ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಜೂನಿಯರ್ ರೆಡ್‍ಕ್ರಾಸ್ ಸಂಘದ ಉದ್ಘಾಟನೆ

ಕುಂದಾಪುರ: ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಇಲ್ಲಿ ಜೂನಿಯರ್ ರೆಡ್‍ಕ್ರಾಸ್ ಸಂಘದ ಉದ್ಘಾಟನೆಯು ಸಂತ ಮೇರಿ ಹಾಗೂ ಹೋಲಿ ರೋಜರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೇಜ್ ಶಾಂತಿ ಡಿಸೋಜಾರವರು ವಹಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅತಿಥಿಗಳನ್ನು ಸ್ವಾಗತಿಸಿದರು.
ಕುಂದಾಪುರ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ರೆಡ್‍ಕ್ರಾಸ್ ಸಂಸ್ಥೆಯ ಧ್ಯೇಯೊದ್ದೇಶಗಳು ಹಾಗೂ ಮೂಲಭೂತ ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿ ಕುಂದಾಪುರ ರೆಡ್‍ಕ್ರಾಸ್ ಸಂಸ್ಥೆಯ ಖಜಾಂಜಿ ಶ್ರೀ ಶಿವರಾಮ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ರೆಡ್‍ಕ್ರಾಸ್‍ನ ಪ್ರತಿಜ್ಞಾ ವಿಧಿ ಭೋಧಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ರೆಡ್‍ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ. ಸೋನಿ ಡಿ’ಕೋಸ್ಟಾ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಶುಚಿತ್ವದ ಕುರಿತಾದ ಮಾಹಿತಿಯನ್ನು ನೀಡಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರೂ ಆದ ಸೋನಿ ಡಿ’ಕೋಸ್ಟಾರವರ ಸಮಾಜ ಸೇವೆಗಾಗಿ ್ಲ ಶಾಲಾವತಿಯಿಂದ ಅವರನ್ನು ಸನ್ಮಾನಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯ ಸದಸ್ಯರಾದ ಶ್ರೀ ಗಣೇಶ್ ಆಚಾರ್‍ರವರು ಉಪಸ್ಥಿತರಿದ್ದರು. ಜೂನಿಯರ್ ರೆಡ್‍ಕ್ರಾಸ್‍ನ ಅಧ್ಯಕ್ಷೆ ಕುಮಾರಿ ಧನ್ಯಶ್ರೀಯವರಿಗೆ ರೆಡ್‍ಕ್ರಾಸ್‍ನ ಬ್ಯಾಡ್ಜ್ ನೀಡಲಾಯಿತು.
ಶಿಕ್ಷಕಿ ಕುಮಾರಿ ರಂಜಿತಾರವರು ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕಿ ಹಾಗೂ ಜೂನಿಯರ್ ರೆಡ್‍ಕ್ರಾಸ್‍ನ ಸಂಯೋಜಕಿ ಶ್ರೀಮತಿ ನಿಖಿತಾ ಶೆಟ್ಟಿಯವರು ವಂದನಾರ್ಪಣೆಗೈದರು. ಈ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಮಮತಾರವರು ನಿರೂಪಿಸಿದರು.

ಶ್ರೀನಿವಾಸಪುರ ಬೆಸ್ಕಾಂ ಇಲಾಖೆ ಮುಂಭಾಗದಲ್ಲಿ ವಿದ್ಯುತ್‍ನಲ್ಲಿ ಅಡಚಣೆ ಸರಿಪಡಿಸುವಂತೆ ಕಛೇರಿ ಬಳಿ ಪ್ರತಿಭಟನೆ

ಶ್ರೀನಿವಾಸಪುರ 2 : ಪಟ್ಟಣದ ಬೆಸ್ಕಾಂ ಇಲಾಖೆ ಮುಂಭಾಗ ಬುಧವಾರ ಕರ್ನಾಟಕ ರಾಜ್ಯ ಹಸಿರು ಸೇನೆ ಸಂಘದವತಿಯಿಂದ ವಿದ್ಯುತ್‍ನಲ್ಲಿ ಅಡಚಣೆ ಸರಿಪಡಿಸುವಂತೆ ಕಛೇರಿ ಬಳಿ ಪ್ರತಿಭಟನೆ ನಡೆಸಿ ಎಇಇ ಅಧಿಕಾರಿ ರಾಮತೀರ್ಥರವರಿಗೆ ಮನವಿ ಪತ್ರನೀಡಿದರು.
ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ ಮಾತನಾಡಿ ಸರ್ಕಾರ ರೈತರ ಪಂಪುಸೆಟ್‍ಗಳಿಗೆ ಏಳು ತಾಸು ವಿದ್ಯುತ್ ನೀಡುತ್ತವೆಂದು ಹೇಳಿದ್ದರು ಸಹ ಈಗ ಮೂರು ತಾಸು ಸಹ ವಿದ್ಯುತ್ ನೀಡುತ್ತಿಲ್ಲ ಇದರಿಂದ ತೋಟಗಾರಿಕೆ ಬೆಳೆಗಳಿಗೆ ತೊಂದರೆಯಾಗಿದ್ದು ಬೆಳೆಗಳು ಒಣಗುತ್ತಿವೆ.
ಲೋಡ್ ಶೆಡ್ಡಿಂಗ್ ನೆಪದಲ್ಲಿ ಸಾಯಂಕಾಲ ವಿದ್ಯುತ್‍ನ್ನು ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ತುಂಬಾ ಅನಾನುಕೂಲವಾಗುತ್ತಿದೆ ಮತ್ತು ವಿದ್ಯುತ್‍ನ್ನು ಸರಿಯಾಗಿ ಸಮರ್ಪಕವಾಗಿ ನೀಡುತ್ತಿಲ್ಲ . ಆದ ಕಾರಣ ಶ್ರೀನಿವಾಸಪುರ ತಾಲೂಕಿನ ರೈತರ ಪಂಪುಸೆಟ್‍ಗಳಿಗೆ ಮತ್ತು ಸಾರ್ವಜನಿಕರಿಗೆ ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡುತ್ತಿಲ್ಲ.
ಶ್ರೀನಿವಾಸಪುರ ಬೆಸ್ಕಾಂ ಇಲಾಖೆ ಲೋಡ್ ಶೆಡ್ಡಿಂಗ್ ನೆಪದಲ್ಲಿ ರೈತರ ಪಂಪು ಸೆಟ್‍ಗಳಿಗೆ ನೀಡುತ್ತಿರುವ ವಿದ್ಯುತ್ ಮತ್ತು ಸಾರ್ವಜನಿಕರಿಗೆ ನೀಡುತ್ತಿರುವ ವಿದ್ಯುತ್‍ನಲ್ಲಿ ತೊಂದರೆ ನೀಡುತ್ತಿದ್ದು , ಸರ್ಕಾರವು ರೈತರ ಪಂಪುಸೆಟ್‍ಗಳಿಗೆ ಸರ್ಮಪಕವಾಗಿ ವಿದ್ಯುತ್ ಸರಬಾರಜು ಮಾಡಿ ಸರಿಪಡಿಸುವಂತೆ ಒತ್ತಾಯಿಸಿದರು .
ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾಲೂಕು ಅಧ್ಯಕ್ಷ ಎನ್.ಜಿ.ಶ್ರೀರಾಮಿರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಬೈರೆಡ್ಡಿ, ರೈತಮುಖಂಡರಾದ ರಾಮೇಗೌಡ, ನಾರಾಯಣಸ್ವಾಮಿ, ವೀರಪ್ಪರೆಡ್ಡಿ, ಗಂಗಾಧರ್, ಹೆಬ್ಬಟ್ಟ ರಮೇಶ್, ಶ್ರೀಧರ್, ನಾಗದೇನಹಳ್ಳಿ ಚಂದ್ರಶೇಖರ್, ಅಬ್ಬಣಿ ಶ್ರೀನಿವಾಸ್ ಇದ್ದರು.
30 ಎಸ್‍ವಿಪುರ್ 2 : ಪಟ್ಟಣದ ಬೆಸ್ಕಾಂನ ಎಇಇ ಅಧಿಕಾರಿ ರಾಮತೀರ್ಥರವರಿಗೆ ಕರ್ನಾಟಕ ರಾಜ್ಯ ಹಸಿರು ಸೇನೆ ಸಂಘದವತಿಯಿಂದ ಮನವಿ ಪತ್ರ ನೀಡಲಾಯಿತು.

ಮಹಿಳೆಯರು ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮಹಿಳೆಯರು ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು. ಯೋಜನೆ ಲಾಭ ಪಡೆಯಲು ತಪ್ಪದೆ ಅರ್ಜಿ ಸಲ್ಲಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಏರ್ಪಡಿಸಿದ್ದ ಗೃಹ ಲಕ್ಷ್ಮಿ ಯೋಜನೆ ಜಾರಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಈ ಯೋಜನೆಯಿಂದ ಬಡ ಕುಟುಂಗಳಿಗೆ ಸ್ವಲ್ಪ ಮಟ್ಟಿನ ಆರ್ಥಿಕ ನೆರವು ದೊರೆತಂತಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಸೂರಿಲ್ಲದೆ ಪರಿತಪಿಸುತ್ತಿರುವ ಎಲ್ಲ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು. ಅಗತ್ಯ ಇರುವ ಕಡೆ ಒಳಚರಂಡಿ ನಿರ್ಮಿಸಲಾಗುವುದು. ಒಳ ಚರಂಡಿ ನಿರ್ವಹಣೆ ಸರಿಯಿಲ್ಲದೆ ಕೆಲವು ಕಡೆ ದುರ್ನಾತ ಬೀರುತ್ತಿದೆ. ಅದನ್ನು ಸರಿಪಡಿಸಲಾಗುವುದು. ತಾಲ್ಲೂಕಿನಿಂದ ನೆರೆಯ ಆಂಧ್ರಪ್ರದೇಶಕ್ಕೆ ಹರಿದು ಹೋಗುವ ಮಳೆ ನೀರನ್ನು ದಕ್ಷಿಣಾಭಿಮುಖವಾಗಿ ಹರಿಸಿ, ರೋಣೂರು ಕೆರೆ ಸೇರಿದಂತೆ, ಅಮಾನಿಕೆರೆಗೆ ಹರಿಸಲಾಗುವುದು. ಕೆರೆ ಅಭಿವೃದ್ಧಿಪಡಿಸಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಗೃಹ ಲಕ್ಷ್ಮಿ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಬಡ ಕುಟುಂಬಗಳ ಪಾಲಿಗೆ ವರದಾನವಾಗಿದೆ. ಯೋಜನೆ ಹಣದಿಂದ ಮಹಿಳೆಯರಿಗೆ ಮಾತ್ರವಲ್ಲದೆ, ಕುಟುಂಬದ ಎಲ್ಲ ಸದಸ್ಯರಿಗೆ ಅನುಕೂಲವಾಗುತ್ತದೆ. ಇನ್ನೂ ಅರ್ಜಿ ಸಲ್ಲಿಸದಿದಿರುವ ಅರ್ಹ ಮಹಿಳೆಯರು ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವಿ.ನಾಗರಾಜು, ಎನ್.ಶಂಕರ್, ನಾಗರಾಜ್, ಸಬ್ಬೀರ್, ಆನಂದ್, ಎಂ.ಶ್ರೀನಿವಾಸನ್, ಕೆ.ಜಿ.ರಮೇಶ್, ಮನು ಇದ್ದರು.

ರಾಜಕೀಯ ದಿಗ್ಗಜರಿಂದ ಕ್ರೀಡಾ ಚಟುವಟಿಕೆಗಳಿಗೆ ನೆರವಾಗುವಂತಹ ಪುಸ್ತಕಗಳ, ಕೈಪಿಡಿಗಳ ಬಿಡುಗಡೆ

ಕೋಲಾರ ತಾಲ್ಲೂಕಿನ ಕ್ಯಾಲನೂರು ಕೆಪಿಎಸ್ ಶಾಲೆಯ ದೈಹಿಕ ಶಿಕ್ಷಕ ಡಾ.ಜಿ.ಎಂ.ಶ್ರೀನಿವಾಸ್ ಅವರು ಕ್ರೀಡಾಚಟುವಟಿಕೆಗಳಿಗೆ ನೆರವಾಗಲು ಬರೆದಿರುವ ನಾಲ್ಕು ಪುಸ್ತಕಗಳಾದ ಥ್ರೋಬಾಲ್ ನವೀನ ನಿಯಮಗಳು, ಕಬಡ್ಡಿ ನವೀನ ನಿಯಮಗಳು, ಕರಾಟೆ ಕೈಪಿಡಿ ಮತ್ತು ಸ್ಪರ್ಧಾತ್ಮಕ ಸಾಹಿತ್ಯ ಕೈಪಿಡಿಗಳನ್ನು ಮೂಡಬಿದರೆಯಲ್ಲಿ ನಡೆದ ರಾಜ್ಯಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಸಮ್ಮೇಳನದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಭಾಧ್ಯಕ್ಷ ಅಬ್ದುಲ್ ಖಾದರ್, ಎಂಎಲ್‍ಸಿ ಅರುಣ ಷಹಾಪುರ,ಪುಟ್ಟಣ್ಣ, ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್.ಚೌಡಪ್ಪ, ಮುಡಬಿದರೆ ಭಾವನಾ ಮತ್ತಿತರರಿದ್ದರು.