ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಕರ್ಣಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ – ಲಕ್ಷ ಬೆಲೆಯ ಕಂಪ್ಯೂಟರ್ ಲ್ಯಾಬಿಗೆ ಪೀಠೋಪಕರಣ ಕೊಡುಗೆ

ಕುಂದಾಪುರ; ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕವು ಈ ದಿನ ಕರ್ಣಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ – ನೆಂಪು ಇಲ್ಲಿಗೆ ಒಂದು ಲಕ್ಷ ಬೆಲೆಯ ಕಂಪ್ಯೂಟರ್ ಲ್ಯಾಬ್ ನ ಪೀಠೋಪಕರಣ ವನ್ನು ಒದಗಿಸಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇದನ್ನು ಉದ್ಘಾಟಿಸಿದರು. ಶಾಲೆಯ ಎಚ್.ಎಮ್. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಪ್ರಾಂಶುಪಾಲರಾದ ರಾಜೀವ ನಾಯ್ಕ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಅಬ್ದುಲ್ ಬಶೀರ್ ಹಾಗೂ ಈ ದೇಣಿಗೆ ನೀಡಿದ ರೆಡ್ ಕ್ರಾಸ್ ಸದಸ್ಯರಾದ ಶ್ರೀಮತಿ ಪ್ರತಿಮ ದಿನಕರ ಶೆಟ್ಟಿ (W/ O Dr. Dinakar Shetty) ಮತ್ತು ಅವರ ಪುತ್ರಿ ಡಾ. ನಿಕಿತ ಶೆಟ್ಟಿ ಉಪಸ್ಥಿತರಿದ್ದರು. ಸುಧಾಕರ ಶೆಟ್ಟಿ ಸ್ವಾಗತಿಸಿದರು. ಕರುಣಾಕರ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವಸಂತರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಷ್ಠಿತ ಸೇಂಟ್ ಜೋಸೆಫ್ ಸಿಬಿಎಸ್‍ಇ ಶಾಲಾ ಶೈಕ್ಷಣಿಕ 2022- 23 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಮಾರಂಭ

ಬೆಂಗಳೂರು, ಜೂ.17: ರಾಜ್ಯದ ಪ್ರತಿಷ್ಠಿತ ಸೇಂಟ್ ಜೋಸೆಫ್ ಶಾಲೆ ಸಿಬಿಎಸ್‍ಇ ಶಾಲಾ ಶೈಕ್ಷಣಿಕ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಮಾರಂಭ ಜರುಗಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕ್ರತರಾದ ಮೇಜರ್ ಪ್ರದೀಪ್ ಆರ್ಯ (ಐ ಆರ್ ಎಸ್) ಪ್ರಸ್ತುತ ಕಮಿಷನರ್ ಆದಾಯ ಇಲಾಖೆ ಬೆಂಗಳೂರು,ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. “ಸಾಧನೆಗೆ ವೈಫಲ್ಯಗಳು ಮುಖ್ಯವಲ್ಲ, ಗೆಲ್ಲುವ ಗುರಿ ಮುಖ್ಯ” ಇದಕ್ಕೆ ವಿದ್ಯಾರ್ಥಿಗಳ ನಿರಂತರ ಪ್ರಯತ್ನ ಬೇಕು ಎನ್ನುವ ಮೂಲಕ ಪ್ರದೀಪ್ ಆರ್ಯರವರು ತಮ್ಮ
ಬದುಕಿನ ಅನುಭವ ಹಾಗೂ ಸಾಧನೆ ಕುರಿತು ಮೌಲ್ಯಯುತ ಮಾತುಗಳನ್ನು ಹಂಚಿಕೊಂಡರು.

ಕಾರ್ಯಕ್ರಮ ಕುರಿತು ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಫಾ|| ರೋಹನ್ ಡಿ’ ಅಲ್ಮೇಡಾ ಎಸ್‍ಜೆ ರವರು ಸಾಧಕರ ಸಾಲಿನಲ್ಲಿ ಗುರುತಿಸಲ್ಪಡುವ ಮೇಜರ್ ಆರ್ಯ ರವರ ಸಾಧನೆಗಳು ಭವಿಷ್ಯತ್‍ನಲ್ಲಿ ಯುವ ಪೀಳಿಗೆಯನ್ನು ಪ್ರೇರೇಪಿಸುವಲ್ಲಿ ಸಹಕಾರಿಯಾಗುವಂತವು, ಎಂದು ಹೇಳುವ ಮೂಲಕ, ಸಾಧನೆಗೆ ಪ್ರತಿಯೊಬ್ಬರು ಅಳವಡಿಕೊಳ್ಳಬೇಕಾದ ಗುಣಗಳ ಬಗ್ಗೆ ತಿಳಿಸಿಕೊಟ್ಟರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದ ಜೊತೆಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ ಶಾಲೆಯ ಮುಖ್ಯಸ್ಥರಾದ ರೆವರೆಂಡ್ ಫಾ|| ಜೋಸೆಫ್ ಡಿಸೋಜ ಎಸ್‍ಜೆ, ಶಾಲೆಯ ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ ಜೋಸೆಫ್, ಸೇಂಟ್ ಜೋಸೆಫ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿನೋದ್ ಅಮೃತ್‍ರಾಜ್, ಶಾಲೆಯ ಸಂಯೋಜಕರು ಮತ್ತು ಪೋಷಕ ಶಿಕ್ಷಕರ ಸಭೆಯ ಉಪಾಧ್ಯಾಕ್ಷರಾದ ಕಮಲ್ ಗೋವಿಂದ್, ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಸಮಸ್ಯೆ ಉಂಟಾಗುವ ಮೊದಲೇ ಕ್ರಮದ ಜವಾಬ್ದಾರಿ ಸರಕಾರದ್ದು’’ ನಮ್ಮ ಜವಾಬ್ದಾರಿಯಿಂದ ನಾವು ಹಿಂದೆ ಸರಿಯಲ್ಲ :ಸಚಿವ ಮಂಕಾಳ ಎಸ್ ವೈದ್ಯ

ಮಂಗಳೂರು, ಜೂ.17: ಇಂದು ಮೀನುಗಾರಿಕೆ, ಬಂದರು ಮತ್ತು ಜಲಸಾರಿಗೆ ಸಚಿವ ಮತ್ತು ಭಟ್ಕಳ ಶಾಸಕರಾದ ಮಂಕಾಳ ಎಸ್ ವೈದ್ಯ ಮಂಗಳೂರಿಗೆ ಬಂದಿದ್ದರು. “ಸಮಸ್ಯೆ ಉಂಟಾಗುವ ಮೊದಲೇ ಕ್ರಮ ಕೈಗೊಳ್ಳಬೇಕಾದುದು ಸರಕಾರದ ಜವಾಬ್ದಾರಿ’’ ನಮ್ಮ ಜವಾಬ್ದಾರಿಯಿಂದ ನಾವು ಹಿಂದೆ ಸರಿಯಲ್ಲ ಎಂದರು. ಮೀನುಗಾರರ ಸಮಸ್ಯೆಗಳು, ಕಡಲ್ಕೊರೆತ, ಡಿಸೆಲ್ ಸಬ್ಸಿಡಿ ಇತ್ಯಾದಿ ಬಗ್ಗೆ ಕಾಳಜಿಯಿಂದ ಮಾತನಾಡಿದ ಬಗ್ಗೆ ಮಾಧ್ಯಮಗಳಲ್ಲಿ ಓದಿದೆ. ಇದಕ್ಕೆ ಅಧಿಕಾರಶಾಹಿ ಹೇಗೆ ಸ್ಪಂದಿಸಬಲ್ಲುದು ಕಾದು ನೋಡಬೇಕು.

2013 ರ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ನೆನಪು. ಕೊಂಕಣಿ ಅಕಾಡೆಮಿಯ ಅಂದಿನ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ರವರ ಮುತುವರ್ಜಿಯಿಂದ ಮಂಗಳೂರು ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠಕ್ಕೆ ಮಂಜೂರಾತಿ ನೀಡಿತ್ತು. ಕುಲಪತಿ ಡಾ. ಭೈರಪ್ಪ ಪೀಠ ಉದ್ಘಾಟನೆ ಕೂಡಾ ಮಾಡಿಸಿದ್ದರು. ಆದರೆ ಪೀಠಕ್ಕೆ ಘೋಷಿಸಿದ 2 ಕೋಟಿ ಅನುದಾನ ತಾರದೇ ಕೆಲಸಗಳು ಶುರುವಾಗುವಂತಿರಲಿಲ್ಲ. ಸರಕಾರದಿಂದ ಹೊಸ ಘೋಷಣೆಗಳನ್ನು ಮಾಡಿಸಬಹುದು. ಆದರೆ ಅನುದಾನ ತರುವುದು ಸಮುದ್ರ ಮಂಥನ ಮಾಡಿದಷ್ಟೇ ಕಷ್ಟದ ಕೆಲಸ.

ಇಂತಹ ಹೊತ್ತಿನಲ್ಲಿ ಆಪದ್ಭಾಂದವನಂತೆ ದೊರೆತವರೇ ಈ ವೈದ್ಯರು. ಉತ್ತರ ಕನ್ನಡದಲ್ಲಿ ಕೊಂಕಣಿ ಅಕಾಡೆಮಿ ವತಿಯಿಂದ ನಡೆದ ವಿವಿಧ ಕಾರ್ಯಕ್ರಮಗಳಿಗಾಗಿ ಹಲವಾರು ಸಲ ಅವರನ್ನು ಭೇಟಿಯಾದ ಕಾರಣಕ್ಕೆ ಅವರಿಗೆ ನಮ್ಮ ತಂಡದ ಪರಿಚಯವಿತ್ತು. ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗಿ ಚರ್ಚಿಸಲಾಗಿ ನೇರವಾಗಿ ಸಿ. ಎಮ್. ಬಳಿ ಕರೆದುಕೊಂಡು ಹೋಗಿ ಹೂ ಎತ್ತಿದಷ್ಟೇ ಸಲೀಸಾಗಿ 2 ಕೋಟಿ ಮಂಜೂರು ಮಾಡಿಸಲು ಸಹಕರಿಸಿದ್ದರು. ನಂತರ ಸರಕಾರಿ ಔಪಚಾರಿಕತೆಗಳು ಮುಗಿದು ಆರ್ಥಿಕ ವರ್ಷ ಮುಗಿಯುವುದರೊಳಗೆ ಚೆಕ್ ದೊರೆತಿತ್ತು.

ಸಹಜ ಮಾನವ ಕಾಳಜಿ ಇರುವ ವ್ಯಕ್ತಿಗಳು ಅಧಿಕಾರದಲ್ಲಿರುವಾಗ ಅವರಿಗೆ ಇದೆಲ್ಲಾ ಸಲೀಸು. ಏಕೆಂದರೆ ಇದೇ ಕೆಲಸಕ್ಕಾಗಿ ಅವರ ಆಯ್ಕೆಯಾಗಿದೆ ಎಂಬುದು ಅವರ ಗಮನದಲ್ಲಿರುತ್ತದೆ. ಕಾಂಗ್ರೆಸಿನ ಪಂಚ ಗ್ಯಾರಂಟಿಗಳು ಇದೇ ಮಾನವೀಯ ಅಂತ:ಕರಣದ ಉತ್ಪನ್ನಗಳು. ಇಂದು ಮಾಂಕಾಳ ವೈದ್ಯರು ಮಂಗಳೂರಿಗೆ ಬಂದ ಬಗ್ಗೆ ಕೇಳಿದಾಗ ಇದೆಲ್ಲಾ ನೆನಪಾಯಿತು.

“ದೇಶ ಪ್ರೇಮ ನಮ್ಮ ಹೃದಯದಿಂದಲೇ ಸ್ಪುರಿಸಬೇಕು”


ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ “ದೇಶ ಪ್ರೇಮ”ದ ಸ್ಫೂರ್ತಿ ಕಡಿಮೆಯಾಗುತ್ತಾ ಬರುತ್ತಿದೆಯೋ ಎಂಬ ಕಾಳಜಿ ಸಹಜವಾದರೂ ಆಸಕ್ತ ಪ್ರಜೆಗಳು ತಮ್ಮ ವೃತ್ತಿ ಪ್ರವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ತೋರಿ ಇತರರಿಗೆ ಮಾದರಿಯಾದರೆ ಸಹಜವಾಗಿ ಅವರಿಂದ ಪ್ರೇರಣೆ ಪಡೆದವರು “ದೇಶ ಪ್ರೇಮಿ”ಗಳಾಗುತ್ತಾರೆ. ನಮ್ಮ ದೇಶದ ಸಂಸ್ಕøತಿ, ಕೌಶಲ್ಯಗಳನ್ನು ನಾಶ ಮಾಡಲು ತುಂಬ ಆಕ್ರಮಣಕಾರರು ಪ್ರಯತ್ನ ಪಟ್ಟರೂ ಆಗಲಿಲ್ಲ. ಅಲೆಕ್ಸಾಂಡರ್ ಕಥೆ ಅದಕ್ಕೆ ತಕ್ಕ ಉದಾಹರಣೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಆಕ್ರಮಣಗಾರರನ್ನು ಪರಿಚಯಿಸಿದಷ್ಟು ನಮ್ಮ ದೇಶಕ್ಕಾಗಿ ಹೋರಾಡಿದವರನ್ನು ಮಕ್ಕಳಿಗೆ ಪರಿಚಯಿಸಲಿಲ್ಲ. ನಮ್ಮದೇ ಪರಿಸರದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆ ತಿಳಿದಿಲ್ಲ. ದೇಶ ಪ್ರೇಮ ನಮ್ಮ ಹೃದಯದಿಂದಲೇ ಸ್ಪುರಿಸಬೇಕೇ ಹೊರತು ಯಾರ ಒತ್ತಡದಿಂದಲ್ಲ. ಎಂದು ಸ್ವರಾಜ್ಯ 75 ಸಂಘಟನೆಯ ಸ್ಥಾಪಕ ಪ್ರದೀಪ್ ಪೂಜಾರಿ ಬಸ್ರೂರು ಹೇಳಿದರು.
ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ದೇಶ ಪ್ರೇಮ” ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು.
ನಮ್ಮ ಜಿಲ್ಲೆಯಲ್ಲಿ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರಿದ್ದು 56 ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಭೇಟಿ ನೀಡಿದ್ದೇವೆ. 24 ಮನೆಗಳಿಗೆ “ಸ್ವಾತಂತ್ರ್ಯ ಹೋರಾಟಗಾರರ ಮನೆ” ಎಂದು ನಾಮ ಫಲಕ ಹಾಕಿದ್ದೇವೆ. ಆದರೆ ನಾವು ಮಾಡಿದ ಶೋಧನೆ, ವಿಷಯ ಸಂಗ್ರಹ, ಶ್ರಮಕ್ಕೆ ನಿರೀಕ್ಷಿತ ಬೆಂಬಲ ಸಂಬಂಧಪಟ್ಟವರಿಂದ ಸಿಗದಿರುವುದು ಬೇಸರವೆನಿಸುತ್ತದೆ” ಎಂದು ಅವರು ಹೇಳಿದರು.
ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ರೋಟರಿ ಮಾಜಿ ಜಿಲ್ಲಾ ಗವರ್ನರ್ ಎಸ್. ಸದಾನಂದ ಚಾತ್ರ ಅವರು ಪ್ರದೀಪ್ ಪೂಜಾರಿ ಬಸ್ರೂರು ಅವರನ್ನು ಗೌರವಿಸಿದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಯು.ಎಸ್.ಶೆಣೈ ಅತಿಥಿಯನ್ನು ಪರಿಚಯಿಸಿದರು. ಡಾ. ವಿಶ್ವೇಶ್ವರ, ಕೆ.ಪಿ.ಭಟ್, ಶ್ರೀಮತಿ ಶೋಭಾ ಭಟ್, ಮಹೇಂದ್ರ ಶೆಟ್ಟಿ ವಿಚಾರ ವಿನಿಮಯದಲ್ಲಿ ಪಾಲ್ಗೊಂಡರು. ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ಸ್ವಾಗತಿಸಿದರು. ಡಾ| ಉತ್ತಮ ಕುಮಾರ್ ಶೆಟ್ಟಿ ವಂದಿಸಿದರು.

ಭಾವಚಿತ್ರ ಮತ್ತು ವಿಳಾಸ ಸಾಕ್ಷದ ದಾಖಲೆ ಇದ್ದರೆ ಶಕ್ತಿ ಯೋಜನೆಯಲ್ಲಿ ಪಯಣಿಸಬಹುದು – ಬ್ಲಾಕ್ ಕಾಂಗ್ರೆಸ್


ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಒಂದು ವಾರದ ಸಂಚಾರ ಯಶಸ್ಸಿನಿಂದ ಕೂಡಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಯಣಿಸಿದ್ದು ಒಂದು ದಾಖಲೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ತಿಳಿಸಿದರು. ಅವರು ಇಂದು ಕೆಎಸ್ಆರ್ ಟಿಸಿ ಕುಂದಾಪುರ ವಿಭಾಗಕ್ಕೆ ಭೇಟಿಯನ್ನು ನೀಡಿ, ಮ್ಯಾನೇಜರ್ ರಾಜೇಶ್ ಮೊಗೇರ ಇವರಿಂದ ಒಂದು ವಾರದ ಮಾಹಿತಿಯನ್ನು ಪಡೆದುಕೊಂಡರು. ಕುಂದಾಪುರ ಕೆಎಸ್ಆರ್ ಟಿಸಿ ವಿಭಾಗದಲ್ಲಿ ಈಗಾಗಲೇ 37 ಬಸ್ಸುಗಳು ಸಾಮಾನ್ಯ ಸಾರಿಗೆ, ಗ್ರಾಮಾಂತರ ಸಾರಿಗೆ ಮತ್ತು ನಗರ ಸಾರಿಗೆ ಇಲಾಖೆಯಲ್ಲಿ ಸಂಚರಿಸಿದ್ದು ಮತ್ತೆ ಹೆಚ್ಚಿನ 32 ವೇಗದೂತ ಬಸ್ಸುಗಳು ಶಕ್ತಿ ಯೋಜನೆಯ ಸೇವೆಯಲ್ಲಿವೆ ಇವೆ ಎಂದು ತಿಳಿಸುತ್ತಾ ಮಹಿಳೆಯರು ಉಚಿತ ಪ್ರಯಾಣ ಮಾಡಲು ಭಾವಚಿತ್ರದ ಭಾವಚಿತ್ರ ಮತ್ತು ವಿಳಾಸ ಸಾಕ್ಷದ ದಾಖಲೆ ಇದ್ದರೆ ಶಕ್ತಿ ಯೋಜನೆಯಲ್ಲಿ ಪಯಣಿಸಬಹುದು, ದಾಖಲೆಯು ಮೊಬೈಲಲ್ಲಿ ಇದ್ದರೂ ಉಪಯೋಗಿಸಬಹುದು ಎಂದು ತಿಳಿಸಿದರು.

ಅಧಿಕಾರಿಗಳು ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಸರ್ಕಾರದ ಸೌಲಭ್ಯಗಳು ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ಸಿಗುವಂತ ನೋಡಿಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮನೆ ನೀಡುವಲ್ಲಿ ಗುಡಿಸಲು ವಾಸಿಗಳು ಹಾಗೂ ವಾಸಿಸಲು ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುತ್ತಿರವ ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು. ನೀರು ಪೂರೈಕೆಗೆ ಏನಾದರೂ ಸಮಸ್ಯೆ ಇದ್ದಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸಮಸ್ಯೆ ಪರಿಹರಿಸಬೇಕು. ಅಗತ್ಯ ಇದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಅಧಿಕಾರಿಗಳು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ನಿವಾರಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರ ಕೃಷ್ಣಪ್ಪ, ಕಾರ್ಯಪಾಲಕ ಸಹಾಯಕ ಎಂಜಿನಿಯರ್ ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕ ರಾಮಪ್ಪ ಇದ್ದರು.

ಮಹಿಳೆಯರಿಗೆ ನೀಡುತ್ತಿರೋದು ಬಡ್ಡಿರಹಿತ ಸಾಲ-ವದಂತಿಗಳಿಗೆ ಕಿವಿಗೊಡದಿರಿ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಬ್ಯಾಂಕ್ ಉಳಿಸಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವುದು ಬಡ್ಡಿರಹಿತ ಸಾಲ ಮಹಿಳೆಯರು ವದಂತಿಗಳಿಗೆ ಕಿವಿಗೊಡದಿರಿ, ಪಡೆದ ಸಾಲ ಮರುಪಾವತಿಸಿ, ಬ್ಯಾಂಕ್ ಉಳಿಸಿ ಬೆಳೆಸಿದ ನೀವು ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಲು ಕಾರಣರಾಗದಿರಿ ಎಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ತೀರ್ಮಾನಕ್ಕೂ ಬ್ಯಾಂಕಿಗೂ ಸಂಬಂಧವಿಲ್ಲ ಏಕೆಂದರೆ ಬ್ಯಾಂಕಿನ ಸ್ವಂತ ಬಂಡವಾಳ, ಠೇವಣಿ ಜತೆಗೆ ಅಫೆಕ್ಸ್ ಬ್ಯಾಂಕ್,ನಬಾರ್ಡ್‍ನಿಂದ ಸಾಲ ತಂದು ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಿದ್ದೇವೆ ಎಂದು ತಿಳಿಸಿದರು.
ಬ್ಯಾಂಕ್ ಕಳೆದ 2016-17ನೇ ಸಾಲಿನಿಂದಲೂ ಭದ್ರತೆ ರಹಿತ ಸಾಲವನ್ನು ಮಹಿಳೆಯರಿಗೆ ನೀಡುತ್ತಿದೆ, ಮಹಿಳೆಯರು ಶೇ.100 ಮರುಪಾವತಿಯ ಮೂಲಕ ಬ್ಯಾಂಕನ್ನು ಉಳಿಸಿದ್ದಾರೆ, ಡಿಸಿಸಿ ಬ್ಯಾಂಕ್ ಇಂದು ಇಷ್ಟೊಂದು ಉತ್ತಮ ಸ್ಥಿತಿಯಲ್ಲಿ ಇರುವುದಕ್ಕೆ ಮಹಿಳೆಯರೇ ಕಾರಣ ಎಂದರು.
ಡಿಸಿಸಿ ಬ್ಯಾಂಕಿನ ಆಧಾರಸ್ತಂಭವಾಗಿರುವ ಮಹಿಳೆಯರು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ರಾಜ್ಯದಲ್ಲೇ ಬ್ಯಾಂಕನ್ನು ನಂ1 ಸ್ಥಾನಕ್ಕೆ ತಂದಿದ್ದಾರೆ, ಆದರೆ ಚುನಾವಣೆ ನಂತರ ಇದೀಗ ಸಾಲ ಮನ್ನಾದಂತಹ ವದಂತಿಗಳಿಗೆ ಕಿವಿಗೊಟ್ಟು ಸಾಲ ಮರುಪಾವತಿ ವಿಳಂಬ ಮಾಡಿದರೆ ಅದರಿಂದ ಬ್ಯಾಂಕಿನ ಆರ್ಥಿಕ ಸ್ಥಿತಿಗೆ ಹೊಡೆತ ಬೀಳುತ್ತದೆ ಎಂದು ತಿಳಿಸಿದರು.
ಸಕಾಲಕ್ಕೆ ಸಾಲದ ಕಂತು ನೀವು ಮರುಪಾವತಿಸದಿದ್ದರೆ ನಿಮಗೂ ಬಡ್ಡಿಯ ಹೊರೆ ಬೀಳುತ್ತದೆ ಜತೆಗೆ ಬ್ಯಾಂಕ್ ಇತರೆ ತಾಯಂದಿರಿಗೂ ಸಾಲ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಈ ಎಲ್ಲಾ ಅಂಶಗಳನ್ನು ಮನಗಂಡು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ಬ್ಯಾಂಕನ್ನು ಉಳಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ ಎಂದರು.
ತಾಯಂದಿರು ವದಂತಿಗಳಿಗೆ ಕಿವಿಗೊಡದೇ ಸಾಲ ಮರುಪಾವತಿ ಮುಂದುವರೆಸುವ ಮೂಲಕ ಬ್ಯಾಂಕ್ ಸದೃಢವಾಗಿರಲು ಸಹಕರಿಸಬೇಕು ಎಂದು ಕೋರಿದ ಅವರು, ದಿವಾಳಿಯಾಗಿದ್ದ ಬ್ಯಾಂಕನ್ನು ಕಳೆದ 10 ವರ್ಷಗಳಿಂದ ನಿಮ್ಮ ಸಹಕಾರದಿಂದ ಉಳಿಸಿ,ಬೆಳೆಸಿದ್ದೇವೆ, ಮಹಿಳೆಯರ ಸಬಲೀಕರಣಕ್ಕೆ ನೆರವಾಗಿದ್ದೇವೆ, ಇಂತಹ ಸಂದರ್ಭದಲ್ಲಿ ಬ್ಯಾಂಕಿಗೆ ಶಕ್ತಿ ತುಂಬಿದ ನೀವೆ ಸಂಕಷ್ಟ ತಂದೊಡ್ಡದಿರಿ ಎಂದು ಮನವಿ ಮಾಡಿದರು.
ಖಾಸಗಿ ಸಾಲದ ಶೂಲಕ್ಕೆ
ಸಿಲುಕುತ್ತೀರಿ ಎಚ್ಚರ
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಮಹಿಳೆಯರಿಗೆ ಭದ್ರತೆ ರಹಿತ ಸಾಲ ನೀಡುವ ಮೂಲಕ ರಾಜ್ಯದ ಯಾವುದೇ ಡಿಸಿಸಿ ಬ್ಯಾಂಕ್ ಮಾಡದ ಧೈರ್ಯ ಮಾಡಿದ್ದೇವೆ, ಪಡೆದ ಸಾಲಕ್ಕೆ ನೀವು ಕೇವಲ ತಿಂಗಳಿಗೆ 1500 ಪಾವತಿಸಿದರೆ 36 ತಿಂಗಳಲ್ಲಿ ಸಾಲ ತೀರುತ್ತೆ ಆದರೆ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದರೆ ನೀವು ಖಾಸಗಿ ಸಾಲದ ಶೂಲಕ್ಕೆ ನೀವು ಸಿಕ್ಕಿಹಾಕಿಕೊಂಡರೆ ತಿಂಗಳಿಗೆ ಬಡ್ಡಿಯೇ 2500 ಕಟ್ಟಬೇಕಾಗುತ್ತದೆ ಎಂಬ ಸತ್ಯದ ಅರಿವು ಇರಲಿ, ನಿಮ್ಮದೇ ಬ್ಯಾಂಕ್ ಅದರ ಕತ್ತು ಹಿಸುಕುವ ಕೆಲಸ ಮಾಡದಿರಿ ಎಂದು ಮನವಿ ಮಾಡಿದರು.
ಯಾವುದೇ ಮಧ್ಯವರ್ತಿಗಳ ಹಾವಳಿ, ಲಂಚ,ಭ್ರಷ್ಟತೆಗೆ ಅವಕಾಶವಿಲ್ಲದೇ ನಿಮಗೆ ಸಾಲ ನೀಡಿದ್ದೇವೆ, ನಿಮ್ಮ ಮರುಪಾವತಿಯ ಬದ್ದತೆಗೆ ಧನ್ಯವಾದ ತಿಳಿಸುವೆ, ಅದೇ ಬದ್ದತೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಇರಬೇಕಿದೆ, ನಿಮ್ಮದೇ ಬ್ಯಾಂಕ್ ಉಳಿಸಿಕೊಳ್ಳುವ ಹೊಣೆಗಾರಿಕೆಯೂ ನಿಮ್ಮದೇ ಆಗಿದೆ ಎಂದರು.
24119 ಸಂಘಗಳು
3 ಲಕ್ಷ ಕುಟುಂಬಗಳು
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 24119 ಸ್ತ್ರೀಶಕ್ತಿ ಸಂಘಗಳ 3 ಲಕ್ಷ ಕುಟುಂಬಗಳ ಮಹಿಳೆಯರಿಗೆ ಸಾಲ ನೀಡಿದೆ, ಇಷ್ಟೊಂದು ಭದ್ರತೆರಹಿತ ಸಾಲ ನೀಡಿರುವ ಖ್ಯಾತಿ ಡಿಸಿಸಿ ಬ್ಯಾಂಕಿಗೆ ಮಾತ್ರವಿದೆ ಎಂದರು.
ದಿವಾಳಿಯಾಗಿದ್ದ ಬ್ಯಾಂಕನ್ನು ನಿಮ್ಮ ಮಗುವಿನಂತೆ ಗರ್ಭದಲ್ಲಿ 9 ತಿಂಗಳು ರಕ್ಷಿಸಿ ಸಾಕಿದ್ದೀರಿ, ಇದೀಗ ನೀವು ಸಾಲ ಸಕಾಲಕ್ಕೆ ಮರುಪಾವತಿ ಮಾಡದಿದ್ದರೆ ನಿಮ್ಮದೇ ಮಗು ಸಾಯುವಂತಾಗುತ್ತದೆ ಎಂದು ತಿಳಿಸಿ, ನೀವು ಸಾಲ ಮನ್ನಾ ಆಮಿಷಕ್ಕೆ ಒಳಗಾಗದಿರಿ, ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದರೆ ಮತ್ತೆ ನಿಮಗೆ ಸಾಲ ನೀಡುವ ಧೈರ್ಯ ಮಾಡಲು ಸಾಧ್ಯವಿಲ್ಲ, ಅದರಿಂದ ಲಕ್ಷಾಂತರ ಮಹಿಳೆಯರ ಸಬಲೀಕರಣ,ಸ್ವಾವಲಂಬಿ ಬದುಕಿಗೆ ಹಾನಿಯಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಬ್ಯಾಂಕಿನ ಎಜಿಎಂಗಳಾದ ಶಿವಕುಮಾರ್, ಖಲೀಮುಲ್ಲಾ, ಅಧಿಕಾರಿಗಳಾದ ಭಾನುಪ್ರಕಾಶ್, ಮಂಗಳಗೌರಿ ಮತ್ತಿತರರಿದ್ದರು.

ಮುಳಬಾಗಲು :ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇನೆಂದು ಮಾತು ತಪ್ಪಿದ ಸರ್ಕಾರದ ವಿರುದ್ದ ಪ್ರತಿಭಟನೆ

ಮುಳಬಾಗಿಲು,ಜೂ.16 : ಮುಳಬಾಗಲು ಬೈರಕೂರು ಹೋಬಳಿ ಹೀರೇಗೌಡನಹಳ್ಳಿಯಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇನೆಂದು ಮಾತು ತಪ್ಪಿದ ಸರ್ಕಾರದ ವಿರುದ್ದ ಸಾಲ ಕಟ್ಟಲ್ಲ ಎಂದು ಸಿಡಿದೆದ್ದ ಮಹಿಳೆಯರು
ಸಾಲ ಮನ್ನಾ ಮಾಡುತ್ತೇನೆಂದು ಮಾತಿದ ತಪ್ಪಿದ ಕಾಂಗ್ರೇಸ್ ಸರ್ಕಾರ ಮಹಿಳೆಯರ ಆಕ್ರೋಶಕ್ಕೆ ಗುರಿಯಾದ ಪಲವಾಗಿ ಇಂದು ಸಾಲವಸೂಲಿಗೆ ಹೋದ ಸೋಸೈಟಿ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿಹಾಕಲು ಮುಂದು ಆಗಿ ಸಾಲ ವಸೂಲಿ ಮಾಡಲು ಬಂದರೆ ಹುಷಾರ್ ಸಾಲ ಮನ್ನಾ ಮಾಡುತ್ತೇವೆಂದು ನಮಗೆ ಮೋಸ ಮಾಡಿದ ಮುಖ್ಯಮಂತ್ರಿಗಳ ಬಳಿ ಸಾಲ ವಸೂಲಿ ಮಾಡಿಕೊಳ್ಳಿ ಎಂದು ಕಡಕ್ ಎಚ್ಚರಿಕೆ ನೀಡಿದರು.
ಚುನಾವಣೆ ಸಮಯದಲ್ಲಿ ಕಾಂಗ್ರೇಸ್ ಸಮಾವೇಶಗಳಲ್ಲಿ ಸಿದ್ದರಾಮಯ್ಯನವರು ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡೇ ಮಾಡ್ತಿನಿ ಎಂದು ಮಹಿಳೆಯರ ವೋಟ್ ಗಾಗಿ ಹೇಳಿಕೆ ಕೊಟ್ಟರೆ ಸಾಲದು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ಬ್ಯಾಂಕ್ ಸಿಬ್ಬಂದಿ ಮತ್ತು ಸರ್ಕಾರಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಆಗಿದೆ.
ಕಾಂಗ್ರೇಸ್‍ನ ಪ್ರಜಾಯಾತ್ರೆ ಸಮಾವೇಶಗಳಲ್ಲಿ ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ನಮ್ಮ ಪಕ್ಷಕ್ಕೆ ಮಹಿಳೆಯಾದ ನೀವು ಮತ ನೀಡಿದರೆ ಸಹಕಾರ ಬ್ಯಾಂಕ್‍ಗಳಲ್ಲಿ ಪಡೆದಿರುವ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆಂಧು ಮಾತು ನೀಡಿ ಮತ ಪಡೆದ ಸಿದ್ದರಾಮಯ್ಯನವರ ಸರ್ಕಾರ ಸ್ತ್ರೀಶಕ್ತಿ ಸಾಲ ಮನ್ನಾ ಮಾಡದೆ ಇರುವುದು ಮಹಿಳೆಯರಿಗೆ ಮಾಡಿದ ದ್ರೋಹವಾಗಿದೆ
ನಿಯತ್ತಾಗಿ ಮಾಡಿದ ಸಾಲವನ್ನು ಮರುಪಾವತಿ ಮಾಡುವುದು ನಾವೇ ಆಗಿದ್ದೇವೆ, ಹಾಗೂ ನಿಮ್ಮ ಮಾತಿಗೆ ಬೆಲೆ ಕೊಟ್ಟು ಕಾಂಗ್ರೇಸ್ ಸರ್ಕಾರವನ್ನು ನಮ್ಮ ಎಲ್ಲಾ ಮಹಿಳೆಯರು ಬೆಂಬಲಿಸಿ ಮತ ನೀಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎಂಬುದನ್ನು ಮರೆಯಬೇಡಿ ಸಿದ್ದರಾಮಣ್ಣ, ಸಾಲ ಮನ್ನಾ ಆಗುವವರೆಗೂ ನಾವು ಸಾಲ ಕಟ್ಟುವುದಿಲ್ಲ. ಸಹಕಾರಿ ಬ್ಯಾಂಕ್‍ಗಳ ಸಿಬ್ಬಂದಿ ಏನಾದರೂ ಸಾಲ ವಸೂಲಿ ಹೆಸರಿನಲ್ಲಿ ಬಂದರೆ ಕಟ್ಟಿ ಹಾಕಬೇಕಾಗುತ್ತದೆ ಎಂದು ಬ್ಯಾಂಕ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ರೈತ ಸಂಘದ ನಾರಾಯಣಗೌಡರು ಘಟನೆ ನಡೆದ ಸ್ಥಳಕ್ಕೆ ದಾವಿಸಿ ಕೂಡಲೇ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡು ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು
ರೈತ ಸಂಘದ ನಾರಾಯಣಗೌಡ, ಮುನಿಲಕ್ಷ್ಮಮ್ಮ, ಗೀತಾ, ಮುನಿಲಕ್ಷ್ಮೀ, ನಾಗರತ್ನ, ನಾರಾಯಣಮ್ಮ, ಹನುಮಕ್ಕ, ಸುನಂದ, ಶಿಲ್ಪ, ಸಾವಿತ್ರಮ್ಮ, ಮಂಜುಳಾ, ಲಕ್ಷ್ಮೀದೇವಮ್ಮ, ಶೋಭಾ, ಶೈಲ, ಉಮಾ, ಈಶ್ವರಮ್ಮ, ಕಾಂತಮ್ಮ ಮುಂತಾದವರಿದ್ದರು.

ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ರೈತರಿಗೆ ಪ್ರ ಪರಿಹಾರ, ದುಬಾರಿ ಚಾಕಿ ಹುಳ ಬೆಲೆ ನಿಯಂತ್ರಣಕ್ಕೆ ಒತ್ತಾಯ

ಕೋಲಾರ ಜೂ.16: ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ರೈತರಿಗೆ ಪ್ರತಿ 100 ಮೊಟ್ಟೆಗೆ 1 ಲಕ್ಷ ಪರಿಹಾರ ಜೊತೆಗೆ ದುಬಾರಿ ಚಾಕಿ ಹುಳ ಬೆಲೆ ನಿಯಂತ್ರಣಕ್ಕೆ ತಂಡ ರಚನೆ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ರೇಷ್ಮೆ ಸಚಿವರನ್ನು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯ ಮಾಡಿದರು.
ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ವರದೇನಹಳ್ಳಿ ರೈತ ರಮೇಶ್ ಅವರ ಹುಳ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಟೊಮೇಟೊ ಮಾವಿಗೆ ರೋಗ ಬಾಧೆ, ಹೈನೋದ್ಯಮಕ್ಕೆ ಕಲಬೆರಕೆ ಬಾಧೆ, ಇದರ ಮಧ್ಯೆ ಬದುಕು ಕಟ್ಟಿಕೊಳ್ಳುತ್ತಿರುವ ಲಕ್ಷಾಂತರ ರೈತ ಕುಟುಂಬಗಳಿಗೆ ಜೀವನಾಧಾರವಾಗಿದ್ದ ರೇಷ್ಮೆ ಬೆಲೆ ಕುಸಿತದ ಜೊತೆಗೆ ದುಬಾರಿ ಚಾಕಿ ಹುಳದ ನಿಯಂತ್ರಣವಿಲ್ಲದೆ ಕಳಪೆ ಹುಳವನ್ನು ವಿತರಣೆ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ರೇಷ್ಮೆ ಇಲಾಖೆ ವಿಫಲವಾಗಿದೆ ಎಂದು ಆರೋಪ ಮಾಡಿದರು.
ಕೋಲಾರ ತಾಲೂಕು ಕಸಬಾ ಹೋಬಳಿ ವರದೇನಹಳ್ಳಿ ಗ್ರಾಮದ ರೈತ ರಮೇಶ್ 150 ಮೊಟ್ಟೆಯನ್ನು ಖಾಸಗಿ ಚಾಕಿ ಸಾಕಾಣಿಕ ಕೇಂದ್ರದಲ್ಲಿ ಪ್ರತಿ 100 ಮೊಟ್ಟೆಗೆ 6,500 ರೂಗಳಂತೆ 9 ಸಾವಿರ ಕೊಟ್ಟು 150 ಮೊಟ್ಟೆ ಹುಳವನ್ನು ತಂದು ಕೊಂಡ ಸೊಪ್ಪಿನಲ್ಲಿ ಸಾಕಾಣಿಕೆ ಮಾಡಿ 4ನೇ ಹಂತದ ನಂತರ 15 ದಿನಗಳಾದರೂ ಇದುವರೆಗೂ ಹಣ್ಣಾಗದೆ ರೈತ ಕಂಗಾಲಾಗಿದ್ದಾನ.
ರೇಷ್ಮೆ ಅಧಿಕಾರಿಗಳನ್ನು ಕೇಳಿದರೆ ಸೊಪ್ಪಿನಲ್ಲಿ ವಿಷದ ಅಂಶ ಇಲ್ಲವೇ ಚಾಕಿ ಸಾಕಾಣಿಕ ಕೇಂದ್ರದಲ್ಲಿ ಹವಾಮಾನ ವೈಫರೀತ್ಯದಿಂದ ಹೀಗೆ ಆಗಿರಬಹುದು. ವಿಜ್ಞಾನಿಗಳು ಬಂದು ಪರಿಶೀಲನೆ ಮಾಡಿದ ನಂತರ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆಂದು ನೊಂದ ರೈತ ಕಣ್ಣೀರಾಕುತ್ತಿದ್ದಾನೆ.
ನೊಂದ ರೈತ ರಮೇಶ್ ಮಾತನಾಡಿ, ಹವಾಮಾನ ಏರಿಳಿತದಿಂದ ಕಂಗೆಟ್ಟಿರುವ ರೇಷ್ಮೆ ಕೃಷಿಕರು ತಮ್ಮಲ್ಲಿರುವ ಅಲ್ಪ ಪ್ರಮಾಣದ ನೀರಿನಲ್ಲಿ ರೇಷ್ಮೆ ಬೆಳೆದು ಬದುಕು ಕಟ್ಟಿಕೊಳ್ಳುವ ಸಮಯದಲ್ಲಿ ಬೆಲೆ ಕುಸಿತದ ಜೊತೆಗೆ ದುಬಾರಿ ಚಾಕಿ ಹುಳ ಬೆಲೆಯಿಂದ ರೈತ ಕಂಗೆಟ್ಟಿದ್ದರೆ ಮತ್ತೆ ಕಳಪೆ ಚಾಕಿ ಹುಳ ವಿತರಣೆಯಿಂದ ರೈತರು ದಿಕ್ಕು ತೋಚದಂತೆ ಹುಳ ಬೆಳೆಯಿಂದ ಲಕ್ಷಾಂತರ ರೂಪಾಯಿ ಸಾಲಗಾರರಾಗುತ್ತಿದ್ದಾರೆಂದು ಅಳಲು ತೋಡಿಕೊಂಡರು.
ಮಾರುಕಟ್ಟೆಯಲ್ಲಿ 500 ರೂಗಳಿಂದ 800 ರೂಗಳವರೆಗೆ ಇದ್ದ ರೇಷ್ಮೆ ಬೆಲೆ ಏಕಾಏಕಿ 200 ರಿಂದ 300ರೂಗೆ ಕುಸಿದಿರುವುದರಿಂದ ರೈತರಿಗೆ ಈಗಿನ ಪರಿಸ್ಥಿತಿಯಲ್ಲಿ ಅಸಲು ಸಹ ಕೈಗೆ ಸಿಗದೆ, ಮಾಡಿದ ಸಾಲ ತೀರಿಸಲಾಗದೆ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ರೇಷ್ಮೆ ಬಿಟ್ಟು ಬದುಕು ಕಟ್ಟಿಕೊಳ್ಳಲು ನಗರಗಳತ್ತ ಕೆಲಸ ಹುಡುಕಿಕೊಂಡು ವಲಸೆ ಹೋಗಬೇಕಾಗುತ್ತದೆ ಎಂದರು.
ಸರ್ಕಾರದ ರೇಷ್ಮೆ ಇಲಾಖೆಯಿಂದ ಪ್ರತಿ 100 ಮೊಟ್ಟೆಗೆ 600ರೂಪಾಯಿ, ಅದೇ ಖಾಸಗಿ ಚಾಕಿ ಸಾಕಾಣಿಕಾ ಕೇಂದ್ರದವರು ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪ್ರತಿ 100 ಮೊಟ್ಟೆ ಚಾಕಿ ಹುಳುವಿಗೆ 6000 ರೂಗಳಿಂದ 7000 ರೂಗಳವರೆಗೂ ಮಾರಾಟ ಮಾಡುವ ಮುಖಾಂತರ ಹಗಲು ದರೋಡೆ ಮಾಡುತ್ತಿದ್ದರೂ ಬೆಲೆ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪ ಮಾಡಿದರು.
ಸರ್ಕಾರ ಕೂಡಲೇ ಕಳಪೆ ರೇಷ್ಮೆ ಹುಳದಿಂದ ನಷ್ಟವಾಗಿರುವ ಪ್ರತಿ ರೈತರ 100 ಮೊಟ್ಟೆಗೆ 1 ಲಕ್ಷ ಪರಿಹಾರ, ಬೆಲೆ ನಿಯಂತ್ರಣದ ಜೊತೆಗೆ ರೇಷ್ಮೆ ಬೆಳೆಗಾರರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ನೊಂದ ರೈತ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಾರಂಘಟ್ಟ ಗಿರೀಶ್, ರೇಷ್ಮೆ ತಾಂತ್ರಿಕ ಅಧಿಕಾರಿ ಐತರಾಸನಹಳ್ಳಿ ಶ್ರೀನಿವಾಸಗೌಡ, ನೊಂದ ರೈತರು ಉಪಸ್ಥಿತರಿದ್ದರು.