ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :ಕಾರ್ಗಿಲ್ ವಿಜಯೋತ್ಸವ ಆಚರಣೆ

ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಬೆಳ್ಮಣ್ಣು ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹುತಾತ್ಮ ಯೋಧರನ್ನು ನೆನಪಿಸಿ ಬುಧವಾರ ಸಂಘದ ಕಛೇರಿಯಲ್ಲಿ ಭಾರತಾಂಬೆಯ ಭಾವಚಿತ್ರದೆದುರು ಹಣತೆ ದೀಪ ಬೆಳಗಿಸಿ 24 ವರ್ಷಗಳ ಹಿಂದೆ ದೇಶಕ್ಕೆ ಕಾರ್ಗಿಲ್ ವಿಜಯ ತಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮಾತನಾಡಿದವರು ಪ್ರತಿಯೊಂದು ಕೆಲಸ ಕಾರ್ಯ, ಸಾಧನೆ, ಗೆಲುವಿನ ಹಿಂದೆ ಬಹಳಷ್ಟು ಜನರ ಬಲಿದಾನವಿದೆ. 1999ರಲ್ಲಿ ಪಾಕ್ ಭಾರತೀಯ ಗಡಿ ಆಕ್ರಮಿಸಿದ್ದರ ವಿರುದ್ಧ ನಡೆದ ಯುದ್ಧದಲ್ಲಿ 527 ಸೈನಿಕರು ವೀರ ಮರಣವನ್ನಪ್ಪಿದರು. 1350ಕ್ಕೂ ಅಧಿಕ ವೀರ ಯೋಧರು ಗಾಯಾಳುಗಳಾಗಿದ್ದರು. ಇಂದು ಕಾರ್ಗಿಲ್ ವಿಜಯೋತ್ಸವವಾಗಿ 24 ವರ್ಷಗಳೇ ಸಂದಿದೆ. ಕಾರ್ಗಿಲ್ ವಿಜಯ ಹಾಗೂ ಸೈನಿಕರ ಕೆಚ್ಚೆದೆಯ ಹೋರಾಟದ ನೆನಪಿಗಾಗಿ ಭಾರತಾಂಬೆಯ ಭಾವಚಿತ್ರದೆದುರು ನಮ್ಮ ವೀರ ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ಧೇವೆ ಎಂದರು.
ಈ ಸಂದರ್ಭದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಬೆಳ್ಮಣ್ಣು ಯುವ ಜೇಸಿ ಅಧ್ಯಕ್ಷ ಕಾರ್ಯದರ್ಶಿ ಲಲಿತಾ ಆಚಾರ್ಯ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ವೀಣಾ ಪೂಜಾರಿ, ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಚೆಂಡೆ ಬಳಗದ ನಿರ್ದೇಶಕರಾದ ಸುರೇಶ್ ಅಬ್ಬನಡ್ಕ, ಸದಸ್ಯರಾದ ವೀಣಾ ಆಚಾರ್ಯ, ಪ್ರೇರಣ್ ಮೂಲ್ಯ, ಹಂಶಿಕಾ ಮೂಲ್ಯ ಮೊದಲಾದವರಿದ್ದರು.
ಕಾರ್ಗಿಲ್ ಯುದ್ಧದಲ್ಲಿ ಸೆಣಸಾಡಿ ಹುತಾತ್ಮರಾದ ವೀರ ಯೋಧರಿಗೆ ಮೌನ ಪ್ರಾರ್ಥನೆ ಮಾಡಲಾಯಿತು.

ದಲಿತ ಸಂಘಟನೆಗಳು ಪ್ರತಿರೋಧ ಶಕ್ತಿಯನ್ನು ಗಟ್ಟಿಗೊಳಿಸಬೇಕು: ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ

ಶೀನಿವಾಸಪುರ: ದಲಿತ ಸಂಘಟನೆಗಳು ಪ್ರತಿರೋಧ ಶಕ್ತಿಯನ್ನು ಗಟ್ಟಿಗೊಳಿಸಬೇಕು ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಈಚೆಗೆ ಕೊಲೆಯಾದ ಚಲ್ದಿಗಾನಹಳ್ಳಿ ಗ್ರಾಮದ ವಿದ್ಯಾರ್ಥಿ ಕೆ.ರಾಕೇಶ್ ಕೊಲೆ ಪ್ರಕರಣದ ಬಗ್ಗೆ ಚರ್ಚಿಸಲು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಸಮನ್ವಯ ಒಕ್ಕೂಟದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಮುಖಂಡರಲ್ಲಿ ನಾಯಕತ್ವದ ಪ್ರಜ್ಞೆ ಸಾಯುತ್ತಿದೆ. ಆದ್ದರಿಂದಲೇ ಸಂಘಟನೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಚೆಲ್ಲಿದ ರಕ್ತಕ್ಕೆ ನ್ಯಾಯ ಸಿಗುತ್ತಿಲ್ಲ. ನ್ಯಾಯ ಸಿಗದಿದ್ದಾಗ ಪಡೆದುಕೊಳ್ಳಬೇಕು. ಅದಕ್ಕೆ ಸಾಂಘಿಕ ಪ್ರಯತ್ನದ ಅಗತ್ಯವಿದೆ. ಪಾರಂಪರಿಕ ಹಗೆತನ ಹೆಚ್ಚು ಅಪಾಯಕಾರಿ. ಯಾವುದೇ ಸಂದರ್ಭದಲ್ಲಿ ಹಗೆತನ ಮುಂದುವರಿಯದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ದಲಿತ ಮುಖಂಡರಾದ ರಾಮಾಂಜಮ್ಮ ಮಾತನಾಡಿ, ರಾಕೇಶ್ ಬಗ್ಗೆ ಪ್ರೀತಿಯ ಕತೆ ಹೆಣೆದು ಕೊಲೆ ಮಾಡಲಾಗಿದೆ. ಆದರೆ ಅದಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಆದ್ದರಿಂದ ಸರ್ಕಾರ ಕೊಲೆ ಆರೋಪಿಗಳನ್ನು ಹಿಡಿದು ಬಂಧಿಸಲು ವಿಶೇಷ ತನಿಖಾ ತಂಡ ರಚಿಸಬೇಕು. ಈಗಿನ .ತನಿಖಾಧಿಕಾರಿಯನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಚಲ್ದಿಗಾನಹಳ್ಳಿ ಈರಪ್ಪ ಮಾತನಾಡಿ, ರಾಕೇಶ್ ಕೊಲೆ ಆರೋಪಿಗಳ ಮೇಲೆ ಇರುವ ಎಲ್ಲ ಆರೋಪಗಳನ್ನೂ ತನಿಖೆಗೆ ಒಳಪಡಿಸಬೇಕು. ಅವರನ್ನು ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಮೃತ ರಾಕೇಶ್ ಕುಟುಂಬಕ್ಕೆ ಪರಿಹಾರ ನೀಡಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.
ರಾಕೇಶ್ ಕೊಲೆ ಖಂಡಿಸಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಸಮನ್ವಯ ಒಕ್ಕೂಟದ ವತಿಯಿಂದ ಜು.31 ರಂದು ಬೆಳಿಗ್ಗೆ 10 ಗಂಟೆಗೆ, ಚಲ್ದಿಗಾನಹಳ್ಳಿ ಗ್ರಾಮದಿಂದ ಶ್ರೀನಿವಾಸಪುರದ ತಾಲ್ಲೂಕು ಕಚೇರಿ ವರೆಗೆ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ ಎಂದು ಹೇಳಿದರು.
ವಿವಿಧ ದಲಿತ ಸಂಘಟನೆಗಳ ಮಖಂಡರಾದ ವರ್ತನಹಳ್ಳಿ ವೆಂಕಟೇಶ್, ಮುನಿವೆಂಕಟಪ್ಪ, ವಿ.ಮುನಿಯಪ್ಪ, ನಾರಾಯಣಸ್ವಾಮಿ, ಕೂತ್ಸಂದ್ರ ರೆಡ್ಡಪ್ಪ, ಹೂವಳ್ಳಿ ಕೃಷ್ಣಪ್ಪ, ಸಿ.ಮುನಿಯಪ್ಪ, ಗೊರವಮಾಕಲಹಳ್ಳಿ ಶ್ರೀನಿವಾಸ್, ಚಲಪತಿ, ಸೀತಪ್ಪ, ಎಂ.ವೆಂಕಟೇಶ್, ರಾಮಕೃಷ್ಣ, ನರಸಿಂಹ, ಪ್ರಭಾಕರಗೌಡ, ಬೈರಾರೆಡ್ಡಿ ಇದ್ದರು.

ತೆರ್ನಹಳ್ಳಿ ಕ್ಷೇತ್ರದಿಂದ ಒಂದು ಸದಸ್ಯ ಸ್ಥಾನಕ್ಕೆ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಟಿ.ವಿ.ಮಂಜುನಾಥ್ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ನಹಳ್ಳಿ ಕ್ಷೇತ್ರದಿಂದ ಒಂದು ಸದಸ್ಯ ಸ್ಥಾನಕ್ಕೆ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಟಿ.ವಿ.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಮತ ಎಣಿಕೆ ನಡೆಯಿತು. ಟಿ.ವಿ.ಮಂಜುನಾಥ್ 562 ಮತ ಪಡೆದು ವಿಜೇತರಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಧಾಕೃಷ್ಣ 319 ಮತ ಪಡೆದುಕೊಂಡಿದ್ದಾರೆ.
ಮತ ಎಣಿಕೆ ಮುಗಿದ ಮೇಲೆ ತಹಶೀಲ್ದಾರ್ ಶಿರಿನ್ ತಾಜ್ ವಿಜೇತ ಅಭ್ಯರ್ಥಿ ಟಿ.ವಿ.ಮಂಜುನಾಥ್ ಅವರಿಗೆ ಪ್ರಮಾಣ ಪತ್ರ ನೀಡಿದರು. ನಾರಾಯಣಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ವಿಜಯೋತ್ಸವ: ಮತ ಎಣಿಕೆ ಬಳಿಕ ವಿಜೇತ ಅಭ್ಯರ್ಥಿ ಟಿ.ವಿ.ಮಂಜುನಾಥ್ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ, ಸಿಹಿ ಹಂಚಿದರು.

ಕೆಎಸ್‍ಆರ್‍ಟಿಸಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಶ್ರೀನಿವಾಸಪುರ ತಾಲ್ಲೂಕಿನ ಚೊಕ್ಕನಹಳ್ಳಿ ಗೇಟ್‍ನಲ್ಲಿ, ರಾಜಗುಂಡ್ಲಹಳ್ಳಿ ಮಾರ್ಗವಾಗಿ ಹೋಗುವ ಕೆಎಸ್‍ಆರ್‍ಟಿಸಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬುಧವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಅರಣ್ಯ ಭೂ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ನಕಲಿ ದಾಖಲೆ ಸೃಷ್ಠಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಿ- ರೈತಸಂಘ

ಶ್ರೀನಿವಾಸಪುರ; ಜು.26: ಅರಣ್ಯ ಭೂ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅರಣ್ಯ ಭೂಮಿಗೆ ನಕಲಿ ದಾಖಲೆ ಸೃಷ್ಠಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಅರಣ್ಯ ಭೂಮಿಯನ್ನು ಉಳಿಸುವಂತೆ ರೈತಸಂಘದಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡಲಾಯಿತು.
ಅರಣ್ಯ ಇಲಾಖೆ ಸಚಿವರಿಗೆ, ವಲಯ ಅರಣ್ಯಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಅಧಿಕಾರ, ರಾಜಕೀಯ ಬಲವಿದ್ದರೆ ಕೆರೆ, ಕುಂಟೆ ಜೊತೆಗೆ ಅರಣ್ಯ ಭೂಮಿಯನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿ ಶ್ರೀನಿವಾಸಪುರ ತಾಲೂಕಿನಾದ್ಯಂತ 3725 ಎಕರೆ ಅರಣ್ಯ ಭೂಮಿ ಪ್ರಭಾವಿ ಮಾಜಿ ಶಾಸಕರು ಹಾಗೂ ಅವರ ಹಿಂಬಾಲಕರು ಒತ್ತುವರಿ ಮಾಡಿಕೊಂಡಿರುವುದೇ ಸಾಕ್ಷಿಯಾಗಿದೆ ಎಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾಕ್ಷಿ ಇದ್ದರೂ ಬಲಾಢ್ಯರ ಮುಂದೆ ಅರಣ್ಯ ಅಧಿಕಾರಿಗಳು ನಿಂತುಕೊಳ್ಳಲು ಬೆವರುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಣ್ಣಪುಟ್ಟ ಅನಕ್ಷರಸ್ಥ ಅಮಾಯಕ ರೈತರು 2 ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡರೆ ಆ ಸಮಸ್ಯೆಯನ್ನೇ ದೊಡ್ಡದಾಗಿ ಬಿಂಬಿಸಿ ನೂರಾರು ಪೊಲೀಸರ ರಕ್ಷಣೆಯಲ್ಲಿ ಒತ್ತುವರಿ ತೆರವುಗೊಳಿಸಲು ಸಿಂಹದಂತೆ ಮುನ್ನುಗ್ಗುವ ಅರಣ್ಯ ಅಧಿಕಾರಿಗಳೇ ಸಾವಿರಾರು ಎಕರೆ ಅರಣ್ಯ ಭೂಮಿಗೆ ಕಂದಾಯ ಸರ್ವೇ ಅಧಿಕಾರಿಗಳು ದಾಖಲೆಗಳನ್ನು ಸೃಷ್ಠಿ ಮಾಡಿ ಒತ್ತುವರಿದಾರರಿಗೆ ಕೋಟಿಕೋಟಿ ಹಣಕ್ಕೆ ಮಾರಾಟ ಮಾಡಿರುವವರ ವಿರುದ್ಧ ಕ್ರಮವಿಲ್ಲವೇ ಎಂದು ಪ್ರಶ್ನೆ ಮಾಡಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಒತ್ತುವರಿದಾರರು ಅರಣ್ಯ ಭೂಮಿಯ ದಾಖಲೆಗಳನ್ನೇ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಅಡವಿಟ್ಟು ಕೋಟಿಕೋಟಿ ಸಾಲ ಪಡೆದಿದ್ದರೂ ತಾವುಗಳು ಮೌನವೇಕೆ. ಬಲಾಢ್ಯರಿಗೆ ಒಂದು ನ್ಯಾಯ, ಅಮಾಯಕ ಅನ್ನದಾತರಿಗೆ ಒಂದು ನ್ಯಾಯವೇ. ಇದು ನಮ್ಮ ಪ್ರಶ್ನೆ. ಎಲ್ಲಾ ದಾಖಲೆಗಳ ಸಮೇತ ಒತ್ತುವರಿಯಾಗಿರುವ ಅರಣ್ಯ ಭೂಮಿಯ ಬಗ್ಗೆ ಮಾಹಿತಿ ಇದ್ದರೂ ಒತ್ತುವರಿದಾರರಿಗೆ ಹಿರಿಯ ಅಧಿಕಾರಿಗಳು ರಕ್ಷಣೆ ನೀಡಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಒಂದು ವಾರದ ಒಳಗೆ ತಾಲೂಕಿನಾದ್ಯಂತ ಒತ್ತುವರಿಯಾಗಿರುವ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಸರ್ವೇ ಮಾಡಿಸಬೇಕು. ಜೊತೆಗೆ ಒತ್ತುವರಿದಾರರಿಗೆ ಸಹಕರಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ದಾಖಲು ಮಾಡಿ, ಅರಣ್ಯ ಭೂಮಿಯನ್ನು ಉಳಿಸಬೇಕಿದ್ದು, ಇಲ್ಲವಾದರೆ ಮರಗಳ ಸಮೇತ ಅರಣ್ಯ ಸಚಿವರ ಮನೆ ಮುಂದೆ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿಗಳು, ಒತ್ತುವರಿದಾರರ ವಿರುದ್ಧ ಈಗಾಗಲೇ ಅರಣ್ಯ ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಆದಷ್ಟು ಬೇಗ ಒತ್ತುವರಿಯನ್ನು ತೆರವುಗೊಳಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಆಲವಾಟಿ ಶಿವ, ಷೇಕ್ ಷಫೀಉಲ್ಲಾ, ಸಹದೇವಣ್ಣ, ಮುನಿರಾಜು, ಫಾರೂಖ್ ಪಾಷ, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಬಂಗಾರಿ ಮಂಜು, ರಾಜೇಶ್, ಭಾಸ್ಕರ್, ವಿಜಯ್‍ಪಾಲ್, ವಿಶ್ವ ಮುಂತಾದವರಿದ್ದರು.