ಟಿವಿಗಾಗಿ ಎರಡು ಜೀವಗಳ ದುರಂತ ಸಾವು : ದಂಪತಿಗಳ ದಾರುಣ ಅಂತ್ಯ – ಅನಾಥರಾದರು ಇಬ್ಬರು ಮಕ್ಕಳು

ಕಾರ್ಕಳ, ಜೂ 25:  ತಾಲೂಕಿನ ನಲ್ಲೂರು ಹುರ್ಲಾಡಿ ಎಂಬಲ್ಲಿ ಮುಂಬಯಿಯ ಸಾಹುಕಾರ ಊರಿನ  ತೋಟದಲ್ಲಿ ಕೆಲಸ ಮಾಡುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಿದ್ದಿ ಜನಾಂಗದ ದಂಪತಿಗಳ ನಡುವೆ ರವಿವಾರ ಬೆಳಿಗ್ಗೆ ಟಿವಿ ಮಾರಾಟದ ವಿಚಾರದಲ್ಲಿ ಜಗಳ ಉಂಟಾಗಿದ್ದು ಇದರಿಂದ ನೊಂದ ಪತ್ನಿ ಕೆರೆಯೊಂದಕ್ಕೆ ಹಾರಿದಳು, ಆಕೆಯ ರಕ್ಷಣೆಗೆ ಮುಂದಾದ ಆಕೆಯ ಪತಿಯೂ ಕೂಡಾ ಅದೇ ಕೆರೆಗೆ ಹಾರಿದ್ದಾನೆ, ಆದರೆ ಅವರಿಬ್ಬರೂ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಅವರು ಮೂಲತಹ ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ಧಿ (40) ಹಾಗೂ ಯಶೋಧಾ (32) ಎಂಬವರು ದುರಂತ ಸಾವಿಗೆ ಒಳಗಾದ ದಂಪತಿ ಎಂದು ಗುರುತಿಸಲಾಗಿದೆ.

ಸಿದ್ದಿ ಜನಾಂಗದವರಾಗಿದ್ದ ಇವರು ಕಳೆದ ಎರಡು ವರ್ಷಗಳಿಂದ ಮುಂಬಯಿ ಹೋಟೆಲ್ ಉದ್ಯಮಿ ನಲ್ಲೂರು ಹುರ್ಲಾಡಿ ರಘುವೀರ್ ಶೆಟ್ಟಿ ಅವರ ತೋಟದ ಕೆಲಸ ಮಾಡಿಕೊಂಡಿದ್ದರು. ಉತ್ತಮ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ದಂಪತಿಗಳ ನಡುವೆ ಇತ್ತೀಚಿನ ದಿನಗಳಲ್ಲಿ ಇಮ್ಯಾನುಲ್ ಸಿದ್ಧಿ (40) ಕುಡಿತದ ಚಟ ಹೊಂದಿಕೊಂಡಿದ್ದನು ಎಂದು. ತಿಳಿದುಬಂದಿದೆ. ದಂಪತಿಗಳ ಇಬ್ಬರು ಮಕ್ಕಳುಗಳಾದ ಸಾಲೂವ್ (11) ಐರೀನ್(10) ಸ್ಥಳೀಯ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಮಕ್ಕಳಿಂದ ದೊರಕಿದ ಮಾಹಿತಿ ಪ್ರಕಾರ ರವಿವಾರ ಬೆಳಿಗ್ಗೆ ಇಮ್ಯಾನುಲ್ ಸಿದ್ಧಿ ತನ್ನ ಪತ್ನಿಯಲ ಜೊತೆ ಮನೆಯಲ ಟಿ ವಿ ಯನ್ನು ಮಾರಾಟ ಮಾಡುವ ಬಗ್ಗೆ ಮಾತು ಬೆಳೆಸಿದ್ದಾನೆ.. ಅದಕ್ಕೆ ಪತ್ನಿ ಯಶೋಧ ಆಕ್ಷೇಪ ವ್ಯಕ್ತ ಪಡಿಸಿದಾಗ ಅವರೊಳಗೆ ಜಗಳ ಏರ್ಪಟ್ಟು,  ಯಶೋಧ ಮನೆಯಿಂದ ಓಡಿ ಹೋಗಿ ಸಮೀಪದ ಕೆರೆಗೆ ಹಾರಿದ್ದಾಳೆ, ಪತ್ನಿಯ ಜೀವ ಕಾಪಾಡಲು ಅದೇ ಕೆರೆಗೆ ಹಾರಿದ್ದಾನೆ, ಆದರೆ ಇಮ್ಯಾನುಲ್ ಸಿದ್ಧಿ ಎರಡು ಮೂರು ಸಲ ನೀರಿನಿಂದ ಮೇಲೆ ಕೆಳಗೆ ಹೋದರೂ ನಾಲ್ಕನೇ ಬಾರಿ ಆತ ಕೂಡಾ ಅದೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇಮ್ಯಾನುಲ್ ಸಿದ್ಧಿ ಈಜುಗಾರನಾಗಿದ್ದರೂ ಪತ್ನಿಯನ್ನು ರಕ್ಷಿಸಲು ಅಸಾಧ್ಯವಾಗಿ ಅದೇ ಕೆರೆಯಲ್ಲಿ ಆತ್ಮಹತ್ಯೆ ಗೈದಿರಬೇಕೆಂದು ಶಂಕಿಸಲಾಗಿದೆ. ಈ ಎಲ್ಲಾ ದೃಶ್ಯಾವಳಿಯು ದಂಪತಿಯ ಮಕ್ಕಳು ಕಣ್ಣಾರೆ ಕಂಡಿದ್ದಾರೆ ಒಟ್ಟಾರೆಯಾಗಿ ಕುಡಿತ ಮತ್ತು ಟಿವಿ ದೆಸೆಯಿಂದ ಎರಡು ಜೀವ ಹೋಗಿ ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಪೊಲೀಸ್ ಸಿಬ್ಬಂದಿಗಳು ಅಗಮಿಸಿ ಅಗತ್ಯ ಮಾಹಿತಿಗಳನ್ನು ಕಲೆಹಾಕಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿಸಲಾಗಿದೆ. ಶವಗಳನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ

.

ಶ್ರೀನಿವಾಸಪುರ:ಕನ್ಯಕಾ ಪರಮೇಶ್ವರಿ ದೇವಾಲಯದ 32ನೇ ವಾರ್ಷಿಕೋತ್ಸವ

ಶ್ರೀನಿವಾಸಪುರ: ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಮಂಡಳಿ ಟ್ರಸ್ಟ್, ಲಲಿತಾ ಮಹಿಳಾ ಸಂಘ ಹಾಗೂ ವಾಸವಿ ಯುವಕದ ವತಿಯಿಂದ ಶನಿವಾರ ದೇವಾಲಯದ 32ನೇ ವಾರ್ಷಿಕೋತ್ಸವ ಆಚರಿಸಲಾಯಿತು. ವಾರ್ಷಿಕೋತ್ಸವ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ದೇವಿ ವಿಗ್ರಹಕ್ಕೆ ವಿಶೇಷ ಅಲಂಕಾರ ಹಾಗೂ ಅಕ್ಕಿ ಅಭಿಷೇಕ ಮಾಡಲಾಯಿತು. ಲಲಿತಾ ಮಹಿಳಾ ಮಂಡಳಿ ಸದಸ್ಯರ ವತಿಯಿಂದ ಕನ್ಯಕಾಪರಮೇಶ್ವರಿ ಕುರಿತ ಭಕ್ತಿ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಪುರಸ್ಕಾರ ನೀಡಲಾಯಿತು. ಪಿಯುಸಿ ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಗಂಗೋತ್ರಿ ಪಿಯು ಕಾಲೇಜಿನ ವಿದ್ಯಾರ್ಥಿ ಎಸ್.ಎಂ.ಕೌಶಿಕ್, ಸ್ನಾತಕೋತ್ತರ ಪದವಿ ಪಡೆದ ಎಂ.ಬಿ.ಮೃದುಲ ಸುರೇಖಾ ಹಾಗೂ ಪಿ.ಎಸ್.ನಾಗಧೀರಜ್ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಆರ್ಥಿಕ ನೆರವು ನೀಡಲಾಯಿತು.
ತಾಲ್ಲೂಕು ಆರ್ಯವೈಶ್ಯ ಟ್ರಸ್ಟ್ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್, ಕಾರ್ಯದರ್ಶಿ ಕೆ.ವಿ.ಸೂರ್ಯನಾರಾಯಣಶೆಟ್ಟಿ, ರಾಜ್ಯ ಆರ್ಯವೈಶ್ಯ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಆರ್.ಅಮರನಾಥ್ ಕಾರ್ಯಕ್ರಮದ ನೇತೃತ್ವ ಹಿಸಿದ್ದರು.

ನೀಲಟೂರು ಗ್ರಾಮದಲ್ಲಿ ಶನಿವಾರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ

ಶ್ರೀನಿವಾಸಪುರ: ತಾಲ್ಲೂಕಿನ ನೀಲಟೂರು ಗ್ರಾಮದಲ್ಲಿ ಶನಿವಾರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಪ್ರಸಾದ್ (33) ಕೊಲೆಯಾದ ಯುವಕ.
ಪ್ರಸಾದ್ ಮತ್ತು ಕಿರಣ್ ಕುಟುಂಬದ ಮಧ್ಯೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಾವಿನ ಕಾಯಿ ಕೀಳುವ ವಿಚಾರದಲ್ಲಿ ಜಗಳವಾಗಿದೆ. ಕಿರಣ್, ಪ್ರಸಾದ್ ಮುಖಕ್ಕೆ ಕಾರದ ಪುಡಿ ಎರಚಿ ಕಬ್ಬಿಣದ ರಾಡ್ ಮತ್ತು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಪ್ರಸಾದ್ ಅವರನ್ನು ಆಂಬುಲೆನ್ಸ್‍ನಲ್ಲಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟರು ಎಂದು ಹೇಳಲಾಗಿದೆ.
ಆರೋಪಿ ಕಿರಣ್ ಶ್ರೀನಿವಾಸಪುರ ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನೀಲಟೂರಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ ಸದಾ ಆರೋಗ್ಯವನ್ನು ಕಾಪಾಡಬೇಕಾಗಿದೆ: ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್

ಬೆಂಗಳೂರು: ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ. ವೃತ್ತಿಯಲ್ಲಿ ಸಕ್ರೀಯರಾಗಬೇಕಾದರೆ, ಸದಾ ಆರೋಗ್ಯವನ್ನು ಕಾಪಾಡಬೇಕಾಗಿರುವುದು ಬಹಳ ಮುಖ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಬಿಬಿಎಂಪಿ ಸಹಯೋಗದೊಂದಿಗೆ ಪತ್ರಕರ್ತರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವಿನ ಸಂಪರ್ಕ ಸೇತುವೆಯಂತೆ ಕಾರ್ಯವೆಸಗುತ್ತಿರುವ ಕಾರಣ ಶಿಸ್ತಿನ ಜೀವನವನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ನಿರಂತರ ಆರೋಗ್ಯ ತಪಾಸಣೆಗಳೂ ಅವರಿಗೆ ಅತ್ಯಗತ್ಯ ಎಂದು ಅವರು ಹೇಳಿದರು.

ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ವಹಿಸಬಾರದು. ರೋಗ ಬರುವ ಮುನ್ನವೇ ಆಗಿಂದಾಗ್ಗೆ ತಪಾಸಣೆ ಮಾಡಿಸಿಕೊಂಡು ಜಾಗ್ರತೆ ವಹಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸದಸ್ಯರ ಕಾಳಜಿಯೂ ಸಹ ಪತ್ರಕರ್ತರ ಸಂಘಕ್ಕೆ ಮುಖ್ಯವಾಗಿ ಇರುವುದರಿಂದ ಸಂಘವು ಇಂತಹ ಕಾರ್ಯಚಟುವಟಿಕೆಗಳನ್ನು ಸತತವಾಗಿ ಹಮ್ಮಿಕೊಳ್ಳುತ್ತಿದೆ ಎಂದರು.

ರಾಜ್ಯ ಖಜಾಂಚಿ ಎಂ.ವಾಸುದೇವ ಹೊಳ್ಳ ಪ್ರಾರಂಭದಲ್ಲಿ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಶರಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಸಮಿತಿ ಸದಸ್ಯರಾದ ಕೌಸಲ್ಯ ಫಳನಾಕರ್, ಕೆ. ಆರ್ .ದೇವರಾಜ್,ಮತ್ತು ನರೇಂದ್ರ ಪಾರೇಕಟ್, ಶಿವರಾಜ್ ಮತ್ತಿತರರು ಹಾಜರಿದ್ದರು.
ನಂತರ ಆರೋಗ್ಯ ಸಚಿವರು, ಕೆಯುಡಬ್ಲ್ಯೂ ಜೆ ಕಾರ್ಯಾಲಯಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ವೀಕ್ಷಿಸಿ ಮೆಚ್ಚಿಗೆಯ ಮಾತುಗಳನ್ನಾಡಿದರು. ಸೋಮಶೇಖರ್ ಗಾಂಧಿ ವಂದಿಸಿದರು.

ಸಹಕಾರಿ ಸಂಘಗಳಲ್ಲಿರುವ ಮಹಿಳೆಯರ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಬೇಕು:ರೈತ ಸಂಘದ ರಾಜ್ಯ ಸಂಚಾಲನಾ ಸಮಿತಿ- ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರಿಗೆ ಒತ್ತಾಯ

ಕೋಲಾರ, ಜೂ.24: ರೈತ ಸಂಘದ ರಾಜ್ಯ ಸಂಚಾಲನ ಸಮಿತಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಕೆ.ಟಿ ಗಂಗಾದರ್ ರವರ ನೇತೃತ್ವದಲ್ಲಿ ಸಹಕಾರಿ ಸಂಘಗಳಲ್ಲಿರುವ ಮಹಿಳೆಯರ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಬೇಕು ಮತ್ತು ಮುಂಬುರುವ ಬಜೆಟ್‍ನಲ್ಲಿ ರೈತ ಪರ ಯೋಜನೆಗಳನ್ನು ಜಾರಿ ಮಾಡಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‍ರವರನ್ನು ಬೇಟಿ ಮಾಡಿ ರೈತ ಸಂಘದ ರಾಜ್ಯ ಸಂಚಾಲನಾ ಸಮಿತಿಯಿಂದ ಒತ್ತಾಯಿಸಲಾಯಿತು.
ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ರೈತರು ಬೆಳೆಯುವ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಗೆ ಬಳಸಿಕೊಂಡರೆ ಬಡವರಿಗೆ ಅನ್ನಬಾಗ್ಯ ರೈತರಿಗೆ ಬೆಲೆ ಬಾಗ್ಯ ಕೊಟ್ಟ ಹಾಗೆ ಆಗುತ್ತದೆ. ಮುಂಬರುವ ಬಜೆಟ್ ನಲ್ಲಿ ರೈತಪರ ಯೋಜನೆಗಳನ್ನು ಜಾರಿ ಮಾಡುವ ಜೊತೆಗೆ ಪ್ರಜಾಯಾತ್ರೆ ಮತ್ತು ಮಹಿಳಾ ಸಮಾವೇಶಗಳಲ್ಲಿ ಮುಖ್ಯಮಂತ್ರಿಗಳು ಮತ್ತು ನೀವು ಸಹಕಾರ ಸಂಘಗಳಲ್ಲಿನ ಎಲ್ಲಾ ಮಹಿಳೆಯರ ಸಾಲ ಮನ್ನಾ ಮಾಡಿ ನಂತರ 1 ಲಕ್ಷ ರೂ ಬಡ್ಡಿ ರಹಿತ ಸಾಲ ನೀಡುತ್ತೇವೆಂದು ಮಹಿಳೆಯರಿಗೆ ಬಹಿರಂಗ ಸಭೆಯಲ್ಲಿ ವಾಗ್ದಾನ ನೀಡಿದ್ದು, ಸರ್ಕಾರ ಬಂದು ಎರಡು ತಿಂಗಳಾದರೂ ಸ್ತ್ರೀಶಕ್ತಿ ಸಾಲ ಮನ್ನಾ ಬಗ್ಗೆ ಚರ್ಚೆ ಮಾಡದೆ ಇರುವುದು ಮಹಿಳೆಯರಿಗೆ ಮಾಡಿದ ಅಪಮಾನವಾಗಿದ್ದು, ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಮಹಿಳೆಯರೇ ಕಾರಣವಾಗಿದ್ದು, ತಾವುಗಳು ಸ್ತ್ರೀಶಕ್ತಿ ಸಾಲದ ಮನ್ನಾವನ್ನು ಕೂಡಲೇ ಮಾಡಬೇಕೆಂದು ಅಗ್ರಹಿಸಿದರು.
ನಳಿನಿಗೌಡ ಮಾತನಾಡಿ ಮಹಿಳೆಯರು ಕಾಂಗ್ರೇಸ್‍ನ ನಿಮ್ಮ ಮಾತಗೆ ಬೆಲೆ ಕೊಟ್ಟು ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಕೊಟ್ಟ ಮಾತು ನಡೆಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಸ್ತ್ರೀ ಶಕ್ತಿ ಸಾಲ ಮಾಡಿರುವವರು ಉದ್ಯಮಿಗಳು ಮತ್ತು ರಾಜಕಾರಣಿಗಳ ಮನೆಯ ಮಹಿಳೆಯರಲ್ಲ, ಹಳ್ಳಿಗಾಡಿನ ಬಡ ಕೂಲಿಕಾರ್ಮಿಕರ ಹೆಣ್ಣು ಮಕ್ಕಳಾಗಿದ್ದು, ನಿಮ್ಮ ಪಕ್ಷದ ನಾನಾಯಕಿ ಕಾರ್ಯಕ್ರಮಕ್ಕೆ ಮಹಿಳೆಯರೇ ಬಲ ತುಂಬಿರುವುದು ಅದನ್ನು ಮರೆತರೆ ಮುಮದಿನ ಚುನಾವಣೆಯಲ್ಲಿ ಮಹಿಳೆಯರು ತಮ್ಮ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ. ನೀವು ಮನ್ನಾ ಮಾಡದೇ ಹೋದರೆ ಸಹಕಾರಿ ಬ್ಯಾಂಕ್‍ಗಳಿಗೂ ನಷ್ಟ ನಿಮ್ಮ ಪಕ್ಷಕ್ಕೂ ತುಂಬಲಾರದ ನಷ್ಟ ಉಂಟಾಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಯಿತು.
ಸಹಕಾರ ಸೋಸೈಟಿ ಮತ್ತು ಬ್ಯಾಂಕ್ ಸಿಬ್ಬಂದಿ ಈಗಾಗಲೇ ಮಹಿಳೆಯರಿಗೆ ಸಾಲ ವಸೂಲಿ ಹೆಸರಿನಲ್ಲಿ ಕಿರುಕುಳ ಕೊಡಲು ಪ್ರಾರಂಭಿಸಿದ್ದರೂ ಸರ್ಕಾರ ಮೌನವಾಗಿ ಕುಳಿತಿದೆ ಹಾಗೂ ಕೋಲಾರ, ಚಿಕ್ಕಬಳ್ಳಾಪುರ , ತುಮಕೂರು, ಮಂಡ್ಯ, ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುವಂತೆ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು,ಸಹಕಾರ ಸಿಬ್ಬಂದಿ ಮತ್ತು ಮಹಿಳೆಯರ ನಡುವೆ ಜಟಾಪಟಿಗಳು ನಡೆದು ಗಲಾಟೆಗಳಾಗಿರುವುದು ಗುಪ್ತಚರ ವರದಿಯಿಂದ ನಿಮ್ಮ ಗಮನಕ್ಕೂ ಬಂದಿದೆ. ಆದ್ದರಿಂದ ಕೊಟ್ಟ ಮಾತಿನಂತೆ ಈ ಬಜೆಟ್‍ನಲ್ಲಿ ಮಹಿಳೆಯರ ಸಾಲ ಮನ್ನಾ ಮಾಡುತ್ತೇವೆಂದು ಘೋಷಿಸಬೇಕು.ನೀವು ಮನ್ನಾ ಮಾಡದೇ ಹೋದರೆ ಮಹಿಳೆಯರು ಬೀದಿಗೆ ಇಳಿದು ಸರ್ಕಾರದ ವಿರುದ್ದ ರೊಚ್ಚಿಗೇಳುವುದು ಗ್ಯಾರಂಟಿ ಆಗಿದೆ ಇದರ ಪರಿಣಾಮ ಸರ್ಕಾರದ ಮೇಲೆ ಬೀಳುತ್ತದೆ.ಸಹಕಾರಿ ಬ್ಯಾಂಕ್‍ಗಳು ನೀವು ಕೊಟ್ಟ ಮಾತಿನಿಂದ ದಿವಾಳಿ ಅಂಚಿಗೆ ಬಂದು ನಿಲ್ಲುತ್ತವೆ
ಮನವಿ ಸ್ವೀಕರಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‍ರವರು ಮಾತನಾಡಿ ನಮ್ಮ ಸರ್ಕಾರ ರೈತರ ಪರ ಮಹಿಳೆಯರ ಪರವಾಗಿದ್ದು, ರೈತರ ಸಮಸ್ಯೆಗಳನ್ನು ಸಂಬಂದಪಟ್ಟವರೊಂದಿಗೆ ಚರ್ಚಿಸಿ ಬಗೆಹರಿಸುವ ಜೊತೆಗೆ ಮಹಿಳೆಯರಿಗೆ ಕೊಟ್ಟ ಮಾತು ಕಾಂಗ್ರೇಸ್ ಸರ್ಕಾರ ಎಂದಿಗೂ ಮರೆಯುವುದಿಲ್ಲ ನಾವು ನೀಡಿರುವ 5 ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಹೆಚ್ಚಿನ ಭಾಗ ಮೀಸಲಾಗಿದ್ದು, ಸ್ತ್ರೀ ಶಕ್ತಿ ಸಾಲ ಮನ್ನಾ ಬಗ್ಗೆ ನಾನು ಹಾಗೂ ಮುಖ್ಯಂತ್ರಿಗಳು ಸಚಿವ ಸಂಪುಟದ ಜೊತೆ ಮಹಿಳೆಯರಿಗೆ ಕೊಟ್ಟಿರುವ ಸಾಲ ಮನ್ನಾದ ಭರವಸೆಯ ಬಗ್ಗೆ ಕಾನೂನಾತ್ಮಕವಾಗಿ ಚರ್ಚಿಸುವ ಭರವಸೆ ನೀಡಿದರು.
ನಿಯೋಗದಲ್ಲಿ ರಾಜ್ಯ ಸಂಚಲನಾ ಸಮಿತಿ ಸದಸ್ಯರಾದ ಕೆ.ಟಿ ಗಂಗಾದರ್, ಹಾವೇರಿ ಮಲ್ಲಿಕಾರ್ಜುನ್ ಬಳ್ಳಾರಿ, ಕೋಲಾರ ತಿಮ್ಮಣ್ಣ, ಯಲ್ಲಪ್ಪ, ತುಮಕೂರು ದೇವರಾಜ್, ರಾಮನಗರ ಅನುಸೂಯಮ್ಮ, ಬೆಳಗಾವಿ ಸುರೇಖಾ, ಮೈಸೂರು ಮಂಜುಕಿರಣ್, ವಿದ್ಯಸಾಗರ್, ಚಿಕ್ಕಬಳ್ಳಾಪುರ ಪ್ರತೀಶ್, ಮಂಡ್ಯ ನಾಗಣ್ಣ, ಎಲ್ಲಾ ಸಂಚಲನಾ ಸಮಿತಿ ಸದಸ್ಯರು ಹಾಜರಿದ್ದರು.