ಕುಂದಾಪುರ, 17 ಜೂನ್ 2023 ನಗರದ ಸಂತ ಮೇರಿ ಪ ಪೂ ಕಾಲೇಜಿನಲ್ಲಿ ದೀಪ ಬೆಳಗುವುದರ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದ ಸಾಂಕೇತಿಕವಾಗಿ ಉದ್ಘಾಟನೆ ಹಾಗೂ ಕಚೇರಿ ಸಹಾಯಕರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ಸಂಚಾಲಕರು ನಡೆಸಿಕೊಟ್ಟರು.
ಸಂತ ಮೇರಿ ಪ.ಪೂ ವಿದ್ಯಾಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಫಾದರ್ ಸ್ಟ್ಯಾನಿ ತಾವ್ರೊ ಇವರು ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು “ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಅತಿ ಮುಖ್ಯ.ಪರಸ್ಪರ ತಮ್ಮನ್ನು ವಿಮರ್ಶಿಸಿಕೊಳ್ಳಬೇಕು.ಶಿಸ್ತು ಜೀವನದ ಅತಿ ಮುಖ್ಯ ಅಂಗ” ಎನ್ನುತ್ತಾ ಸಂಸ್ಥೆಯಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸುತ್ತಾ, ಬೋಧಕೇತರ ವರ್ಗದಲ್ಲಿ ಸಹಾಯಕ ಗುಮಾಸ್ತರಾಗಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಮೇಬಲ್ ಡಿಸೋಜಾರವರನ್ನು ಬೀಳ್ಕೊಡುಗೆಗಾಗಿ ಸನ್ಮಾನಿಸಿ, ಅವರ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂತ ಜೋಸೆಫ ಕಾನ್ವೆಂಟಿನ ಸುಪಿರಿಯರ್ ಸಿಸ್ಟರ್ ಸುಪ್ರಿಯ ಎ. ಸಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಪಿ ಯು ವಿದ್ಯಾರ್ಥಿಗಳಿಗೆ ಅನೇಕ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಬಹುಮಾನಗಳನ್ನು ನೀಡಿ ಹುರಿದುಂಬಿಸಿದರು. ಅವರು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರು ಉತ್ತಮವಾಗಿ ಕಲಿಯಬೇಕು. ಒಬ್ಬರನೊಬ್ಬರು ಗೌರವಿಸಬೇಕು. ತಾವೆಲ್ಲರೂ ತಮ್ಮ ತಮ್ಮ ಏಳಿಗೆಗಾಗಿ ಶ್ರಮಿಸಬೇಕು ಎನ್ನುತ್ತಾ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಹತ್ತನೆಯ ತರಗತಿಯ ಸಾಧನೆಗೆ ಶ್ಲಾಘಿಸಿ ಅತ್ತ್ಯುತ್ತಮ ಶ್ರೇಣಿಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮ ಗುರುಗಳಾದ ವಂದನೀಯ ಫಾದರ್ ಅಶ್ವಿನ್ ಅರಾನ್ನಾರವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದು, ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸ್ಪರ್ಧೆಯಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದವರನ್ನು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೆರ್ನಾಂಡಿಸ್ ಹಾಗೂ ಉಪ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ನಾಯರ್ ರವರು ಉಪಸ್ಥಿತರಿದ್ದು ,ಶುಭ ಹಾರೈಸಿದರು. ಉಪನ್ಯಾಸಕರಾದ ಶರ್ಮಿಳಾ ಮಿನೇಜಸ್ ಮತ್ತು ನಾಗರಾಜ ಶೆಟ್ಟಿ ಕ್ರಮವಾಗಿ ಅತ್ತ್ಯುತ್ತಮ ಶ್ರೇಣಿಯ ವಿದ್ಯಾರ್ಥಿಗಳ ಹೆಸರನ್ನು ಹಾಗೂ ಸನ್ಮಾನ ಪತ್ರವನ್ನು ವಾಚಿಸಿದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿನಿ ಕುಮಾರಿ ಆಶಾ ಸ್ವಾಗತಿಸಿದರು. ಕುಮಾರಿ ಅಲ್ವಿಟಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿ, ಕುಮಾರಿ ರಮ್ಯಾ ಧನ್ಯವಾದ ಸಮರ್ಪಿಸಿದರು.ವಿದ್ಯಾರ್ಥಿಗಳ ಮನರಂಜನೆ ಕಾರ್ಯಕ್ರಮವನ್ನು ಪ್ರದರ್ಶಿಸಿದರು.