ಕ್ಯಾಬಿನೆಟ್ ಸಚಿವ ಸತೀಶ್ ಜಾರಕಿಹೊಳಿರನ್ನು ಭೇಟಿ ಮಾಡಿದ ಕೋಲಾರ ಜಿಲ್ಲೆಯ ನಾಯಕ ಜನಾಂಗದ ಮುಖಂಡರು

ಕೋಲಾರ,ಮೇ.23: ಸರಳತೆಯ ಸಾಹುಕಾರ, ಅಭಿವೃದ್ಧಿಯ ಹರಿಕಾರ, ನಮ್ಮ ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ರವರು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಕೋಲಾರ ಜಿಲ್ಲೆಯ ನಾಯಕ ಜನಾಂಗದ ಮುಖಂಡರು ಸಚಿವರ ನಿವಾಸದಲ್ಲಿ ಭೇಟಿಯಾಗಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ನರಸಿಂಹಯ್ಯ, ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಎಂ.ಬಾಲಗೋವಿಂದ್, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಭಾ ತಾಲೂಕು ಅಧ್ಯಕ್ಷ ಆನಂದ್‍ಕುಮಾರ್, ಐತರಾಸನಹಳ್ಳಿ ನರಸಿಂಹಯ್ಯ, ಗರುಡನಹಳ್ಳಿ ಬಾಬು, ವಕ್ಕಲೇರಿ ಬಾಬು, ರಾಜ್ಯ ಸಂಘಟನಾ ಕಾರ್ಯದರ್ಶಿ ಬೆಳ್ಳೂರು ತಿರುಮಲೇಶ್, ಕುಡುವನಹಳ್ಳಿ ಆಂಜಿ, ರಂಗನಾಥ್, ಜಿಲ್ಲಾಧ್ಯಕ್ಷ ಕೋಟೆ ಮಧು, ಲಕ್ಷ್ಮಣ್, ಶ್ಶಾಮನಾಯಕ್, ಮೇಡಿಹಾಳ ಮಂಜು, ಮುನಿರಾಜು ಮತ್ತು ಕಲ್ಲಂಡೂರು ನಾಗರಾಜ್ ಉಪಸ್ಥಿತರಿದ್ದರು.

ಕಳೆದೆರಡು ದಿನಗಳ ಮುಂಗಾರು ಪೂರ್ವ ಮಳೆಯ ಅಬ್ಬರದಿಂದ ಬೆಳೆ ಹಾನಿಯಾದ ಸ್ಥಳಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಭೇಟಿ

ಕೋಲಾರ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯ ಅಬ್ಬರಕ್ಕೆ ಕೋಲಾರ ಜಿಲ್ಲೆಯ ಅಂದಾಜು 3000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದ್ದು , ರೈತರು ಕಂಗಾಲಾಗಿದ್ದಾರೆ .

ಅಕಾಲಿಕ ಮಳೆಗೆ ರಾಜ್ಯದಲ್ಲೇ ಅತೀ ಹೆಚ್ಚು ಬೆಳೆ ನಷ್ಟ ಕೋಲಾರ ಜಿಲ್ಲೆಯಲ್ಲಾಗಿದ್ದು , ಅಂದಾಜು 3000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದ್ದು , ಆಸ್ತಿ ಪಾಸ್ತಿ , ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮೇ 23 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಬೆಳೆ ಹಾನಿ ಪ್ರದೇಶಕ್ಕೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿತ್ತು .

ಅದರಂತೆ ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ದ್ವಾರಸಂದ್ರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಹಾನಿಗೊಳಗಾದ ತೋಟಗಾರಿಕಾ ಬೆಳೆಗಳಾದ ಮಾವು , ಪರಂಗಿ ಹಾಗೂ ಹೂ ಕೋಸು ತೋಟಗಳಲ್ಲಿ ಪರಿಶೀಲನೆ ನಡೆಸಿದರು .

ಈ ಗ್ರಾಮಗಳಲ್ಲಿ ಶೇಕಡ 33 ಕ್ಕಿಂತಲೂ ಹೆಚ್ಚು ಮಾವಿನ ಫಸಲು ನೆಲ ಕಚ್ಚಿದ್ದು , ಜಿಲ್ಲಾಧಿಕಾರಿಗಳಾದ ವೆಂಕಟರಾಜಾ , ತೋಟಗಾರಿಕಾ ಉಪ ನಿರ್ದೇಶಕರಾದ ಕುಮಾರಸ್ವಾಮಿ , ಹಿರಿಯ ಸಹಾಯಕ ನಿರ್ದೇಶಕರಾದ ಎಂ. ಶ್ರೀನಿವಾಸನ್ , ಹಾಗೂ ಸಂಬಂಧಿತ ರೆವಿನ್ಯೂ ಇನ್ಸ್‌ಪೆಕ್ಟರ್‌ , ಗ್ರಾಮ ಲೆಕ್ಕಾಧಿಕಾರಿಗಳು ಖುದ್ದು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು .

ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಂಟಿ ಸಮೀಕ್ಷೆ ನಡೆಸಿ ಒಂದು ವಾರದೊಳಗೆ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು .

ಪತ್ರಿಕೋದ್ಯಮ ಮತ್ತು ಪತ್ರಕರ್ತರ ಒಳಿತಿಗಾಗಿ ಶ್ರಮಿಸುವ ಅವಕಾಶ ಸಿಕ್ಕಿದೆ : ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

ಕೋಲಾರ : ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಯನ್ನು ರಾಜ್ಯದ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಒಳಿತಿಗಾಗಿ ಶ್ರಮಿಸುವ ಅವಕಾಶ ಎಂದು ಭಾವಿಸಿ ಕಾರ್ಯನಿರ್ವಹಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.

ಬುಧವಾರ ಸಂಜೆ ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ತಮಗೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪತ್ರಕರ್ತರು ಯಾವುದೇ ಸಂದರ್ಭದಲ್ಲಿ ವೃತ್ತಿಯ ಮೌಲ್ಯಗಳಿಗೆ ಕಳಂಕ ಬಾರದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯಮಂತ್ರಿಗಳಿಗೆ ರಾಜಕೀಯ ಸಲಹೆಗಾರ, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಯಾಗುವ ಅವಕಾಶ ಇದ್ದರೂ ಸಹ ತಮ್ಮನ್ನು ಇದುವರೆಗೂ ಸಾಕಿ, ಸಲುಹಿದ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಅವಕಾಶವನ್ನೇ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮಾಧ್ಯಮ ಸಲಹೆಗಾರ ಜವಾಬ್ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ಪ್ರಭಾಕರ್ ವಿವರಿಸಿದರು.

ತಾವು ಪತ್ರಿಕೋದ್ಯಮದಲ್ಲಿ ಈ ಹಂತವನ್ನು ಕ್ರಮಿಸಲು ಕಾರಣರಾದ ಕೋಲಾರದ ಹಿರಿಯ ಪತ್ರಕರ್ತರಾದ ದಿವಂಗತ ಬಿ.ವಿ.ನರಸಿಂಹಮೂರ್ತಿ, ಎಂ.ಮಲ್ಲೇಶ್ ಹಾಗೂ ಬಿ.ಎನ್.ಗುರುಪ್ರಸಾದ್, ಹಿರಿಯ ಪತ್ರಕರ್ತರಾದ ಕೆ.ಪ್ರಹ್ಲಾದರಾವ್, ಬಿ.ವಿ.ಗೋಪಿನಾಥ್, ಎಂ.ವಾಸುದೇವಹೊಳ್ಳ ಅವರುಗಳನ್ನು ಪ್ರಭಾಕರ್ ಇದೇ ವೇಳೆ ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಮೊದಲಿನಿಂದಲೂ ಪ್ರಭಾಕರ್ ತಮಗೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಪತ್ರಕರ್ತರು ಮತ್ತು ಪತ್ರಿಕೋದ್ಯಮದ ನೆರವಿಗೆ ಬಳಸಿದ್ದಾರೆ. ಈಗಲೂ ಸಹ ಅವರ ಕಡೆಯಿಂದ ನಾಡಿನ ಪತ್ರಿಕೋದ್ಯಮಕ್ಕೆ ಪ್ರಯೋಜನ ಸಿಗಲಿದೆ ಎಂದು ನುಡಿದರು.

ಪ್ರಭಾಕರ್ ಅವರ ಹುಟ್ಟೂರಿನ ಪರವಾಗಿ ಅಭಿನಂದಿಸಿದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪ್ರಭಾಕರ್ ಈ ಹಂತಕ್ಕೆ ಬೆಳೆಯಲು ಸ್ವಯಂಕೃಷಿ ಮತ್ತು ಪರಿಶ್ರಮವೇ ಕಾರಣ. ಅವರು ಅತ್ಯಂತ ಸುಗಮವಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದು ಹಾರೈಸಿದರು.

ಕೆಯುಡಬ್ಲ್ಯೂಜೆ ಖಜಾಂಚಿ ಎಂ.ವಾಸುದೇವಹೊಳ್ಳ ಮಾತನಾಡಿ, ಮೊದಲಿನಿಂದಲೂ ಪ್ರಭಾಕರ್ ಮುನ್ನುಗ್ಗುವ ಸ್ವಭಾವ ಹೊಂದಿದ್ದು, ಅದು ಅವರ ಯಶಸ್ಸಿನ ಸೋಪಾನವಾಗಿದೆ ಎಂದು ನುಡಿದರು.

ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಕಂ.ಕ ಮೂರ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಭಾಕರ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಈ ವೇಳೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಕೆ.ವಿ.ಪ್ರಭಾಕರ್ ಅವರನ್ನು ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಕೋಲಾರವಾಣಿ ಸಂಪಾದಕ ಬಿ.ಎನ್.ಮುರಳಿಪ್ರಸಾದ್, ಕೃಷ್ಣಾಪುರ ದೇವರಾಜ್, ಬಂಗಾರಪೇಟೆ ನಾಗಮಣಿ, ಶ್ರೀನಿವಾಸ್ ಶಾಲು ಹೊದಿಸಿ ಅಭಿನಂದಿಸಿದರು.

ಭಂಡಾರ್ಕಾರ್ಸ್ ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೇರಳಕಟ್ಟೆಯ ಪುರಾತನ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವಲ್ಲಿ ಶ್ರಮದಾನ

ಕುಂದಾಪುರ:ದಿನಾಂಕ 19-05-2023 ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೆಂಪು, ನೇರಳಕಟ್ಟೆಯ ಪುರಾತನ ದೇವಾಲಯವಾದ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಕೃಷ್ಣ ಭಟ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಅರುಣ್ ಎ ಎಸ್, ರಾಮಚಂದ್ರ ಆಚಾರ್, ಅಣ್ಣಪ್ಪ ಪೂಜಾರಿ ಹಾಗೂ ಉಪನ್ಯಾಸಕರಾದ ಗಿರಿರಾಜ್ ಭಟ್ ಉಪಸ್ಥಿತರಿದ್ದರು.
90 ವಿದ್ಯಾರ್ಥಿಗಳು ಒಂದು ದಿನದ ಈ ಶಿಬಿರದಲ್ಲಿ ಭಾಗವಹಿಸಿ ದೇವಸ್ಥಾನದ ಪರಿಸರವನ್ನು ಸ್ವಚ್ಛ ಗೊಳಿಸಿ, ಕೆರೆಯ ಹೂಳೆತ್ತುವ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.

ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯಿಂದ ಪಿತ್ತ ಜನಕಾಂಗ ಬದಲಾವಣೆಗಾಗಿ ರೋಗಿಗೆ ಇಪ್ಪತ್ತು ಸಾವಿರ ರೂಪಾಯಿ ದೇಣಿಗೆ

ಕುಂದಾಪುರ : ಮಣಿಪಾಲ ಆಸ್ಪತ್ರೆಯಲ್ಲಿ ಪಿತ್ತ ಜನಕಾಂಗ ಬದಲಾವಣೆಗೆ ( Liver transplant) ರೂಪಾಯಿ ಇಪ್ಪತ್ತು ಸಾವಿರ ದೇಣಿಗೆಯನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಇವರು ರೋಗಿಯ ಪತ್ನಿಗೆ ಹಸ್ತಾಂತರಿಸಿದರು. ಈ ದೇಣಿಗೆಯನ್ನು ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ಕೊಡಮಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.