ಅಕ್ಷರ ದಾಸೋಹ ಯೋಜನೆ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು-ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ

ಶ್ರೀನಿವಾಸಪುರ: ಅಕ್ಷರ ದಾಸೋಹ ಯೋಜನೆ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು. ಅಡುಗೆ ತಯಾರಿಸುವಾಗ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ ಹೇಳಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಅಕ್ಷರ ದಾಸೋಹ ನೌಕರರಿಗೆ ಬಟ್ಟೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೀಗೆಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ಸುಗಟೂರು ಕ್ಲಸ್ಟರ್‍ನ 40 ಮಂದಿ ನೌಕರರಿಗೆ ಇಷ್ಟದ ಬಟ್ಟೆ ಕೊಡಿಸಿದ್ದಾರೆ. ಅವರು ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಶೈಕ್ಷಣಿ ಅಭಿವೃದ್ದಿಗಾಗಿ ಬಳಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ದಾನಿಗಳ ನೆರವಿನ ಅಗತ್ಯವಿದೆ. ಅದು ಸರ್ಕಾರ ನೀಡುತ್ತಿರುವ ಸೌಲಭ್ಯಕ್ಕೆ ಪೂರಕವಾಗಿದೆ. ಧರ್ಮೇಶ್ ಅವರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ನೆರವು ನೀಡುತ್ತಿರುವುದು ಸ್ತುತ್ಯಾರ್ಹವಾದುದು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಚ್.ಸಿ.ಬೈರೇಗೌಡ ಮಾತನಾಡಿ ವಿದ್ಯಾರ್ಥಿಗಳು ದಾನಿಗಳ ನೆರವು ಪಡೆದು ಶೈಕ್ಷಣಿಕವಾಗಿ ಮುಂದೆಬರಬೇಕು. ದಾನಿಗಳು ಬಡ ಪೋಷಕರ ಹೊರೆ ಕಡಿಮೆ ಮಾಡುತ್ತಾರೆ. ದಾನಿಗಳ ನೆರವು ಪಡೆದ ಗುರಿ ತಲುಪಿದ ವಿದ್ಯಾರ್ಥಿಗಳು ದಾನ ನೀಡುವುದನ್ನು ಕಲಿಯಬೇಕು. ಕಷ್ಟದಲ್ಲಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರಿಗೆ ಇಷ್ಟದ ಸೀರೆ, ತಟ್ಟೆ ಹಾಗೂ ಸಿಹಿ ವಿತರಿಸಲಾಯಿತು.
ಸಿಆರ್‍ಪಿ ವೆಂಕಟರಾಮ್, ದಾನಿ ಎಸ್.ಆರ್.ಧರ್ಮೇಶ್, ಶಿಕ್ಷಕರಾದ ಮಾರುತಿ, ಸಂಘರ್ಷ, ಶಿಕ್ಷಕಿಯರಾದ ಪದ್ಮಾವತಿ, ಅನುಷಾ, ಪದ್ಮಾವತಮ್ಮ, ಶಶಿಕಲಾ ಇದ್ದರು.

ಒಕ್ಕಲಿಗ ಸಮುದಾಯ ಸಾಂಘಿಕ ಪ್ರಯತ್ನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು : ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಶ್ರೀನಿವಾಸಪುರ: ಒಕ್ಕಲಿಗ ಸಮುದಾಯ ಸಾಂಘಿಕ ಪ್ರಯತ್ನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್‍ನಲ್ಲಿ ಮಾವು ಬೆಳೆಯಲಾಗುತ್ತಿದೆ. ಆದರೆ ಮಾವು ವಹಿವಾಟಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಮಾವು ಸಂಸ್ಕøತಣ ಘಟಕದ ಸ್ಥಾಪನೆ ಅದಕ್ಕೆ ಪರಿಹಾರವಾಗಿದೆ. ಸರ್ಕಾರ ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪಿಸುವುದರ ಮೂಲಕ ಬೆಳೆಗಾರರ ನೆರವಿಗೆ ಬರಬೇಕು. ಅದಕ್ಕೆ ಪೂರಕವಾಗಿ ಇಲ್ಲಿನ ಶಾಸಕರು ಹಾಗೂ ಇತರ ಜನ ಪ್ರತಿನಿಧಿಗಳು ಪ್ರಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕೆಂಪೇಗೌಡರ ದೂರದರ್ಶಿತ್ವ ನಾಡಿನ ಅಭ್ಯುದಯಕ್ಕೆ ಕಾರಣವಾಗಿದೆ. ಮುಖ್ಯವಾಗಿ ಬೆಂಗಳೂರಿನ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದೆ. ಒಕ್ಕಲಿಗ ಸಮುದಾಯ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಕೋಲಾರ ತಾಲ್ಲೂಕಿನ ಸೀತಿ ಬೆಟ್ಟದಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ವ್ಯವಸ್ಥೆ ಮಾಡಲಾಗುವುದು. ಎಲ್ಲ ಸಮುದಾಯಗಳ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಮಾತನಾಡಿ, ಕೆಂಪೇಗೌಡರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ. ಅವರ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳಬೇಕಾಗಿದೆ. ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ಕಲ್ಪಿಸಲು 64 ಪೇಟೆಗಳನ್ನು ನಿರ್ಮಿಸಿ, ಬೆಂಗಳೂರು ಸರ್ವ ಜನಾಂಗದ ಸುಂದರ ನಗರವಾಗಿ ಬೆಳೆಯಲು ಅಡಿಪಾಯ ಹಾಕಿದರು ಎಂದು ಹೇಳಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಕೆಂಪೇಗೌಡರು ಕೈಗೊಂಡ ಜನಪರ ಕಾರ್ಯಗಳ ಮುಂದುವರಿಕೆಯಿಂದಾಗಿ ಇಂದು ಬೆಂಗಳೂರು ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ. ಅವರ ಹೆಸರಿನ ಬಲದಿಂದ ನಗರ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮುದಾಯದ ಸಾಧಕರಾದ ಎಂ.ಶ್ರೀರಾಮರೆಡ್ಡಿ, ಬಿ.ಎನ್.ರಮೇಶ್, ಡಿ.ದೇವರಾಜ್, ಎಂ.ಎನ್.ಅನುಚೇತ್, ಬಿ.ಎಲ್.ನಾಗೇಶ್, ಸುಭಾಷ್, ವಸಂತ ಕುಮಾರ್, ಎ.ಎನ್.ಕೃಷ್ಣಾರೆಡ್ಡಿ, ಕೆ.ಎಸ್.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಕಾರ್ಯದರ್ಶಿ ಮೀಸಗಾನಹಳ್ಳಿ ವೆಂಕಟರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಂಕರಪ್ಪ, ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪೊಲೀಸ್ ಇನ್ಸ್‍ಪೆಕ್ಟರ್ ಆರ್.ದಯಾನಂದ್, ಮುಖಂಡರಾದ ಎಲ್.ಗೋಪಾಲಕೃಷ್ಣ, ತೂಪಲ್ಲಿ ಆರ್.ಚೌಡರೆಡ್ಡಿ, ಆರ್.ನಾರಾಯಣಸ್ವಾಮಿ, ಬಿ.ವಿ.ಶಿವಾರೆಡ್ಡಿ, ಮಂಜುನಾಥಸ್ವಾಮಿ, ಡಾ. ಕೆ.ಎನ್.ವೇಣುಗೋಪಾಲ್, ಎಂ.ಶ್ರೀರಾಮರೆಡ್ಡಿ, ಎ.ವೆಂಕಟರೆಡ್ಡಿ, ಡಾ. ರಮೇಶ್, ಚಿನ್ನಪ್ಪರೆಡ್ಡಿ, ಶ್ರೀನಾಥರೆಡ್ಡಿ, ಎನ್.ಜಿ.ಬೇಟಪ್ಪ, ರೋಣೂರು ಚಂದ್ರಶೇಖರ್, ರಾಮಚಂದ್ರ ಇದ್ದರು.
ಮೆರಣಿಗೆ: ಪಟ್ಟಣದ ಎಂಜಿ ರಸ್ತೆಯಲ್ಲಿ ಕೆಂಪೇಗೌಡರ ಭಾವ ಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ ನೂಕ್ಕೂ ಹೆಚ್ಚು ಕೆಂಪೇಗೌಡರ ಭಾವ ಚಿತ್ರ ಹೊತ್ತ ಪಲ್ಲಕಿಗಳು ಭಾಗವಹಿಸಿದ್ದವು. ಮೆರವಣಿಗೆ ಉದ್ದಕ್ಕೂ ಕಲಾವಿದರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ರಾಘವೇಂದ್ರಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ರಾಘವೇಂದ್ರಸ್ವಾಮಿಗಳ ವಿಗ್ರಹಕ್ಕೆ ವಿಶೇಷ ಅಲಂಕಾರ

ಶ್ರೀನಿವಾಸಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಘವೇಂದ್ರಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಠದಲ್ಲಿ ರಾಘವೇಂದ್ರಸ್ವಾಮಿಗಳ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ವೆಂಕೋಬರಾವ್, ಶ್ರೀನಾಥ್, ಗುರುರಾಕರಾವ್, ಚೇತನ್, ಕಾರ್ತಿಕ್, ದ್ವಾರಕೀಶ್, ವಾದಿರಾಜ್ ಇದ್ದರು.

ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮ ಆರ್ಥಿಕ ಚಟುವಟಿಕೆ ಮೂಲಕ ಸಮಾಜ ಸೇವೆ ಮಾಡುವ ಸಂಸ್ಥೆಯಾಗಿದೆ

ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮ ಆರ್ಥಿಕ ಚಟುವಟಿಕೆ ಮೂಲಕ ಸಮಾಜ ಸೇವೆ ಮಾಡುವ ಸಂಸ್ಥೆಯಾಗಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ನಿಗಮದ ಮುಖ್ಯಗುರಿಯಾಗಿದೆ ಎಂದು ಎಲ್‍ಐಸಿ ಉಪ ಶಾಖಾ ವ್ಯವಸ್ಥಾಪಕ ಎಚ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಎಲ್‍ಐಸಿ ಶಾಖಾ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ 67ನೇ ಎಲ್‍ಐಸಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆ ವ್ಯಕ್ತಿಗು ಎಲ್‍ಐಸಿ ಸೌಲಭ್ಯ ಒದಗಿಸಬೇಕು. ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ, ಜನರ ಆರ್ಥಿಕ ಸ್ಥಿತಿಗೆ ಅನುಗುಣವಾದ ಪಾಲಿಸಿ ಮಾಡಿಸಬೇಕು ಎಂದು ಹೇಳಿದರು.
ಎಲ್‍ಐಸಿ ವ್ಯವಹಾರ ಪಾರದರ್ಶಕವಾಗಿದ್ದು, ನಂಬಲು ಅರ್ಹವಾಗಿದೆ. ಆದ್ಧರಿಂಲೇ ಜನರು ಹಲವು ದಶಗಳಿಂದ ಈ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ಹಣ ತೊಡಗಿಸುತ್ತಿದ್ದಾರೆ. ಆದ್ದರಿಂದ ಎಲ್‍ಐಸಿಯಲ್ಲಿನ ವಿವಿಧ ಯೋಜನೆಗಳನ್ನು ಪರಿಚಯಿಸುವ ಹೊಣೆ ಪ್ರತಿನಿಧಿಗಳ ಮೇಲಿದೆ. ತಾವು ಬೆಳೆಯುವುದರೊಂದಿಗೆ ಸಂಸ್ಥೆ ಬೆಳೆಯಲು ಶ್ರಮಿಸಬೇಕು. ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ಬಾಲಚಂದ್ರ ಮಾತನಾಡಿ, ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಎಲ್‍ಐಸಿ ಪಾತ್ರ ಹಿರಿದು. ಸಾರ್ವಜನಿಕರ ಆರ್ಥಿಕಾಭಿವೃದ್ಧಿಯೊಂದಿಗೆ ದೇಶದ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶ ಹೊಂದಲಾಗಿದೆ. ಎಲ್‍ಐಸಿ ಪ್ರತಿನಿಧಿಗಳು ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ವಿ.ಕುಲಕರ್ಣಿ ಮಾತನಾಡಿ, ಎಲ್‍ಐಸಿ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ತನ್ನ ಕಾರ್ಯ ವೈಖರಿಯಿಂದಾಗಿ ವಿಶ್ವ ಮಾನ್ಯತೆ ಪಡೆದಿದೆ. ರೂ.45 ಲಕ್ಷ ಕೋಟಿ ಶಾಶ್ವತ ನಿಧಿ ಮೀಸಲಿರಿಸಿದೆ ಎಂದು ಹೇಳಿದರು.
ಉಪ ವ್ಯವಸ್ಥಾಪಕ ಡಿ.ರವಿಶಂಕರ್, ಶ್ರೀನಿವಾಸ್, ಲಿಖಿತ್ ಕುಮಾರ್ ಹಾಗೂ ಪ್ರತಿನಿಧಿಗಳು ಇದ್ದರು.

ಕುಂದಾಪುರ ಸಂತ ಮೇರಿ ಪಿ ಯು ಕಾಲೇಜಿನಲ್ಲಿ ಪಾಲಕರ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕುಂದಾಪುರದ ಸಂತ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರಥಮ ಪಿ ಯು ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಂತ ಮೇರಿಸ್ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿರುವ ಅತಿ .ವಂ.ಫಾದರ್ ಸ್ಟ್ಯಾನಿ ತಾವ್ರೋರವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಪಿ ಯು ಹಂತದಲ್ಲಿ ಚೆನ್ನಾಗಿ ಅಭ್ಯಾಸ ಮಾಡುವದರೊಂದಿಗೆ ಉಲ್ಲಾಸದಿಂದಿರಬೇಕು. ಅಪ್ಪ ಅಮ್ಮ ಗುರು ಹಿರಿಯರನ್ನು ಗೌರವಿಸಬೇಕು.ಎನ್ನುತ್ತಾ ಸಂಸ್ಥೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಾದ ವಿನಾರ್ಡ್ ಡಿಕೊಸ್ತಾ ಹಾಗೂ ನವೀನ್ ಕುಮಾರ ಪ್ರಸ್ತುತ CA ಪದವಿ ಪೂರ್ಣಗೊಳಿಸಿ ಉತ್ತಮ ಕಂಪೆನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದ ಅವರನ್ನು ಶಿಕ್ಷಣ ಸನ್ಮಾನಿಸಿ ಅವರ ಪ್ರಯತ್ನಕ್ಕೆ ಶ್ಯಾಘನೆ,ಹಾಗೂ ಅವರ ಪಾಲಕರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೇತನಾದ ಇನ್ನೋರ್ವ ಚೆಸ್ ಆಟಗಾರ ನಿಶಾಂತ್ ಡಿಸೋಜ ಈತನಿಗೆ ಪುಷ್ಪ, ಪ್ರಶಸ್ತಿ ನೀಡಿ ಗೌರವಿಸಿಲಾಯಿತು.
ಕಾರ್ಯ ಕ್ರಮದ ಕೇಂದ್ರ ಬಿಂದುಗಳಾಗಿ, CA ಪರೀಕ್ಷೆಯನ್ನು ಉತ್ತಮ ಫಲಿತಾಂಶದೊಂದಿಗೆ ಮುಗಿಸಿ ಕಾಲೇಜಿನ ಇತಿಹಾಸದಲ್ಲಿ CA ಪರೀಕ್ಷೆ ಮುಗಿಸಿದವರಲ್ಲಿ ಮೊದಲಿಗರಾಗಿ ಸಂಸ್ಥೆಗೆ ಕೀರ್ತಿ ತಂದ ವಿನಾರ್ಡ್ ಡಿಕೊಸ್ತಾ ಹಾಗೂ ನವೀನ್ ಕುಮಾರ ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ತಮ್ಮ ಶಿಕ್ಷಣದಲ್ಲಿ,ಪ್ರಯತ್ನ,ಅಪ್ಪ ಅಮ್ಮಂದಿರ ಪ್ರೋತ್ಸಾಹ,,ಗುರು ಹಿರಿಯರಲ್ಲಿ ಗೌರವ ಇವೆಲ್ಲ ಮುಖ್ಯ ಎನ್ನುತ್ತಾ ತಮ್ಮ ಸಾಧನೆಗೆ ಸಂಸ್ಥೆ, ಸಂಸ್ಥೆಯ ಉಪನ್ಯಾಸಕ ವೃಂದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಪ್ರತಿಯೊಬ್ಬರೂ ಪ್ರಯತ್ನಿಸಿದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂದು ಕಾಲೇಜಿನಲ್ಲಿಯ ವಿದ್ಯಾರ್ಥಿಗಳಿಗೆ ಉತ್ತೇಜಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಶ್ಮಾ ಫೆರ್ನಾಂಡಿಸ್ ರವರು ಎಲ್ಲಾ ಪಾಲಕರಿಗೆ, ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಪಾಲಕರಿಗೆ ಕಾಲೇಜಿನ ಕೆಲವು ಸಲಹೆ ಸೂಚನೆಗಳನ್ನು ತಿಳಿಸಿದರು.ಉಪ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ನಾಯರ್ ರವರು ಪ್ರಸ್ತುತ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು.
ವಿದ್ಯಾರ್ಥಿಗಳ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಬಿನು ಜಯಚಂದ್ರನ್ ರವರು ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳ ಪರಿಚಯವನ್ನು ಕನ್ನಡ ಉಪನ್ಯಾಸಕ ನಾಗರಾಜ ಶೆಟ್ಟಿ ನೀಡಿ, ಜೀವಶಾಸ್ತ್ರ ಉಪನ್ಯಾಸಕರಾದ ಪ್ರಫುಲ್ಲ ರವರು ಧನ್ಯವಾದ ಸಮರ್ಪಿಸಿದರು.