ರೋಜರಿ ಕ್ರೆಡಿಟ್ ಕೋ ಆಪರೇಟಿವ್  ಸೊ. ಕುಂದಾಪುರ ಇವರಿಂದ ಸಂತ ಜೋಸೆಫರ ಪ್ರೌಢಶಾಲೆ ಉಚಿತ ಸಮವಸ್ತ್ರ ವಿತರಣೆ

ಕುಂದಾಪುರ, ಜು. : ಸಂತ ಜೋಸೆಫರ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಜುಲಾಯ್ ೧೧ ರಂದು ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಇವರು ಉಚಿತ ಸಮವಸ್ತ್ರ ಕೊಡುಗೆಯಾಗಿ ನೀಡಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಪ್ರಿಯ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್  ಸೊಸೈಟಿ ಲಿ. ಇದರ ಅಧ್ಯಕ್ಷರಾಗಿರುವ ಶ್ರೀ ಜಾನ್ಸನ್ ಡಿ ಅಲ್ಮೇಡಾ ಇವರು ಸಮವಸ್ತ್ರವನ್ನು ವಿತರಿಸಿ ಸಮವಸ್ತ್ರದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ರೋಜರಿ ಸೊಸೈಟಿಯ ನಿರ್ದೇಶಕಿ ಶಾಂತಿ ಆರ್ ಕರ್ವಾಲ್ಲೊ, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿ ಅಲ್ಮೇಡಾ, ಸಿಬ್ಬಂದಿಯಾದ ಜೀವನ್ ರಾಜ್ ಡಿಸೋಜ ಇವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಶುಭ ಹಾರೈಸಿದರು. ಶಿಕ್ಷಕರಾದ ಮೈಕಲ್ ಪುಟಾರ್ಡೊ ಸ್ವಾಗತಿಸಿದರು. ಶಿಕ್ಷಕಿ ಶ್ರೀಲತಾ ವಂದಿಸಿದರು. ಶಿಕ್ಷಕರಾದ ಅಶೋಕ್ ದೇವಾಡಿಗ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ – ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆ :ರಕ್ಷಕ-ಶಿಕ್ಷಕ ಸಭೆ

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಶಾಲಾ ಸಭಾಂಗಣದಲ್ಲಿ ಜೂ.10 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಪ್ರಿಯ ಇವರು ವಹಿಸಿ ಪ್ರತಿ ಮಗುವಿನ ಸಮಗ್ರ ಬೆಳವಣಿಗೆಗೆ ರಕ್ಷಕ -ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರೋ, ರಾಜು ಪೂಜಾರಿ ಇವರು ಮಕ್ಕಳು ಶಿಸ್ತು ಹಾಗೂ ಸಂಸ್ಕಾರವನ್ನು ಮನೆಯಲ್ಲಿಯೇ ಕಲಿಯಬೇಕು. ಪೋಷಕರು ಮಕ್ಕಳೆದುರು ಎಂದಿಗೂ ಸುಳ್ಳನ್ನು ಹೇಳಬಾರದು. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಆಗುಗಳನ್ನು ಹೋಗುಗಳನ್ನು ವಿಚಾರಿಸುತ್ತಿರಬೇಕು. ಎಲ್ಲಾ ಮಕ್ಕಳಲ್ಲಿ ಸಾಮರ್ಥ್ಯ ಇದೆ ಪೋಷಕರು ಅವರಿಗೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸಬೇಕು. ಮನೆಯ ಕಷ್ಟದ ಪರಿಸ್ಥಿತಿಯನ್ನು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಮಕ್ಕಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿಸಬೇಕು. ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಬೇಡಿ ಎಂದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಇವರು ಶಾಲಾ ವರದಿ ವಾಚಿಸಿದರು.ಶಿಕ್ಷಕರಾದ ಸರ್ ಮೈಕಲ್ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸರಸ್ವತಿ ಇವರು ವಂದಿಸಿದರು. ಶಿಕ್ಷಕ ಅಶೋಕ್ ದೇವಾಡಿಗ ನಿರೂಪಿಸಿದರು. ಶಿಕ್ಷಕರ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಶ್ರೀನಿವಾಸಪುರ ತಾಲ್ಲೂಕು ತಾಡಿಗೋಳ್ ಕ್ರಾಸ್‍ ಕಾರು ಬೈಕ್‍ ಡಿಕ್ಕಿ- ಬೈಕ್ ಪ್ರಯಾಣಿಕರಿಬ್ಬರು ಸ್ಥಳದಲ್ಲಿಯೇ ಸಾವು

ಶ್ರೀನಿವಾಸಪುರ: ತಾಲ್ಲೂಕಿನ ತಾಡಿಗೋಳ್ ಕ್ರಾಸ್‍ನಲ್ಲಿ ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ಸಂಭವಿಸಿದೆ.
ತಾಡಿಗೋಳ್ ಗ್ರಾಮದ ಶಂಕರಪ್ಪ (40), ಮ್ಯಾಕಲಗಡ್ಡ ಗ್ರಾಮದ ಮುನಿಸ್ವಾಮಿ (45) ಮೃತರು.
ಬೆಂಗಳೂರು-ಕಡಪ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಆಂಧ್ರಪ್ರದೇಶಕ್ಕೆ ಸೇರಿದ ಕಾರು, ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರರು ರಸ್ತೆಯಿಂದ ದೂರ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರು, ರಸ್ತೆ ಪಕ್ಕದ ಟೊಮೆಟೊ ತೋಟದಲ್ಲಿ ನಿಂತಿದೆ. ಅಪಘಾತದ ಬಳಿಕ ಕಾರು ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಗೌನಿಪಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಶ್ರೀನಿವಾಸಪುರ: ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ

ಶ್ರೀನಿವಾಸಪುರ: ಪಟ್ಟಣದ ಸಿಡಿಪಿಒ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಪ್ರತಿಭಟನ ನಿರತ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಟ ವೇತನ ನಿಗದಿಪಡಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಹಗಲಿರಳು ಶ್ರಮಿಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಕರ್ಯ ಕೊಡಬೇಕು. ಗ್ರಾಚ್ಯುಟಿ ನೀಡುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೊಳಿಸಬೇಕು. ಮೂಲವೇತನ ಮತ್ತಿತರ ಸೌಲಭ್ಯ ನೀಡುವ ಕುರಿತು ಪರಿಶೀಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಿತಿ ರಚಿಸಬೇಕು. ಏಕರೂಪ ಸೇವಾ ನಿಯಮ ರೂಪಿಸಬೇಕು ಎಂದು ಹೇಳಿದರು.
ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಆರ್.ಆಂಜಲಮ್ಮ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸರ್ಕಾರ ಉತ್ತಮ ಗುಣಮಟ್ಟದ ಮೊಬೈಲ್ ಕೊಡಬೇಕು. ಪ್ರದೇಶಿಕ ಭಾಷೆಯಲ್ಲಿ ಪ್ರೋಗ್ರಾಂ ಅಳವಡಿಸಬೇಕು. ಪೋಷಣ್ ಅಭಿಯಾನಕ್ಕೆ ಆಧಾರ್ ಅಥವಾ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಅದೇಶ ಹಿಂಪಡೆಯಬೇಕು. ಆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶನ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಡಿಪಿಒಗೆ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ನೀಡಲಾಯಿತು.
ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷೆ ಜಿ.ಈಶ್ವರಮ್ಮ, ಕಾರ್ಯದರ್ಶಿ ಕೆ.ಎಸ್.ಮಮತ, ಖಜಾಂಚಿ ಕೆ.ಪಿ.ಪುಷ್ಪ ಇದ್ದರು.