ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ನಾಡಪ್ರಭು ಕೆಂಪೇಗೌಡ ಜಯಂತಿ ಅರ್ಥಪೂರ್ಣವಾಗಿ ಆಚರಿಸಬೇಕು:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಪಟ್ಟಣದಲ್ಲಿ ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಆ.27 ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕೆಂಪೇಗೌಡ ಜಯಂತಿ ಆಚರಿಸುವ ಕುರಿತು ಚರ್ಚಿಸಲು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಯಾವುದೇ ಒಂದು ಸಮುದಾಯಕ್ಕೆ ಮೀಸಲಾಗದಂತೆ ಎಚ್ಚರಿಕೆ ವಹಿಸಬೇಕು. ಆಚರಣೆ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿರಬೇಕು. ಸಮುದಾಯ ಸಾಂಘಿಕವಾಗಿ ಜಯಂತಿ ಆಚರಿಸಬೇಕು. ಜಯಂತಿ ಸಮಾರಂಭದಲ್ಲಿ ಸಮಾಜದ ಎಲ್ಲ ವರ್ಗದ ಜನರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಜಯಂತಿ ಆಚರಣೆಗೆ ಮೊದಲು ಸಮುದಾಯದ ಮುಖಂಡರು ಇನ್ನೊಂದು ಪೂರ್ವಭಾವಿ ಸಭೆ ನಡೆಸಿ, ಆಚರಣೆ ಬಗ್ಗೆ ರೂಪರೇಷೆ ರೂಪಿಸಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಪಟ್ಟಣದಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ಡಾಂಬರು ಹಾಕಬೇಕು. ಚಿಂತಾಮಣಿ ಸರ್ಕಲ್‍ನಿಂದ ಬಸ್ ನಿಲ್ದಾಣದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಆ.15 ರಂದು ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಏರ್ಪಡಿಸಲಾಗಿದೆ. ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಾರಂಭದಲ್ಲಿ ಭಾಗವಹಿಸಬೇಕು. ಹಿಂದಿದ ದಿನ ರಾತ್ರಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂದಾರ ಮಾಡಬೇಕು. ಕೆಂಪೇಗೌಡ ಜಯಂತಿ ಸಮಾರಂಭ ಆ.27ರಂದು ಮಧ್ಯಾಹ್ನ ಅದೇ ಮೈದಾನದಲ್ಲಿ ನಡೆಯಲಿದೆ. ನಿಯಮಾನುಸಾರ ಜಯಂತಿ ಆಚರಣೆಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಕಾರ್ಯದರ್ಶಿ ಮೀಸಗಾನಹಳ್ಳಿ ವೆಂಕಟರೆಡ್ಡಿ, ಭೈರವೇಶ್ವರ ವಿದ್ಯಾ ನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಗೊಪಾಲಕೃಷ್ಣ, ಲಕ್ಷ್ಮಣರೆಡ್ಡಿ ಮಾತನಾಡಿ ಆಚರಣೆ ಕುರಿತು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತೋಟಗಾರಿಕಾ ಇಲಾಖೆ
ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸ್, ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ನಾಗರಾಜು, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಆರ್.ದಯಾನಂದ್ ಮತ್ತಿತರರು ಇದ್ದರು.

ಪಟ್ಟಣದ ರಾಜದಾನಿ ಪೆಟ್ರೋಲ್ ಬಂಕ್ ಸಿಎನ್‌ಜಿ ಗ್ಯಾಸ್ ಬಂಕಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಚಾಲನೆ:ಸಿಎನ್‌ಜಿ ಗ್ಯಾಸ್ ಬಳಿಕೆ ಹೊರೆ ಕಡಿಮೆ

ಶ್ರೀನಿವಾಸಪುರ : ಇತ್ತೀಚಿಗೆ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಹೆಚ್ಚಾಗಿರುವ ನಿಟ್ಟಿನಲ್ಲಿ ಗ್ರಾಹಕರ ಮೇಲೆ ಹೊರೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿಎನ್‌ಜಿ ಗ್ಯಾಸ್ ಬಳಿಸಿಕೊಳ್ಳುವುದರ ಮೂಲಕ ಹಣದ ಹೊರೆ ಕಡಿಮೆ ಮಾಡಿಕೊಳ್ಳುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಗ್ರಾಹಕರಲ್ಲಿ ಮನವಿ ಮಾಡಿಕೊಂಡರು.
ಪಟ್ಟಣದ ರಾಜದಾನಿ ಪೆಟ್ರೋಲ್ ಬಂಕ್ ಸಭಾಂಗಣದಲ್ಲಿ ಸೋಮವಾರ ಸಿಎನ್‌ಜಿ ಗ್ಯಾಸ್ ಬಂಕಿಗೆ ಚಾಲನೆ ನೀಡಿ ಮಾತನಾಡಿದರು.
ರೀಜನಲ್ ಮ್ಯಾನೇಜರ್ ವೆಂಕಟೇಶ್ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ೬ ಕೇಂದ್ರಗಳನ್ನು ತರೆಯಲಾಗಿದ್ದು, ಮೊದಲ ಭಾರಿಗೆ ಶ್ರೀನಿವಾಸಪುರದಲ್ಲಿ ಎಜಿಪಿ,ಸಿಎನ್‌ಜಿ ಗ್ಯಾಸ್ ಬಂಕ್‌ನ್ನು ತೆರೆಯಲಾಗಿದ್ದು, ೧ ಕೆಜಿ ಗ್ಯಾಸ್‌ಗೆ ೮೦ರೂ, ೧ ಕೆಜಿ ಗ್ಯಾಸ್‌ಗೆ ೫೦ ಕಿಮೀ ಪ್ರಯಣಸಬಹುದು ಎಂದು ತಿಳಿಸುತ್ತಾ, ಗ್ಯಾಸ್ ಕಿಟ್ ಮಾರುಕಟ್ಟೆ ಬೆಲೆ ೨೦ ಸಾವಿರ, ಆದರೆ ನಾವು ನಮ್ಮ ಕಂಪನಿ ಕಡೆಯಿಂದ ಗ್ಯಾಸ್ ಕಿಟ್‌ನ್ನು ಸಬ್ಸಿಡಿ ದರದಲ್ಲಿ ೧ ಸಾವಿರಕ್ಕೆ ಕೊಡಲಾಗುವುದು . ಗ್ರಾಹಕರು ಈ ಒಂದು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ರಿವಿಜನಲ್ ಮುಖ್ಯ ಕೆಆರ್ ವೆಂಕಟೇಶ್ ಮಾತನಾಡಿ ನಮ್ಮ ಕಂಪನಿಯಿಂದ ಗ್ರಾಹಕರ ಗ್ಯಾಸ್‌ಗೆ ಸಂಬಂದಿಸಿದ ಸಮಸ್ಯೆಗಳನ್ನು ಸ್ಪಂದಿಸುವ ನಿಟ್ಟಿನಲ್ಲಿ ೨೪/೭ ಗಂಟೆಗಳು ನಿಮ್ಮ ಸೇವೆಗಾಗಿ ನಮ್ಮ ಸಿಬ್ಬಂದಿಗಳು ಇರುತ್ತಾರೆ ಎಂದು ಮಾಹಿತಿ ನೀಡಿದರು.
ಪುರಸಭೆ ಉಪಾಧ್ಯಕ್ಷೆ ಆಯೀಷನಯಾಜ್, ಸದಸ್ಯ ಏಜಾಜ್‌ಪಾಷ, ಜಿಲ್ಲಾ ಪಂಚಾಯಿತಿ ಮಾಜಿ ಸದ್ಯಸ ತೂಪಲ್ಲಿ ಆರ್.ನಾರಾಯಣಸ್ವಾಮಿ, ರಾಜದಾನಿ ಪೆಟ್ರೋಲ್ ಬಂಕ್ ಮಾಲೀಕರು ಮುಜಾಯಿದ್‌ಅನ್ಸಾರಿ, ಜಾಹಿದ್ ಅನ್ಸಾರಿ ,ಅಬಿದ್ ಅನ್ಸಾರಿ, ಮುಖಂಡರಾದ ಲಕ್ಷö್ಮಣರೆಡ್ಡಿ,ಮನು,ಎಪಿಜಿ ಗ್ಯಾಸ್ ಕಂಪನಿ ಜಿಲ್ಲಾ ವ್ಯವಸ್ಥಾಪಕ ಎಸ್.ಆರ್.ಅಶಿತ್, ಅಮೀರ್ ಖಾನ್, ಮಹೇಶ್,ಸುರೇಶ್, ಭಾರತ್ ಪೆಟ್ರೋಲಿಯಂ ವ್ಯವಸ್ಥಾಪಕ ಶುಭಂಸಿಂಗ್, ವಸೀಂ ಇದ್ದರು.

ಅಡ್ಡಗಲ್ ಗ್ರಾಮದ ಶಾಲೆಯ ಅಪ್ರಾಪ್ತ ಬಾಲಕಿಯನ್ನು ಹೆದರಿಸಿ ಲೈಂಗಿಕವಾಗಿ ಬಳಕೆ ಆಪಾದನೆ : ಶಿಕ್ಷಕನ ಬಂಧನ

ಶ್ರೀನಿವಾಸಪುರ: ತಾಲ್ಲೂಕಿನ ಅಡ್ಡಗಲ್ ಗ್ರಾಮದ ಖಾಸಗಿ ಶಾಲೆಯೊಂದರ ಅಪ್ರಾಪ್ತ ಬಾಲಕಿಯೊಬ್ಬಳನ್ನು ಹೆದರಿಸಿ ಲೈಂಗಿಕವಾಗಿ ಬಳಸಿಕೊಂಡ ಆಪಾದನೆ ಮೇಲೆ ಶಾಲೆಯ ಶಿಕ್ಷಕ ಶಿವಕುಮಾರ್ ಅವರನ್ನು ಗೌನಿಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಡ್ಡಗಲ್ ಗ್ರಾಮದ ಆದರ್ಶ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಮಗಳು, ಮನೆಗೆ ಬಂದು ಹೊಟ್ಟೆ ನೋವೆಂದು ಹೇಳಿದಳು. ಚಿಂತಾಮಣಿ ಆಸ್ಪತ್ರೆಯಲ್ಲಿ ತೋರಿಸಿದೆವು. ವೈದ್ಯರು ಸ್ಕ್ಯಾನಿಂಗ್ ಮಾಡಿಸಲು ಹೇಳಿದರು. ಸ್ಕ್ಯಾನಿಂಗ್ ಮಾಡಿಸಿದಾಗ ಗರ್ಭ ಧರಿಸಿರುವ ವಿಷಯ ತಿಳಿದು ಬಂತು. ಆ ಬಗ್ಗೆ ವಿಚಾರಿಸಿದಾಗ ಅದೇ ಶಾಲೆಯ ಶಿಕ್ಷಕ ಶಿವಕುಮಾರ್, ಸುಮಾರು 9 ತಿಂಗಳಿಂದ ಶಾಲೆ ಬಿಟ್ಟನಂತರ ಬಾಲಕಿಯನ್ನು ಹೆದರಿಸಿ ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ತಿಳಿದುಬಂದಿತು. ನನ್ನ ಮಗಳು ಗರ್ಭ ಧರಿಸಲು ಕಾರಣನಾದ ಶಿವಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಾಲಕಿ ತಂದೆ ಶನಿವಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಗೌನಿಪಲ್ಲಿ ಪೊಲೀಸರು ಆರೋಪಿ ಶಿಕ್ಷಕ ಶಿವಕುಮಾರ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸರ್ಕಾರದ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ದೊರೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ : ಸಚಿವ ಕೆ.ಎಚ್.ಮುನಿಯಪ್ಪ

ಶ್ರೀನಿವಾಸಪುರ: ಸರ್ಕಾರದ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ದೊರೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ದಿವಂಗತ ವಕೀಲ ಕೆ.ಮುನಿಸ್ವಾಮಿಗೌಡ ಅವರ ಜನ್ಮ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುನಿಸ್ವಾಮಿಗೌಡ ಅವರು ಶಿಕ್ಷಣ ಪ್ರೇಮಿಯಾಗಿದ್ದರು ಹಾಗೂ ಸಮಾಜ ಮುಖಿ ಧೋರಣೆ ಹೊಂದಿದ್ದರು ಎಂದು ಹೇಳಿದರು.
ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿವೆ. ಗುಣಾತ್ಮಕ ಶಿಕ್ಷಣ ಇಂದು ಖಾಸಗಿ ಶಾಲಾ ಶಕ್ಷಣಕ್ಕೆ ಮೀಸಲಾಗಿಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ತೆರೆದು, ಅಗತ್ಯವಿರುವ ಮೂಲ ಸೌಕರ್ಯ ಒದಗಿಸುವ ಚಿಂತನೆ ನಡೆದಿದೆ. ಶಿಕ್ಷಕರು ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಕೆ.ಮುನಿಸ್ವಾಮಿ ಅವರ ಪುತ್ರ ಹಾಗೂ ಹೈಕೋರ್ಟ್ ವಕೀಲ ಎಂ.ಶಿವಪ್ರಕಾಶ್ ಮಾತನಾಡಿ, ಮುನಿಸ್ವಾಮಿ ಗೌಡರಿಗೆ ಹುಟ್ಟೂರಿನ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ಇತ್ತು. ಹಾಗಾಗಿ ಶಿಕ್ಷಣದಿಂದಲೇ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದರು. ಆದ್ದರಿಂದಲೇ ಗ್ರಾಮದಲ್ಲಿ ಶಾಲೆ ನಿರ್ಮಿಸಲು ಇದ್ದ ಅಡ್ಡಿ ತೊಲಗಿಸಿ, ಸ್ವಂತ ಹಣದಿಂದ ಶಾಲಾ ಕೊಠಡಿ ನಿರ್ಮಿಸಿಕೊಟ್ಟಿದ್ದರು. ಕರ್ತವ್ಯವೇ ದೇವರು ಎಂದು ತಿಳಿದ್ದಿದ್ದ ಅವರು ನ್ಯಾಯವಾದಿಯಾಗಿ ನ್ಯಾಯ ದೊರಕಿಸಿಕೊಡಲು ಶ್ರಮಿಸಿದ್ದಾರೆ ಎಂದು ಹೇಳಿದರು.
ಸಾಹಿತಿ ಹರಿಹರ ಪ್ರಿಯ ಮಾತನಾಡಿ, ಕೆ.ಮುನಿಸ್ವಾಮಿ ಗೌಡರ ಸರಳ ಸಜ್ಜನಿಕೆ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ. ವಕೀಲರಾಗಿ, ಶಿಕ್ಷಣ ಪ್ರೇಮಿಯಾಗಿ ಹಾಗೂ ಸಮಾಜ ಸೇವಕರಾಗಿ ಉತ್ತಮ ಸೇವೆ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಲಾಯಿತು. ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು. ಶಿಕ್ಷಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಗೋಪಾಲಕೃಷ್ಣ, ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಡಾ.ಬೋರಪ್ಪ, ಡಾ.ಜಗದೀಶ್, ಕೆ.ಆರ್.ನರಸಿಂಹಪ್ಪ ಇದ್ದರು.

ಸೈಂಟ್ ಕ್ರಿಸ್ಟೋಫರ್ ಎಸೋಸಿಯೇಶನ್ ಅಧ್ಯಕ್ಷರಾಗಿ ಡಾ| ಜೊನ್ ಎಡ್ವರ್ಡ್ ಡಿ’ಸಿಲ್ವಾ ಪುನರಾಯ್ಕೆ- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಮಂಗಳೂರು; ಸೈಂಟ್ ಕ್ರಿಸ್ಟೋಫರ್ ಎಸೋಸಿಯೇಶನ್ (ರಿ) ಮಂಗಳೂರು, ಇದರ ವಾರ್ಷಿಕ ಹಬ್ಬ ಹಾಗೂ ಮಹಾಸಭೆಯು ತಾ. 06.08.2023 ರಂದು ನಡೆಯಿತು. ಮಂಗಳೂರಿನ ನಿವೃತ್ತ ಬಿಷಪ್ ಅ|ವಂ|ಡಾ| ಎಲೋಸಿಯಸ್ ಪಾವ್ಲ್ ಡಿ’ಸೋಜ, ನಗರದ ರೊಜಾರಿಯೊ ಚರ್ಚಿನಲ್ಲಿ ಬಲಿದಾನ ಪೂಜೆ ನೆರವೇರಿಸಿ, ಸದಸ್ಯರ ವಾಹನಗಳನ್ನು ಆಶೀರ್ವದಿಸಿದರು.
ಬಳಿಕ ರೊಜಾರಿಯೋ ಕಲ್ಚರಲ್ ಹಾಲ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಗೆ ವಂ| ಬಿಷಪರು ಕಾರ್ಯಧ್ಯಕ್ಷರಾಗಿ ಆಗಮಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಆದ ಶ್ರೀಮತಿ ಸ್ಯಾಂಡ್ರಾ ಮರೀಯ ಲೋರಿನ್ ಹಾಜರಿದ್ದರು.
ಈ ಸಂದರ್ಭ, ಸಂಸ್ಥೆಯ ಸದಸ್ಯರ 29 ಮಕ್ಕಳಿಗೆ ಅವರ ಎಸ್.ಎಸ್. ಎಲ್.ಸಿ, ಪಿಯುಸಿ, ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಡಿಸ್ಟಿಂಕ್ಷನ್, ರೇಂಕ್ ಹಾಗೂ ಶ್ರೇಷ್ಟ ಅಂಕಗಳಿಗೋಸ್ಕರ ನಗದು ಹಾಗೂ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ನೆಲೆಯಲ್ಲಿ ಪಿಸ್ತೂಲ್ ಶೂಟಿಂಗ್ ನಲ್ಲಿ ಸ್ಥಾನ ಪಡೆದ ಕುಮಾರಿ ಪ್ರೀಮಲ್ ಪುರ್ಟಾಡೊ ಇವರಿಗೆ, ಹಾಗೂ ಶ್ರೀ ಡೆನ್ಜಿಲ್ ಅಂಟೋನಿ ಲೋಬೊರಿಗೆ ಸಮಗ್ರ ಕೃಷಿ ಪದ್ಧತಿ ವಿಭಾಗದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಶಾಲು ಹೊದಿಸಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಧಿ ತಮ್ಮ ಭಾಷಣದಲ್ಲಿ, 1967 ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು ತಮ್ಮ ಸದಸ್ಯರೊಂದಿಗೆ ಇರುವ ಸಂಬಂಧ ಮತ್ತು ಅವರಿಗಾಗಿ ನೀಡುತ್ತಿರುವ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ವಂ|ಬಿಷಪ್ ರವರು ಕಲಿಕೆಯಲ್ಲಿ ಉನ್ನತ ಸ್ಥಾನ ಪಡೆದ ಸಂಸ್ಥೇಯ ಸದಸ್ಯರ ಮಕ್ಕಳು ಅಷ್ಟಕ್ಕೆ ತೃಪ್ತರಾಗದೆ, ಮುಂದೆ ಪರದೇಶದಲ್ಲಿ ಸೇವೆಯನ್ನು ಅರಸಿ ಹೋಗದೆ ತಮ್ಮ ದೇಶದಲ್ಲಿಯೇ ದುಡಿದು ತಮ್ಮ ಕುಟುಂಬಕ್ಕೆ ಆಧಾರವಾಗುವುದಲ್ಲದೆ, ಸಮಾಜಕ್ಕೆ ಹಾಗೂ ದೇಶಕ್ಕೆ ಮಾದರಿ ಯಾಗಬೇಕೆಂದು ಕರೆಕೊಟ್ಟರು. ಸಂಸ್ಥೆಗೆ ಹಾಗೂ ಎಲ್ಲಾ ಸದಸ್ಯರಿಗೆ ಅವರು ಶುಭ ಹಾರೈಸಿದರು.
ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ| ಜೊನ್ ಡಿಸಿಲ್ವಾ ಅವರು ಸಭೆಗೆ ಆಗಮಿಸಿದ ಸರ್ವರಿಗೂ ಸ್ವಾಗತ ಕೋರಿದರು. ಕಾರ್ಯದರ್ಶಿ ಶ್ರೀ ಸುನೀಲ್ ಪೀಟರ್ ಲೋಬೊ ರವರು ವರದಿ ವಾಚಿಸಿ ಮಂಜೂರು ಮಾಡಲಾಯಿತು. ಮುಂದಿನ 2023-24 ನೇ ವರದಿ ವರುಷಕ್ಕೆ ಲೆಕ್ಕ ಪರಿಶೋಧಕರಾಗಿ ನಗರದ ಮೆ.|ಸುನೀಲ್ ಗೊನ್ಸಾಲ್ವಿಸ್, ಚಾರ್ಟರ್ಡ್ ಎಕೌಂಟೆಂಟ್ಸ್ ಇವರನ್ನು ನೇಮಿಸಲಾಯಿತು.
ಮುಂದಿನ 2023-24ರ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಚುನಾವಣೆಯನ್ನು, ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀ ವಿಕ್ಟರ್ ಮಿನೇಜಸ್ ರವರು ನಡೆಸಿಕೊಟ್ಟರು. ಉಪಾಧ್ಯಕ್ಷ, ಶ್ರೀ ಜೋನ್ ಬ್ಯಾಪಿಸ್ಟ್ ಗೋಮ್ಸ್ ಧನ್ಯವಾದವಿತ್ತರು. ಕಾರ್ಯನಿರ್ವಾಹಕರಾಗಿ ಶ್ರೀಮತಿ ಲೀನಾ ಡಿ’ಸೋಜಾ ಮತ್ತು ಶ್ರೀ ಲ್ಯಾನ್ಸಿ ಡಿ’ಸೋಜಾ ನಡೆಸಿಕೊಟ್ಟರು. ಸಭೆಗೆ ಸಹಕಾರ್ಯದರ್ಶಿ ಶ್ರೀ ಜೆರಾಲ್ಡ್ ಡಿ’ಸೋಜಾ ಹಾಜರಿದ್ದರು.

ಕುಂದಾಪುರ: ಐ.ಸಿ.ವೈ.ಎಮ್ ಸಂಘಟನೆಯಿಂದ ತೈಝೆ ಪ್ರಾರ್ಥನೆ

ಕುಂದಾಪುರ.ಆ. 7: ಕತ್ತಲೆಯಲ್ಲಿ  ಯೇಸು ಕ್ರಿಸ್ತರ ಶಿಲುಭೆ ಅಥವ ಯೇಸು ಕ್ರಿಸ್ತರ ಶವ ರೂಪದ ಪ್ರತಿಮೆ ಇಟ್ಟು ದೀಪಗಳ ಬೆಳಕಿನಲ್ಲಿ ನೆಡೆಸುವಂವತಹ ತೈಝೆ ಪ್ರಾರ್ಥನೆ ಕುಂದಾಪುರ ರೋಜರಿ ಚರ್ಚಿನಲ್ಲಿ ಐ.ಸಿ.ವೈ.ಎಮ್  ಸಂಘಟನೆ ನೇತ್ರತ್ವದಲ್ಲಿ ಏರ್ಪಡಿಸಲಾಗಿತ್ತು.

   ಭಾನುವಾರ ಜು.6 ರಂದು ಸಂಜೆ ಬೆಳಕು ಇರುವಾಗ ವಂ|ಧರ್ಮಗುರು ಸಿರಿಲ್ ಲೋಬೊ ಭಾರತೀಯ ಕ್ರೈಸ್ತ ಯುವ ಜನರಿಗೆ ಪ್ರವಚನ ನೀಡಿದರು. ಸಂಜೆ ಕತ್ತಲಾದ ನಂತರ  ಯೇಸು ಕ್ರಿಸ್ತರ ಶಿಲುಭೆಯನ್ನು ಇಟ್ಟು ದೀಪಗಳನ್ನು ಉರಿಸಿ, ಗೀತೆ ಗಾಯನ, ಆರಾದನೆಯೊಂದಿಗೆ ತೈಝೆ ಪ್ರಾರ್ಥನೆಯನ್ನು ಧರ್ಮಗುರು ವಂ|ಧರ್ಮಗುರು ಸಿರಿಲ್  ಲೋಬೊ ನಡೆಸಿಕೊಟ್ಟರು.

     ಈ ಪಾರ್ಥನ ಕೂಟಕ್ಕೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶುಭ ಕೋರಿ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಐ.ಸಿ.ವೈ.ಎಮ್. ಅಧ್ಯಕ್ಷ ನಿತಿನ್ ಬರೆಟ್ಟೊ, ಕಾರ್ಯದರ್ಶಿ ಜಾಸ್ನಿ ಡಿಆಲ್ಮೇಡಾ, ಸಂಘಟನೇಯ ಸಚೇತಕರಾದ ಶಾಂತಿ ರಾಣಿ ಬರೆಟ್ಟೊ, ಜೇಸನ್ ಪಾಯ್ಸ್ ಉಪಸ್ಥಿತರಿದ್ದರು. ಪದಾಧಿಕಾರಿಗಳು, ಸದಸ್ಯರು, ಧರ್ಮಭಗಿನಿಯರು ಮತ್ತು  ಕುಂದಾಪುರ ರೋಜರಿ ಚರ್ಚಿನ  ಭಕ್ತಾಧಿಗಳು  ಈ ಪ್ರಾರ್ಥನ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದರು.