ಜಿಲ್ಲಾ ಲಯನ್ಸ್ 317C ಸಂಪುಟ – ಪದಪ್ರದಾನ ‘ಬೆಳಕು’ ಸಮಾರಂಭ

ಉಡುಪಿ, ಆ. 20: ಜಿಲ್ಲಾ ಲಯನ್ಸ್ 317C ಸಂಪುಟ – ಪದಪ್ರದಾನ ‘ಬೆಳಕು’ ಸಮಾರಂಭ ಶನಿವಾರ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ನಡೆಯಿತು.

ಹಿಂದಿನ ಅಂತಾರಾಷ್ಟ್ರೀಯ ನಿರ್ದೇಶಕ ಕೆ.ಜಿ. ರಾಮಕೃಷ್ಣಮೂರ್ತಿ ನೂತನ ಸಂಪುಟ ಪದಪ್ರದಾನ ನೆರವೇರಿಸಿದರು. ಲಯನ್ಸ್ ಜಿಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಥಮ ಮಹಿಳೆ ಓಫಿಲಿಯಾ ಫಿಲೋಮಿನಾ ಕರ್ನೆಲಿಯೋ ಬೆಳಕು ಪದ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿದರು.

ಉಡುಪಿ ಧರ್ಮಪ್ರಾಂತದ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಆಶೀರ್ವಚನ ನೀಡಿ, ಡಾ| ನೇರಿ ಕರ್ನೇಲಿಯೊ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗಾಗಿ ತೊಡಗಿಸಿಕೊಂಡವರು. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಕ್ಷೇತ್ರವೇ ಅಡಿಪಾಯವಾಗಿದೆ. ದೂರದೃಷ್ಟಿ ಯೋಜನೆಗಳ ಮೂಲಕ ಅಸಂಖ್ಯಾತ ಜೀವನವನ್ನು ಬೆಳಗಿಸಿದ್ದಾರೆ. ಉತ್ತಮ ನಾಯಕತ್ವ ಸಂಘಟನಾತ್ಮಕ ದೃಷ್ಟಿಕೋನ ಹೊಂದಿರುವ ಅವರಿಂದ ಲಯನ್ ಅಧಿಕಾರಾವಧಿಯಲ್ಲಿ ಸಮಾಜಕ್ಕೆ ಇನ್ನಷ್ಟು ಬೆಳಕು ಸಿಗುವಂತಾಗಲಿ ಎಂದು ಹಾರೈಸಿದರು.

ಲಯನ್ಸ್ ಗವರ್ನರ್ ಡಾ| ನೇರಿ ಕರ್ನೇಲಿಯೋ ಅವರು ಮಾತನಾಡಿ, ಲಯನ್ಸ್ 317ಸಿ ಉತ್ತಮ ಸೇವಾ ಕಾರ್ಯದ ಮೂಲಕ ಮಾದರಿ ಯಾಗಿದೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಸಾಕಷ್ಟು ಯೋಜನೆಗಳನ್ನು ರೂಪಿಸುವ ಜತೆಗೆ ಸೇವಾ ಮತ್ತು ಸಮಾಜಮುಖಿ ಚಟುವಟಿಕೆ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಲಾಗುವುದು ಎಂದರು.

ಸೇವಾ ಚಟುವಟಿಕೆಯಾಗಿ ಹಿಂದಿನ ಜಿಲ್ಲಾ ಗವರ್ನರ್ ಜಿ. ಶ್ರೀನಿವಾಸ್ ಪ್ರಾಯೋಜಕತ್ವದಲ್ಲಿ ಜಿಲ್ಲೆಯ 10 ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಕಾರವಾರ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು.

ಲಯನ್ಸ್ ಮಾಜಿ ನಿರ್ದೇಶಕ ಕೆ. ವಂಶಿಧರ್ ಬಾಬು, ಮಲ್ಟಿಪಲ್ ಚೇರ್‌ಪರ್ಸನ್ ರಾಜಶೇಖರಯ್ಯ, ಲಯನ್ಸ್ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ| ಎಂ. ಕೆ. ಭಟ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಸಪ್ಪಾ ಸುರೇಶ್, ಲಯನ್ಸ್ ಕ್ಲಬ್ ಪ್ರಮುಖರಾದ ಪ್ರಕಾಶ್ ಟಿ. ಸೋನ್ಸ್, ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಡಾ| ತಲ್ಲೂರು ಶಿವರಾಮ ಶೆಟ್ಟಿ, ಎನ್. ಎಂ. ಹೆಗಡೆ, ರವಿರಾಜ್ ನಾಯಕ್, ರಿಚರ್ಡ್ ಡಯಾಸ್, ಆದಿತ್ಯ ಆರ್. ಶೇಟ್, ಜೆರಾಲ್ಡ್ ಫೆರ್ನಾಂಡಿಸ್, ಹರಿಪ್ರಸಾದ್ ರೈ, ಮೆಲ್ವಿನ್ ಅರಾನ್ನ, ಜಾರ್ಜ್ ಡಿ’ಸೋಜಾ, ಆಲ್ಡನ್ ಕರ್ನೇಲಿಯೊ ಉಪಸ್ಥಿತರಿದ್ದರು. ಸುಗುಣಾ ಕುಮಾ‌ ಸ್ವಾಗತಿಸಿ, ಉಮೇಶ್ ನಾಯಕ್ ವಂದಿಸಿ, ಡಾ| ಜಗದೀಶ ಹೊಳ್ಳ ನಿಹಾಲ್ ಹೆಗ್ಡೆ ನಿರೂಪಿಸಿದರು.

ಆನಗಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಎಚ್.ಕೆ.ಸವಿತಾ ಉಪಾಧ್ಯಕ್ಷರಾಗಿ ಉದಯ ಪೂಜಾರಿ ಆಯ್ಕೆ

ಕುಂದಾಪುರ :ಅನಗಳ್ಳಿ ಗ್ರಾಮ ಪಂಚಾಯತ್‍ನ 2ನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಚ್. ಕೆ.ಸವಿತಾ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ ಇವರು ಆಯ್ಕೆಯಾದರು.

ಈ ಗ್ರಾಮ ಪಂಚಾಯತ್‍ನಲ್ಲಿ ಒಟ್ಟು 8 ಸ್ಥಾನಗಳಿದ್ದು. 3 ಕಾಂಗ್ರೆಸ್ , 3 ಬಿಜೆಪಿ, 2 ಪಕ್ಷೇತರ. ಸೋಮವಾರ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ಆಭ್ಯರ್ಥಿಗೆ 4 ಮತ ಮತ್ತು ಬಿಜೆಪಿ ಬೆಂಬಲಿತ ಆಭ್ಯರ್ಥಿ 4 ಮತಗಳನ್ನು ಸಮಬಲವಾಗಿ ಪಡೆದುಕೊಂಡಿದ್ದರು. ಇಬ್ಬರು ಆಭ್ಯರ್ಥಿಗಳಿಗೂ ಸಮಬಲವಾಗಿ ಮತ ಚಲಾವಣೆಯಾದ್ದರಿಂದ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಪ್ರಕ್ರಿಯೆ ಕೈಗೊಂಡಾಗ ಅಧ್ಯಕ್ಷ ಸ್ಥಾನ ಎನ್ನುವುದು ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿ ಎಚ್ ಕೆ ಸವಿತಾ ಇವರ ಪಾಲಾಯಿತು. ಉಪಾಧ್ಯಕ್ಷರಾಗಿ ಉದಯ ಪೂಜಾರಿ ಇವರು ಅವಿರೋಧವಾಗಿ ಆಯ್ಕೆಯಾದರು.

ಆನಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಹಿಂ.ವ.ಅ(ಮ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮನ್ಯ ಸ್ಥಾನಕ್ಕೆ ಮೀಸಲಾಗಿತ್ತು. ಚುನಾವಣಾಧಿಕಾರಿಯಾಗಿ ಕುಂದಾಪುರ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತ ಎಮ್, ಕರ್ತವ್ಯ ನಿರ್ವಹಿಸಿದರು.

ಭೂಪಟ-ಬಾವುಟ ಆರಾಧನೆಯಷ್ಟೇ ದೇಶಪ್ರೇಮವಲ್ಲ: ವಿಶ್ವ ಕುಂದಾಪುರ


ಹೊನ್ನಾವರ: ಉತ್ತರಕನ್ನಡಜಿಲ್ಲೆ ಹೊನ್ನಾವರದ ಬಂದರುರಸ್ತೆಯ ಭಗತ್ ಸಿಂಗ್ ಸಂಘ ಆಗಸ್ಟ್ 15ರಂದು ಏರ್ಪಡಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಲೇಖಕ ವಿಶ್ವ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು.
ಭೂಪಟ ಮತ್ತು ಬಾವುಟದ ಆರಾಧನೆಯಷ್ಟೇ ದೇಶಪ್ರೇಮವಲ್ಲ. ಜನರ ಸಂಕಷ್ಟ ನಿವಾರಣೆಗೆ ದುಡಿಯುವುದು, ಅಂಥ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದೇ ನಿಜವಾದ ರಾಷ್ಟ್ರ ಪ್ರೇಮಎಂದು ಮುಖ್ಯ ಅತಿಥಿಯಾಗಿ ಮಾತನಾಡಿದ ವಿಶ್ವ ಕುಂದಾಪುರ ಹೇಳಿದರು. ಜಾತಿ-ದೇವರು-ಧರ್ಮದ ಹೆಸರಿನಲ್ಲಿ ಜನರ ನಡುವೆ ದ್ವೇಷಾಗ್ನಿ ಹಚ್ಚುವ ಶಕ್ತಿಗಳ ಬಗ್ಗೆ ಎಚ್ಚರದಿಂದಿರುವುದು ಅಗತ್ಯಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿಗಳು ಹಾಗೂ ಎಳೆಯ ಚೇತನಗಳು ವಹಿಸಿದ್ದ ಪಾತ್ರವನ್ನು ಸ್ಮರಿಸುವ ವಿಶ್ವ ಕುಂದಾಪುರ ರಚಿತ ಹಾಡನ್ನು ಭಗತ್ ಸಿಂಗ್ ಸಂಘದ ಮುಖ್ಯಸ್ಥ ನಿತ್ಯಾನಂದ ಪಾಲೇಕರ್ ಹಾಗೂ ಮಂಜುನಾಥ ನಾಯ್ಕ ಹಾಡಿ ಸಭಿಕರನ್ನು ಮುದಗೊಳಿಸಿದರು. ಶ್ರೀ ಯದುವೀರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶ್ರೀಕಾಂತ ನಾಯ್ಕ ಧ್ವಜಾರೋಹಣ ನೆರವೇರಿಸಿದರು. ಸಾಮಾಜಿಕ ಹೋರಾಟಗಾರ ಉಮೇಶ್‍ ಮೇಸ್ತ ಅತಿಥಿಯಾಗಿದ್ದರು. ಹೊನ್ನಾವರ ಪಟ್ಟಣ ಪಂಚಾಯತಿ ಮಾಜಿ ಸದಸ್ಯೆ ಜಮೀಲಾ ಶೇಖ್, ನವೀನ್ ಮೇಸ್ತ, ವಿನಾಯಕ್, ಆಫಾನ್ ಮುಲ್ಲಾ, ಗಣಪತಿ ನಾಯ್ಕ್, ರಾಜೇಶ್ವರ ಪಾಲೇಕರ್ ಮೊದಲಾದವರು ಇದ್ದರು.

ನಾಟಕ ಪ್ರದರ್ಶನ: ಹೊನ್ನಾವರದ ಅರೆಅಂಗಡಿಯಎಸ್.ಎಸ್.ಎಸ್.ಕೆ.ಪಿ. ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಶ್ವ ಕುಂದಾಪುರ ರಚಿತ `ನಾವು ಎಳೆಯರು ಸ್ವಾತಂತ್ರ್ಯ ವೀರರು’ ನಾಟಕವನ್ನು ಶಾಲೆಯಲ್ಲಿ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ಆರನೇ ತರಗತಿ ಮಕ್ಕಳು ಅಭಿನಯಿಸಿದ ನಾಟಕವನ್ನು ಶಿಕ್ಷಕಿ ದಿವ್ಯಾ ಹೆಗಡೆ ನಿರ್ದೇಶಿಸಿದರು.

ಕುಂದಾಪುರದಲ್ಲಿ ಸುಕೃತ ಸಮಾವೇಶ- “ಸಮಯ” ದೇವರ ಅತ್ಯಮೂಲ್ಯ ವರ


ದೇವರು ನಮಗೆ ನೀಡಿದ ವರ, ಚಿನ್ನ, ಬೆಳ್ಳಿ, ಕಾರು, ಬಂಗಲೆ ಅಲ್ಲ. ಮುಖ್ಯವಾಗಿ ನಮಗೆ ನೀಡಿದ ವರ, ಸಮಯ. ಈ ಸಮಯವನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡರೆ ಜೀವನದಲ್ಲಿ ಬೇರೆ ಎಲ್ಲಾ ರೀತಿಯ ಸಂಪತ್ತನ್ನು ಗಳಿಸಬಹುದು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ನಡೆ-ನುಡಿ, ಗುರಿ ಸಾಧನೆಯ ಹಾದಿ, ಎಲ್ಲ ವಿಷಯಗಳಲ್ಲೂ ಪರಿಪೂರ್ಣತೆ ಪಡೆಯಲು ಶಿಸ್ತು, ಶ್ರದ್ಧೆಯಿಂದ ಶ್ರಮಿಸಬೇಕು. ದೇವರ ಮೇಲೆ ವಿಶ್ವಾಸವಿಟ್ಟು, ಗುರು ಹಿರಿಯರಲ್ಲಿ ಗೌರವ ಇಟ್ಟು, ಮಾತಾ ಪಿತಾರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ಸು ಖಂಡಿತ” ಎಂದು ಉಡುಪಿ ಕುಂಜಿಬೆಟ್ಟು ಶಾರದಾ ವಸತಿ ಶಾಲೆಯ ನಿರ್ದೇಶಕರಾದ ವಿದ್ಯಾವಂತ ಆಚಾರ್ಯ ಹೇಳಿದರು.
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್.ಬಿ. ದೇವಾಲಯಗಳ ಒಕ್ಕೂಟ (ರಿ.) ಮಂಗಳೂರು ಸಂಘಟನೆಯ ಕುಂದಾಪುರ ವಲಯದ ಸಮಾವೇಶ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡುತ್ತಾ ಅವರು ನುಡಿದರು.
“ನನ್ನಿಂದ ಸಾಧ್ಯವಿದೆ” ಎಂಬ ಆತ್ಮ ವಿಶ್ವಾಸವಿರಿಸಿಕೊಂಡು ಯುವಕರು ಮುನ್ನಡೆದರೆ ಗುರಿ ಸಾಧನೆ ಮಾಡಲು ಸಾಧ್ಯ ಎಂದು ಹಲವು ನಿದರ್ಶನಗಳನ್ನು ನೀಡಿದ ಅವರು, ಯಾವುದೇ ಅನಾನುಕೂಲತೆಗಳನ್ನು ಗೆದ್ದು ಜಯ ಸಾಧಿಸಲು ಸಾಧ್ಯವಿದೆ” ಗೌಡ ಸಾರಸ್ವತ ಸಮಾಜದವರಿಗೆ ಬುದ್ಧಿಶಕ್ತಿ, ಜ್ಞಾನ, ಕರ್ತತ್ವ ಶಕ್ತಿ ದೇವರು ನೀಡಿದ್ದಾನೆ. ಧರ್ಮಕ್ಕಾಗಿ ನಮ್ಮವರು ಬಹಳ ತ್ಯಾಗ ಮಾಡಿದ್ದಾರೆ. ಜೀವನವನ್ನು ಸದುಪಯೋಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ಸಮಾವೇಶದ ಅಧ್ಯಕ್ಷತೆಯನ್ನು ಕುಂದಾಪುರ ವಲಯದ ಅಧ್ಯಕ್ಷ ಡಿ. ಗೋಪಾಲಕೃಷ್ಣ ಕಾಮತ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ, ಜಿ.ಎಸ್.ಬಿ. ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಅತುಲ್ ಕುಡ್ವ ಮಂಗಳೂರು, ಕಾರ್ಯದರ್ಶಿ ಆರ್ಬೆಟ್ಟು ಮಾಧವ ಕಾಮತ್, ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಶ್ರೀಧರ ಕಾಮತ್ ಭಾಗವಹಿಸಿ, ಶುಭ ಹಾರೈಸಿ, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವೇ.ಮೂ.ಜಿ. ಪ್ರಕಾಶ್ ಭಟ್ ಚೇಂಪಿ, “ಸಂಸ್ಕಾರ ಸುಧೆ” ಕಾರ್ಯಕ್ರಮ ಮೂಲಕ ಮೌಲಿಕ ಜ್ಞಾನ ಪರಿಚಯಿಸಿದರು.
ಹಿರಿಯ ಸಾಧಕರಾದ ವೇ.ಮೂ. ಬಸ್ರೂರು ಪಾಂಡುರಂಗ ಆಚಾರ್ಯ ಉಡುಪಿ, ಡಾ. ಎಸ್. ಎನ್. ಪಡಿಯಾರ್ ಕುಂದಾಪುರ, ಎಚ್. ಗಣೇಶ ಕಾಮತ್ ಗಂಗೊಳ್ಳಿ, ದಕ್ಕೇರಬಾಳು ಮಾಧವ ಕಾಮತ್ ಸಿದ್ದಾಪುರ, ಆಟಕೆರೆ ಲಕ್ಷ್ಮಣ ಗೋವಿಂದ್ರಾಯ ಪೈ ಕೋಟೇಶ್ವರ, ಜಿ. ಪದ್ಮನಾಭ ಕಿಣಿ ಗಾವಳಿ, ಶ್ರೀಮತಿ ಚಂದ್ರಮತಿ ಸದಾಶಿವ ನಾಯಕ್ ಚೇಂಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇ.ಮೂ.ದಾಮೋದರ ಆಚಾರ್ಯ ಬಸ್ರೂರು ಇವರಿಗೆ ಮರಣೋತ್ತರ ಗೌರವ ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕೆ. ರಾಧಾಕೃಷ್ಣ ಶೆಣೈ ಸ್ವಾಗತಿಸಿದರು. ಗಣೇಶ ನಾಯಕ ಶಿರಿಯಾರ ಕಾರ್ಯಕ್ರಮ ನಿರೂಪಿಸಿದರು

ಎಂಸಿಸಿ ಬ್ಯಾಂಕಿಗೆ ಅನಿಲ್ ಲೋಬೊ ತಂಡ ಅವಿರೋಧ ಪುನರಾಯ್ಕೆ, 2028ರ ವರೆಗೆ ಮತ್ತೆ ಸಾರಥ್ಯ

ಮಂಗಳೂರು ಕಥೋಲಿಕ್ ಕೊ – ಅಪರೇಟಿವ್ ಬ್ಯಾಂಕ್ ನಿಯಮಿತ ಇದರ, ಅಗೋಸ್ತ್ 13ರಂದು ನಾಮಪತ್ರ ಸಲ್ಲಿಕೆಯೊಂದಿಗೆ ಆರಂಭಗೊಂಡ ಚುನಾವಣಾ ಪ್ರಕ್ರಿಯೆಗೆ, ಆಕಾಂಕ್ಷೆವುಳ್ಳ 14 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅಗೋಸ್ತ್ 20 ರಂದು ನಾಮಪತ್ರ ಪರಿಶೀಲನೆಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲಾ 14 ಅಭ್ರ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ದವಾಗಿದ್ದು, ಬ್ಯಾಂಕಿನ ಆಡಳಿತ ಮಂಡಲಿ ರಚನೆಯಾಗಲು ಇರಬೇಕಾದ ಕೋರಂ ಇದ್ದುದನ್ನು ಪರಿಗಣಿಸಿ, ರಿಟರ್ನಿಂಗ್ ಅಧಿಕಾರಿ ಶ್ರೀ ಸುಧೀರ್ ಕುಮಾರ್ ಜೆ., ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು ಇವರು – ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆಗೊಂಡು ಚುನಾಯಿತರೆಂದು ಫೆÇೀಷಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಕಥೋಲಿಕ್ ಕೊ-ಅಪರೇಟಿವ್ ಬ್ಯಾಂಕ್ (ಎಂಸಿಸಿ ಬ್ಯಾಂಕ್) ಇದರ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ, ಆಗಸ್ಟ್ 27 ರಂದು ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ತಿಳಿಸಿದ್ದಾರೆ.
ಈ ಮೂಲಕ 111 ವರ್ಷಗಳ ಇತಿಹಾಸವಿರುವ, ಮಂಗಳೂರಿನ ಸಹಕಾರಿ ರಂಗದ ಮುಂಚೂಣಿಯ ಎಂಸಿಸಿ ಬ್ಯಾಂಕಿನ ಚುಕ್ಕಾಣಿ, ಮುಂದಿನ 5 ವರ್ಷಗಳ ಅವಧಿಗೆ, ಹಾಲಿ ಅಧ್ಯಕ್ಷ ಶ್ರೀ ಅನಿಲ್ ಲೋಬೊ ನೇತೃತ್ವದ ತಂಡದ ಪಾಲಾಗಿದೆ. 111 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬ್ಯಾಂಕಿನ ನಿರ್ದೇಶಕ ಮಂಡಳಿಯ ಆಯ್ಕೆ ಅವಿರೋಧವಾಗಿ £ಡೆದಿದ್ದು, ವೆಲೆನ್ಸಿಯಾ ನಿವಾಸಿ ಶ್ರೀ ಅನಿಲ್ ಲೋಬೊ ನೇತೃತ್ವದ ತಂಡದಲ್ಲಿ ಜೆರಾಲ್ಡ್ ಪಿಂಟೋ, ಕಲ್ಯಾಣ್‍ಪುರ, ರೋಶನ್ ಡಿಸೋಜ, ಮುಡಿಪು, ಹೆರಾಲ್ಡ್ ಜೋನ್ ಮೊಂತೆರೊ, ಕೆಲರಾಯ್, ಜೋಸೆಫ್ ಎಂ.ಅನಿಲ್ ಪತ್ರಾವೊ, ದೆರೆಬೈಲ್, ಡೇವಿಡ್ ಡಿಸೋಜ, ಬಜಪೆ, ಮೆಲ್ವಿನ್ ಅಕ್ವಿನಸ್ ವಾಸ್, ಮಂಗಳೂರು, ಜೆ.ಪಿ.ರೊಡ್ರಿಗಸ್, ಪುತ್ತೂರು, ಆಂಡ್ರು ಡಿಸೋಜ, ಮೂಡಬಿದ್ರಿ, ಎಲ್‍ರೊಯ್ ಕಿರಣ್ ಕ್ರಾಸ್ಟೊ, ಗಂಗೊಳ್ಳಿ, ಜೆರಾಲ್ಡ್ ಜೂಡ್ ಡಿಸಿಲ್ವ, ಕಾರ್ಕಳ, ವಿನ್ಸೆಂಟ್ ಅನಿಲ್ ಲಸ್ರಾದೊ, ಬಂಟ್ವಾಳ, ಐರಿನ್ ರೆಬೆಲ್ಲೊ, ಕುಲಶೇಖರ ಮತ್ತು ಫ್ರೀಡಾ ಫ್ಲಾವಿಯಾ ಡಿಸೋಜ, ಬಳ್ಕುಂಜೆ ಇದ್ದಾರೆ.
ಹಾಲಿ ಬ್ಯಾಂಕಿನ ಆಡಳಿತ ಮಂಡಲಿಯ ಅವಧಿಯು ಅಗೋಸ್ತ್ 26 ರಂದು ಕೊನೆಗೊಳ್ಳಲಿದ್ದು, ನಂತರ ನೂತನ ಆಡಳಿತ ಮಂಡಲಿ ರಚನೆಯಾಗಲಿದೆ.

ಪ್ರಮೀಳಾ ಡಿಸೊಜಾ ಇವರಿಗೆ ಡಾಕ್ಟರೇಟ್

ಮಂಗಳೂರಿನ ಫಾದರ್ ಮುಲ್ಲರ್ ನರ್ಸಿಂಗ್ ಮಹಾವಿದ್ಯಾಲಯದ, ಸ್ತ್ರೀರೋಗ ಮತ್ತು ಹೆರಿಗೆಶಾಸ್ತ್ರ ವಿಭಾಗದಲ್ಲಿ ಪ್ರಾದ್ಯಾಪಕಿಯಾಗಿರುವ ಪ್ರಮೀಳಾ ಡಿ ಸೊಜಾ ಇವರು “ಇಫೆಕ್ಟಿವ್‌ನೆಸ್ ಒಫ್ ಮಲ್ಟಿ ಮೊಡ್ಯುಲರ್ ಇಂಟರ್ವೆನ್ಶನ್ಸ್ ಒಫ್ ಲೈಫ್‌ಸ್ಟೈಲ್ ಮೋಡಿಫಿಕೇಶನ್ ಒನ್ ಸಿಂಫ್ಟಮ್ಸ್ ಒಫ್ ಪೊಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಆಂಡ್ ಕ್ವಾಲಿಟಿ ಒಫ್ ಎಮಂಗ್ ವಿಮೆನ್ ಇನ್ ಸಿಲೆಕ್ಟೆಡ್ ಹೊಸ್ಪಿಟಲ್ಸ್, ಮಂಗಳೂರು, ಇಂಡಿಯಾ” ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಯೆನೆಪೋಯಾ ಡೀಮ್ಡ್ ಯುವಿವರ್ಸಿಟಿ  ಪಿ.ಎಚ್.ಡಿ ಪದವಿ ನೀಡಿದೆ. 
ಈ ಮಹಾಪ್ರಬಂದವನ್ನು ಅವರು ಡಾ| ಕೆ. ರಾಜಗೋಪಾಲ್, ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ಯೆನೆಪೊಯಾ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಇವರ ಮಾರ್ಗದರ್ಶನ ಮತ್ತು ಡಾ| ದೇವಿನಾ ರೊಡ್ರಿಗಸ್, ಉಪ ಪ್ರಾಂಶುಪಾಲರು, ಫಾದರ್ ಮುಲ್ಲರ್ ನರ್ಸಿಂಗ್ ಮಹಾವಿದ್ಯಾಲಯ ಇವರ ಸಹ – ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದರು. 
ಡೊ| ಪ್ರಮೀಳಾ ಡಿ’ಸೊಜಾ ಮಂಗಳೂರಿನ ಫಳ್ನೀರ್ ನಿವಾಸಿಯಾಗಿದ್ದು, ಇಂಗ್ಲಿಶ್ ಪ್ರಾಧ್ಯಾಪಕ ರೋಶನ ಮಾಡ್ತಾ ಇವರ ಪತ್ನಿಯಾಗಿದ್ದಾರೆ.  

ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಫಾ|ಸ್ಟ್ಯಾನಿ ತಾವ್ರೋರವರ ಜನ್ಮ ದಿವಸದ ಅಮ್ರತ ಮಹೋತ್ಸವದ ಆಚರಣೆ


ಕುಂದಾಪುರ, 21 ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಫಾ |ಸ್ಟ್ಯಾನಿ ತಾವ್ರೋರವರ 75ನೇ ಹುಟ್ಟುಹಬ್ಬವನ್ನು ಆ. 20 ರಂದು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಫಾ|ಸ್ಟ್ಯಾನಿ ತಾವ್ರೋರವರು ತಮ್ಮ 75ನೇ ಜನ್ಮ ದಿವಸದ ಸಂದರ್ಭದಲ್ಲಿ ಕ್ರತಜ್ಞತಾ ಪೂರ್ವಕ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ಫಾ|ಅಶ್ವಿನ್ ಆರಾನ್ನಾ ಸಹ ಯಾಜಕರಾಗಿ ದಿವ್ಯ ಬಲಿ ಪೂಜೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತಾಡಿದ ಫಾ|ಸ್ಟ್ಯಾನಿ ತಾವ್ರೋರವರು, “ನನ್ನ ಜೀವನದ 75 ವರ್ಷಗಳು ಅದು ಹೇಗೆ ಕಳೆದು ಹೋದವು ಎಂದು ನನಗೆ ತಿಳಿಯಲೇ ಇಲ್ಲ, ಈ 75 ವರ್ಷಗಳಲ್ಲಿ ಹಲವು ಕಾರ್ಯ ಸಾಧನೆಗಳನ್ನು ಮಾಡಲು ನನಗೆ ಸಾಧ್ಯವಾಗಿದೆ, ಆದರೆ ಇವೆಲ್ಲದರ ಹಿಂದೆ ಒಂದು ಬಲವಾದ ಕೈ ಇದೆ, ಅದುವೇ ಭಗವಂತನ ಕೈ, ಆತನ ಅನುಗ್ರಹದಿಂದಾಗಿ ನಾನು ಈ ಸಾರ್ಥಕತೆಯ ತುಂಬು ಜೀವನವನ್ನು ಜೀವಿಸಲು ಸಾಧ್ಯವಾಗಿದೆ, ಆದ್ದರಿಂದ ಭಗವಂತನಿಗೆ ನಾನು ಅನಂತ ವಂದನೆಯನ್ನು ಸಲ್ಲಿಸುತ್ತೇನೆ”. ಎಂದರು.

ದಿವ್ಯ ಬಲಿಪೂಜೆಯ ನಂತರ ಫಾ|ಸ್ಟ್ಯಾನಿ ತಾವ್ರೋರವರು ತಮ್ಮ 75ನೇ ಹುಟ್ಟುಹಬ್ಬದ ಕೇಕನ್ನು ಸಮಸ್ತ ಜನರ ಸಮ್ಮುಖದಲ್ಲಿ ಕತ್ತರಿಸಿದರು. ಈ ಸಂದರ್ಭದಲ್ಲಿ ಚರ್ಚಿನ ಗಾಯನ ಮಂಡಳಿಯಿಂದ ಅಭಿನಂದನಾ ಗೀತೆಯನ್ನು ಹಾಡಲಾಯಿತು. ಸಹಾಯಕ ಧರ್ಮಗುರುಗಳಾದ ಫಾ|ಅಶ್ವಿನ್ ಆರಾನ್ನಾರವರು ಫಾ|ಸ್ಟ್ಯಾನಿ ತಾವ್ರೋರವರ ಬಗ್ಗೆ ಹಿತನುಡಿಗಳನ್ನಾಡಿ, ಅವರ ಜೀವನಶೈಲಿ, ಶಿಸ್ತುಬದ್ಧತೆ, ಧಾರ್ಮಿಕಶ್ರದ್ಧೆ, ಸಾಮಾಜಿಕ ಕಳಕಳಿ ಹಾಗೂ ಕಾರ್ಯವೈಖರಿಯ ಗುಣಗಾನವನ್ನು ಮಾಡಿದರು ಮತ್ತು ಫಾ|ಸ್ಟ್ಯಾನಿ ತಾವ್ರೋರವರಿಗೆ ಹೂಗುಚ್ಚವನ್ನಿತ್ತು ಶುಭಾಶಯ ಕೋರಿದರು.

ತದನಂತರ ತಮ್ಮ ಮನದಾಳದ ಮಾತುಗಳನ್ನಾಡಿದ ಫಾ|ಸ್ಟ್ಯಾನಿ ತಾವ್ರೋರವರು,”ಈ ನನ್ನ 75 ವರ್ಷದ ಸಾರ್ಥಕ ಬದುಕಿನಲ್ಲಿ ದೇವರು ನನಗೆ ಹಲವು ಉನ್ನತ ಹುದ್ದೆಗಳನ್ನು ದಯಪಾಲಿಸಿದ್ದಾರೆ, ಆದರೆ ಹುದ್ದೆಗಳಲ್ಲಿದ್ದು ನಾನು ಮಾಡಿದ ಸಾಧನೆಗಳ ಬಗ್ಗೆ ಹೇಳಿಕೊಳ್ಳಲು ನಾನು ಬಯಸುವುದಿಲ್ಲ. ನಾನು ಕುಂದಾಪುರಕ್ಕೆ ಬಂದ ನಂತರ ಇಲ್ಲಿನ ಜನರ ಸಹಕಾರದಿಂದ ಹಲವು ಪ್ರಗತಿಪರ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಇಲ್ಲಿನ ಜನರಾದ ನೀವು ವಿಶಾಲ ಹೃದಯಿಗಳು, ದೇವರಲ್ಲಿ ಅತೀವ ಶ್ರದ್ಧೆ ಭಕ್ತಿಯುಳ್ಳವರು, ನೀವು ನನ್ನ ಮೇಲೆ ತೋರಿದ ಪ್ರೀತ್ಯಾದರ ಹಾಗೂ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ನಿಮ್ಮ ಒಳ್ಳೆಯತನಕ್ಕಾಗಿ ನಿಮ್ಮ ಮೇಲೆ ದೇವರ ಆಶೀರ್ವಾದಗಳನ್ನು ಬೇಡಿಕೊಳ್ಳುತ್ತೇನೆ. ರೋಜರಿ ಮಾತೆಯು ನಿಮ್ಮನ್ನು ಸದಾ ಹರಸಲಿ. ನನ್ನ ಕೊನೆಯ ಉಸಿರಿರುವವರೆಗೆ ಯಾಜಕನಾ ಗಿ ದೇವರ ಸೇವೆಯನ್ನು ಮಾಡುತ್ತಾ, ನನ್ನ ಪಾಲಿಗೆ ಬರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ, ಇದಕ್ಕೆ ಬೇಕಾದ ಶಕ್ತಿ ಮತ್ತು ಸಾಮರ್ಥ್ಯವನ್ನು ಆ ದೇವರು ನನಗೆ ಕರುಣಿಸಲಿ ಎಂದು ನನಗಾಗಿ ನೀವು ಕೂಡ ಪ್ರಾರ್ಥಿಸಿರಿ’ ಎಂದರು.

ಹೋಲಿ ರೋಜರಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶ್ರೀಮತಿ ಶಾಲೆಟ್ ರೆಬೆಲ್ಲೊ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಶ್ರೀಮತಿ ಆಶಾ ಕರ್ವಾಲ್ಲೊ ವಂದಿಸಿದರು. ಈ ಸಂದರ್ಭದಲ್ಲಿ 20 ಆಯೋಗಗಳ ಸಂಚಾಲಕಿ ಶ್ರೀಮತಿ ಪ್ರೇಮಾ ಡಿಕುನ್ಹಾ, ಸೈಂಟ್ ಜೋಸೆಫ್ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಸುಪ್ರಿಯಾ, ಧರ್ಮಭಗಿನಿಯರು, ಗುರಿಕಾರರು, ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಚರ್ಚಿನ ಧರ್ಮಪ್ರಜೆಗಳು ಉಪಸ್ಥಿತರಿದ್ದು ಫಾ|ಸ್ಟ್ಯಾನಿ ತಾವ್ರೋರವರಿಗೆ 75ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.