ಕುಂದಾಪುರದಲ್ಲಿ “ಜ್ಞಾನೋದಯ” ಸ್ಪರ್ಧೆ

ಭಂಡಾರ್‍ಕಾರ್ಸ್ ಪ.ಪೂ.ಕಾಲೇಜು ಕುಂದಾಪುರ ಹಾಗೂ ಕುಂದಪ್ರಭ ಸಂಸ್ಥೆಯ ಸಹಯೋಗದಲ್ಲಿ “ಜ್ಞಾನೋದಯ” ಎಂಬ ಸಾಮಾನ್ಯ ಜ್ಞಾನ ಸ್ಪರ್ಧೆ ಸೆ.9 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಭಂಡಾರ್‍ಕಾರ್ಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದ್ದು ಪ್ರತಿಯೊಂದು ಪ್ರೌಢಶಾಲೆಯಿಂದ ಕನಿಷ್ಟ 5 ಹಾಗೂ ಗರಿಷ್ಟ 10 ಮಂದಿ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ.
ಈ ಸಾಮಾನ್ಯಜ್ಞಾನ ಸ್ಪರ್ಧೆ ಕುಂದಾಪುರ-ಬೈಂದೂರು ತಾಲೂಕಿನ ವಿಷಯದಲ್ಲೇ ನಡೆಯುತ್ತದೆ. ಸ್ಪರ್ಧೆಯ ಪ್ರಶ್ನೆಗಳು ತಾಲೂಕಿನ ಪ್ರಕೃತಿ, ಭೌಗೋಳಿಕ, ಇತಿಹಾಸ, ರಾಜಕೀಯ, ವೃತ್ತಿ, ಉದ್ಯಮ, ಸಾಹಿತ್ಯ, ಸಂಗೀತ, ಸಂಸ್ಕøತಿ, ಚಲನಚಿತ್ರ, ಮಹಾಪುರುಷರು, ನದಿ, ಸಾಗರ ವಿಷಯಗಳೊಂದಿಗೆ ನಿತ್ಯೋಪಯೋಗಿ ವಸ್ತುಗಳು ಹೂವು, ಹಣ್ಣು ಆಹಾರ ಪದಾರ್ಥಗಳ ಬಗ್ಗೆಯೂ ಇರುತ್ತದೆ. ಹೆಚ್ಚು ಅಂಕ ಪಡೆದ ಶಾಲೆಗೆ “ಜ್ಞಾನೋದಯ ಪಾರಿತೋಷಕ” ನೀಡಲಾಗುತ್ತದೆ. ವೈಯಕ್ತಿಕವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಆಕರ್ಷಕ ಬಹುಮಾನದೊಂದಿಗೆ ಗೌರವ ನೀಡಲಾಗುತ್ತದೆ. ಪ್ರಥಮ 25 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗುತ್ತದೆ. ಭಾಗವಹಿಸುವವರು ಡಾ. ಜಿ. ಎಂ. ಗೊಂಡ, ಪ್ರಾಂಶುಪಾಲರು, “ಜ್ಞಾನೋದಯ ಸ್ಪರ್ಧೆ”, ಭಂಡಾರ್‍ಕಾರ್ಸ್ ಪ.ಪೂ. ಕಾಲೇಜು ಕುಂದಾಪುರ-576201 ಇವರಿಗೆ ಆಗಸ್ಟ್ 31ರೊಳಗೆ ಹೆಸರು ಕಳುಹಿಸಿಕೊಡಬೇಕೆಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ತಿಳಿಸಿದ್ದಾರೆ.

ನೇತ್ರದಾನದ ಮೂಲಕ  ಹಲವರ ಬಾಳಿಗೆ ಬೆಳಕಾದ ಉಡುಪಿಯ ಹೋಟೆಲ್ ಸಿಬ್ಬಂದಿ

ಉಡುಪಿ: ತನ್ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಹೋಟೆಲ್ ಸಿಬ್ಬಂದಿಯೊಬ್ಬರು ಸಾವಿನಲ್ಲು ಸಾರ್ಥಕತೆ ಮೆರೆದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಕಾಪು ತಾಲೂಕು ಶಿರ್ವ ಮಂಚಕಲ್ ನಿವಾಸಿ ಪಾಂಡುರಂಗ ಪ್ರಭು ಕೆಲವು ವರ್ಷಗಳಿಂದ ಬಂಟಕಲ್ ನ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು‌. 

ಅಲ್ಪಕಾಲದ ಅನಾರೋಗ್ಯದಿಂದ ಪಾಂಡುರಂಗ ಪ್ರಭು ಕೊನೆಯುಸಿರೆಳೆದಿದ್ದಾರೆ. ಜೀವಿತಾವಧಿಯಲ್ಲೇ ಪ್ರಭು ಅವರು ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ತನ್ನ ನಿರ್ಧಾರದಂತೆ ಕುಟುಂಬಸ್ಥರ ಇಚ್ಛೆಯಂತೆ ಈ ವಿಚಾರವನ್ನು ಉಡುಪಿಯ ಪ್ರಸಾದ್ ನೇತ್ರಾಲಯ ಆಸ್ಪತ್ರೆಗೆ ತಲುಪಿಸಲಾಯ್ತು. ಮೃತ ದೇಹದಿಂದ ಕಣ್ಣುಗಳನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮಾಡಿ ಬೇರ್ಪಡಿಸಲಾಯಿತು. ಕುಟುಂಬದ ಸದಸ್ಯ, ಉಡುಪಿಯ ಖಾಸಗಿ ವಾಹಿನಿ ಸ್ಪಂದನದಲ್ಲಿ ಉದ್ಯೋಗಿಯಾಗಿರುವ ಸುದರ್ಶನ್ ಪ್ರಭು ಅವರಿಗೆ ಸರ್ಟಿಫಿಕೇಟನ್ನು ಹಿರಿಯ ವೈದ್ಯ ಡಾ. ನಿತ್ಯಾನಂದ ನಾಯಕ್ ಹಸ್ತಾಂತರ ಮಾಡಿದರು.

ಸಮಾಜ ಸೇವಕ ನಿತ್ಯಾನಂದ ಒಳಕಾಡು ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲು ಸಹಾಯ ಮಾಡಿದರು. ಕಣ್ಣುಗಳ ಅವಶ್ಯಕತೆ ಇದ್ದರೂ ನೇತ್ರದಾನ ಮಾಡುವವರ ಸಂಖ್ಯೆ ಬಹಳ ಕಡಿಮೆ ಇದೆ. ಪಾಂಡುರಂಗ ಪ್ರಭು ಮತ್ತು ಮುಟುಂಬದವರ ಕಾಳಜಿ ಸಮಾಜಮುಖಿ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಇನ್ನೊಬ್ಬರ ಬಾಳಿಗೆ ದೃಷ್ಟಿ ನೀಡುವ ಕೆಲಸವನ್ನು ಮಾಡಿದ್ದಾರೆ ಎಂದು ನಿತ್ಯಾನಂದ ಒಳಕಾಡು ಮೆಚ್ಚುಗೆ ವ್ಯಕ್ತಪಡಿದ್ದಾರೆ

ಬಿಯರ್‌ ಪ್ರಿಯರೇ ಜಾಗ್ರತೆ : ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ

ಬೆಂಗಳೂರು, ಆ 17 ಬಿಯರ್ ಪ್ರಿಯರು ಬಹುಮುಖ್ಯವಾದ ವಿಚಾರ ಇದಾಗಿದ್ದು, ಪ್ರತಿಷ್ಠಿತ ಕಿಂಗ್ ಫಿಶರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮೈಸೂರಿನ ನಂಜನಗೂಡಿನ ಘಟಕದಲ್ಲಿ ತಯಾರಿಸಲಾಗಿದ್ದ ಯುನೈಟೆಡ್‌ ಬ್ರಿವರೀಸ್‌ ಕಂಪನಿಯ ಕಿಂಗ್‌ ಫಿಶರ್‌ ಬಿಯರ್‌ನಲ್ಲಿ ಈ ಅಪಾಯಕಾರಿ ಅಂಶ ಪತ್ತೆಯಾಗಿದ್ದು, 25 ಕೋಟಿ ರೂ. ಮೌಲ್ಯದ 78,678 ಬಾಕ್ಸ್‌ ಬಿಯರ್‌ ಅನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಗುಣಮಟ್ಟದ ಬಿಯರ್‌ ತಯಾರಿಸದ ಈ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಈ ಬಿಯರ್‌ನಲ್ಲಿ ಸೆಡಿಮೆಂಟ್‌ ಪತ್ತೆಯಾಗಿತ್ತು. ಈ ಮಾಹಿತಿ ತಿಳಿದ ಕೂಡಲೇ ಬಿಯರ್ ಸ್ಯಾಂಪಲ್ ಅನ್ನು ಕೆಮಿಕಲ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಈ ಕುರಿತು 2-08-2023ರಂದು ಕೆಮಿಕಲ್ ವರದಿ ಬಂದಿದ್ದು, ವರದಿಯಲ್ಲಿ ಈ ಬಿಯರ್ ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಲಾಗಿದೆ.

ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್ ನಲ್ಲಿಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಈ ಬಿಯರ್‌ ಕುಡಿಯಲು ಯೋಗ್ಯವಲ್ಲದ ಕಾರಣ ಮಾರುಕಟ್ಟೆಯಲ್ಲಿರುವ ಈ ಬ್ಯಾಚ್‌ನ ಬಿಯರ್‌ಗೂ ತಡೆ ನೀಡಲಾಗಿದೆ.

ಮೂಡ್ಲಕಟ್ಟೆ ಐಎಂಜೆ ಸಮೂಹ ಸಂಸ್ಥೆಗಳಿಂದ ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆ

ಮೂಡ್ಲಕಟ್ಟೆ ಐಎಂಜೆ ಸಮೂಹ ಸಂಸ್ಥೆಗಳು ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಚಲವಾದ ದೇಶಭಕ್ತಿ ಮತ್ತು ಹೆಚ್ಚಿನ ಉತ್ಸಾಹದಿಂದ ಆಚರಿಸಲಾಯಿತು. ಮೂಡಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಅವರು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಜೆನ್ನಿಫರ್ ಫ್ರೀಡಾ ಮಿನೇಜಸ್ ಮತ್ತು ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಪ್ರಾಂಶುಪಾಲೆ ಡಾ.ಪ್ರತಿಭಾ ಎಂ ಪಟೇಲ್ ಉಪಸ್ಥಿತಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಅವರು ತಮ್ಮ ಸ್ವಾತಂತ್ರ್ಯ ದಿನದ ಸಂದೇಶದಲ್ಲಿ, ಎರಡು ಶತಮಾನದ ಬ್ರಿಟಿಷರ ದುರಾಡಳಿತದ ವಿರುದ್ಧದ ಹೋರಾಟದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ವಿವರಿಸಿದರು. ನಮಗೆ ಸ್ವಾತಂತ್ರ್ಯ ಮತ್ತು ಉತ್ತಮ ಜೀವನವನ್ನು ನೀಡುವ ಏಕೈಕ ಉದ್ದೇಶದಿಂದ ನಮ್ಮ ದೇಶದ ಅನೇಕ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ನಮ್ಮ ದೇಶವು ಪ್ರಜಾಪ್ರಭುತ್ವದ ತಾಯಿ ಆಗುವ ಹಾಗೆ ಮಾಡಿದರು ಎಂದು ಅವರು ಹೇಳಿದರು.

ಸ್ವಾತಂತ್ರೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ನಮ್ಮನ್ನು ಅರ್ಪಿಸಿಕೊಳ್ಳುವ ಪ್ರತಿಜ್ಞೆಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಕಾರ್ಯಕ್ರಮವನ್ನು ಅದ್ಭುತವಾಗಿ ಆಯೋಜಿಸಲ ಶ್ರಮಿಸಿದ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಬ್ರಾಂಡ್ ಬಿಲ್ಡಿಂಗ್ ನಿದೇರ್ಶಕರಾದ ಡಾ.ರಾಮಕೃಷ್ಣ ಹೆಗಡೆ ಉಪ ಪ್ರಾಂಶುಪಾಲರುಗಳಾದ ಪ್ರೊ. ಮೆಲ್ವಿನ್ ಡಿ ಸೋಜಾ, ಶ್ರೀ ಜಯಶೀಲ್ ಕುಮಾರ ,ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದರು. ಐಎಂಜೆ ಘಟಕ ಸಂಸ್ಥೆಗಳ ಸಂಯೋಜನೆಯೊಂದಿಗೆ ನೃತ್ಯ, ದೇಶಭಕ್ತಿ ಗೀತೆಗಳು ಮುಂತಾದ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಟಿ.ವಿ.ನಾಗೇಶ್‌ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಭಾರತಮ್ಮ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಟಿ.ವಿ.ನಾಗೇಶ್‌ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಭಾರತಮ್ಮ ಆಯ್ಕೆಯಾಗಿದ್ದಾರೆ.

  ಗ್ರಾಮ ಪಂಚಾಯಿತಿ ಒಟ್ಟು ಸದಸ್ಯರ ಸಂಖ್ಯೆ 17 ಆಗಿದ್ದು ಇಬ್ಬರು ಅಭ್ಯರ್ಥಿಗಳು ಗೈರಾಗಿದ್ದರು. ಹಾಗಾಗಿ ಟಿ.ವಿ.ನಾಗೇಶ್‌ರೆಡ್ಡಿ 11 ಮತ ಪಡೆದು ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಮಂಗಳ 4 ಮತ ಪಡೆದಿದ್ದಾರೆ. ಭಾರತಮ್ಮ 11 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಶಿಲ್ಪ 4 ಮತ ಪಡೆದಿದ್ದಾರೆ.

  ಚುನಾವಣಾಧಿಕಾರಿ ಗಣೇಶ್, ಪಿಡಿಒ ವಿನೋಧ ಚುನಾವಣಾ ಕರ್ತವ್ಯ ನಿರ್ವಹಿಸಿದರು.

  ಚುನಾವಣೆ ಬಳಿಕ ನಡೆದ ವಿಜಯೋತ್ಸವದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಮುಖಂಡರಾದ ದಡಮಲದೂಡ್ಡಿ ಜಿ.ಎಸ್.ಆರ್ ಶ್ರೀನಾಥರೆಡ್ಡಿ, ಕೆ.ಎನ್.ಶಂಕರರೆಡ್ಡಿ, ಲಕ್ಷö್ಮಣರೆಡ್ಡಿ, ನಾರಾಯಣಸ್ವಾಮಿ ಭಾಗವಹಿಸಿದ್ದರು.

ಅಕ್ರಮ ಭೂ ಮಂಜೂರಾತಿ ಪರಿಶೀಲನೆಗೆ 14 ಜನರ ತಂಡದ ಸಮಿತಿ ರಚನೆ : ಜಿಲ್ಲಾಧಿಕಾರಿ ಅಕ್ರಂ ಪಾಷ

ಕೋಲಾರ : ಜಿಲ್ಲೆಯಲ್ಲಿ ಅಕ್ರಮ ಭೂ ಮಂಜೂರಾತಿ ಮಾಡಿರುವ ಪ್ರಕರಣಗಳನ್ನು ಪರಿಶೀಲಿಸಲು 14 ಜನರ ತಂಡದ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅವರು ತಿಳಿಸಿದರು. 

ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹಾಗೂ ಕೋಲಾರ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. 

ಭೂಮಿ ಮಾನಿಟರಿಂಗ್ ಸೆಲ್‌ನಿಂದ ಕಳೆದ 10 ವರ್ಷಗಳಿಂದ ಸರ್ಕಾರದಿಂದ ಮಂಜೂರು ಮಾಡಲ್ಪಟ್ಟ ಜಾಗಗಳ ಸಮೂಲಾಗ್ರ ಮಾಹಿತಿಯನ್ನು ಸಮಿತಿಗೆ ನೀಡಲಿದೆ . ಸಮಿತಿಯು ಭೂ ಲಭ್ಯತಾ ಪಟ್ಟಿ ಅನುಸಾರ ಮಂಜೂರು ಮಾಡಲಾದ ಭೂಮಿಗಳ ವಿವರಗಳನ್ನು ಸಂಗ್ರಹಿಸುತ್ತದೆ . ಈವರೆಗೆ ಮಂಜೂರು ಮಾಡಲಾದ ಜಮೀನುಗಳು ಸಕ್ರಮವಾಗಿವೆ ಅಥವಾ ಇಲ್ಲವೇ ಎಂಬುದನ್ನು ಈ ಸಮಿತಿಯು ಪರಿಶೀಲಿಸಲಿದೆ .

ಮಂಜೂರಾತಿ ದಾಖಲೆಗಳ ನೈಜತೆ , ಸಾಗುವಳಿ ಮಂಜೂರಾತಿ ನಿಯಮಗಳ ಪಾಲನೆ , ಸರ್ಕಾರಿ ಜಮೀನುಗಳ , ಅರಣ್ಯ ಜಮೀನುಗಳ , ವಕ್ಫ್‌ ಬೋರ್ಡ್‌ನ ಜಮೀನುಗಳ , ಮುಜರಾಯಿ ಜಮೀನುಗಳ , ಗೋಮಾಳಗಳ ಹಾಗೂ ನಗರಸಭೆ ಜಮೀನುಗಳ ಒತ್ತುವರಿ ಬಗ್ಗೆಯೂ ಸಹ ಈ ಸಮಿತಿಯು ಅಧ್ಯಯನ ನಡೆಸಲಿದೆ . ನಿಯಮಾವಳಿಗಳ ಈಗಾಗಲೇ ಮಂಜೂರಾಗಿರುವ ಜಮೀನುಗಳಲ್ಲಿ ಯಾವುದೇ ಉಲ್ಲಂಘನೆಯಾಗಿದ್ದಲ್ಲಿ ಅದರ ವಿವರಗಳನ್ನು ಸಹ ಸಮಿತಿಯು ಕಲೆ ಹಾಕಲಿದೆ . 

ಭೂಮಿ ಮಾನಿಟರಿಂಗ್ ಸೆಲ್‌ನ ವರದಿಯಂತೆ ರಾಜಧಾನಿಗೆ ಹತ್ತಿರವಿರುವ ಕೋಲಾರದಲ್ಲಿ ಅಭಿವೃದ್ಧಿ ಪೂರಕ ವಾತಾವರಣವಿರುವುದರಿಂದ ಹಾಗೂ ಪ್ರಸ್ತುತ ಬೆಂಗಳೂರು ಚೆನ್ನೈ ಕಾರಿಡಾರ್ ಅಭಿವೃದ್ಧಿಯಾಗುತ್ತಿರುವುದರಿಂದ ಈ ಭಾಗದಲ್ಲಿ ಕೈಗಾರಿಕಾ ಕೇಂದ್ರಗಳ ಸ್ಥಾಪನೆ , ಹೊಸ ಟೌನ್‌ಶಿಪ್‌ಗಳ ನಿರ್ಮಾಣ ಮುಂತಾದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಹಲವು ಒತ್ತಡಗಳಿಂದ ಭೂ ಮಂಜೂರಾತಿ ಮಾಡುವಾಗ ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸಿರುವ ಸಾಧ್ಯತೆ ಇರುತ್ತದೆ. 

ಈ ಹಿನ್ನೆಲೆಯಲ್ಲಿ ಸರ್ಕಾರದ ಜಮೀನಿನ ಸಮರ್ಪಕ ಹಂಚಿಕೆ ಹಾಗೂ ಸ್ಪಷ್ಟ ದಾಖಲೆಗಳನ್ನು , ಮೂಟೇಶನ್ ವಿವರಗಳನ್ನು ಅಕ್ರಮವಾಗಿ ಮಂಜೂರು ಮಾಡಿದ ಜಮೀನನ್ನು ಸಕ್ರಮ ಮಾಡುವ ವಿಧಾನ ಇವುಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ವರದಿ ನೀಡುವ ಸಲುವಾಗಿ ಈ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು. 

ಸಂಬಂಧಪಟ್ಟ ತಾಲ್ಲೂಕಿನ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಮಾಹಿತಿಯ ದತ್ತಾಂಶವನ್ನು ಭೂಮಿ ಸಮಾಲೋಚಕರ ಸಮನ್ವಯತೆಯೊಂದಿಗೆ ಭೂಮಿ ಉಸ್ತುವಾರಿ ಕೋಶದಿಂದ ಪಡೆದು ತಂತ್ರಾಂಶದಲ್ಲಿ ಸಮಾಲೋಚಕರ ಪರಿಶೀಲಿಸುವುದು . ಭೂ ಮಂಜೂರಾತಿ ಮಾಡಿರುವ ಪ್ರಕರಣಗಳು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94 ಎ , 94 ಬಿ , ಮತ್ತು 94 ಎ ( 4 ) ರ ನಿಯಮಾವಳಿಗಳನ್ವಯ ಅರ್ಹ ಪ್ರಕರಣಗಳೇ ಎಂಬ ಬಗ್ಗೆ ಕಡತ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವುದು . 

ಭೂ ಮಂಜೂರಾತಿಯು ನಿಯಮಬಾಹಿರ ಎಂದು ಕಂಡುಬಂದಲ್ಲಿ , ಪ್ರಕರಣಗಳಲ್ಲಿ ಗಮನಿಸಿರುವ ಲೋಪಗಳ ಕುರಿತು ಸ್ಪಷ್ಟವಾಗಿ ವಿವರಣೆ ನೀಡುವುದು . ಆಯಾ ತಾಲ್ಲೂಕು ಭೂಮಿ ಕೇಂದ್ರದ ಭೂಮಿ ತಂತ್ರಾಂಶದಲ್ಲಿ ಭೂಮಂಜುರಾತಿ ಪ್ರಕ್ರಿಯೆಯನ್ನು ಕ್ರಮಬದ್ದವಾಗಿ ನಿರ್ವಹಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು . ನಿಯಮಬಾಹಿರ ಎಂದು ಕಂಡುಬಂದಲ್ಲಿ ಪ್ರಕರಣಗಳಲ್ಲಿ ಗಮನಿಸಲಾಗಿರುವ ಅಂಶಗಳ ಬಗ್ಗೆ ವರದಿ ನೀಡುವುದು ಮುಂತಾದ ಜವಾಬ್ದಾರಿಗಳನ್ನು ಸಮಿತಿಗೆ ವಹಿಸಲಾಗಿದೆ . 

ಕಛೇರಿ ಹಾಗೂ ಕಾರ್ಯನಿರ್ವಾಹಕ ಸಿಬ್ಬಂದಿಗಳಿಗೆ ಕಾರ್ಯ ಹಂಚಿಕೆ ಹಾಗೂ ವೃತ್ತ ಮತ್ತು ಹೋಬಳಿಗಳಿಗೆ ನಿಯೋಜಿಸಿರುವ ಕುರಿತಂತೆ ಕಛೇರಿಯಿಂದ ಹೊರಡಿಸಲಾಗಿರುವ ಹಿಂದಿನ ಹಾಗೂ ಪ್ರಸಕ್ತ ಸಾಲಿನ ಅದೇಶ , ಅಧಿಕೃತ ಜ್ಞಾಪನ , ಅಧಿಸೂಚನೆಗಳ ಪ್ರತಿಯನ್ನು ತನಿಖಾ ತಂಡಕ್ಕೆ ನೀಡುವುದು . ತನಿಖಾ ತಂಡವು ಕೋರುವ ಕಡತಗಳು ಹಾಗೂ ಅಗತ್ಯ ದಾಖಲಾತಿಗಳನ್ನು ತಪ್ಪದೇ ಹಾಜರುಪಡಿಸುವುದು . 

ತನಿಖಾ ತಂಡವು ಕೋರುವ ಕಡತ ಹಾಗೂ ದಾಖಲಾತಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ವಹಿ ನಿರ್ವಹಿಸಿ , ಸದರಿ ವಹಿಯಲ್ಲಿ ನಮೂದಿಸಿ ನಂತರ ತನಿಖಾ ತಂಡಕ್ಕೆ ನೀಡುವುದು , ತನಿಖೆ ಮುಕ್ತಾಯಗೊಂಡ ಪ್ರಕರಣಗಳಿಗೆ ಸಂಬಂಧಿಸಿದ ಕಡತ ಹಾಗೂ ದಾಖಲೆಗಳನ್ನು ಮತ್ತು ತನಿಖಾ ತಂಡವು ಸೂಚಿಸುವ ಎಲ್ಲಾ ದಾಖಲಾತಿಗಳನ್ನು ತಹಶೀಲ್ದಾರರು ಖುದ್ದು ಪಡೆದು , ಪ್ರತ್ಯೇಕವಾಗಿ ಭದ್ರತೆಯೊಂದಿಗೆ ಸಂರಕ್ಷಿಸುವುದು . 

ಭೂಮಿ ತಂತ್ರಾಂಶದಲ್ಲಿ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಅಳವಡಿಸಲಾಗಿರುವ ದಾಖಲಾತಿಗಳನ್ನು ಮುದ್ರಿಸಿಕೊಂಡು ಸಂಬಂಧಪಟ್ಟ ಕಡತದಲ್ಲಿರಿಸಿ ತನಿಖಾ ತಂಡಕ್ಕೆ ನೀಡುವುದು . 

ಈ ಹಿಂದೆ ಕಾರ್ಯ ನಿರ್ವಹಿಸಿದ ತಹಶೀಲ್ದಾರರು , ಕಛೇರಿ ಸಿಬ್ಬಂದಿ ಹಾಗೂ ಕಾರ್ಯ ನಿರ್ವಾಹಕ ಸಿಬ್ಬಂದಿಗಳ ಮಾದರಿ ಸಹಿಗಳು ಅವಶ್ಯವಿದಲ್ಲಿ ದೃಢೀಕೃತ ದಾಖಲೆಗಳನ್ನು ಒದಗಿಸುವುದು . ತನಿಖಾ ತಂಡವು ಹೆಚ್ಚುವರಿಯಾಗಿ ಕೋರುವ ಮಾಹಿತಿ ಹಾಗೂ ದಾಖಲಾತಿಗಳನ್ನು ನೀಡುವ ವ್ಯವಸ್ಥೆ ಮಾಡುವುದು ಮುಂತಾದ ಜವಾಬ್ದಾರಿಗಳನ್ನು ಎಲ್ಲಾ ತಾಲ್ಲೂಕಿನ ತಹಸೀಲ್ದಾರರು ಸಮಿತಿಗೆ ನೀಡಬೇಕು ಎಂದರು . 

ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ 15 ಜನರ ತಂಡ ಇಡೀ ಜಿಲ್ಲೆಯಲ್ಲಿನ ಅಕ್ರಮ ಭೂ ಮಂಜೂರಾತಿ ಪರಿಶೀಲನೆ ಕೈಗೊಂಡಿದ್ದು , ಕೈಗೊಂಡಿದ್ದು , ಇಂತಹ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅವರು ರೂಪಿಸಿಕೊಂಡಿರುವ ಯೋಜನೆಗಳ ಬಗ್ಗೆ ವಿತವಾಗಿ ಚರ್ಚೆ ಮಾಡಲಾಯಿತು .

 ವಾತಾವರಣಕ್ಕನುಗುಣವಾಗಿ ಪ್ರಮುಖ ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ . ಶಂಕರ್ ವಣಿಕ್ಯಾಳ್ ಅವರು ತಿಳಿಸಿದರು . ಮುಖ್ಯವಾಗಿ ಸರ್ಕಾರಿ ಜಮೀನುಗಳ ಒತ್ತುವರಿಗಳನ್ನು ತೆರವುಗೊಳಿಸುವಲ್ಲಿ ಇಂತಹ ಅಧ್ಯಯನಗಳ ವರದಿಗಳು ಪೂರಕವಾಗುತ್ತವೆ . ಜಿಲ್ಲೆಯಲ್ಲಿ ಅಕ್ರಮ ಭೂ ಮಂಜೂರಾತಿಗೆ ಕಡಿವಾಣ ಬೀಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು . 

ವಿಡಿಯೋ ಸಂವಾದದಲ್ಲಿ ಭೂ ದಾಖಲೆಗಳ ಉಪನಿರ್ದೇಶಕರಾದ ಭಾಗ್ಯಮ್ಮ , ನಗರಸಭೆ ಆಯುಕ್ತರಾದ ಶಿವಾನಂದ್ , ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .