ಚುನಾವಣಾ ತನಿಖಾ ಚೆಕ್ ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಊಟ ತಿಂಡಿ ಕುಡಿಯುವ ನೀರು ಒದಗಿಸಲು ಮನವಿ

ಕೋಲಾರ ಏಪ್ರಿಲ್ 25 : ಕರ್ನಾಟಕ ರಾಜ್ಯದಾದ್ಯಂತ ಹೊರವಲಯದ ಚೆಕ್ ಪೋಸ್ಟ್‍ಗಳಲ್ಲಿ ಕರ್ನಾಟಕ ರಾಜ್ಯದ ಚುನಾವಣಾ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪೊಲೀಸ್ ಹಾಗೂ ಇತರೆ ಸಿಬ್ಬಂದಿಗೆ ಊಟ, ತಿಂಡಿ, ಕಾಫಿ, ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಅಥವಾ ಸರ್ಕಾರದ ವತಿಯಿಂದ ಒದಗಿಸುವಂತೆ ಜಿಲ್ಲಾಡಳಿತ ಮುಖಾಂತರ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ವಂದಿತಾ ಶÀರ್ಮಾ ರವರಿಗೆ ಮನವಿಯನ್ನು ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್, ಬೆಗ್ಲಿಹೊಸಹಳ್ಳಿ ಬಿ.ಎಂ.ಮುನಿಕೃಷ್ಣಯ್ಯ, ನಿವೃತ್ತ ಪಿಡಬ್ಲೂಡಿ ಅಧಿಕಾರಿ ಎನ್. ರಾಮಚಂದ್ರ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023ರ ಸಲುವಾಗಿ ರಾಜ್ಯದಾದ್ಯಂತ ವಿವಿಧ ಕಡೆಗಳಲ್ಲಿ ತನಿಖಾ ಚೆಕ್ ಪೋಸ್ಟ್‍ಗಳನ್ನು ತೆರೆದು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ ಇಂತಹ ತನಿಖಾ ಚಕ್‍ಪೋಸ್ಟ್‍ಗಳು ಊರುಗಳಿಂದ ಹೊರವಲಯದಲ್ಲಿ ನಿರ್ಮಿಸಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಹಾಗೂ ಇತರೆ ಸಿಬ್ಬಂದಿಗೆ ಉಪಹಾರ ಮತ್ತು ಊಟಕ್ಕೆ ತೊಂದರೆಯಾಗುತ್ತಿದೆ. ಮಾನವೀಯತೆಯ ದೃಷ್ಟಿಯಿಂದ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಜಿಲ್ಲಾಡಳಿತ ಮತ್ತು ಸರ್ಕಾರದ ವತಿಯಿಂದ ಉಚಿತವಾಗಿ ತಿಂಡಿ, ಊಟ, ಕಾಫಿ, ಕುಡಿಯುವ ನೀರು ಹಾಗೂ ಇತರೆ ಮೂಲಭೂತ ವ್ಯವಸ್ಥೆಯನ್ನು ಮಾಡಬೇಕೆಂದು ಹಾಗೂ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿರುವ ಇತರೆ ಇಲಾಖೆಗಳ ಸಿಬ್ಬಂದಿಗೆ ಸಿಗುವ ಸೌಲಭ್ಯವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಪೊಲೀಸ್ ವಿಶೇಷ ಭತ್ಯೆಯನ್ನು ಮಂಜೂರು ಮಾಡುವಂತೆ ಮನವಿಯಲ್ಲಿ ಕೋರಿದ್ದಾರೆ.

ಶ್ರೀನಿವಾಸಪುರ: ತಾಲ್ಲೂಕಿನ ರೈತರಿಗೆ ಕೆಸಿ ವ್ಯಾಲಿ ನೀರು ವರದಾನವಾಗಿದೆ:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ತಾಲ್ಲೂಕಿನ ರೈತರಿಗೆ ಕೆಸಿ ವ್ಯಾಲಿ ನೀರು ವರದಾನವಾಗಿದೆ. ಕ್ಷೇತ್ರದ ಕೆರೆ ತುಂಬುವ ಕಾರ್ಯ ಪ್ರಗತಿಯಲ್ಲಿದ್ದು, ಅಂತರ್ಜಲ ಹೆಚ್ಚಿದೆ. ರೈತರು ನೆಮ್ಮದಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಈತರಾಸನಹಳ್ಳಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಾಲದ ಪ್ರಮಾಣ ಹೆಚ್ಚಿಸಲಾಗುವುದು ಎಂದು ಹೇಳಿದರು.
ನನ್ನ ಎದುರಾಳಿಗಳು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಏಕೆಂದರೆ ಮತ ಕೇಳಲು ಅಭಿವೃದ್ಧಿ ಕಾರ್ಯ ಕೈಗೊಂಡಿರಬೇಕು. ಮತದಾರರು ತಮ್ಮ ಮತವನ್ನು ಜಾತಿಗೆ ಹಾಕಬಾರದು ದೇಶದ ಪ್ರಗತಿಗೆ ಹಾಕಬೇಕು. ಅಭಿವೃದ್ಧಿಗಾಗಿ ಶ್ರಮಿಸಿದ ಹಾಗೂ ಶ್ರಮಿಸುವ ವ್ಯಕ್ತಿಗಳಿಗೆ ಮತ ನೀಡಬೇಕು. ಚುನಾವಣೆ ವಿಷಯದಲ್ಲಿ ಗೊಂದಲಕ್ಕೆ ಅವಕಾಶ ಬೇಡ. ಪ್ರಗತಿಗೆ ಮತ ನೀಡಿ ಎಂದು ಹೇಳಿದರು.
ಮುಖಂಡರಾದ ಎನ್.ಜಿ.ಬೇಟಪ್ಪ, ಎಂ.ಗೋವಿಂದಗೌಡ, ಸೊಣ್ಣೇಗೌಡ, ವಿ.ವೆಂಕಟಸ್ವಾಮಿ, ಎನ್.ಮೋಹನ್, ವಿ.ಬಾಬು, ಐ.ಎಂ.ಮಂಜುನಾಥ್, ಎಂ.ಸಂಪತ್, ವೆಂಕಟೇಶರೆಡ್ಡಿ, ಸಂತೋಷ್ ಇದ್ದರು.

ಇನ್ನೊಮ್ಮೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಬೇಕು :ಕೇಂದ್ರ ಸಚಿವ ಅರ್ಜುನ್‍ರಾಮ್ ಮೇಘ್ವಾಲ್

ಶ್ರೀನಿವಾಸಪುರ: ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಶಕ್ತಿ ತುಂಬಬೇಕು. ಇನ್ನೊಮ್ಮೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಕೇಂದ್ರ ಸಂಸದೀಯ ಹಾಗೂ ಸಂಸ್ಕøತಿ ಸಚಿವ ಅರ್ಜುನ್‍ರಾಮ್ ಮೇಘ್ವಾಲ್ ಹೇಳಿದರು.
ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳ ಈಡೇರಿಕೆಗೆ ಪೂರಕವಾಗಿವೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಂಥ ಹಲವು ಯೋಜನೆಗಳು ರೈತರು, ಕಾರ್ಮಿಕರು, ಹಾಗೂ ಸಮಾಜದಲ್ಲಿನ ಕಟ್ಟ ಕಡೆ ವ್ಯಕ್ತಿಗೂ ತಲುಪಿವೆ. ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಲಾಭ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲು ಮತದಾರರು ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯನಸ್ವಾಮಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುತ್ತಿವೆ. ರೈತರು, ಕೃಷಿಕರು, ಕೃಷಿ ಕಾರ್ಮಿಕರು ಹೀಗೆ ಸಮಾಜದ ಎಲ್ಲ ವರ್ಗದ ಜನರಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಜೆ.ಆರ್.ಶ್ರೀನಿವಾಸರೆಡ್ಡಿ, ಜಯಚಂದ್ರ, ಅಶೋಕರೆಡ್ಡಿ, ಎನ್.ರಾಜೇಂದ್ರ ಪ್ರಸಾದ್, ರಾಜೇಖರರೆಡ್ಡಿ, ಶಶಿಕುಮಾರ್ , ಆರ್.ನಾರಾಯಣಸ್ವಾಮಿ, ಆಂಜಪ್ಪ, ಟಿ.ಮಂಜುನಾಥರೆಡ್ಡಿ, ಪದ್ಮನಾಭ್, ಶ್ರೀರಾಮ್, ಶಂಷೀರ್ ಇದ್ದರು.