರ ಪದಾರ್ಥಗಳ ಬಗ್ಗೆಯೂ ಇರುತ್ತದೆ. ಹೆಚ್ಚು ಅಂಕ ಪಡೆದ ಶಾಲೆಗೆ “ಜ್ಞಾನೋದಯ ಪಾರಿತೋಷಕ” ನೀಡಲಾಗುತ್ತದೆ. ವೈಯಕ್ತಿಕವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಆಕರ್ಷಕ ಬಹುಮಾನದೊಂದಿಗೆ ಗೌರವ ನೀಡಲಾಗುತ್ತದೆ. ಪ್ರಥಮ 25 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗುತ್ತದೆ. ಭಾಗವಹಿಸುವವರು ಡಾ. ಜಿ. ಎಂ. ಗೊಂಡ, ಪ್ರಾಂಶುಪಾಲರು, “ಜ್ಞಾನೋದಯ ಸ್ಪರ್ಧೆ”, ಭಂಡಾರ್‍ಕಾರ್ಸ್ ಪ.ಪೂ. ಕಾಲೇಜು ಕುಂದಾಪುರ-576201 ಇವರಿಗೆ ಆಗಸ್ಟ್ 31ರೊಳಗೆ ಹೆಸರು ಕಳುಹಿಸಿಕೊಡಬೇಕೆಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ತಿಳಿಸಿದ್ದಾರೆ.

ನೇತ್ರದಾನದ ಮೂಲಕ  ಹಲವರ ಬಾಳಿಗೆ ಬೆಳಕಾದ ಉಡುಪಿಯ ಹೋಟೆಲ್ ಸಿಬ್ಬಂದಿ

ಉಡುಪಿ: ತನ್ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಹೋಟೆಲ್ ಸಿಬ್ಬಂದಿಯೊಬ್ಬರು ಸಾವಿನಲ್ಲು ಸಾರ್ಥಕತೆ ಮೆರೆದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಕಾಪು ತಾಲೂಕು ಶಿರ್ವ ಮಂಚಕಲ್ ನಿವಾಸಿ ಪಾಂಡುರಂಗ ಪ್ರಭು ಕೆಲವು ವರ್ಷಗಳಿಂದ ಬಂಟಕಲ್ ನ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು‌. 

ಅಲ್ಪಕಾಲದ ಅನಾರೋಗ್ಯದಿಂದ ಪಾಂಡುರಂಗ ಪ್ರಭು ಕೊನೆಯುಸಿರೆಳೆದಿದ್ದಾರೆ. ಜೀವಿತಾವಧಿಯಲ್ಲೇ ಪ್ರಭು ಅವರು ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ತನ್ನ ನಿರ್ಧಾರದಂತೆ ಕುಟುಂಬಸ್ಥರ ಇಚ್ಛೆಯಂತೆ ಈ ವಿಚಾರವನ್ನು ಉಡುಪಿಯ ಪ್ರಸಾದ್ ನೇತ್ರಾಲಯ ಆಸ್ಪತ್ರೆಗೆ ತಲುಪಿಸಲಾಯ್ತು. ಮೃತ ದೇಹದಿಂದ ಕಣ್ಣುಗಳನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮಾಡಿ ಬೇರ್ಪಡಿಸಲಾಯಿತು. ಕುಟುಂಬದ ಸದಸ್ಯ, ಉಡುಪಿಯ ಖಾಸಗಿ ವಾಹಿನಿ ಸ್ಪಂದನದಲ್ಲಿ ಉದ್ಯೋಗಿಯಾಗಿರುವ ಸುದರ್ಶನ್ ಪ್ರಭು ಅವರಿಗೆ ಸರ್ಟಿಫಿಕೇಟನ್ನು ಹಿರಿಯ ವೈದ್ಯ ಡಾ. ನಿತ್ಯಾನಂದ ನಾಯಕ್ ಹಸ್ತಾಂತರ ಮಾಡಿದರು.

ಸಮಾಜ ಸೇವಕ ನಿತ್ಯಾನಂದ ಒಳಕಾಡು ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲು ಸಹಾಯ ಮಾಡಿದರು. ಕಣ್ಣುಗಳ ಅವಶ್ಯಕತೆ ಇದ್ದರೂ ನೇತ್ರದಾನ ಮಾಡುವವರ ಸಂಖ್ಯೆ ಬಹಳ ಕಡಿಮೆ ಇದೆ. ಪಾಂಡುರಂಗ ಪ್ರಭು ಮತ್ತು ಮುಟುಂಬದವರ ಕಾಳಜಿ ಸಮಾಜಮುಖಿ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಇನ್ನೊಬ್ಬರ ಬಾಳಿಗೆ ದೃಷ್ಟಿ ನೀಡುವ ಕೆಲಸವನ್ನು ಮಾಡಿದ್ದಾರೆ ಎಂದು ನಿತ್ಯಾನಂದ ಒಳಕಾಡು ಮೆಚ್ಚುಗೆ ವ್ಯಕ್ತಪಡಿದ್ದಾರೆ

ಬಿಯರ್‌ ಪ್ರಿಯರೇ ಜಾಗ್ರತೆ : ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ

ಬೆಂಗಳೂರು, ಆ 17 ಬಿಯರ್ ಪ್ರಿಯರು ಬಹುಮುಖ್ಯವಾದ ವಿಚಾರ ಇದಾಗಿದ್ದು, ಪ್ರತಿಷ್ಠಿತ ಕಿಂಗ್ ಫಿಶರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮೈಸೂರಿನ ನಂಜನಗೂಡಿನ ಘಟಕದಲ್ಲಿ ತಯಾರಿಸಲಾಗಿದ್ದ ಯುನೈಟೆಡ್‌ ಬ್ರಿವರೀಸ್‌ ಕಂಪನಿಯ ಕಿಂಗ್‌ ಫಿಶರ್‌ ಬಿಯರ್‌ನಲ್ಲಿ ಈ ಅಪಾಯಕಾರಿ ಅಂಶ ಪತ್ತೆಯಾಗಿದ್ದು, 25 ಕೋಟಿ ರೂ. ಮೌಲ್ಯದ 78,678 ಬಾಕ್ಸ್‌ ಬಿಯರ್‌ ಅನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಗುಣಮಟ್ಟದ ಬಿಯರ್‌ ತಯಾರಿಸದ ಈ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಈ ಬಿಯರ್‌ನಲ್ಲಿ ಸೆಡಿಮೆಂಟ್‌ ಪತ್ತೆಯಾಗಿತ್ತು. ಈ ಮಾಹಿತಿ ತಿಳಿದ ಕೂಡಲೇ ಬಿಯರ್ ಸ್ಯಾಂಪಲ್ ಅನ್ನು ಕೆಮಿಕಲ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಈ ಕುರಿತು 2-08-2023ರಂದು ಕೆಮಿಕಲ್ ವರದಿ ಬಂದಿದ್ದು, ವರದಿಯಲ್ಲಿ ಈ ಬಿಯರ್ ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಲಾಗಿದೆ.

ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್ ನಲ್ಲಿಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಈ ಬಿಯರ್‌ ಕುಡಿಯಲು ಯೋಗ್ಯವಲ್ಲದ ಕಾರಣ ಮಾರುಕಟ್ಟೆಯಲ್ಲಿರುವ ಈ ಬ್ಯಾಚ್‌ನ ಬಿಯರ್‌ಗೂ ತಡೆ ನೀಡಲಾಗಿದೆ.

ಮೂಡ್ಲಕಟ್ಟೆ ಐಎಂಜೆ ಸಮೂಹ ಸಂಸ್ಥೆಗಳಿಂದ ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆ

ಮೂಡ್ಲಕಟ್ಟೆ ಐಎಂಜೆ ಸಮೂಹ ಸಂಸ್ಥೆಗಳು ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಚಲವಾದ ದೇಶಭಕ್ತಿ ಮತ್ತು ಹೆಚ್ಚಿನ ಉತ್ಸಾಹದಿಂದ ಆಚರಿಸಲಾಯಿತು. ಮೂಡಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಅವರು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಜೆನ್ನಿಫರ್ ಫ್ರೀಡಾ ಮಿನೇಜಸ್ ಮತ್ತು ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಪ್ರಾಂಶುಪಾಲೆ ಡಾ.ಪ್ರತಿಭಾ ಎಂ ಪಟೇಲ್ ಉಪಸ್ಥಿತಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಅವರು ತಮ್ಮ ಸ್ವಾತಂತ್ರ್ಯ ದಿನದ ಸಂದೇಶದಲ್ಲಿ, ಎರಡು ಶತಮಾನದ ಬ್ರಿಟಿಷರ ದುರಾಡಳಿತದ ವಿರುದ್ಧದ ಹೋರಾಟದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ವಿವರಿಸಿದರು. ನಮಗೆ ಸ್ವಾತಂತ್ರ್ಯ ಮತ್ತು ಉತ್ತಮ ಜೀವನವನ್ನು ನೀಡುವ ಏಕೈಕ ಉದ್ದೇಶದಿಂದ ನಮ್ಮ ದೇಶದ ಅನೇಕ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ನಮ್ಮ ದೇಶವು ಪ್ರಜಾಪ್ರಭುತ್ವದ ತಾಯಿ ಆಗುವ ಹಾಗೆ ಮಾಡಿದರು ಎಂದು ಅವರು ಹೇಳಿದರು.

ಸ್ವಾತಂತ್ರೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ನಮ್ಮನ್ನು ಅರ್ಪಿಸಿಕೊಳ್ಳುವ ಪ್ರತಿಜ್ಞೆಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಕಾರ್ಯಕ್ರಮವನ್ನು ಅದ್ಭುತವಾಗಿ ಆಯೋಜಿಸಲ ಶ್ರಮಿಸಿದ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಬ್ರಾಂಡ್ ಬಿಲ್ಡಿಂಗ್ ನಿದೇರ್ಶಕರಾದ ಡಾ.ರಾಮಕೃಷ್ಣ ಹೆಗಡೆ ಉಪ ಪ್ರಾಂಶುಪಾಲರುಗಳಾದ ಪ್ರೊ. ಮೆಲ್ವಿನ್ ಡಿ ಸೋಜಾ, ಶ್ರೀ ಜಯಶೀಲ್ ಕುಮಾರ ,ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದರು. ಐಎಂಜೆ ಘಟಕ ಸಂಸ್ಥೆಗಳ ಸಂಯೋಜನೆಯೊಂದಿಗೆ ನೃತ್ಯ, ದೇಶಭಕ್ತಿ ಗೀತೆಗಳು ಮುಂತಾದ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಟಿ.ವಿ.ನಾಗೇಶ್‌ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಭಾರತಮ್ಮ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಟಿ.ವಿ.ನಾಗೇಶ್‌ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಭಾರತಮ್ಮ ಆಯ್ಕೆಯಾಗಿದ್ದಾರೆ.

  ಗ್ರಾಮ ಪಂಚಾಯಿತಿ ಒಟ್ಟು ಸದಸ್ಯರ ಸಂಖ್ಯೆ 17 ಆಗಿದ್ದು ಇಬ್ಬರು ಅಭ್ಯರ್ಥಿಗಳು ಗೈರಾಗಿದ್ದರು. ಹಾಗಾಗಿ ಟಿ.ವಿ.ನಾಗೇಶ್‌ರೆಡ್ಡಿ 11 ಮತ ಪಡೆದು ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಮಂಗಳ 4 ಮತ ಪಡೆದಿದ್ದಾರೆ. ಭಾರತಮ್ಮ 11 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಶಿಲ್ಪ 4 ಮತ ಪಡೆದಿದ್ದಾರೆ.

  ಚುನಾವಣಾಧಿಕಾರಿ ಗಣೇಶ್, ಪಿಡಿಒ ವಿನೋಧ ಚುನಾವಣಾ ಕರ್ತವ್ಯ ನಿರ್ವಹಿಸಿದರು.

  ಚುನಾವಣೆ ಬಳಿಕ ನಡೆದ ವಿಜಯೋತ್ಸವದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಮುಖಂಡರಾದ ದಡಮಲದೂಡ್ಡಿ ಜಿ.ಎಸ್.ಆರ್ ಶ್ರೀನಾಥರೆಡ್ಡಿ, ಕೆ.ಎನ್.ಶಂಕರರೆಡ್ಡಿ, ಲಕ್ಷö್ಮಣರೆಡ್ಡಿ, ನಾರಾಯಣಸ್ವಾಮಿ ಭಾಗವಹಿಸಿದ್ದರು.

ಅಕ್ರಮ ಭೂ ಮಂಜೂರಾತಿ ಪರಿಶೀಲನೆಗೆ 14 ಜನರ ತಂಡದ ಸಮಿತಿ ರಚನೆ : ಜಿಲ್ಲಾಧಿಕಾರಿ ಅಕ್ರಂ ಪಾಷ

ಕೋಲಾರ : ಜಿಲ್ಲೆಯಲ್ಲಿ ಅಕ್ರಮ ಭೂ ಮಂಜೂರಾತಿ ಮಾಡಿರುವ ಪ್ರಕರಣಗಳನ್ನು ಪರಿಶೀಲಿಸಲು 14 ಜನರ ತಂಡದ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅವರು ತಿಳಿಸಿದರು. 

ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹಾಗೂ ಕೋಲಾರ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. 

ಭೂಮಿ ಮಾನಿಟರಿಂಗ್ ಸೆಲ್‌ನಿಂದ ಕಳೆದ 10 ವರ್ಷಗಳಿಂದ ಸರ್ಕಾರದಿಂದ ಮಂಜೂರು ಮಾಡಲ್ಪಟ್ಟ ಜಾಗಗಳ ಸಮೂಲಾಗ್ರ ಮಾಹಿತಿಯನ್ನು ಸಮಿತಿಗೆ ನೀಡಲಿದೆ . ಸಮಿತಿಯು ಭೂ ಲಭ್ಯತಾ ಪಟ್ಟಿ ಅನುಸಾರ ಮಂಜೂರು ಮಾಡಲಾದ ಭೂಮಿಗಳ ವಿವರಗಳನ್ನು ಸಂಗ್ರಹಿಸುತ್ತದೆ . ಈವರೆಗೆ ಮಂಜೂರು ಮಾಡಲಾದ ಜಮೀನುಗಳು ಸಕ್ರಮವಾಗಿವೆ ಅಥವಾ ಇಲ್ಲವೇ ಎಂಬುದನ್ನು ಈ ಸಮಿತಿಯು ಪರಿಶೀಲಿಸಲಿದೆ .

ಮಂಜೂರಾತಿ ದಾಖಲೆಗಳ ನೈಜತೆ , ಸಾಗುವಳಿ ಮಂಜೂರಾತಿ ನಿಯಮಗಳ ಪಾಲನೆ , ಸರ್ಕಾರಿ ಜಮೀನುಗಳ , ಅರಣ್ಯ ಜಮೀನುಗಳ , ವಕ್ಫ್‌ ಬೋರ್ಡ್‌ನ ಜಮೀನುಗಳ , ಮುಜರಾಯಿ ಜಮೀನುಗಳ , ಗೋಮಾಳಗಳ ಹಾಗೂ ನಗರಸಭೆ ಜಮೀನುಗಳ ಒತ್ತುವರಿ ಬಗ್ಗೆಯೂ ಸಹ ಈ ಸಮಿತಿಯು ಅಧ್ಯಯನ ನಡೆಸಲಿದೆ . ನಿಯಮಾವಳಿಗಳ ಈಗಾಗಲೇ ಮಂಜೂರಾಗಿರುವ ಜಮೀನುಗಳಲ್ಲಿ ಯಾವುದೇ ಉಲ್ಲಂಘನೆಯಾಗಿದ್ದಲ್ಲಿ ಅದರ ವಿವರಗಳನ್ನು ಸಹ ಸಮಿತಿಯು ಕಲೆ ಹಾಕಲಿದೆ . 

ಭೂಮಿ ಮಾನಿಟರಿಂಗ್ ಸೆಲ್‌ನ ವರದಿಯಂತೆ ರಾಜಧಾನಿಗೆ ಹತ್ತಿರವಿರುವ ಕೋಲಾರದಲ್ಲಿ ಅಭಿವೃದ್ಧಿ ಪೂರಕ ವಾತಾವರಣವಿರುವುದರಿಂದ ಹಾಗೂ ಪ್ರಸ್ತುತ ಬೆಂಗಳೂರು ಚೆನ್ನೈ ಕಾರಿಡಾರ್ ಅಭಿವೃದ್ಧಿಯಾಗುತ್ತಿರುವುದರಿಂದ ಈ ಭಾಗದಲ್ಲಿ ಕೈಗಾರಿಕಾ ಕೇಂದ್ರಗಳ ಸ್ಥಾಪನೆ , ಹೊಸ ಟೌನ್‌ಶಿಪ್‌ಗಳ ನಿರ್ಮಾಣ ಮುಂತಾದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಹಲವು ಒತ್ತಡಗಳಿಂದ ಭೂ ಮಂಜೂರಾತಿ ಮಾಡುವಾಗ ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸಿರುವ ಸಾಧ್ಯತೆ ಇರುತ್ತದೆ. 

ಈ ಹಿನ್ನೆಲೆಯಲ್ಲಿ ಸರ್ಕಾರದ ಜಮೀನಿನ ಸಮರ್ಪಕ ಹಂಚಿಕೆ ಹಾಗೂ ಸ್ಪಷ್ಟ ದಾಖಲೆಗಳನ್ನು , ಮೂಟೇಶನ್ ವಿವರಗಳನ್ನು ಅಕ್ರಮವಾಗಿ ಮಂಜೂರು ಮಾಡಿದ ಜಮೀನನ್ನು ಸಕ್ರಮ ಮಾಡುವ ವಿಧಾನ ಇವುಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ವರದಿ ನೀಡುವ ಸಲುವಾಗಿ ಈ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು. 

ಸಂಬಂಧಪಟ್ಟ ತಾಲ್ಲೂಕಿನ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಮಾಹಿತಿಯ ದತ್ತಾಂಶವನ್ನು ಭೂಮಿ ಸಮಾಲೋಚಕರ ಸಮನ್ವಯತೆಯೊಂದಿಗೆ ಭೂಮಿ ಉಸ್ತುವಾರಿ ಕೋಶದಿಂದ ಪಡೆದು ತಂತ್ರಾಂಶದಲ್ಲಿ ಸಮಾಲೋಚಕರ ಪರಿಶೀಲಿಸುವುದು . ಭೂ ಮಂಜೂರಾತಿ ಮಾಡಿರುವ ಪ್ರಕರಣಗಳು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94 ಎ , 94 ಬಿ , ಮತ್ತು 94 ಎ ( 4 ) ರ ನಿಯಮಾವಳಿಗಳನ್ವಯ ಅರ್ಹ ಪ್ರಕರಣಗಳೇ ಎಂಬ ಬಗ್ಗೆ ಕಡತ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವುದು . 

ಭೂ ಮಂಜೂರಾತಿಯು ನಿಯಮಬಾಹಿರ ಎಂದು ಕಂಡುಬಂದಲ್ಲಿ , ಪ್ರಕರಣಗಳಲ್ಲಿ ಗಮನಿಸಿರುವ ಲೋಪಗಳ ಕುರಿತು ಸ್ಪಷ್ಟವಾಗಿ ವಿವರಣೆ ನೀಡುವುದು . ಆಯಾ ತಾಲ್ಲೂಕು ಭೂಮಿ ಕೇಂದ್ರದ ಭೂಮಿ ತಂತ್ರಾಂಶದಲ್ಲಿ ಭೂಮಂಜುರಾತಿ ಪ್ರಕ್ರಿಯೆಯನ್ನು ಕ್ರಮಬದ್ದವಾಗಿ ನಿರ್ವಹಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು . ನಿಯಮಬಾಹಿರ ಎಂದು ಕಂಡುಬಂದಲ್ಲಿ ಪ್ರಕರಣಗಳಲ್ಲಿ ಗಮನಿಸಲಾಗಿರುವ ಅಂಶಗಳ ಬಗ್ಗೆ ವರದಿ ನೀಡುವುದು ಮುಂತಾದ ಜವಾಬ್ದಾರಿಗಳನ್ನು ಸಮಿತಿಗೆ ವಹಿಸಲಾಗಿದೆ . 

ಕಛೇರಿ ಹಾಗೂ ಕಾರ್ಯನಿರ್ವಾಹಕ ಸಿಬ್ಬಂದಿಗಳಿಗೆ ಕಾರ್ಯ ಹಂಚಿಕೆ ಹಾಗೂ ವೃತ್ತ ಮತ್ತು ಹೋಬಳಿಗಳಿಗೆ ನಿಯೋಜಿಸಿರುವ ಕುರಿತಂತೆ ಕಛೇರಿಯಿಂದ ಹೊರಡಿಸಲಾಗಿರುವ ಹಿಂದಿನ ಹಾಗೂ ಪ್ರಸಕ್ತ ಸಾಲಿನ ಅದೇಶ , ಅಧಿಕೃತ ಜ್ಞಾಪನ , ಅಧಿಸೂಚನೆಗಳ ಪ್ರತಿಯನ್ನು ತನಿಖಾ ತಂಡಕ್ಕೆ ನೀಡುವುದು . ತನಿಖಾ ತಂಡವು ಕೋರುವ ಕಡತಗಳು ಹಾಗೂ ಅಗತ್ಯ ದಾಖಲಾತಿಗಳನ್ನು ತಪ್ಪದೇ ಹಾಜರುಪಡಿಸುವುದು . 

ತನಿಖಾ ತಂಡವು ಕೋರುವ ಕಡತ ಹಾಗೂ ದಾಖಲಾತಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ವಹಿ ನಿರ್ವಹಿಸಿ , ಸದರಿ ವಹಿಯಲ್ಲಿ ನಮೂದಿಸಿ ನಂತರ ತನಿಖಾ ತಂಡಕ್ಕೆ ನೀಡುವುದು , ತನಿಖೆ ಮುಕ್ತಾಯಗೊಂಡ ಪ್ರಕರಣಗಳಿಗೆ ಸಂಬಂಧಿಸಿದ ಕಡತ ಹಾಗೂ ದಾಖಲೆಗಳನ್ನು ಮತ್ತು ತನಿಖಾ ತಂಡವು ಸೂಚಿಸುವ ಎಲ್ಲಾ ದಾಖಲಾತಿಗಳನ್ನು ತಹಶೀಲ್ದಾರರು ಖುದ್ದು ಪಡೆದು , ಪ್ರತ್ಯೇಕವಾಗಿ ಭದ್ರತೆಯೊಂದಿಗೆ ಸಂರಕ್ಷಿಸುವುದು . 

ಭೂಮಿ ತಂತ್ರಾಂಶದಲ್ಲಿ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಅಳವಡಿಸಲಾಗಿರುವ ದಾಖಲಾತಿಗಳನ್ನು ಮುದ್ರಿಸಿಕೊಂಡು ಸಂಬಂಧಪಟ್ಟ ಕಡತದಲ್ಲಿರಿಸಿ ತನಿಖಾ ತಂಡಕ್ಕೆ ನೀಡುವುದು . 

ಈ ಹಿಂದೆ ಕಾರ್ಯ ನಿರ್ವಹಿಸಿದ ತಹಶೀಲ್ದಾರರು , ಕಛೇರಿ ಸಿಬ್ಬಂದಿ ಹಾಗೂ ಕಾರ್ಯ ನಿರ್ವಾಹಕ ಸಿಬ್ಬಂದಿಗಳ ಮಾದರಿ ಸಹಿಗಳು ಅವಶ್ಯವಿದಲ್ಲಿ ದೃಢೀಕೃತ ದಾಖಲೆಗಳನ್ನು ಒದಗಿಸುವುದು . ತನಿಖಾ ತಂಡವು ಹೆಚ್ಚುವರಿಯಾಗಿ ಕೋರುವ ಮಾಹಿತಿ ಹಾಗೂ ದಾಖಲಾತಿಗಳನ್ನು ನೀಡುವ ವ್ಯವಸ್ಥೆ ಮಾಡುವುದು ಮುಂತಾದ ಜವಾಬ್ದಾರಿಗಳನ್ನು ಎಲ್ಲಾ ತಾಲ್ಲೂಕಿನ ತಹಸೀಲ್ದಾರರು ಸಮಿತಿಗೆ ನೀಡಬೇಕು ಎಂದರು . 

ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ 15 ಜನರ ತಂಡ ಇಡೀ ಜಿಲ್ಲೆಯಲ್ಲಿನ ಅಕ್ರಮ ಭೂ ಮಂಜೂರಾತಿ ಪರಿಶೀಲನೆ ಕೈಗೊಂಡಿದ್ದು , ಕೈಗೊಂಡಿದ್ದು , ಇಂತಹ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅವರು ರೂಪಿಸಿಕೊಂಡಿರುವ ಯೋಜನೆಗಳ ಬಗ್ಗೆ ವಿತವಾಗಿ ಚರ್ಚೆ ಮಾಡಲಾಯಿತು .

 ವಾತಾವರಣಕ್ಕನುಗುಣವಾಗಿ ಪ್ರಮುಖ ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ . ಶಂಕರ್ ವಣಿಕ್ಯಾಳ್ ಅವರು ತಿಳಿಸಿದರು . ಮುಖ್ಯವಾಗಿ ಸರ್ಕಾರಿ ಜಮೀನುಗಳ ಒತ್ತುವರಿಗಳನ್ನು ತೆರವುಗೊಳಿಸುವಲ್ಲಿ ಇಂತಹ ಅಧ್ಯಯನಗಳ ವರದಿಗಳು ಪೂರಕವಾಗುತ್ತವೆ . ಜಿಲ್ಲೆಯಲ್ಲಿ ಅಕ್ರಮ ಭೂ ಮಂಜೂರಾತಿಗೆ ಕಡಿವಾಣ ಬೀಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು . 

ವಿಡಿಯೋ ಸಂವಾದದಲ್ಲಿ ಭೂ ದಾಖಲೆಗಳ ಉಪನಿರ್ದೇಶಕರಾದ ಭಾಗ್ಯಮ್ಮ , ನಗರಸಭೆ ಆಯುಕ್ತರಾದ ಶಿವಾನಂದ್ , ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

ಸ್ಟಡೀ ಸರ್ಕಲ್ ಯೋಜನೆಯಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಭಾವಿ ತಯಾರಿ ಗುರಿ ಸಾಧನೆಗೆ ಛಲ,ಸತತ ಪರಿಶ್ರಮ,ಶ್ರದ್ಧೆ ಅತ್ಯಗತ್ಯ-ಕೆ.ಶ್ರೀನಿವಾಸ್ ಕಿವಿಮಾತು

ಕೋಲಾರ:- ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಗುರಿ ಸಾಧನೆಗೆ ಕಲಿಕೆಯ ಹಸಿವು, ಛಲ, ಸತತ ಪರಿಶ್ರಮ, ಶ್ರದ್ಧೆ ಅಗತ್ಯವಾಗಿದ್ದು, ಸಂಕಲ್ಪದೊಂದಿಗೆ ಅಭ್ಯಾಸ ಮುಂದುವರೆಸಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್ ಕಿವಿಮಾತು ಹೇಳಿದರು.
ಬುಧವಾರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಸ್ಟಡೀ ಸರ್ಕಲ್ ಯೋಜನೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿತವಾಗಿರುವ ಹಲವು ಹುದ್ದೆಗಳ ಆಯ್ಕೆಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತಯಾರಿಗಾಗಿ ನಡೆಸಲಾದ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧನೆಗೆ ದೈನಂದಿನ ವೃತ್ತಪತ್ರಿಕೆಗಳಲ್ಲಿ ಸಿಗುವ ಸಾಮಾನ್ಯ ಜ್ಞಾನ ನಿಮ್ಮದಾಗಿಸಿಕೊಳ್ಳಿ, ನಿಗಧಿತ ಪಠ್ಯವಸ್ತುವಿನ ಅಧ್ಯಯನ ಮಾಡಿ, ನಿರಂತರ ಓದು ಇಂತಹ ದೊಡ್ಡಮಟ್ಟದ ಸಾಧನೆಗೆ ಅಗತ್ಯವಿದ್ದು, ಅಂತಹವರು ಮಾತ್ರವೇ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದರು.
ಒಂದು ಕಾಲದಲ್ಲಿ ಕೋಲಾರ ಜಿಲ್ಲೆ ಎಂದರೆ ಕೆಎಎಸ್ ಅಧಿಕಾರಿಗಳ ತವರಾಗಿತ್ತು, ಇತ್ತೀಚಿನ ದಿನಗಳಲ್ಲಿ ಆ ಪ್ರಮಾಣ ಕಡಿಮೆಯಾಗುತ್ತಿದ್ದು, ಇಂದಿನ ವಿದ್ಯಾರ್ಥಿ ಸಮುದಾಯ ಮತ್ತೆ ಕೋಲಾರದ ಹಿರಿಮೆ ಎತ್ತಿಹಿಡಿಯಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಸಾಧಿಸಬೇಕು ಎಂದು ಕೋರಿದರು.
ಅಭ್ಯರ್ಥಿಗಳಿಗೆ ಪರೀಕ್ಷಾ ತಯಾರಿ ಕುರಿತು ಸಲಹೆ ಸೂಚನೆ ನೀಡಿದ ಅವರು,ನಿತ್ಯ ಅಧ್ಯಯನ, ಜ್ಞಾನಾರ್ಜನೆಗೆ ಅಗತ್ಯವಾದ ಪುಸ್ತಕ ಓದಿ ಇದರಿಂದ ನಿಮ್ಮ ಜ್ಞಾನದ ವೃದ್ದಿಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಶಕ್ತಿಯೂ ಬರುತ್ತದೆ ಎಂದರು.
ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ನೀಡಲಾಗುವ ಸೇವೆಗಳು ಸಹಾ ಬದಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ವೃತ್ತಿ ಉಪನ್ಯಾಸ, ಸಮಾಲೋಚನೆ, ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ, ಭಾರತೀಯ ಸೇನೆಯಲ್ಲಿನ ಉದ್ಯೋಗವಕಾಶಗಳ ಬಗ್ಗೆ ಮಾರ್ಗದರ್ಶನ, ಉದ್ಯೋಗ ಮೇಳಗಳ ಆಯೋಜನೆ ಮುಂತಾದ ಚಟುವಟಿಕೆಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡುತ್ತಿದ್ದು, ಎಲ್ಲಾ ಪರೀಕ್ಷೆಗಳ ರೂಪುರೇಷೆಗಳು, ಪಠ್ಯಕ್ರಮ, ಪ್ರಶ್ನೆಪತ್ರಿಕೆಗಳ ಮಾದರಿ ಮುಂತಾದ ವಿಷಯಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಪರೀಕ್ಷಾ ಪೂರ್ವದಲ್ಲಿಯೇ ಪಡೆದುಕೊಳ್ಳಲು ಸೂಚಿಸಿದರು.
ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಸಾಮಾನ್ಯ ಜ್ಞಾನ, ಗಣಕ ವಿಜ್ಞಾನದ ಅರಿವು, ಸಂಖ್ಯಾತ್ಮಕ ಸಾಮಥ್ರ್ಯ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಬಗೆ ಹೆಚ್ಚಿನ ತಿಳುವಳಿಕೆ ಅಗತ್ಯವೆಂದು ತಿಳಿಸಿದರು. ಯಾವುದಾದರು ಒಂದು ಕನ್ನಡ ಮತ್ತು ಆಂಗ್ಲ ದಿನ ಪತ್ರಿಕೆಯನ್ನು ಪ್ರತಿದಿನವು ಅಧ್ಯಯನ ಮಾಡುವುದು ಅಗತ್ಯವೆಂದು ತಿಳಿಸಿದರು.
ಸ್ಟಡೀ ಸರ್ಕಲ್ ಯೋಜನೆಯಡಿಯಲ್ಲಿ ನೀಡಲಾಗುವ ತರಬೇತಿ ಕಾರ್ಯಕ್ರಮದ ಸಂಪೂರ್ಣ ಉಪಯೋಗವನ್ನು ಉದ್ಯೋಗಕಾಂಕ್ಷಿ ಅಭ್ಯರ್ಥಿಗಳು ಪಡೆದುಕೊಳ್ಳಲು ಹಾಗೂ ಹೆಚ್ಚಿನ ಪರಿಶ್ರಮದೊಂದಿಗೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಹಾಯಕ ಉದ್ಯೋಗಾಧಿಕಾರಿ ಮುನಿಕೃಷ್ಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅಧಿಸೂಚಿತವಾಗಿರುವ ವಿವಿಧ ಹುದ್ದೆಗಳ ಬಗ್ಗೆ ಹಾಗೂ ಪಠ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿ, ಒಟ್ಟು 10 ದಿನಗಳ ಕಾಲ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯಾವುದೇ ಆಭ್ಯರ್ಥಿಗಳು ಗೈರು ಹಾಜರಾಗದೆ ಇರಲು ಸೂಚಿಸಿದರು.
ಸದರಿ ಪರೀಕ್ಷಾ ತರಬೇತಿಗೆ ಅಧ್ಯಯನ ಮಾಡಬೇಕಾದ ಪುಸ್ತಕಗಳ ಬಗೆ ಮಾಹಿತಿ ಒದಗಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಮೊಹಮ್ಮದ್ ಇಲಿಯಾಸ್, ನಾಗೇಶ್ ಹಾಗೂ ವಿನೋದ್ ರವರು ಪರೀಕ್ಷಾ ಪೂರ್ವ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳು, ಪಠ್ಯಕ್ರಮ ಪ್ರಶ್ನೆಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕೇಳಲಾಗುವ ಮಾಹಿತಿ ಹಾಗೂ ಪ್ರಚಲಿತ ವಿದ್ಯಮಾನಗಳ ಬಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಕಛೇರಿಯ ಸಿಬ್ಬಂದಿ ವರ್ಗದವರಾದ ಮನೋಜ್, ತಿಮ್ಮರಾಜು, ಹೀನಾ, ಶ್ವೇತಾ ಹಾಗೂ ಈಶ್ವರ್ ಪಾಲ್ಗೊಂಡಿದ್ದರು.

ದೇವ್ ಮನ್ಶಾಂತ್ ಆಯ್ಲೊ – ಯೇಸು ಕ್ರಿಸ್ತನ ಜೀವನ ಪುಸ್ತಕ ಬಿಡುಗಡೆ

ಯೇಸು ಕ್ರಿಸ್ತನ ಜೀವನದ ಮೇಲೆ ಖ್ಯಾತ ಕೊಂಕಣಿ ಕವಿ, ಸಾಹಿತಿ ಶ್ರೀ ಮರಿಯಾಣ್ ಪಾವ್ಲ್ ರೊಡ್ರಿಗಸ್ ಬರೆದಿರುವ ಕೊಂಕಣಿ ಪುಸ್ತಕ ’ದೇವ್ ಮನ್ಶಾಂತ್ ಆಯ್ಲೊ – ಜೆಜು ಕ್ರಿಸ್ತಾಚೆಂ ಜಿವಿತ್’ ಮಿಲಾಗ್ರಿಸ್ ಸೆನೆಟ್ ಸಭಾಂಗಣದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡೊಕ್ಟರ್ ಪೀಟರ್ ಪಾವ್ಲ್ ಸಲ್ಡಾನ್ಹಾ ಬಿಡುಗಡೆಗೊಳಿಸಿದರು. “ದೇವರ ವಾಕ್ಯವೆಂದರೆ ಅದು ಸೂರ್ಯನ ಬಿಸಿಲಿನಂತೆ. ಕೆಲವರು ಓದಿ ಒಳ್ಳೆಯವರಾದರೆ, ಇನ್ನು ಕೆಲವರು ದೇವರ ವಾಕ್ಯವನ್ನೇ ಓದಿ ಅನ್ಯಥಾ ಬಳಸುವುದೂ ಇದೆ. ದೇವರ ವಾಕ್ಯವನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಮರಿಯಾಣ್ ಪಾವ್ಲ್ ರೊಡ್ರಿಗಸ್ ಬರೆದಿರುವ ಈ ಪುಸ್ತಕ ಸಹಾಯಕಾರಿಯಾಗಲಿದೆ.” ಎಂದು ಧರ್ಮಾಧ್ಯಕ್ಷ ಡೊ| ಸಲ್ದಾನ್ಹಾ ಅಭಿಪ್ರಾಯಪಟ್ಟರು.

ಮಿಲಾಗ್ರಿಸ್ ಚರ್ಚಿನ ಪ್ರಧಾನ ಧರ್ಮಗುರುಗಳಾದ  ವಂ| ಬೊನವೆಂಚರ್ ನಜ್ರೆತ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೃತಿಕಾರ ಮರಿಯಾಣ್ ಪಾವ್ಲ್ ರೊಡ್ರಿಗಸ್ ಮಾತನಾಡಿ “ಯೇಸು ಕ್ರಿಸ್ತನ ಜೀವನದ ಕುರಿತು ಬರೆಯುವುದು ನನ್ನ ಬಹಳ ಹಳೆ ಆಸೆಯಾಗಿತ್ತು. ಆದರೆ ಸರಿಸುಮಾರು ಮೂವತ್ತು ವರ್ಷಗಳ ಕಾಲ ತಾನು ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆಸೆ ಕೈಗೂಡಲಿಲ್ಲ. ನಿವೃತ್ತಿಯ ನಂತರ ತಾಯ್ನಾಡಿಗೆ ಮರಳಿದಾಗ ಮತ್ತೆ ಆಸೆ ಚಿಗುರಿತು. ಅದರೆ ಆರೋಗ್ಯದಲ್ಲಿ ಏರುಪೇರಾಯಿತು. ಆದರೂ ದೃತಿಗೆಡದೇ ಸತತ ಒಂಬತ್ತು ವರ್ಷಗಳ ಕಾಲ ಅಧ್ಯಯನ ಮಾಡಿ ಸುಮಾರು 540  ಪುಟಗಳ ಪುಸ್ತಕ ತಯಾರಿಸಿದ್ದೇನೆ. ಈ ಪುಸ್ತಕ ಪ್ರಕಟಣೆಗೆ ಅಧಿಕೃತ ಪರವಾನಿಗೆ ’ಇಂಪ್ರಿಮಾತುರ್’  ನೀಡಿದ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಶರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಮತ್ತು ಸಹಕರಿದ ಎಲ್ಲರಿಗೂ, ಪ್ರತ್ಯೇಕವಾಗಿ ನನ್ನ ಕುಟುಂಬಕ್ಕೆ ಋಣಿ ಯಾಗಿದ್ದೇನೆ” ಎಂದರು.

ಯೇಸು ಕ್ರಿಸ್ತನ ಬಗ್ಗೆ ಜನರಿಗೆ ನೈಜ ಅರಿವು ನೀಡುವುದು ಮತ್ತು ಪುಸ್ತಕ ಮಾರಾಟದಿಂದ ಬರುವ ವರಮಾನದಿಂದ ದುರ್ಬಲ ವರ್ಗದವರಿಗೆ ಸಹಾಯ ಮಾಡುವುದು – ನನ್ನ ಉದ್ದೇಶವಾಗಿದೆ ಎಂದು ಮರಿಯಾಣ್ ಪಾವ್ಲ್ ರೊಡ್ರಿಗಸ್ ಈ ಸಂದರ್ಭದಲ್ಲಿ ನುಡಿದರು.      

ಪುಸ್ತಕ ಬಿಡುಗಡೆಯ ವೇಳೆ ಕೃತಿಕಾರರ ಧರ್ಮಪತ್ನಿ ಶ್ರೀಮತಿ ಜೆಸಿಂತಾ ರೊಡ್ರಿಗಸ್, ಪುತ್ರ ಡೊ| ಜೋನಾತನ್ ರೊಡ್ರಿಗಸ್ , ಪ್ರಕಾಶಕ ಸೆವಕ್ ಪ್ರಕಾಶನದ ವಂ| ಚೇತನ್ ಕಾಪುಚಿನ್, ಮಿಲಾಗ್ರಿಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ ಸಿಲ್ವೆಸ್ಟರ್ ಮಸ್ಕರೆನ್ಹಸ್ ಮತ್ತು ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್ ವೇದಿಕೆಯಲ್ಲಿ ಹಾಜರಿದ್ದರು.

ಹೆಸರಾಂತ ಕಲಾವಿದ ಶ್ರೀ ಎಡ್ಡಿ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಆರೊನ್ ಲೋಬೊ ವಂದಿಸಿದರು. ಕಾರ್ಯಕ್ರಮದಲ್ಲಿ ಮರಿಯಾಣ್ ಪಾವ್ಲ್ ರೊಡ್ರಿಗಸ್ ಅವರು ರಚಿಸಿ, ಸ್ವರಸಂಯೋಜನೆ ಮಾಡಿದ ಸ್ತುತಿಗೀತೆಗಳನ್ನು ಸಿಪ್ರಿಯನ್ ಮಾಸ್ತರರ ಸಂಗೀತ ನಿರ್ದೇಶನದಲ್ಲಿ ಮಿಲಾಗ್ರಿಸ್ ಚರ್ಚ್ ಯುವಗಾಯನ ಮಂಡಳಿಯ ಸದಸ್ಯರು ಹಾಡಿದರು.