ಗ್ರಾಮೀಣ ಪ್ರದೇಶದ ಮಹಿಳೆಯರು ಸಾಲ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಆರ್ಥಿಕಾಭಿವೃದ್ಧಿ ಸಾಧಿಸಬೇಕು : ವೈ.ಆರ್.ಶ್ರೀನಿವಾಸರೆಡ್ಡಿ

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಮಹಿಳೆಯರು ಸಾಲ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಆರ್ಥಿಕಾಭಿವೃದ್ಧಿ ಸಾಧಿಸಬೇಕು. ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ ಹೇಳಿದರು.
ಗ್ರಾಮದಲ್ಲಿ ಸಂಜೀವನಿ ಒಕ್ಕೂಟದ ವತಿಯಿಂದ ಒಕ್ಕೂಟದ ಮಹಿಳಾ ಸದಸ್ಯರಿಗೆ ಶನಿವಾರ ಏರ್ಪಡಿಸಿದ್ದ ಸಾಲವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಪಡೆದ ಸಾಲ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು. ಹಾಗೆ ಮರುಪಾವತಿ ಮಾಡಿದ ಸದಸ್ಯರಿಗೆ ಮತ್ತೆ ಸಾಲ ನೀಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 70 ಸಂಜೀವಿನಿ ಒಕ್ಕೂಟಗಳಿದ್ದು, ಮೊದಲ ಹಂತದಲ್ಲಿ 15 ಒಕ್ಕೂಟಗಳಿಗೆ ರೂ.22.50 ಲಕ್ಷ ಸಾಲ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿಗಳಲ್ಲಿ ಉಳಿದ ಒಕ್ಕುಟಗಳಿಗೂ ಕೇಂದ್ರ ಸರ್ಕಾರದಿಂದ ಸಾಲ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ರಾಮಚಂದ್ರ, ಪಿಡಿಒ ಸಂಪತ್, ಸುಧಾಕರ್, ಗೋವಿಂದಪ್ಪ ಇದ್ದರು.

ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.
ಪಟ್ಟಣದ ಹೊರವಲಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ 8,9,10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ಹಾಗೂ ಇಂಗ್ಲೀಷ್ ವಿಷಯಗಳ ಬುನಾದಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಅನಗತ್ಯವಾಗಿ ಮೊಬೈಲ್ ಬಳಸುವುದರಿಂದ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ. ಕೆಲವೊಮ್ಮೆ ಮಕ್ಕಳು ಶಿಕ್ಷಣದಿಂದ ದೂರ ಸರಿಯುವ ಅಪಾಯವೂ ಇರುತ್ತದೆ. ಪೋಷಕರು ಈ ವಿಷಯದಲ್ಲಿ ಎಚ್ಚರ ವಹಿಸಬೇಕು. ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಸಾಧನೆಗೆ ಪೂರಕವಾದ ಸಾಮಥ್ರ್ಯ ಗಳಿಸುವಲ್ಲಿ ಸಹಕರಿಸಬೇಕು ಎಂದು ಹೇಳಿದರು.
ಆದಾಯ ತೆರಿಗೆ ಇಲಾಖೆ ಸಹಾಯಕ ಕಮೀಷನರ್ ಕೆ.ಚಂದ್ರಕಳ ನಾರಾಯಣ ಮಾತನಾಡಿ, ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಿ.ಚೆನ್ನಬಸಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿ ಅಧಿಕಾರಿ ಸೌಮ್ಯ ವರ್ಣಿಕರ್, ಡಿವೈಎಸ್‍ಪಿ ಜಯಶಂಕರ್, ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪ್ರಾಂಶುಪಾಲ ಆರ್.ವಿ.ಚಂದ್ರು, ಕೆ.ನರಸಿಂಹಮೂರ್ತಿ, ಶಿಕ್ಷಕ ಸುಬ್ರಮಣಿ ಇದ್ದರು.

“ಸಮಾಜಕ್ಕೆ ನಮ್ಮ ಕೊಡುಗೆ”-ವಿಚಾರ ಸಂಕಿರಣ


“ಪ್ರತಿಯೊಬ್ಬ ಪ್ರಜೆಯು ತನ್ನ ವೃತ್ತಿ ಪ್ರವೃತ್ತಿಯಲ್ಲಿ ಸಮಾಜಕ್ಕೆ ಅನುಕೂಲವಾಗುವ ಸಹಕಾರ ನೀಡಿದರೆ ಸಮಾಜದ ಅಭಿವೃದ್ಧಿಗೆ ಆತ ಕೊಡುಗೆ ನೀಡಿದಂತಾಗುತ್ತದೆ. ಇದರಿಂದ ಸರಕಾರದ ಸಹಾಯ ನಿರೀಕ್ಷೆ ಮಾಡದೇ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ” ಎಂದು ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಹೇಳಿದರು.
ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಏರ್ಪಡಿಸಲಾದ “ಸಮಾಜಕ್ಕೆ ನಮ್ಮ ಕೊಡುಗೆ” ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
“ಆರ್ಥಿಕ, ಸಾಮಾಜಿಕ ತೊಂದರೆ ಗೊಳಗಾದವರಿಗೆ ಸಹಾಯ ಮಾಡುವು ದರೊಂದಿಗೆ ಅಸಹಾಯಕ ಜೀವನ ನಡೆಸುವವರಿಗೆ ಮುನ್ನಡೆಯಲು ಮಾರ್ಗದರ್ಶನ ಮಾಡಿದರೆ ಅದೇ ದೊಡ್ಡ ಕೊಡುಗೆಯಾಗುತ್ತದೆ” ಎಂದು ಹಲವು ಘಟನೆಗಳನ್ನು ಉದಾಹರಿಸಿ ಅವರು ಹೇಳಿದರು.
ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕ ಕೆ.ಪಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, “ವೈಯಕ್ತಿಕವಾಗಿಯೂ, ಸಂಘ ಸಂಸ್ಥೆಗಳ ಮೂಲಕವೂ ಅರ್ಹರನ್ನು ಗುರುತಿಸಿ ಸಹಾಯ ಮಾಡಿದಾಗ, ಸಹಾಯ ಪಡೆದವರು ಏಳಿಗೆ ಹೊಂದಿದಾಗ ಸಂತಸವಾಗುತ್ತದೆ” ಎಂದರು.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ವಾಸುದೇವ ಕಾರಂತ ಮಾತನಾಡಿ, “ನಮ್ಮ ವೃತ್ತಿಯಲ್ಲಿ ಜನರಿಗೆ ಸಹಾಯ ಮಾಡಲು ಸಾಕಷ್ಟು ಅವಕಾಶವಿರುವಾಗ ಈ ಅವಕಾಶ ಸದ್ಬಳಕೆ ಮಾಡಿಕೊಂಡಾಗ ಪ್ರಯೋಜನ ಪಡೆದವರ ಪ್ರಗತಿ ಮನಸ್ಸಿಗೆ ತೃಪ್ತಿ ನೀಡುತ್ತದೆ. ಪ್ರತಿಯೊಬ್ಬ ಗ್ರಾಹಕ ವೃತ್ತಿ ವ್ಯವಹಾರದಲ್ಲಿ ಯಶಸ್ಸು ಸಾಧಿಸಿದರೆ ಸಮಾಜ ಬೆಳೆದಂತೆ” ಎಂದರು.
ಉದ್ಯಮಿ ಕೆ.ಕೆ. ಕಾಂಚನ್ ಮಾತನಾಡಿ, “ಬದುಕಿನ ಬಾಲ್ಯ ಬಹಳ ಸಂಕಟಮಯವಾಗಿದ್ದರೂ ಛಲದಿಂದ ಮುನ್ನಡೆಯುವ ಪ್ರೇರಣೆ ನಮ್ಮಲ್ಲಿ ಮೂಡಬೇಕು. ಯುವ ಜನಾಂಗ ವಿದ್ಯೆಯೊಂದಿಗೆ ಜೀವನ ಮೌಲ್ಯ ಅರಿಯುವಂತೆ ನಾವು ನಡೆಸಿದ ಪ್ರಯತ್ನ ಯಶಸ್ವಿಯಾದರೆ ಸಮಾಜ ಆರೋಗ್ಯ ಪೂರ್ಣವಾಗಿ ಬೆಳೆಯುತ್ತದೆ. ದುಶ್ಚಟಗಳಿಂದ ಯುವಕರು ದೂರವಿರುವಂತೆ ಮಾರ್ಗದರ್ಶನ ಮಾಡುವುದು ಸಮಾಜ ಸುಸ್ಥಿತಿಯಿಂದ ಬೆಳೆಯುವಂತೆ ಮಾಡುವ ಕೊಡುಗೆ” ಎಂದರು.
“ಕುಂದಪ್ರಭ” ಅಧ್ಯಕ್ಷ ಯು. ಎಸ್. ಶೆಣೈ ಮಾತನಾಡಿ, “ಕುಂದಾಪುರ ಸೇರಿದಂತೆ ಕರಾವಳಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಅದ್ಬುತ ಅಭಿವೃದ್ಧಿ ಕಾರ್ಯ ನಡೆಯಲು ಸಮಾಜದ ಗಣ್ಯರ, ತಜ್ಞರ ಕೊಡುಗೆ ದೊಡ್ಡದು. ಅವರಿಂದ ಪ್ರೇರಿತರಾಗಿ ಸರಕಾರ ಪೂರಕ ನೆರವು ಒದಗಿಸಿದ, ಅಭಿವೃದ್ಧಿ ನಡೆಸಿದ ಉದಾಹರಣೆಗಳು ಇವೆ. ಸಾವಿರಾರು ಯುವಕರು ದಾನಿಗಳ, ಸಂಘ ಸಂಸ್ಥೆಗಳ ನೆರವಿನಿಂದಲೇ ದೇಶ ವಿದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಫಲಾಪೇಕ್ಷೆ ಇಲ್ಲದೇ ನಡೆಸುವ ಸಮಾಜ ಸೇವೆಗೆ ಹೆಚ್ಚು ಗೌರವ ದೊರೆಯುತ್ತದೆ” ಎಂದರು.
ಉತ್ತಮ ಹೋವಿಯೋ, ಕ್ಲಿನಿಕ್‍ನ ಮುಖ್ಯಸ್ಥ ಡಾ. ಉತ್ತಮ ಕುಮಾರ್ ಶೆಟ್ಟಿ ಮಾತನಾಡಿ, “ನನ್ನ ವೈದ್ಯಕೀಯ ವೃತ್ತಿಯೊಂದಿಗೆ ಪರಿಸರ ಉಳಿವು ಹಾಗೂ ಉತ್ತಮ ತಳಿಗಳ ಸಸ್ಯಗಳನ್ನು ಬೆಳೆಸಿ ಸಾರ್ವಜನಿಕವಾಗಿ ಕೊಡುಗೆಯಾಗಿ ನೀಡಿದ್ದರಿಂದ ಬಹಳಷ್ಟು ಫಲಪ್ರದ ಫಲಿತಾಂಶ ಕಂಡಿದ್ದೇನೆ. ಸಮಾಜದ ಅಭಿವೃದ್ಧಿಯಲ್ಲಿ ಇಂತಹ ಪ್ರಯತ್ನಗಳು ಮೌಲ್ಯಯುತವಾದುವು” ಎಂದರು.
ಉದ್ಯಮಿ ಸಚಿನ್ ನಕ್ಕತ್ತಾಯ, “ಉದ್ಯೋಗ ಸೃಷ್ಠಿ ಸಮಾಜಕ್ಕೆ ನೀಡುವ ಮಹತ್ವದ ಕೊಡುಗೆ. ಊರ ಪರವೂರ ನೂರಾರು ಮಂದಿಗೆ ಉದ್ಯೋಗ ಅವರ ಮಕ್ಕಳಿಗೆ ವಿದ್ಯೆ ನಾವು ನೀಡಿದ್ದೇವೆ. ಉದ್ಯೋಗಾವಕಾಶ ಕಲ್ಪಿಸುವುದು ಇಂದಿನ ದಿನ ಬಹಳ ಅಗತ್ಯವಾದುದು.” ಎಂದರು.
ಶ್ರೀಮತಿ ಶೋಭಾ ಭಟ್, ಶ್ರೀನಿವಾಸ ಶೇಟ್, ರಾಘವೇಂದ್ರ ಶೇಟ್ ಚರ್ಚೆಯಲ್ಲಿ ಪಾಲ್ಗೊಂಡರು.
ಗೋಷ್ಠಿ ನಿರ್ವಹಿಸಿದ ಬಿಎಸ್‍ಎನ್‍ಎಲ್ ನಿವೃತ್ತ ಅಧಿಕಾರಿ ಶ್ರೀಮತಿ ಸುರೇಖಾ ಪುರಾಣಿಕ ಮಾತನಾಡಿ, “ಕುಟುಂಬ ನಿರ್ವಹಣೆಗೆ ತೊಂದರೆ ಇರುವ ಮಹಿಳೆಯರಿಗೆ ಸಹಾಯ ಮಾಡಿದರೆ, ಒಬ್ಬ ಆರ್ಥಿಕವಾಗಿ ಅನುಕೂಲವಿರುವ ಪ್ರಜೆ, ಅರ್ಹ ಇನ್ನೊಬ್ಬ ವ್ಯಕ್ತಿಗೆ ಉದ್ಯೋಗ ದೊರಕುವಂತೆ ಮಾಡಿದರೆ ಅದೇ ಪುಣ್ಯದ ಕಾರ್ಯ” ಎಂದು ತಿಳಿಸಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದವರಿಗೆ ವಂದನೆ ಸಲ್ಲಿಸಿದರು.

ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್‍ನಿಂದ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೂ ಅರ್ಹ ವಿದ್ಯಾರ್ಥಿ ಸಹಾಯಧನ


ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‍ನಿಂದ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದಿರುವ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಕಾರ್ಯಕ್ರಮ ಜೂನ್ 19ರಂದು ನಡೆಯಲಿದೆ.
ಕುಂದಾಪುರ-ಬೈಂದೂರು ತಾಲ್ಲೂಕಿನ ವ್ಯಾಪ್ತಿಗೆ ಬರುವ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಸಹಾಯಧನಕ್ಕಾಗಿ ಅಧಿಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು “ಕುಂದಪ್ರಭ”, ಶ್ರೀ ನಾರಾಯಣಗುರು ಕಾಂಪ್ಲೆಕ್ಸ್, ವೆಸ್ಟ್ ಬ್ಲಾಕ್ ರಸ್ತೆ, ಕುಂದಾಪುರ. (9448120765) ಇಲ್ಲಿ ಪಡೆದು ಜೂನ್ 8ರೊಳಗೆ ನೀಡಬೇಕು ಎಂದು ಕಾರ್ಯದರ್ಶಿ ಯು. ಎಸ್. ಶೆಣೈ ತಿಳಿಸಿದ್ದಾರೆ

ಶ್ರೀನಿವಾಸಪುರ: ಅಧಿಕಾರಿಗಳು ಮುಂಗಾರು ಮಳೆ ಸೃಷ್ಟಿಸಬಹುದಾದ ಅವಾಂತರ ಎದುರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಬೇಕು : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಅಧಿಕಾರಿಗಳು ಮುಂಗಾರು ಮಳೆ ಸೃಷ್ಟಿಸಬಹುದಾದ ಅವಾಂತರ ಎದುರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಅತಿವೃಷ್ಟಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಬೇಕು. ಸಂಭವನೀಯ ವಿಪತ್ತಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕೃಷಿ ಇಲಾಖೆ ಬಿತ್ತನೆಗೆ ಅಗತ್ಯವಾದ ಎಲ್ಲ ಸೌಲಭ್ಯ ಒದಗಿಸಬೇಕು. ಜಾನುವಾರು ಮೇವು ಸಂಗ್ರಹ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಆಮ್ಲಜನಕ ಘಟಕ ಪುನರಾರಂಭ ಮಾಡಬೇಕು. ಪಟ್ಟಣದಲ್ಲಿ ರಾಜಕಾಲುವೆ ಹಾಗೂ ಚರಂಡಿ ಸ್ವಚ್ಛತೆ ಕೈಗೊಳ್ಳಬೇಕು. ಪುರಸಭೆಗೆ ಬಂದಿರುವ ರೂ.15 ಕೋಟಿ ಅನುದಾನ ಬಳಸಿಕೊಂಡು ನಿಯಮಾನುಸಾರ ಮೂಲ ಸೌಕರ್ಯ ಒದಗಿಸಬೇಕು. ಕೆಸಿ ವ್ಯಾಲಿ ಪೈಪ್ ಅಳವಡಿಸಲು ಅಗೆಯಲಾಗಿರುವ ರಸ್ತೆಗಳ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕು. ಜಾಕೀರ್ ಹುಸೇನ್ ಮೊಹಲ್ಲಾದ ಕೊಳವೆ ಬಾವಿಗೆ ಪಂಪ್‍ಸೆಟ್ ಅಳವಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ತಾಲ್ಲೂಕಿನಲ್ಲಿ ಈವರೆಗೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿ ಹೊಡೆತಕ್ಕೆ 2939 ಹೆಕ್ಟೇರ್‍ನಲ್ಲಿ ಬಂದಿದ್ದ ಮಾವಿನ ಫಸಲಿಗೆ ಧಕ್ಕೆಯಾಗಿದೆ. ಮೇ.27 ರಜಾ ದಿನವಾದರೂ ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಗಳಿಗೆ ಹೋಗಿ ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಜಾನುವಾರು ನಷ್ಟ ಹೊಂದಿರುವ ಹಾಗೂ ಮನೆ ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ಥರ ಬ್ಯಾಂಕ್ ಖಾತೆಗೆ ಪರಿಹಾರದ ಹಣ ತುಂಬಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಪುಸಭೆ ವ್ಯವಸ್ಥಾಪಕ ನವೀನ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಎಂಜಿನಿಯರ್ ವೇದಾಂತ್ ಶಾಸ್ತ್ರಿ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಬೈರಾರೆಡ್ಡಿ, ಕೃಷಿ ಅಧಿಕಾರಿ ಈಶ್ವರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಶ್ವನಾಥರೆಡ್ಡಿ ಮತ್ತಿತರರು ಇದ್ದರು.

ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಕಮೀಷನ್, ಬಿಳಿ ಚೀಟಿ ಹಾವಳಿ ತಡೆಗಟ್ಟಿ- ರೈತರ, ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಿ – ರೈತ ಸಂಘ

ಶ್ರೀನಿವಾಸಪುರ,ಮೇ.26: ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್, ಬಿಳಿ ಚೀಟಿ ಹಾವಳಿ ತಡೆಗಟ್ಟಲು ವಿಶೇಷ ತಂಡ ರಚನೆ ಮಾಡಿ ರೈತರು ಹಾಗೂ ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಕೊಳತೆ ಮಾವು ಸಮೇತ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬಾಗ ಹೋರಾಟ ಮಾಡಿ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮಾವಿಗೆ ಪ್ರಸಿದ್ದಿ ಆಗಿರುವ ತಾಲ್ಲೂಕಿನಲ್ಲಿ ಮಾವು ಮಾರುಕಟ್ಟೆಯ ಅಭಿವೃದ್ದಿಗೆ ಆದ್ಯತೆ ನೀಡುವಲ್ಲಿ 40 ವರ್ಷಗಳಿಂದ ರಾಜಕೀಯ ಮಾಡುತ್ತಿರುವ ರೆಡ್ಡಿ ಸ್ವಾಮಿರವರು ಸಂಪೂರ್ಣವಾಗಿ ವಿಪಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಅವ್ಯವಸ್ಥೆ ಹಾಗೂ ಜನಪ್ರತಿನಿದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಬಿದ್ದರೆ ಮಾರುಕಟ್ಟೆ ಕೆರೆ ಕುಂಟೆಯಾಗಿ ಮಾರ್ಪಟ್ಟು ವರ್ಷದ ಪಸಲು ಒಂದೇ ದಿನದಲ್ಲಿ ಸುರಕ್ಷತೆಯಿಲ್ಲದೆ ಟನ್ ಮಾವಿನ ಮೇಲೆ ಸಾವಿರ ರೂಪಾಯಿ ಕಡಿತ ಮಾಡುವ ಮುಖಾಂತರ ಹರಾಜು ನಡೆಯುತ್ತಿದೆ. ಅಧಿಕಾರಿಗಳ ಬೇಜವಬ್ದಾರಿಯಿಂದ ರೈತರ ನಷ್ಟ ತುಂಬಿಕೊಡುವವರು ಯಾರು ಎಂದು ಪ್ರಶ್ನೆ ಮಾಡಿದರು.
ತುತ್ತು ಅನ್ನಕ್ಕಾಗಿ ಹೊರ ರಾಜ್ಯಗಳಿಂದ ಮಾವು ಕೀಳಲು ಹಾಗೂ ಮಾರುಕಟ್ಟೆಯಲ್ಲಿ ಕೆಲಸ ಮಾಡಲು ಬರುವ ಕಾರ್ಮಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಿರಲಿ ಗುಣಮಟ್ಟದ ಊಟವಿಲ್ಲ ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ ಕುಡಿಯುವ ನೀರಿಲ್ಲ, ಕಲುಷಿತ ನೀರೇ ಹಾಗೂ ಬಯಲೇ ಶೌಚಾಲಯಕ್ಕೆ ಗತಿಯಾಗಿದೆ ಅಷ್ಟರ ಮಟ್ಟಿಗೆ ಮಾರುಕಟ್ಟೆಯಲ್ಲಿ ಅವ್ಯವಸ್ಥೆಯ ಕೂಪವಾಗಿದೆ. ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಚುನಾಯಿತ ಶಾಸಕರು ನೆಪಮಾತ್ರಕ್ಕೆ ಸಭೆ ಕರೆದು ಪತ್ರಿಕಾ ಮಾದ್ಯಮದ ಮುಂದೆ ಕಾಣಿಸಿಕೊಂಡು ಹೋದರೆ ಮತ್ತೆ ವರ್ಷ ಮಾರುಕಟ್ಟೆಯ ಕಡೆ ತಲೆ ಹಾಕುವುದಿಲ್ಲವೆಂದು ಆರೋಪ ಮಾಡಿದರು.
ಸಾವಿರಾರು ಜನ ಕೆಲಸ ನಿರ್ವಹಿಸುವ ಮಾರುಕಟ್ಟೆಯಲ್ಲಿ ಆಸ್ಪತ್ರೆ ಪೋಲಿಸ್‍ಠಾಣೆ ಸಿ,ಸಿ ಕ್ಯಾಮಾರಗಳ ವ್ಯವಸ್ಥೆಯಿಲ್ಲ, ರಾತ್ರಿ ಆದರೆ ಕುಡುಕರ ಕಾಟ ಇದರ ಜೊತೆಗೆ ಸಿಬ್ಬಂದಿಯ ನೆಪದಲ್ಲಿ ಸರ್ಕಾರಕ್ಕೆ ಬರುವ ಆದಾಯವನ್ನು ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆಂದು ಕಿಡಿಕಾರಿದರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಮಾವು ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆ. ವರ್ಷದ ರೈತರ ಬೆವರ ಹನಿಯನ್ನು ಒಂದೇ ದಿನದಲ್ಲಿ ಮಳೆರಾಯ ಕಸಿದುಕೊಂಡರೆ ಉಳಿದ ಭಾಗವನ್ನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮೀಟರ್ ಬಡ್ಡಿದಂದೆಯಂತೆ ಕಮೀಷನ್ ಪಡೆಯುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದ ಆದಿಕಾರಿಗಳು ಆಲಿಕಲ್ಲು ಮಳೆಯಲ್ಲಿ ಕೊಚ್ಚಿ ಹೋಗಿದ್ದಾರೆಂದು ವ್ಯಂಗ್ಯವಾಡಿದರು.
ಒಂದು ಕಡೆ ಕಮೀಷನ್ ಹಾವಳಿ ಮತ್ತೊಂದು ಕಡೆ ಯಾವುದೇ ಮಂಡಿಯಲ್ಲೂ ಪರವಾನಗಿ ಪಡೆದಿರುವ ಜಿ.ಎಸ್.ಟಿ ಸಮೇತ ರಸೀದಿಯನ್ನು ನೀಡುವುದಿಲ್ಲ ಜೊತೆಗೆ ವ್ಯಾಪಾರಸ್ಥರು ಮತ್ತು ದಲ್ಲಾಳರ ಒಳ ಒಪ್ಪಂದಿಂದ ಹರಾಜಿನಲ್ಲೂ ರೈತರಿಗೆ ಮೋಸ ಆಗುತ್ತಿದ್ದರೂ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆ ಇದೆ .
ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಡಳಿತ ರೈತರ ತೋಟದಿಂದ ಮಾರುಕಟ್ಟೆಗೆ ಮಾವು ಸಾಗಿಸಲು ಉಚಿತ ವಾಹನ ವ್ಯವಸ್ಥೆ ಮಾಡುವ ಜೊತೆಗೆ ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್, ಬಿಳಿ ಚೀಟಿ ಹಾವಳಿ ತಡೆಗಟ್ಟಲು ವಿಶೇಷ ತಂಡ ರಚನೆ ಮಾಡಿ ರೈತರು ಹಾಗೂ ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಬೇಕೆಂಧು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ರವರು ಸಿಬ್ಬಂದಿ ಕೊರತೆ ಜೊತೆಗೆ ಅನುದಾನ ಇಲ್ಲ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವು, ಸಹದೇವಣ್ಣ, ಮುನಿರಾಜು, ಶೇಕ್‍ಶಪಿಹುಲ್ಲಾ, ತೆರ್ನಹಳ್ಳಿ ಭದ್ರೇಗೌಡ, ಹೆಬ್ಬರಿ ರಾಮಕೃಷ್ಣ, ರತ್ನಪ್ಪ ಕೋಳತೂರು ಭಾಸ್ಕರ್, ರಾಜೇಶ್, ವಿಜಯ್‍ಪಾಲ್, ದೇವರಾಜ್, ಗಿರೀಶ್, ಶೈಲ, ರಾಧಮ್ಮ, ಮುಂತಾದವರಿದ್ದರು.

ಶ್ರೀನಿವಾಸಪುರ ಮುಳಬಾಗಿಲು – ಲಾರಿ ಮತ್ತು ಈಚರ್ ನಡುವೆ ಮುಖಾಮುಖಿ ಡಿಕ್ಕಿ – ಒಬ್ಬರು ಸ್ಥಳದಲ್ಲಿಯೇ ಸಾವು

ಶ್ರೀನಿವಾಸಪುರ: ತಾಲ್ಲೂಕಿನ ಅರಿಕೆರೆ ಗ್ರಾಮದ ಸಮೀಪ, ಶ್ರೀನಿವಾಸಪುರ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ಲಾರಿ ಮತ್ತು ಈಚರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಒಬ್ಬರು ಸ್ಥಳದಲ್ಲಿಯೇ ಸತ್ತು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ತಮಿಳು ನಾಡಿನ ಈಚರ್ ಚಾಲಕ ಸತ್ಯ (35) ಸ್ಥಳದಲ್ಲಿಯೇ ಸತ್ತಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್ ತೀವ್ರವಾಗಿ ಗಾಯಗೊಂಡಿದ್ದು, ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತದಲ್ಲಿ ಲಾರಿ ಹಾಗೂ ಈಚರ್ ನಜ್ಜುಗುಜ್ಜಾಗಿದ್ದು, ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮುಂಬೈ ಅಜಿತ್ ಶೆಟ್ಟಿ ಅವರಿಗೆ ಸನ್ಮಾನ


ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಮಹಾ ಪೋಷಕರು, ಗೌರವ ಸದಸ್ಯರಾದ ಮುಂಬೈ ಅಜಿತ್ ಶೆಟ್ಟಿಯವರು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಇವರು ಸಾಮಾಜಿಕ ಚಿಂತಕರಾಗಿದ್ದು ಧಾರ್ಮಿಕವಾಗಿ ಸೇವೆಯನ್ನು ಸಲ್ಲಿಸಿದ್ದು ಹಾಗೂ ಯಕ್ಷಗಾನ ಕಲಾ ಪೋಷಕರಾಗಿ ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನ ಸೇವೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸದಸ್ಯರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ ಮೊದಲಾದವರಿದ್ದರು.

ಶ್ರೀನಿವಾಸಪುರದಲ್ಲಿ ಸ್ಥಳೀಯ ಕೆಎಸ್‍ಆರ್‍ಟಿಸಿ ನೌಕರರ ಸಂಘದ ವತಿಯಿಂದ ಗುರುವಾರ ಅಂಬೇಡ್ಕರ್ ದಿನಾಚರಣೆ

ಶ್ರೀನಿವಾಸಪುರ: ಪಟ್ಟಣದಲ್ಲಿ ಸ್ಥಳೀಯ ಕೆಎಸ್‍ಆರ್‍ಟಿಸಿ ನೌಕರರ ಸಂಘದ ವತಿಯಿಂದ ಗುರುವಾರ ಅಂಬೇಡ್ಕರ್ ದಿನಾಚರಣೆ ಆಚರಿಸಲಾಯಿತು.
ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಉದ್ಯಾನದಲ್ಲಿನ ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ತಾಲ್ಲೂಕು ಕಚೇರಿ ಆವರಣದಲ್ಲಿ ಬೆಳ್ಳಿ ರಥದಲ್ಲಿ ಅಳವಡಿಸಲಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಂಘದ ನೌಕರರು ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿ ಹಂಚಿ ಜಯಘೋಷ ಮಾಡಿದರು.