ಟೊಮೋಟೋ ಗೆ ಬಾಧಿಸುತ್ತಿರುವ ಬಿಂಗಿ (ಎಲೆ ಮುದುಡು) ರೋಗಕ್ಕೆ ವಿಶೇಷ ವಿಜ್ಞಾನಿಗಳ ಅಗತ್ಯ- ಕಳಪೆ ಬಿತ್ತನೆ ಬೀಜ ಕೀಟ ನಾಶಕ ವಿತರಣೆಗಾರರ ಮೇಲೆ ಮೊಕದ್ದಮೆ ದಾಖಲು ಮಾಡಿ-ರೈತಸಂಘ

ಕೋಲಾರ,ಮೇ.30: ಟೊಮೋಟೋ ಗೆ ಬಾಧಿಸುತ್ತಿರುವ ಬಿಂಗಿ (ಎಲೆ ಮುದುಡು) ರೋಗ ನಿಯಂತ್ರಣಕ್ಕೆ ವಿಶೇಷ ವಿಜ್ಞಾನಿಗಳ ತಂಡ ರಚನೆ ಮಾಡಿ ಕಳಪೆ ಬಿತ್ತನೆ ಬೀಜ ಕೀಟ ನಾಶಕ ವಿತರಣೆ ಮಾಡುವ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ರೈತ ಸಂಘದಿಂದ ತೋಟಗಾರಿಕೆ ಇಲಾಖೆ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಉಪ ನಿರ್ದೇಶಕರಾದ ಕುಮಾರಸ್ವಾಮಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜಿಲ್ಲೆಗೆ ನೂತನವಾಗಿ ಆಯ್ಕೆ ಆಗಿರುವ 6 ಶಾಸಕರು ರೈತರ ಮೇಲೆ ಕಾಳಜಿ ಇದ್ದರೆ ಸರ್ಕಾರದ ಮೇಲೆ ಒತ್ತಡ ಹಾಕಿ ರೋಗದಿಂದ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ವಿತರಣೆ ಮಾಡುವ ಜೊತೆಗೆ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ನಕಲಿ ಬಿತ್ತನೆ ಬೀಜ ಕ್ರಿಮಿನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನೊಂದ ರೈತರ ಪರ ನಿಲ್ಲಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಹರಿದ ನಂತರ ಅಂತರ್ಜಲ ಅಭಿವೃದ್ದಿ ಒಂದು ಕಡೆಯದರೆ ಮತ್ತೊಂದು ಕಡೆ ಬೆಳೆಗಳಿಗೆ ಭಾಧಿಸುತ್ತಿರುವ ಬೀಕರವಾದ ರೋಗಗಳ ನಿಯಂತ್ರಣಕ್ಕೆ ಭಾರದೆ ಹಾಕಿದ ಬಂಡವಾಳ ಕೈಗೆ ಸಿಗದೆ ರೈvನ ಬದುಕು ಬೀದಿಗೆ ಬಂದಂತಾಗಿದೆ ಈ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸದರು.
ನೀರಿನ ಸಮಸ್ಯೆಯೋ ಇಲ್ಲವೇ ಕಂಪನಿಗಳ ಕಳಪೆ ಬಿತ್ತನೆ ಬೀಜದ ಸಮಸ್ಯೆಯೋ ಇಲ್ಲವೇ ಕೂಲಿಕಾರ್ಮಿಕರ ಸಮಸ್ಯೆಯಿಂದ ಭೂಮಿ ಕಳೆ ತೆಗೆಯಲು ಉಪಯೋಗಿಸುತ್ತಿರುವ ಕಳೆ ಔಷಧಿಯ ಬಳಕೆಯೋ ತಿಳಿಯುತ್ತಿಲ್ಲ, ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಟೊಮೋಟೋ, ಕ್ಯಾಪ್ಸಿಕಂ, ಬೆಳೆಗಾರರು ಬೀದಿಗೆ ಬೀಳುತ್ತಿರುವುದಂತೂ ನಿಜ ಸಮಸ್ಯೆ ಬರುತ್ತಿದೆ, ಅಧಿಕಾರಿಗಳು ಬರುತ್ತಾರೆ ವಿಜ್ಞಾನಿಗಳನ್ನು ಕರೆಸಿ ಎರಡು ತೋಟ ಪರಿಶೀಲನೆ ಮಾಡಿ ಕಡೆಗೆ ವರದಿ ರೈತನ ವಿರುದ್ದವಾಗಿ ಕಂಪನಿಗಳ ಪರವಾಗಿ ಬರುತ್ತದೆ. ಅಷ್ಟಕ್ಕೆ ಕೈ ತೊಳೆದುಕೊಳ್ಳುವ ಶಾಸ್ತ್ರವಾಗಿ ಉಳಿದಿದೆಂದು ಅವ್ಯವಸ್ಥೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ವ್ಯವಸಾಯ ಮನೆಮಕ್ಕಳೆಲ್ಲಾ ವಿಷ ಕುಡಿದು ಸಾಯ ಎಂಬಂತಾಗಿದೆ. 24 ಗಂಟೆ ದುಡಿಯುವ ರೈತರ ದುಡಿಮೆಗೆ ಬೆಲೆ ಇಲ್ಲದಂತಾಗಿದೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಆರೋಪ ಪ್ರತ್ಯಾರೋಪದಲ್ಲಿ ಕಾಲಹರಣ ಮಾಡುತ್ತಾರೆ ಹೊರತು ದೇಶಕ್ಕೆ ಅನ್ನ ಹಾಕುವ ಅನ್ನದಾತನ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಆರೋಪ ಮಾಡಿದರು.


ಕಳಪೆ ಔಷಧಿಗಳಿಂದ ರೋಗ ನಿಯಂತ್ರಣವಿಲ್ಲ,


ಐದು ವರ್ಷಗಳಿಂದ ಟೊಮೋಟೋ ಮತ್ತಿತರ ಬೆಳೆಗಳಿಗೆ ಬಾಧಿಸುತ್ತಿರುವ ರೋಗಗಳನ್ನೆ ಬಂಡವಾಳವಾಗಿಸಿಕೊಂಡಿರುವ ಕೆಲ ಔಷಧಿ ಕಂಪನಿಗಳು ನಾಯಿಕೊಡೆಗಳಂತೆ ಗಲ್ಲಿ ಗಲ್ಲಿಯಲ್ಲೂ ಹುಟ್ಟಿಕೊಂಡು ರೋಗ ನಿಯಂತ್ರಣ ನೆಪದಲ್ಲಿ ಕಳಪೆ ಔಷಧಿಗಳನ್ನು ರೈತರಿಗೆ ನೀಡುವ ಮುಖಾಂತರ ಲಕ್ಷ ಲಕ್ಷ ರೈತರ ಬೆವರಹನಿಯನ್ನು ಲೂಟಿ ಮಾಡುತ್ತಿದ್ದಾರೆ.10 ರೂ ಸೊಳ್ಳೆ ಬತ್ತಿಯಿಂದ ಮನೆಯಲ್ಲಿನ ಸೊಳ್ಳೆ ನಿಯಂತ್ರಣಕ್ಕೆ ಬರುತ್ತದೆ. ಆದರೆ ಲಕ್ಷಾಂತರ ರೂ ನೀಡಿ ಖರೀದಿ ಮಾಡಿ ತರುತ್ತಿರುವ ಔಷಧಿಯಿಂದ ಕನಿಷ್ಠ ಗಿಡದ ಮೇಲಿನ ಸೊಳ್ಳೆ ಸಹ ನಿಯಂತ್ರಣಕ್ಕೆ ಬರುತ್ತಿಲ್ಲವಾದರೂ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕಳಪೆ ಬಿತ್ತನೆ ಬೀಜಕ್ಕೆ ನಿಯಂತ್ರಣವಿಲ್ಲ:


ರೈತರಿಗೆ ಅನುಕೂಲವಾಗುವ ಇಲಾಖೆಗಳಲ್ಲಿರುವ ಅಧಿಕಾರಿಗಳಿಗೆ ಕನಿಷ್ಠ ರೈತರು ಬೆಳೆಯುವ ಬೆಳೆಗಳ ಮಾಹಿತಿಯೇ ಇಲ್ಲ, ರೈತರ ತೆರಿಗೆ ಹಣದಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುವ ಅಧಿಕಾರಿಗಳು ಡ್ರಿಪ್, ಪಾಲಿಹೌಸ್, ನೆಟ್‍ಹೌಸ್, ಪ್ಯಾಕ್‍ಹೌಸ್, ಪ್ರಕೃತಿ ವಿಕೋಪ ಸಂಧರ್ಭದಲ್ಲಿ ಬರುವ ಪರಿಹಾರ ಹಣಕ್ಕೆ ಯಾವ ಕೆರೆಗೆ ದಾಖಲೆ ಸೃಷ್ಠಿ ಮಾಡಿದರೆ ಕೋಟಿ ಕೋಟಿ ಹಣ ಖಾತೆಗೆ ಸೇರುತ್ತದೆ ಎಂಬ ಕೆಲಸದಲ್ಲಿ ಇರುತ್ತಾರೆಯೇ ಹೊರತು ರೈತರಿಗೆ ಕಂಪನಿಗಳು ನೀಡುತ್ತಿರುವ ಬಿತ್ತನೆ ಬೀಜಗಳು ಗುಣಮಟ್ಟ ಇದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ಅನಕ್ಷರಸ್ಥರಾಗಿದ್ದಾರೆ. ರೈತರಿಗೆ ಇರುವ ಜ್ಞಾನವೂ ಅಧಿಕಾರಿಗಳಿಗೆ ಇಲ್ಲದಂತಾಗಿದೆಂದು ಆರೋಪ ಮಾಡಿದರು.
ಕೃಷಿ ಭೂಮಿಗೆ ಪಲವತ್ತಾದ ಗೊಬ್ಬರ ಹಾಕಿ ಅಧಿಕಾರಿಗಳ ಸಲಹೆ ಅಂತೆ ಭೂಮಿಗೆ ಪೇಪರ್ ಹೊದಿಸಿ , ಡ್ರಿಪ್ ಆಳವಡಿಸಿ ಲಕ್ಷಾಂತರೂ ಖರ್ಚು ಮಾಡಿ ಬೆಳೆಯುತ್ತಿರುವ ಟೊಮೋಟೋಗೆ ಬಿಂಗಿ ರೋಗ, ಬೆಂಕಿ ರೋಗ, ರೋಸ್, ಊಜಿ, ಒಂದುಕಡೆಯಾದರೆ ಮತ್ತೊಂದೆಡೆ ಹೂಕೋಸು, ಗಡ್ಡೆಕೋಸು ಆಲೂಗಡ್ಡೆ ಎಲ್ಲಾ ಬೆಳೆಗಳಿಗೂ ರೋಗಗಳು ಸುತ್ತಿಕೊಂಡು ಜಿಲ್ಲಾದ್ಯಂತ ರೈತರ ಬದುಕು ಬೀದಿಗೆ ಬೀಳುತ್ತಿದೆ. ರೋಗಗಳಿಗೆ ಕಾರಣ ಏನು ಎಂಬುದು ತಿಳಿಯದೆ ರೈತ ಕಂಗಲಾಗಿ ಕೃಷಿಯಿಂದ ವಿಮುಕ್ತಿ ಹೊಂದುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ರೋಗಗಳಿಗೆ ಕಾರಣವಾಗಿರುವ ವೈರಸ್ ಪತ್ತೆ ಹಚ್ಚಲು ವಿಶೇಷ ವಿಜ್ಞಾನಿಗಳ ತಂಡ ರಚನೆ ಮಾಡಿ ಕಳಪೆ ಬಿತ್ತನೆ ಬೀಜ ಕೀಟ ನಾಶಕ ವಿತರಣೆ ಮಾಡುವ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕರಾದ ಕುಮಾರಸ್ವಾಮಿರವರು ಜಿಲ್ಲಾಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ಯಲ್ಲಪ್ಪ, ಹರೀಶ್, ವೆಂಕಟೇಶ್, ಕದರಿನತ್ತ ಅಪ್ಪೋಜಿರಾವ್, ರಾಮಸಾಗರ ವೇಣು, ಸುರೇಶ್ ಬಾಬು, ಯಲುವಳ್ಳಿ ಪ್ರಭಾಕರ್, ಆನಂದ್‍ರೆಡ್ಡಿ, ಗಿರೀಶ್, ಪಾರುಕ್‍ಪಾಷ, ಬಂಗಾರಿ ಮಂಜು, ವಿಜಯ್‍ಪಾಲ್, ವಿಶ್ವ, ಭಾಸ್ಕರ್, ರಾಜೇಶ್, ದೇವರಾಜ್, ಗುರುಮೂರ್ತಿ, ಮುಂತಾದವರಿದ್ದರು.

ಎಂಐಟಿಕೆ ಮೂಡ್ಲಕಟ್ಟೆ ಕಾಲೇಜಿನ ವಾರ್ಷಿಕೋತ್ಸವ

ಮೂಡ್ಲಕಟ್ಟೆ ಎಂಐಟಿಕೆ ಕಾಲೇಜಿನ ವಾರ್ಷಿಕೋತ್ಸವವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಚಿಪ್ಸಿ ಐ.ಟಿ ಸೆಲೂಶನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಾಂಭವಿ ಭಂಡಾರಕರ್ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಲ್ಲಿ ಕೌಶಲ್ಯಗಳ ಜೊತೆಗೆ ಉತ್ತಮ ಅಂಕ ತೆಗೆಯುವುದು ಮುಖ್ಯ ಎಂದರು. ಸಂಸ್ಥೆಯ ಧ್ಯೇಯ ವಾಕ್ಯವಾದ “ಸತ್ಯಂವದ ಧರ್ಮಂ ಚರ” ಬಹಳ ಅರ್ಥಪೂರ್ಣವಾಗಿದೆ ಎಂದರು. ಯಾವುದೇ ಸಂಸ್ಥೆಯಲ್ಲಿ ಉನ್ನತ ಹುದ್ದೆಗೆ ಭಡ್ತಿ ಪಡೆಯಲು ಸಂಸ್ಥೆಯ ಅಭಿವೃಗಾಗಿ ಮಾಡಿದ ನಿರಂತರ ಕೆಲಸವೇ ಸಹಾಯಕಾರಿ, ಹೊರತು ಉನ್ನತಾಧಿಕಾರಿಗಳ ಕುರಿತು ಮಾಡಿದ ಒಣ ಹರಟೆಗಳಲ್ಲ ಎಂದು ಮಾರ್ಮಿಕವಾಗಿ ನುಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂರವರು ಮಾತನಾಡಿ ವಿದ್ಯಾರ್ಥಿಗಳು ಮಾಡಿದ ರಾಷ್ಟ್ರಮಟ್ಟದ ಸಾಧನೆಯನ್ನು ಹಾಗೂ ಉನ್ನತ ಮಟ್ಟದ ಕ್ಯಾಂಪಸ್ ಪ್ಲೇಸ್‍ಮೆಂಟ್ ಹೊಂದಿದ್ದಕ್ಕೆ ಸಂತೋಷವ್ಯಕ್ತಪಡಿಸಿದರು. ಉಪಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿಸೋಜರವರು ಕಾಲೇಜಿನ ವಾರ್ಷಿಕ ವರದಿಯನ್ನು ಓದಿದರು. ತದನಂತರ ವಿದ್ಯಾರ್ಥಿಗಳ ಶೈಕ್ಷಣಿಕ, ಕ್ರೀಡಾ, ಸಾಂಸ್ಕøತಿಕ ಸಾಧನೆಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಐಎಂಜೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೊ. ದೋಮಚಂದ್ರಶೇಖರ್ರವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಬ್ರಾಂಡ್‍ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗಡೆ, ಡೀನ್ ಟಿಪಿಐಆರ್ ಪ್ರೊ. ಅಮೃತಮಾಲಾ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿವೃಂದದವರು ಭಾಗವಹಿಸಿದ್ದರು.
ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರೊ. ಅಕ್ಷತಾ ನಾಯಕ್‍ರವರು ಸ್ವಾಗತಿಸಿದರು. ಕು. ಫಾತಿಮಾ ತಹಸಿರ್‍ರವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು ಮತ್ತು ಕಾರ್ಯಕ್ರಮ ನಿರೂಪಿಸಿದರು ಡಾ. ನಿಖಿಲಾ ಪೈ ರವರು ವಂದನಾರ್ಪಣೆಗೈದರು.

ಮನಸ್ಸು ಮತ್ತು ಆಹಾರ ನಿಯಂತ್ರಣದ ಮೂಲಕ ಕಾಯಿಲೆ ನಿಯಂತ್ರಣ ಸಾಧ್ಯ : ಡಾ. ವೈ.ವಿ.ವೆಂಕಟಾಚಲ

ಶ್ರೀನಿವಾಸಪುರ: ಮನಸ್ಸು ಮತ್ತು ಆಹಾರ ನಿಯಂತ್ರಣದ ಮೂಲಕ ಕಾಯಿಲೆ ನಿಯಂತ್ರಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ಎಸ್‍ವಿ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಧುಮೇಹ ಜಾಗೃತಿ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಾರಂಭದ ಹಂತದಲ್ಲಿ ಎಚ್ಚರಕೆ ವಹಿಸಿದರೆ ಮಧುಮೇಹ ನಿಯಂತ್ರಣ ಸುಲಭಸಾಧ್ಯ ಎಂದು ಹೇಳಿದರು.
ಆರೋಗ್ಯ ಕಾಳಜಿ ಕಡಿಮೆ ಇರುವ ಗ್ರಾಮೀಣ ಪ್ರದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಎಷ್ಟೋ ಜನಕ್ಕೆ ತಾವು ಮಧುಮೇಹ ರೋಗಿಗಳೆಂಬ ಕಲ್ಪನೆಯೇ ಇಲ್ಲ. ಕಾಯಿಲೆ ಲಕ್ಷಣ ಕಂಡುಬಂದರೂ ನಿರ್ಲಕ್ಷಿಸುವುದು ಸಾಮಾನ್ಯವಾಗಿದೆ. ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಾಗ ವೈದ್ಯರ ಬಳಿ ಹೋಗುತ್ತಾರೆ. ಆಗ ನಡೆಸುವ ಪರೀಕ್ಷೆಯಿಂದ ಮಧುಮೇಹ ಇರುವುದು ಪತ್ತೆಯಾಗುತ್ತದೆ ಎಂದು ಹೇಳಿದರು.
ಬದಲಾದ ಪರಿಸ್ಥಿತಿಯಲ್ಲಿ ಜನರನ್ನು ರೋಗಕ್ಕಿಂತ ರೋಗದ ಭಯ ಹೆಚ್ಚಾಗಿ ಕಾಡುತ್ತಿದೆ. ಎಷ್ಟೋ ಜನ ತಮಗೆ ಯಾವುದೇ ರೋಗ ಇಲ್ಲದಿದ್ದರೂ, ರೋಗದ ಭಯದಿಂದ ಆಸ್ಪತ್ರೆಗೆ ಹೋಗುತ್ತಾರೆ. ಬಲವಂತವಾಗಿ ಚಿಕಿತ್ಸೆ ಪಡೆಯುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು. ತಮ್ಮ ದೇಹ ಸ್ಥಿತಿ ಬಗ್ಗೆ ಕಾಳಜಿ ಹೊಂದಬೇಕು. ಅನಗತ್ಯ ಭಯದಿಂದ ದೂರವಿದ್ದು ವಾಸ್ತವ ಸ್ಥಿತಿಗೆ ಹತ್ತಿರವಾಗಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು.
ಸಕ್ಕರೆ ಕಾಯಿಲೆ ಇರುವವರು ತಜ್ಞ ವೈದ್ಯರ ಸಲಹೆ ಪಡೆದು ಆಹಾರ ಸೇವನೆ ಮಾಡಬೇಕು. ಹಾಗೆಂದ ಮಾತ್ರಕ್ಕೆ ಅಧಿಕ ಬೆಲೆಯ ಆಹಾರ ಸೇವನೆ ಎಂದಲ್ಲ. ಮನೆಯಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳಿಂದ ತಯಾರಿಸಿದ ಆಹಾವರ ಹಾಗೂ ಸ್ಥಳೀಯ ಪರಿಸರದಲ್ಲಿ ದೊರೆಯುವ ಹಣ್ಣು ಹಾಗೂ ತರಕಾರಿ ಹಾಗೂ ಸೊಪ್ಪುಗಳ ಸೇವನೆಯಿಂದ ಕಾಯಿಲೆ ನಿಯಂತ್ರಿಸಬಹುದು. ನಿಗದಿತ ಮಿತಿಯಲ್ಲಿ ಆಹಾರ ಸೇವನೆ ಮಾಡುವುದೂ ಸಹ ಆರೋಗ್ಯ ರಕ್ಷಣೆಯ ಒಂದು ಮಾರ್ಗ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ತಾಲ್ಲೂಕಿನ ಸಂತೆಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದರ ಮೂಲಕ ಗ್ರಾಮೀಣ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ಕಿರು ಹೊತ್ತಿಗೆ, ಕರಪತ್ರಗಳ ಮೂಲಕವೂ ವಿವಿಧ ರೋಗಗಳು ಹಾಗೂ ಅವುಗಳ ನಿಯಂತ್ರಣ ಕುರಿತು ತಿಳುವಳಿಕೆ ಉಂಟುಮಾಡಲಾಗುತ್ತಿದೆ. ತಾಲ್ಲೂಕಿನ ಗೌನಿಪಲ್ಲಿಯಲ್ಲಿ ಆರೋಗ್ಯ ಮಾಹಿತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಕ್ಕರೆ ಕಾಯಿಲೆ ಕುರಿತು ಸಂವಾದ ಏರ್ಪಡಿಸಲಾಗಿತ್ತು. ರೋಗಿಗಳ ಪ್ರಶ್ನೆಗಳಿಗೆ ಡಾ. ವೈ.ವಿ.ವೆಂಕಟಾಚಲ ಹಾಗೂ ಡಾ. ಶಿವಕುಮಾರ್ ಉತ್ತರಿಸಿದರು.
ಪ್ರಾಂಶುಪಾಲ ಸೀನಪ್ಪ, ಉಪನ್ಯಾಸಕ ಬಿ.ಶ್ರೀನಿವಾಸ್ ಇದ್ದರು.