ಸ್ಟಡೀ ಸರ್ಕಲ್ ಯೋಜನೆಯಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಭಾವಿ ತಯಾರಿ ಗುರಿ ಸಾಧನೆಗೆ ಛಲ,ಸತತ ಪರಿಶ್ರಮ,ಶ್ರದ್ಧೆ ಅತ್ಯಗತ್ಯ-ಕೆ.ಶ್ರೀನಿವಾಸ್ ಕಿವಿಮಾತು

ಕೋಲಾರ:- ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಗುರಿ ಸಾಧನೆಗೆ ಕಲಿಕೆಯ ಹಸಿವು, ಛಲ, ಸತತ ಪರಿಶ್ರಮ, ಶ್ರದ್ಧೆ ಅಗತ್ಯವಾಗಿದ್ದು, ಸಂಕಲ್ಪದೊಂದಿಗೆ ಅಭ್ಯಾಸ ಮುಂದುವರೆಸಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್ ಕಿವಿಮಾತು ಹೇಳಿದರು.
ಬುಧವಾರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಸ್ಟಡೀ ಸರ್ಕಲ್ ಯೋಜನೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿತವಾಗಿರುವ ಹಲವು ಹುದ್ದೆಗಳ ಆಯ್ಕೆಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತಯಾರಿಗಾಗಿ ನಡೆಸಲಾದ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧನೆಗೆ ದೈನಂದಿನ ವೃತ್ತಪತ್ರಿಕೆಗಳಲ್ಲಿ ಸಿಗುವ ಸಾಮಾನ್ಯ ಜ್ಞಾನ ನಿಮ್ಮದಾಗಿಸಿಕೊಳ್ಳಿ, ನಿಗಧಿತ ಪಠ್ಯವಸ್ತುವಿನ ಅಧ್ಯಯನ ಮಾಡಿ, ನಿರಂತರ ಓದು ಇಂತಹ ದೊಡ್ಡಮಟ್ಟದ ಸಾಧನೆಗೆ ಅಗತ್ಯವಿದ್ದು, ಅಂತಹವರು ಮಾತ್ರವೇ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದರು.
ಒಂದು ಕಾಲದಲ್ಲಿ ಕೋಲಾರ ಜಿಲ್ಲೆ ಎಂದರೆ ಕೆಎಎಸ್ ಅಧಿಕಾರಿಗಳ ತವರಾಗಿತ್ತು, ಇತ್ತೀಚಿನ ದಿನಗಳಲ್ಲಿ ಆ ಪ್ರಮಾಣ ಕಡಿಮೆಯಾಗುತ್ತಿದ್ದು, ಇಂದಿನ ವಿದ್ಯಾರ್ಥಿ ಸಮುದಾಯ ಮತ್ತೆ ಕೋಲಾರದ ಹಿರಿಮೆ ಎತ್ತಿಹಿಡಿಯಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಸಾಧಿಸಬೇಕು ಎಂದು ಕೋರಿದರು.
ಅಭ್ಯರ್ಥಿಗಳಿಗೆ ಪರೀಕ್ಷಾ ತಯಾರಿ ಕುರಿತು ಸಲಹೆ ಸೂಚನೆ ನೀಡಿದ ಅವರು,ನಿತ್ಯ ಅಧ್ಯಯನ, ಜ್ಞಾನಾರ್ಜನೆಗೆ ಅಗತ್ಯವಾದ ಪುಸ್ತಕ ಓದಿ ಇದರಿಂದ ನಿಮ್ಮ ಜ್ಞಾನದ ವೃದ್ದಿಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಶಕ್ತಿಯೂ ಬರುತ್ತದೆ ಎಂದರು.
ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ನೀಡಲಾಗುವ ಸೇವೆಗಳು ಸಹಾ ಬದಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ವೃತ್ತಿ ಉಪನ್ಯಾಸ, ಸಮಾಲೋಚನೆ, ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ, ಭಾರತೀಯ ಸೇನೆಯಲ್ಲಿನ ಉದ್ಯೋಗವಕಾಶಗಳ ಬಗ್ಗೆ ಮಾರ್ಗದರ್ಶನ, ಉದ್ಯೋಗ ಮೇಳಗಳ ಆಯೋಜನೆ ಮುಂತಾದ ಚಟುವಟಿಕೆಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡುತ್ತಿದ್ದು, ಎಲ್ಲಾ ಪರೀಕ್ಷೆಗಳ ರೂಪುರೇಷೆಗಳು, ಪಠ್ಯಕ್ರಮ, ಪ್ರಶ್ನೆಪತ್ರಿಕೆಗಳ ಮಾದರಿ ಮುಂತಾದ ವಿಷಯಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಪರೀಕ್ಷಾ ಪೂರ್ವದಲ್ಲಿಯೇ ಪಡೆದುಕೊಳ್ಳಲು ಸೂಚಿಸಿದರು.
ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಸಾಮಾನ್ಯ ಜ್ಞಾನ, ಗಣಕ ವಿಜ್ಞಾನದ ಅರಿವು, ಸಂಖ್ಯಾತ್ಮಕ ಸಾಮಥ್ರ್ಯ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಬಗೆ ಹೆಚ್ಚಿನ ತಿಳುವಳಿಕೆ ಅಗತ್ಯವೆಂದು ತಿಳಿಸಿದರು. ಯಾವುದಾದರು ಒಂದು ಕನ್ನಡ ಮತ್ತು ಆಂಗ್ಲ ದಿನ ಪತ್ರಿಕೆಯನ್ನು ಪ್ರತಿದಿನವು ಅಧ್ಯಯನ ಮಾಡುವುದು ಅಗತ್ಯವೆಂದು ತಿಳಿಸಿದರು.
ಸ್ಟಡೀ ಸರ್ಕಲ್ ಯೋಜನೆಯಡಿಯಲ್ಲಿ ನೀಡಲಾಗುವ ತರಬೇತಿ ಕಾರ್ಯಕ್ರಮದ ಸಂಪೂರ್ಣ ಉಪಯೋಗವನ್ನು ಉದ್ಯೋಗಕಾಂಕ್ಷಿ ಅಭ್ಯರ್ಥಿಗಳು ಪಡೆದುಕೊಳ್ಳಲು ಹಾಗೂ ಹೆಚ್ಚಿನ ಪರಿಶ್ರಮದೊಂದಿಗೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಹಾಯಕ ಉದ್ಯೋಗಾಧಿಕಾರಿ ಮುನಿಕೃಷ್ಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅಧಿಸೂಚಿತವಾಗಿರುವ ವಿವಿಧ ಹುದ್ದೆಗಳ ಬಗ್ಗೆ ಹಾಗೂ ಪಠ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿ, ಒಟ್ಟು 10 ದಿನಗಳ ಕಾಲ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯಾವುದೇ ಆಭ್ಯರ್ಥಿಗಳು ಗೈರು ಹಾಜರಾಗದೆ ಇರಲು ಸೂಚಿಸಿದರು.
ಸದರಿ ಪರೀಕ್ಷಾ ತರಬೇತಿಗೆ ಅಧ್ಯಯನ ಮಾಡಬೇಕಾದ ಪುಸ್ತಕಗಳ ಬಗೆ ಮಾಹಿತಿ ಒದಗಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಮೊಹಮ್ಮದ್ ಇಲಿಯಾಸ್, ನಾಗೇಶ್ ಹಾಗೂ ವಿನೋದ್ ರವರು ಪರೀಕ್ಷಾ ಪೂರ್ವ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳು, ಪಠ್ಯಕ್ರಮ ಪ್ರಶ್ನೆಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕೇಳಲಾಗುವ ಮಾಹಿತಿ ಹಾಗೂ ಪ್ರಚಲಿತ ವಿದ್ಯಮಾನಗಳ ಬಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಕಛೇರಿಯ ಸಿಬ್ಬಂದಿ ವರ್ಗದವರಾದ ಮನೋಜ್, ತಿಮ್ಮರಾಜು, ಹೀನಾ, ಶ್ವೇತಾ ಹಾಗೂ ಈಶ್ವರ್ ಪಾಲ್ಗೊಂಡಿದ್ದರು.

ದೇವ್ ಮನ್ಶಾಂತ್ ಆಯ್ಲೊ – ಯೇಸು ಕ್ರಿಸ್ತನ ಜೀವನ ಪುಸ್ತಕ ಬಿಡುಗಡೆ

ಯೇಸು ಕ್ರಿಸ್ತನ ಜೀವನದ ಮೇಲೆ ಖ್ಯಾತ ಕೊಂಕಣಿ ಕವಿ, ಸಾಹಿತಿ ಶ್ರೀ ಮರಿಯಾಣ್ ಪಾವ್ಲ್ ರೊಡ್ರಿಗಸ್ ಬರೆದಿರುವ ಕೊಂಕಣಿ ಪುಸ್ತಕ ’ದೇವ್ ಮನ್ಶಾಂತ್ ಆಯ್ಲೊ – ಜೆಜು ಕ್ರಿಸ್ತಾಚೆಂ ಜಿವಿತ್’ ಮಿಲಾಗ್ರಿಸ್ ಸೆನೆಟ್ ಸಭಾಂಗಣದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡೊಕ್ಟರ್ ಪೀಟರ್ ಪಾವ್ಲ್ ಸಲ್ಡಾನ್ಹಾ ಬಿಡುಗಡೆಗೊಳಿಸಿದರು. “ದೇವರ ವಾಕ್ಯವೆಂದರೆ ಅದು ಸೂರ್ಯನ ಬಿಸಿಲಿನಂತೆ. ಕೆಲವರು ಓದಿ ಒಳ್ಳೆಯವರಾದರೆ, ಇನ್ನು ಕೆಲವರು ದೇವರ ವಾಕ್ಯವನ್ನೇ ಓದಿ ಅನ್ಯಥಾ ಬಳಸುವುದೂ ಇದೆ. ದೇವರ ವಾಕ್ಯವನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಮರಿಯಾಣ್ ಪಾವ್ಲ್ ರೊಡ್ರಿಗಸ್ ಬರೆದಿರುವ ಈ ಪುಸ್ತಕ ಸಹಾಯಕಾರಿಯಾಗಲಿದೆ.” ಎಂದು ಧರ್ಮಾಧ್ಯಕ್ಷ ಡೊ| ಸಲ್ದಾನ್ಹಾ ಅಭಿಪ್ರಾಯಪಟ್ಟರು.

ಮಿಲಾಗ್ರಿಸ್ ಚರ್ಚಿನ ಪ್ರಧಾನ ಧರ್ಮಗುರುಗಳಾದ  ವಂ| ಬೊನವೆಂಚರ್ ನಜ್ರೆತ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೃತಿಕಾರ ಮರಿಯಾಣ್ ಪಾವ್ಲ್ ರೊಡ್ರಿಗಸ್ ಮಾತನಾಡಿ “ಯೇಸು ಕ್ರಿಸ್ತನ ಜೀವನದ ಕುರಿತು ಬರೆಯುವುದು ನನ್ನ ಬಹಳ ಹಳೆ ಆಸೆಯಾಗಿತ್ತು. ಆದರೆ ಸರಿಸುಮಾರು ಮೂವತ್ತು ವರ್ಷಗಳ ಕಾಲ ತಾನು ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆಸೆ ಕೈಗೂಡಲಿಲ್ಲ. ನಿವೃತ್ತಿಯ ನಂತರ ತಾಯ್ನಾಡಿಗೆ ಮರಳಿದಾಗ ಮತ್ತೆ ಆಸೆ ಚಿಗುರಿತು. ಅದರೆ ಆರೋಗ್ಯದಲ್ಲಿ ಏರುಪೇರಾಯಿತು. ಆದರೂ ದೃತಿಗೆಡದೇ ಸತತ ಒಂಬತ್ತು ವರ್ಷಗಳ ಕಾಲ ಅಧ್ಯಯನ ಮಾಡಿ ಸುಮಾರು 540  ಪುಟಗಳ ಪುಸ್ತಕ ತಯಾರಿಸಿದ್ದೇನೆ. ಈ ಪುಸ್ತಕ ಪ್ರಕಟಣೆಗೆ ಅಧಿಕೃತ ಪರವಾನಿಗೆ ’ಇಂಪ್ರಿಮಾತುರ್’  ನೀಡಿದ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಶರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಮತ್ತು ಸಹಕರಿದ ಎಲ್ಲರಿಗೂ, ಪ್ರತ್ಯೇಕವಾಗಿ ನನ್ನ ಕುಟುಂಬಕ್ಕೆ ಋಣಿ ಯಾಗಿದ್ದೇನೆ” ಎಂದರು.

ಯೇಸು ಕ್ರಿಸ್ತನ ಬಗ್ಗೆ ಜನರಿಗೆ ನೈಜ ಅರಿವು ನೀಡುವುದು ಮತ್ತು ಪುಸ್ತಕ ಮಾರಾಟದಿಂದ ಬರುವ ವರಮಾನದಿಂದ ದುರ್ಬಲ ವರ್ಗದವರಿಗೆ ಸಹಾಯ ಮಾಡುವುದು – ನನ್ನ ಉದ್ದೇಶವಾಗಿದೆ ಎಂದು ಮರಿಯಾಣ್ ಪಾವ್ಲ್ ರೊಡ್ರಿಗಸ್ ಈ ಸಂದರ್ಭದಲ್ಲಿ ನುಡಿದರು.      

ಪುಸ್ತಕ ಬಿಡುಗಡೆಯ ವೇಳೆ ಕೃತಿಕಾರರ ಧರ್ಮಪತ್ನಿ ಶ್ರೀಮತಿ ಜೆಸಿಂತಾ ರೊಡ್ರಿಗಸ್, ಪುತ್ರ ಡೊ| ಜೋನಾತನ್ ರೊಡ್ರಿಗಸ್ , ಪ್ರಕಾಶಕ ಸೆವಕ್ ಪ್ರಕಾಶನದ ವಂ| ಚೇತನ್ ಕಾಪುಚಿನ್, ಮಿಲಾಗ್ರಿಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ ಸಿಲ್ವೆಸ್ಟರ್ ಮಸ್ಕರೆನ್ಹಸ್ ಮತ್ತು ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್ ವೇದಿಕೆಯಲ್ಲಿ ಹಾಜರಿದ್ದರು.

ಹೆಸರಾಂತ ಕಲಾವಿದ ಶ್ರೀ ಎಡ್ಡಿ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಆರೊನ್ ಲೋಬೊ ವಂದಿಸಿದರು. ಕಾರ್ಯಕ್ರಮದಲ್ಲಿ ಮರಿಯಾಣ್ ಪಾವ್ಲ್ ರೊಡ್ರಿಗಸ್ ಅವರು ರಚಿಸಿ, ಸ್ವರಸಂಯೋಜನೆ ಮಾಡಿದ ಸ್ತುತಿಗೀತೆಗಳನ್ನು ಸಿಪ್ರಿಯನ್ ಮಾಸ್ತರರ ಸಂಗೀತ ನಿರ್ದೇಶನದಲ್ಲಿ ಮಿಲಾಗ್ರಿಸ್ ಚರ್ಚ್ ಯುವಗಾಯನ ಮಂಡಳಿಯ ಸದಸ್ಯರು ಹಾಡಿದರು.

ಆರ್. ಎನ್.ಶೆಟ್ಟಿ ಪ. ಪೂ. ಕಾಲೇಜಿನಲ್ಲಿ ಸ್ವಾತಂತ್ರ್ಯದಿನಾಚರಣೆ- ದೇಶಪ್ರೇಮದ ಬಗ್ಗೆ ಎಳೆಪ್ರಾಯದ ಅದಮ್ಯ ಉತ್ಸಾಹ ಮರುಕಳಿಸ ಬೇಕು 

ಕುಂದಾಪುರದ ಆರ್ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ.ನಮ್ಮ ನಮ್ಮ ವ್ಯಾಪ್ತಿಯಲ್ಲಿಕಾರ್ಯಕ್ಷೇತ್ರದಲ್ಲಿ ನಮ್ಮಲ್ಲಿರುವ ಪ್ರತಿಭೆ– ಕೌಶಲ್ಯವನ್ನು ಉಪಯೋಗಿಸಿ ದೇಶದ ಅಭಿವೃದ್ಧಿಗೆ ತಳಮಟ್ಟದಿಂದ ಯತ್ನಿಸಬೇಕು.  ಯಾವುದೋ ಒಂದು ಚೌಕಟ್ಟಿನಲ್ಲಿ ನಿತ್ಯಜೀವನದ ಚಟುವಟಿಕೆಗಳನ್ನು ಮಾಡುವ ನಾವು ದೇಶಪ್ರೇಮದ ವಿಚಾರದಲ್ಲಿ ನಮ್ಮ ಎಳೆಪ್ರಾಯದಲ್ಲಿರುತ್ತಿದ್ದ ಸ್ವಯಂಸ್ಪೂರ್ತಿಯ ಉತ್ಸಾಹವನ್ನು‌ ಮತ್ತೆ ಪಡೆಯುವಂತಾಗಬೇಕು ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಯವರನ್ನು ಹೆಚ್ಚಿನ‌ ಸಂಖ್ಯೆಯಲ್ಲಿ  ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸಬೇಕು‘ ಎಂದು ಆರ್ಎನ್ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕಾಲೇಜಿನಲ್ಲಿ‌ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ  ಧ್ವಜಾರೋಹಣಗೈದು ಕರೆ ನೀಡಿದರುಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಇವರು ಕಾರ್ಯಕ್ರಮ ನಿರ್ವಹಿಸಿದರುಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಶ್ರೀ ಸಂದೀಪ್ ಪೂಜಾರಿಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ದೇಶಿಸಿದರುಕಾಲೇಜಿನ ಎಲ್ಲಾ ಬೋಧಕಬೋಧಕೇತರ ಸಿಬ್ಬಂದಿಗಳು  ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ವಾತಂತ್ರ್ಯಹೋತ್ಸವದ ಹಿನ್ನಲೆಯಲ್ಲಿ ಭಾರತೀಯ ಯೋಧ ಆನಂದ್ ಕುಟುಂಬದವರಿಂದ ವಿದ್ಯಾರ್ಥಿಗೆ ಪುರಸ್ಕಾರ

ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸ್ವಾತಂತ್ರ್ಯಹೋತ್ಸವದ ಹಿನ್ನಲೆಯಲ್ಲಿ ಭಾರತೀಯ ಯೋಧ ಆನಂದ್ ಕುಟುಂಬದವರು ಶಾಲೆಯ ಎಸ್ಸೆಸ್ಸೆಲ್ಸಿ ಸಾಧಕ ಕೆ.ಆರ್.ರಾಘವೇಂದ್ರ ಅವರಿಗೆ 5 ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು. ಸಹೋದರರಾದ ಶಂಕರ್,ಆನಂದ್,ಶೇಖರ್, ಮೂರ್ತಿ,ಅಶೋಕ್, ಗೋವಿಂದರಾಜು, ಎಸ್‍ಡಿಎಂಸಿ ಸದಸ್ಯ ರಾಮಚಂದ್ರಪ್ಪ ಹಾಜರಿದ್ದರು.

ಮಾರ್ಜೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 77 ನೇ ಸ್ವಾತಂತ್ರ್ಯೋತ್ಸವ

ಕೋಲಾರ ತಾಲೂಕು ಮಾರ್ಜೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ವಿದ್ಯಾಶ್ರೀ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಸ್ಮರಣೆಗಾಗಿ ಪಂಚಾಯ್ತಿ ಆವರಣದಲ್ಲಿ ಸಸಿ ನೆಟ್ಟರು. ಪಿಡಿಒ ನಾರಾಯಣಸ್ವಾಮಿ ಇತರೇ ಸದಸ್ಯರು ಹಾಜರಿದ್ದರು.

ಅರಾಭಿಕೊತ್ತನೂರು ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಎಸ್‍ಡಿಎಂಸಿ ಅಧ್ಯಕ್ಷರಿಂದ ಧ್ವಜಾರೋಹಣ ಮಕ್ಕಳಿಂದ ಪಥಸಂಚಲನ

ಕೋಲಾರ:- ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಶ್ರಮಿಸಿದ ಮಹನೀಯರ ತ್ಯಾಗ,ಬಲಿದಾನ ಮಾಡಿದ್ದಾರೆ ಅವರ ತ್ಯಾಗ ವ್ಯರ್ಥವಾಗದಂತೆ ನಾವೆಲ್ಲಾ ದೇಶದ ಘನತೆ ಹೆಚ್ಚಿಸೋಣ, ದೇಶಕ್ಕಾಗಿ ನಾವು ಎಂದು ಸಾರೋಣ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅವರು, ಗಾಂಧೀಜಿ,ಪಟೇಲ್,ನೆಹರು,ತಿಲಕ್,ನೇತಾಜಿ,ಅಜಾದ್,ಭಗತ್‍ಸಿಂಗ್ ಮತ್ತಿತರ ಸಾವಿರಾರು ಮಂದಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ, ಅವರ ತ್ಯಾಗ,ಬಲಿದಾನದಿಂದ ನಾವಿಂದು ಸಂಭ್ರಮಿಸುತ್ತಿದ್ದೇವೆ ಎಂದರು.
ಪರಕೀಯರ ದಾಳಿಯಿಂದ ಬಿಡುಗಡೆಯಾದ ಈ ದಿನವನ್ನು ನಾವು ಸಂಭ್ರಮದಿಂದ ಆಚರಿಸುತ್ತಿದ್ದೇವೆ, 77 ವರ್ಷಗಳಲ್ಲಿ ನಮ್ಮ ದೇಶ ಅನೇಕ ರೀತಿಯಲ್ಲಿ ಸಾಧನೆ ಮಾಡಿದೆ, ಮೋದಿಯವರು ಬಂದ ಮೇಲೆ ದೇಶ ಇಂದು ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ ಎಂದರು.
ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಸಿದ್ದೇಶ್ವರಿ, ನಮ್ಮ ರಾಷ್ಟ್ರಧ್ವಜಕ್ಕೆ ಗೌರವ ನೀಡಬೇಕು, ಮಕ್ಕಳು 77ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವನ್ನು ಕಲಿಕೆಯಲ್ಲಿ ಸಾಧನೆ ಮಾಡುವ ಸಂಕಲ್ಪದೊಂದಿಗೆ ಆಚರಿಸಬೇಕು, ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಿ, ಸಮಾಜಕ್ಕೆ ಹೊರೆಯಾಗದೇ ಆಸ್ತಿಯಾಗಿ ಎಂದು ಕಿವಿಮಾತು ಹೇಳಿದರು.
ಗ್ರಾ.ಪಂ ಮಾಜಿ ಸದಸ್ಯ ಎ.ಶ್ರೀಧರ್ ಮಾತನಾಡಿ, ಸ್ವಾತಂತ್ರ್ಯ ಪಡೆದದ್ದರ ಹಿಂದೆ ನೂರಾರು ವರ್ಷಗಳ ಹೋರಾಟವಿದೆ, ಅವರ ಹೋರಾಟ ಇಂದು ಫಲ ನೀಡಿದೆ, ನಾವೆಲ್ಲಾ ಖುಷಿಯಿಂದ ಇದ್ದೇವೆ, ಈ ದೇಶದ ಘನತೆಗೆ ಕುತ್ತು ಬಾರದಂತೆ ನಾವು ನಡೆದುಕೊಳ್ಳಬೇಕಾಗಿದೆ, ವಿದ್ಯಾರ್ಥಿಗಳು ದೇಶಕ್ಕಾಗಿ ನಾವು ಎಂದು ಸಂಕಲ್ಪ ಮಾಡಬೇಕು, ಅನೇಕ ಮಹನೀಯರ ತ್ಯಾಗ,ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಬಂದಿದೆ, ಅದನ್ನು ಉಳಿಸಿಕೊಳ್ಳೋಣ, ಉತ್ತಮ ಶಿಕ್ಷಣ ಪಡೆದು ದೇಶಪ್ರೇಮ ಬೆಳೆಸಿಕೊಳ್ಳೋಣ ಎಂದರು.
ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ ಹಾಗೂ ವೆಂಕಟರೆಡ್ಡಿ ಮಾತನಾಡಿ, ನಾವು ಓದಿ ದೇಶಕ್ಕಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಬೇಕು ದುಶ್ಚಟಗಳಿಂದ ದೂರವಾಗಿ ಉತ್ತಮ ಸಮಾಜ ನಿರ್ಮಿಸುವ ಹೊಣೆ ನಮ್ಮಮೇಲಿದೆ ಹಿರಿಯರು ತಂದುಕೊಟ್ಟಿರುವ ಸ್ವಾತಂತ್ರ್ಯದ ಹಿಂದೆ ಇರುವ ಹೋರಾಟದ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು.

5ಸಾವಿರ ನೆರವಿತ್ತ ಯೋಧರ ಕುಟುಂಬ


ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯ ಯೋಧ ಆನಂದ್ ತಮ್ಮ ತಾಯಿ ಆಂಜಿನಮ್ಮ ಅವರ ನೆನಪಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿ ಕೆ.ಆರ್.ರಾಘವೇಂದ್ರ ಅವರಿಗೆ 5 ಸಾವಿರ ರೂ ನಗದು,ನೆನೆಪಿನ ಕಾಣಿಕೆಯ ಪುರಸ್ಕಾರ ನೀಡಿ ಸನ್ಮಾನಿಸಿದರು. ಮೂರ್ತಿ ಮಕ್ಕಳಿಗೆ ಪ್ರೇರಣೆಯ ಮಾತುಗಳನ್ನಾಡಿದರು. ಇವರೊಂದಿಗೆ ಸಹೋದರರಾದ ಶಂಕರ್,ಆನಂದ್,ಶೇಖರ್, ಅಶೋಕ್, ಗೋವಿಂದರಾಜು, ಎಸ್‍ಡಿಎಂಸಿ ಸದಸ್ಯ ರಾಮಚಂದ್ರಪ್ಪ ಜೊತೆಯಾದರು.

ಮಕ್ಕಳಿಗೆ ಗ್ರಾ.ಪಂ ಶುಭಾಷಯ


ಗ್ರಾ.ಪಂ ಅಧ್ಯಕ್ಷೆ ರೇಣುಕಾಂಭ ಮುನಿರಾಜು, ಸದಸ್ಯರಾದ ನಾರಾಯಣಸ್ವಾಮಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಲಕ್ಷ್ಮಿ, ಮಾಜಿ ಅಧ್ಯಕ್ಷರಾದ ಮುಳ್ಳಹಳ್ಳಿ ಮಂಜುನಾಥ್, ಮುನಿರಾಜು, ಮುನಿಯಪ್ಪ, ಮುಖಂಡ ನಾರಾಯಣಶೆಟ್ಟಿ,ಎಸ್‍ಡಿಎಂಸಿ ಸದಸ್ಯ ವೆಂಕಟಾಚಲಪತಿ ಮಕ್ಕಳಿಗೆ ಶುಭ ಕೋರಿದರು.

ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ತಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಅವರ ನೆನಪಿನಲ್ಲಿ ಮಕ್ಕಳಿಗೆ ಲಡ್ಡು ವಿತರಿಸಿದರು. ಎಸ್‍ಡಿಎಂಸಿ ಸದಸ್ಯ ರಾಘವೇಂದ್ರ ಮಕ್ಕಳಿಗೆ ಸಿಹಿ ಹಾಗೂ ಪೆನ್ ವಿತರಿಸಿದರು.
ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮಗಳು ಮನಸೋರೆಗೊಂಡವು. ಗ್ರಾ.ಪಂ ಗ್ರಂಥಾಲಯದ ಅಜಯ್ ನಡೆಸಿಕೊಟ್ಟಿದ್ದ ಸಣ್ಣ ಕಥೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಭವಿಷ್,ಅಮೂಲ್ಯ, ಶೈಲಜಾ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಬಹುಮಾನ ಪಡೆದಿದ್ದು, ಅವರಿಗೆ ನಗದು ಪುರಸ್ಕಾರವನ್ನು ಗ್ರಾ.ಪಂ ಅಧ್ಯಕ್ಷೆ ರೇಣುಕಾಂಭ ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಕಾರ್ಯದರ್ಶಿ ಪ್ರಮೀಳಾ, ಮುಖಂಡರಾದ ಮುರಳಿ, ಪ್ರಕಾಶ್,ಸಚಿನ್, ಸತೀಶ್,ಹರ್ಷವಧನ್, ಶಿಕ್ಷಕರಾದ ಭವಾನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ವೇತಾ, ಸುಗುಣಾ, ಫರೀದಾ, ಶ್ರೀನಿವಾಸಲು,ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.

ಚಿತ್ರಶೀರ್ಷಿಕೆ:(ಫೊಟೊ-16ಕೋಲಾರ8):ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು.

ಕೋಲಾರ: ಸ್ವಾತಂತ್ರ್ಯ ಜ್ಯೋತಿ ಪ್ರತಿಯೊಬ್ಬರಲ್ಲಿ ಪ್ರಜ್ವಲಿಸಲಿ – ಬಿಇಒ ಕನ್ನಯ್ಯ

ಕೋಲಾರ: ಅನೇಕರ ತ್ಯಾಗಬಲಿದಾನಗಳ ಹೋರಾಟದಿಂದ ದೇಶದಲ್ಲಿ ಬ್ರಿಟೀಷರ ಅಂಧಕಾರ ಆಡಳಿತ ತೊಲಗಿ ಸ್ವಾತಂತ್ರ್ಯದ ಜ್ಯೋತಿ ಬೆಳಗುವಂತಾಯಿತು, ಈ ಜ್ಯೋತಿ ಪ್ರತಿ ಭಾರತೀಯರ ಮನೆ ಮನಗಳಲ್ಲಿ ಪ್ರಜ್ವಲಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ತಾಲೂಕು ಸಮಿತಿ, ಹಳೇ ಮಾಧ್ಯಮಿಕ, ಉರ್ದು ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಎಂದಿಗೂ ಸ್ವೇಚ್ಛಾಚಾರವಾಗಬಾರದು ಎಂದು ಎಚ್ಚರಿಸಿದ ಅವರು, ಪ್ರತಿ ಭಾರತೀಯರು ದೇಶದ ಐಕ್ಯತೆಗಾಗಿ ದುಡಿದರೆ ವಿಶ್ವದಲ್ಲಿಯೇ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ದೇಶದಲ್ಲಿರುವ ಪ್ರಾಕೃತಿಕ, ಸಾಮಾಜಿಕ, ರಾಜಕೀಯ, ಭಾಷೆ, ಆಹಾರ, ಉಡುಗೆ, ಬದುಕಿನ ವೈವಿಧ್ಯತೆಯನ್ನು ಕಾಪಾಡಿಕೊಂಡು ದೇಶದ ಏಕತೆ ಕಾಪಾಡುವ ಸವಾಲು ಎದುರಾಗಿದ್ದು, ಇದಕ್ಕಾಗಿ ಪ್ರತಿ ಭಾರತೀಯನು ಶ್ರಮಿಸಬೇಕೆಂದರು.
ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಆರ್ ಶ್ರೀನಾಥ್ ಮಾತನಾಡಿ, ಸ್ವಾತಂತ್ರ್ಯವನ್ನು ಅನುಭವಿಸುವುದರ ಜೊತೆಗೆ, ಸಂವಿಧಾನದ ಆಶಯಗಳಾದ ಸೌಹಾರ್ದತೆ, ಸಮಾನತೆಯನ್ನು ಸ್ವಾಭಿಮಾನದಿಂದ ಕಾಪಾಡಿಕೊಂಡು ದೇಶವನ್ನು ಮುನ್ನಡೆಸಬೇಕೆಂದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶದ ಗಡಿ ಕಾಯುವ ಯೋಧ, ಆಹಾರ ಸ್ವಾವಲಂಬನೆಗೆ ಶ್ರಮಿಸುತ್ತಿರುವ ರೈತ, ಆರೋಗ್ಯ ಕಾಪಾಡುತ್ತಿರುವ ವೈದ್ಯ ಹಾಗೂ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಸೇವೆಯನ್ನು ಸ್ಮರಿಸಬೇಕೆಂದರು.
ವಿದ್ಯಾರ್ಥಿಗಳಾದ ಫಿಜಾ ಪರ್ವೀನ್ ಹಾಗೂ ಚೇತನ್ ಸ್ವಾತಂತ್ರ್ಯೋತ್ಸವ ಕುರಿತು ಭಾಷಣ ಮಾಡಿದರು.
ಭಾರತಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ತಾಲೂಕು ಅಧ್ಯಕ್ಷ ಶ್ರೀರಾಮ್, ಪದಾಕಾರಿಗಳಾದ ಕೆ.ಜಯದೇವ್, ಗೋಕುಲ ಚಲಪತಿ, ಮುನಿವೆಂಕಟಯಾದವ್, ಪೈಂಟರ್ ಬಷೀರ್, ಬಿಇಒ ಕಚೇರಿ ಸಿಬ್ಬಂದಿ, ಹಳೇ ಮಾಧ್ಯಮಿಕ ಶಾಲಾ ಹಾಗೂ ಉರ್ದು ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಮಕ್ಕಳಿಗೆ ರೋಟರಿ ಸೆಂಟ್ರಲ್ ಹಾಗೂ ಸೇವಾದಳವತಿಯಿಂದ ಸಿಹಿ ವಿತರಿಸಲಾಯಿತು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಕೋಲಾರ,ಆ.15: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಕಛೇರಿಯ ಕಾರ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷರಾದ ಬಿ.ವಿ.ಗೋಪಿನಾಥ್ ಧ್ವಜಾರೋಹಣವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‍ಕುಮಾರ್, ಹಿರಿಯ ಪತ್ರಕರ್ತರಾದ ಬಿ.ಸುರೇಶ್, ಅಬ್ಬಣಿ ಶಂಕರ್, ಕೆ.ಬಿ.ಜಗದೀಶ್, ಕೋ.ನಾ.ಮಂಜುನಾಥ್, ಎಸ್.ಸಚ್ಚಿದಾನಂದ, ಪ್ರಕಾಶ್ ಮಾಮಿ, ಸಿ.ಜಿ.ಮುರಳಿ, ರಾಜೇಂದ್ರಸಿಂಹ, ಅಯ್ಯೂಬ್ ಖಾನ್, ಆಸೀಫ್ ಪಾಷ, ಮಹೇಶ್, ಸ್ಕಂದಕುಮಾರ್, ಎಸ್ ಸೋಮಶೇಖರ್, ಸಮೀರ್ ಅಹಮದ್, ಎಸ್.ರವಿಕುಮಾರ್, ಲಕ್ಷ್ಮೀಪತಿ, ಶಿವಶಂಕರ್, ವೆಂಕಟೇಶಪ್ಪ, ಅಮರ್, ಮಂಜುನಾಥ್, ನವೀನ್, ರಘುರಾಜ್, ರಾಘವೇಂದ್ರ, ಸಿ.ಅಮರೇಶ್, ಪುರುಷೋತ್ತಮ, ಎನ್.ಸತೀಶ್, ಪವನ್, ಸುಧಾಕರ್, ರವಿ, ಮಂಜುನಾಥ್, ಸೈಯದ್ ತಬ್ರೇಜ್, ಮುಕ್ತಿಯಾರ್ ಅಹಮ್ಮದ್, ಶ್ರೀನಿವಾಸ್ ಉಪಸ್ಥಿತರಿದ್ದರು.

ಶ್ರೀನಿವಾಸಪುರ:ವಿಐಪಿ ಶಾಲಾಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ

ಶ್ರೀನಿವಾಸಪುರ: ವಿದ್ಯಾರ್ಥಿಗಳು ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆದು ರಾಷ್ಟ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಐಪಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ವಿಐಪಿ ಶಾಲಾ ಆಟದ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ಯ ಯೋಧರು ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸ್ವಾತಂತ್ರ್ಯಾನಂತರ ದೇಶ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ದೇಶದ ಕಾನೂನು ಗೌರವಿಸಬೇಕು. ದೇಶದ ಹಿತ ರಕ್ಷಣೆಗೆ ಪೂರಕವಲ್ಲದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಬಾರದು. ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆ ಓದಬೇಕು. ಸ್ವಾತಂತ್ರ್ಯದ ಮಹತ್ವ ಅರಿಯಬೇಕು ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಕವಿತಾ ಸ್ವಾತಂತ್ರ್ಯ ದಿನಾಚರಣೆ ಮಹತ್ವ ಕುರಿತು ಮಾತನಾಡಿದರು. ಮುಖ್ಯ ಶಿಕ್ಷಕಿ ಮಂಜಿತ್ ಕೌರ್ ಇದ್ದರು.
ಶಾಲಾ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ದೇಶ ಭಕ್ತಿ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ವಿಶೇಷ ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ಕ್ರೀಡಾಪಟುಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.