ಸ್ವಸಹಾಯ ಸಂಘಗಳ ಸದಸ್ಯರು ನಿಯಮಾನುಸಾರ ಸಂಘದ ವ್ಯವಹಾರ ನಿರ್ವಹಿಸಬೇಕು:ಗೋವಿಂದ ಮೂರ್ತಿ

ಶ್ರೀನಿವಾಸಪುರ: ಸ್ವಸಹಾಯ ಸಂಘಗಳ ಸದಸ್ಯರು ನಿಯಮಾನುಸಾರ ಸಂಘದ ವ್ಯವಹಾರ ನಿರ್ವಹಿಸಬೇಕು ಎಂದು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ ಜಿಲ್ಲಾ ಘಟಕದ ಮಿಷನ್ ವ್ಯವಸ್ಥಾಪಕ ಗೋವಿಂದ ಮೂರ್ತಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸ್ವಸಹಾಯ ಸಂಘ ಮತ್ತು ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರ ಸಂಘ ಸದಸ್ಯರು ಸರ್ಕಾರದ ಸೌಲಭ್ಯ ಪಡೆದು ಜೀವನೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಸಬೇಕು. ಆ ನಿಟ್ಟಿನಲ್ಲಿ ಗಳಿಕೆ ದಾರಿ ತೋರಿಸುವ ಬಗ್ಗೆ ಹಾಗೂ ಸಂಘ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ತರಬೇತಿ ಶಿಬಿರದಲ್ಲಿ ಸ್ವಸಹಾಯ ಸಂಘಗಳಿಗೆ ಸರ್ಕಾರದಿಂದ ದೊರೆಯುವ ಆರ್ಥಿಕ ಸೌಲಭ್ಯ ಹಾಗೂ ಸಂಘಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ವ್ಯವಹಾರ ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಲು ಸೂಚಿಸಲಾಯಿತು.
ಪುರಸಭೆ ಕಿರಿಯ ಅಭಿಯಂತರ ವಿ.ಶ್ರೀನಿವಾಸಪ್ಪ, ಕಂದಾಯ ನಿರೀಕ್ಷಕ ಎಣ್.ಶಂಕರ್, ಸದಸ್ಯ ಬಿ.ವೆಂಕಟರೆಡ್ಡಿ, ಮಾಜಿ ಸದಸ್ಯ ರೆಡ್ಡಪ್ಪ ಇದ್ದರು.

ಮಾನವೀಯ ಮೌಲ್ಯ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು : ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಡಿ ರಂಗಪ್ಪ

ಶ್ರೀನಿವಾಸಪುರ: ಮಾನವೀಯ ಮೌಲ್ಯ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಕೋಡಿ ರಂಗಪ್ಪ ಹೇಳಿದರು.
ಪಟ್ಟಣದ ಭೈರವೇಶ್ವರ ವಿದ್ಯಾನಿಕೇತನದ ಸಭಾಂಗಣದಲ್ಲಿ ಕೋಲಾರದ ಕೃಷಿ ಸಂಸ್ಕøತಿ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ತಜ್ಞ ಎಂ.ಶ್ರೀರಾಮರೆಡ್ಡಿ ಮರೆತ ಮಾನವೀಯ ಪರಂಪರೆಗೆ ಜೀವ ಕೊಟ್ಟ ಚೈತನ್ಯ ಶೀಲ ವ್ಯಕ್ತಿ. ಮಕ್ಕಳಿಗೆ ಅಕ್ಷರದ ಜತೆಗೆ ಆಲೋಚನೆ ಕಲಿಸಿದ ಮೇಷ್ಟ್ರು. ಮಾದರಿ ಖಾಸಗಿ ಶಾಲೆ ಕಟ್ಟಿ, ಪೋಷಕರಿಗೆ ಹೊರೆಯಾಗದಂತೆ, ಸರ್ಕಾರಿ ಶಾಲೆಯಂತೆ ಬೆಳೆಸಿದರು. ಸಮಾಜೋತ್ಪನ್ನ ಕಾರ್ಯಕ್ರಕ್ಕೆ ಮರುಜೀವ ನೀಡಿದರು. ಆ ಮೂಲಕ ವಿದ್ಯಾರ್ಥಿಗಳು ಓದಿನ ಬಳಿಕ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡಿದರು ಎಂದು ಹೇಳಿದರು.
ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ, ನೆಲದ ಗುರುತು ಸರಣಿಯ ಮೊದಲ ಕೃತಿಯಾಗಿದೆ. ಈ ಕೃತಿ ಪ್ರತಿ ಮನೆಯ ದೀಪವಾಗಬೇಕು. ತಮ್ಮ ನಡೆಯ ಮೂಲಕ ಮಕ್ಕಳಲ್ಲಿ ಬದಲಾವರಣೆ ತಂದ ಎಂ.ಶ್ರೀರಾಮರೆಡ್ಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಭಿನ್ನವಾಗಿ ಕಾಣಿಸುತ್ತಾರೆ. ಅವರ ಆದರ್ಶದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಭೈರವೇಶ್ವರ ವಿಧ್ಯಾನಿಕೇತನದ ಅಭಿವೃದ್ಧಿಯ ಹಿಂದೆ ಶ್ರೀರಾಮರೆಡ್ಡಿ ಅವರ ಶ್ರಮ ಅಡಗಿದೆ. ತಮ್ಮ ಗಳಿಕೆಯ ಹಣ ಹಾಗೂ ದಾನಿಗಳ ನೆರವು ಪಡೆದು ಮಾದರಿ ಶಾಲೆ ನಿರ್ಮಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.ಅದಕ್ಕಾಗಿ ಅವರು ಅಭಿನಂದನಾರ್ಹರು. ಶಾಲೆ ಅಭಿವೃದ್ಧಿಗೆ ಪೂರಕವಾದ ಎಲ್ಲ ನೆರವು ನೀಡಲಾಗುವುದು. ಸಂಸ್ಥೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಎ.ವೆಂಕಟರೆಡ್ಡಿ, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ, ರಂಗಭೂಮಿ ಕಲಾವಿದೆ ಡಾ. ವಿಜಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಡಾ. ರಮೇಶ್, ಡಾ. ಯಶಸ್ವಿನಿ ಶ್ರೀರಾಮರೆಡ್ಡಿ ಅವರ ಬದುಕು ಹಾಗೂ ಸೇವೆ ಕುರಿತು ಮಾತನಾಡಿದರು.
ಭೈರವೇಶ್ವರ ವಿದ್ಯಾನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ, ಆದಿಮ ಸಂಸ್ಥೆಯ ಕೋಮಣ್ಣ, ಹ.ಮಾ.ರಾಮಚಂದ್ರ, ಕೃಷಿ ಸಂಸ್ಕøತಿ ಕೇಂದ್ರದ ಮುಖ್ಯಸ್ಥ ಬೈಚೇಗೌಡ, ಲೇಖಕ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ, ಗಾಯಕ ಹುಂಜ ಮುನಿರೆಡ್ಡಿ, ರಾಮಾಂಜಮ್ಮ, ಬೈರಾರೆಡ್ಡಿ, ವೆಂಕಟರಾಮರೆಡ್ಡಿ, ಪ್ರೊ. ಸತೀಶ್‍ಚಂದ್ರಾರೆಡ್ಡಿ, ನರಸಿಂಹಯ್ಯ, ಶಿವಾರೆಡ್ಡಿ, ಪರಮೇಶ್ ಇದ್ದರು.

ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ – ರಕ್ಷಕ- ಶಿಕ್ಷಕ ಸಭೆ


ಕುಂದಾಪುರ: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಇಲ್ಲಿ ಶಾಲಾ ರಕ್ಷಕ ಶಿಕ್ಷಕ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಆಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಹಿಸಿ ಪೋಷಕರಿಂದ ಮಾಹಿತಿಯನ್ನು ಕಲೆಹಾಕಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರವನ್ನು ವಹಿಸಿಕೊಳ್ಳುತ್ತಾರೆ ಹಾಗೂ ಶಾಲಾ ಗುಣಮಟ್ಟದ ಶಿಕ್ಷಣದ ಬಗ್ಗೆ ಅಧ್ಯಕ್ಷೀಯ ನುಡಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಮತಿ ಸುನಿತಾ ಬಾಂಜ್ ರವರುಮಕ್ಕಳಿಗೆ ಪ್ರಾರಂಭದಿಂದಲೇ ಕಲಿಸಬೇಕು. ಮಕ್ಕಳಿಗೆ ಶಿಕ್ಷಕರು ಮತ್ತು ಕುಟುಂಬದಿಂದ ಎನನ್ನು ಕಲಿಯುತ್ತಾರೊ ಅದನ್ನು ಪ್ರತಿನಿಧಿಸುತ್ತಾರೆ ಎಂದು ತಿಳಿಸುತ್ತಾ ಮಕ್ಕಳನ್ನು ಇತರರೊಂದಿಗೆ ಹೋಲಿಸಬಾರದು’ ಎಂದು ಪೋಷಕರಿಗೆ ತಿಳಿಸಿದರು.

ಮುಖ್ಯ ಶಿಕ್ಷಕಿ ತೆರೇಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ತಿಳಿಸಿದರು. ಶಾಲಾ ವರದಿಯನ್ನು ಸಹ ಶಿಕ್ಷಕಿ ರಮ್ಯಾ ಹಾಗೂ ಸಹ ಶಿಕ್ಷಕ ಓರನ್ ರವರು ವಾಚಿಸಿದರು. ಸಹ ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ಮುಖ್ಯ ಅತಿಥಿಗಳ ಕಿರು ಪರಿಚಯವನ್ನು ನೀಡಿದರು. ಶ್ರೀಮತಿ ನಿಮಿಷಾರವರು ಅಯವ್ಯಯ ವಾಚಿಸಿದರು, ಸಹ ಶಿಕ್ಷಕಿ ನೀತಾ ಮೆಂಡೋನ್ಸಾ ಸ್ವಾಗತಿಸಿದರ, ಸಹ ಶಿಕ್ಷಕಿ ಪ್ರೀತಿ ಅಂದ್ರಾದೆ ವಂದಿಸಿದರು, ಸಹ ಶಿಕ್ಷಕಿ ರಮ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.