ಕಾಳ್ಗಿಚ್ಚು ಹಂಚುವ ಕಿಡಿಗೇಡಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ರೈತ ಸಂಘ ಅಗ್ರಹ

ಕೋಲಾರ,ಮಾ.16: ಕಾಳ್ಗಿಚ್ಚು ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡುವ ಜೊತೆಗೆ ಕರಪತ್ರದ ಮುಖಾಂತರ ಜನ ಜಾಗೃತಿ ಮೂಡಿಸಿ ಕಾಳ್ಗಿಚ್ಚು ಹಂಚುವ ಕಿಡಿಗೇಡಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸುವಂತೆ ರೈತ ಸಂಘದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲಯ್ಯರವರಿಗೆ ಮನವಿ ನೀಡಿ ಅಗ್ರಹಿಸಲಾಯಿತು.
ಪ್ರತಿ ವರ್ಷ ಬೇಸಿಗೆ ಬಂತೆಂದರೆ ಅರಣ್ಯಕ್ಕೆ ಬೆಂಕಿಯ ಅಪಾಯವೂ ಬರುತ್ತದೆ ಎಂಬ ಮುಂಜಾಗ್ರತೆ ಇದ್ದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಯಾವುದೇ ಮುಂಜಾಗ್ರತ ಕ್ರಮ ವಹಿಸದೆ ಮೂಕ ಪ್ರಾಣಿಗಳ ಜೀವ ಜೊತೆ ಚೆಲ್ಲಾಟ ಆಡುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಸಂಪತ್ತಿನ ವನ್ಯ ಜೀವಿಗಳ ಮಾರಣ ಹೋಮ ಅಷ್ಟೇ ಅಲ್ಲ ಹಠಾತ್ ನೆರೆ ಹಾವಳಿಯ ಪ್ರಮಾಣವೂ ಹೆಚ್ಚುತ್ತದೆ ಏಕೆಂದರೆ ನೀರನ್ನು ಹೀರಿಕೊಳ್ಳುವ ಸೂಕ್ಷ್ಮ ರಂದ್ರಗಳೆಲ್ಲವೂ ಬೂದಿಯಲ್ಲಿ ಮುಚ್ಚಿ ಹೋಗುತ್ತದೆ. ಕಾಡಿನ ಬೆಂಕಿಗೆ ಕಾರಣಗಳು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗುವ ಜೊತೆಗೆ ಅರಣ್ಯ ಅತಿಕ್ರಮಣ, ಕಳ್ಳ ಕೃಷಿ, ಬೇಟೆಗಾರರ ಹಾವಳಿ , ಕೃಷಿ ತ್ಯಾಜ್ಯಗಳ ನಿರ್ಲಕ್ಷದ ವಿಲೇವಾರಿ ಹಾಗೂ ಮೋಜಿಗೆಂದೆ ಕಡ್ಡಿ ಗೀರುವವರ ಕೃತ್ಯದಿಂದಾಗಿ ಬೆಂಕಿ ಹಬ್ಬುತ್ತದೆ ಮಾನವೀಯತೆ ಇಲ್ಲದ ಮನುಷ್ಯನ ಒಂದು ನಿಮಿಷದ ಚೆಲ್ಲಾಟ ಮೂಖ ಪ್ರಾಣಿಗಳ ಆಕ್ರಂದನ ಶಾಪವಾಗಿ ಪರಿಣಮಿಸುತ್ತದೆ ಎಂದು ಆರೋಪ ಮಾಡಿದರು.
ಅರಣ್ಯಕ್ಕೆ ಬೆಂಕಿ ಬಿದ್ದಾಗ ಹತೋಟಿಗೆ ತರಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತ ಜೊತೆಗೆ ಯಾವುದೇ ಗುಣಮಟ್ಟದ ಉಪಕರಣಗಳಿಲ್ಲ ಸಾವಿರಾರು ಹೆಕ್ಟೆರ್ ಅರಣ್ಯದಲ್ಲಿ ಬೆಂಕಿ ನಂದಿಸಲು ಅಷ್ಟೇ ಸಾಮಥ್ರ್ಯವುಳ್ಳ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅರಣ್ಯ ಸಿಬ್ಬಂದಿಯ ಪ್ರಾಣ ಹಾಗೂ ಅರಣ್ಯ ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕೆಂದು ಸಲಹೆ ನಿಡಿದರು.
ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಬೇಸಿಗೆಯಲ್ಲಿ ಬೆಂಕಿ ಎಂಬುದು ಅರಣ್ಯಕ್ಕೆ ಸೀಮಿತವಾಗದೆ ಕೃಷಿ ಕ್ಷೇತ್ರದ ಬಿಡು ಬಿದ್ದಿರುವ ಕಡೆ ಬೆಂಕಿ ಕಡ್ಡಿ ಗೀಚುವ ಕಿಡಿಗೇಡಿಗಳಿಂದ ರೈತರು ಕೃಷಿ ಭೂಮಿಗೆ ಬೆಂಕಿ ತಗುಲಿ ಡ್ರಿಪ್ , ಮಲ್ಚಿಂಗ್ ಪೇಪರ್ ಜೊತೆಗೆ ಕೈಗೆ ಬಂದ ಬೆಳೆ ನಾಶವಾಗುತ್ತಿದೆ. ಇದರಿಂದ ರೈತರಿಗೂ ಲಕ್ಷಾಂತರ ರೂ ನಷ್ಟ ಉಂಟಾಗುತ್ತಿದೆ ಎಂಧು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಕಾಳ್ಗಿಚ್ಚು ಬಗ್ಗೆ ಅರಣ್ಯ ಇಲಾಖೆ ಕರಪತ್ರದ ಮೂಲಕ ಜನ ಜಾಗೃತಿ ಮೂಡಿಸಿ ಅರದಲ್ಲೂ ಅರಣ್ಯ ಪಕ್ಕದಲ್ಲಿರುವ ಹಳ್ಳಿಗಳ ಜನರಲ್ಲಿ ಜಾಗೃತಿ ಮೂಡಬೇಕು, ಮತ್ತು ಬೇಸಿಗೆ ಕಳೆಯುವವರೆಗೂ ಜಿಲ್ಲಾದ್ಯಂತ ಅರಣ್ಯ ಗಸ್ತು ಸಮಿತಿ ತಂಡ ರಚನೆ ಮಾಡಿ ಬೆಂಕಿ ಹಚ್ಚುವ ಕಿಡಿಗೇಡಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಅರಣ್ಯ ಹಾಗೂ ಮೂಕ ಪ್ರಾಣಿಗಳ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು
ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಧ ಏಡುಕೊಂಡಲಯ್ಯರವರು ಬೆಂಕಿ ನಿಯಂತ್ರಣಕ್ಕೆ ಸಿಬ್ಬಂದಿ ಹಗಲಿರಳು ಕೆಲಸ ನಿರ್ವಹಿಸುತ್ತಿದ್ದಾರೆ ಕರಪತ್ರದ ಮುಖಾಂತರ ಜನಜಾಗೃತಿ ಮೂಡಿಸಿ ಅರಣ್ಯ ಉಳಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾ.ಅ ಯಲುವಳ್ಳಿ ಪ್ರಬಾಕರ್, ಮಂಗಸಂದ್ರ ತಿಮ್ಮಣ್ಣ, ಮಾಸ್ತಿ ಹರೀಶ್, ಪೆಮ್ಮದೊಡ್ಡಿ ಯಲ್ಲಪ್ಪ, ಪಾರುಕ್‍ಪಾಷ, ಬಂಗಾರಿ ಮಂಜು, ವಿಜಯಪಾಲ್, ವೆಂಕಟೇಶ್, ಸಂದೀಪ್‍ರೆಡ್ಡಿ, ರಾಮಸಾಗರ ವೇಣು, ವೆಂಕಟೇಶಪ್ಪ,ಭಾಸ್ಕರ್, ಚಲ, ಸುನಿಲ್‍ಕುಮಾರ್, ಶೈಲ, ನಾಗರತ್ನ, ಚೌಡಮ್ಮ, ಗೀರಿಶ್ ಮುಂತಾದವರಿದ್ದರು.

ಕಸಬಾ ರೇಷ್ಮೆ ಸಹಕಾರ ಸಂಘವು ಅದ್ಬುತವಾಗಿ ಕಾರ್ಯನಿರ್ವಹಿ, ಇಂದು ನೂತನ ಗೋದಾಮು, ಮಳಿಗೆಗಳು ನಿರ್ಮಿಸಿಕೊಳ್ಳಲು ಸಾಧ್ಯವಾಯಿತು : ಶಾಸಕ ಕೆ.ಆರ್.ರಮೇಶ್‍ ಕುಮಾರ್

ಶ್ರೀನಿವಾಸಪುರ 2 : ಕಸಬಾ ರೇಷ್ಮೆ ಸಹಕಾರ ಸಂಘವು ಅದ್ಬುತವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಇಂದು ನೂತನ ಗೋದಾಮು, ಮಳಿಗೆಗಳು ನಿರ್ಮಿಸಿಕೊಳ್ಳಲು ಸಾಧ್ಯವಾಯಿತು ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರ ಹಾಗು ರೈತ ಸೇವ ಸಹಕಾರ ಸಂಘದ ನೂತನ ಗೋದಾಮು ಮತ್ತು ಮಳಿಗೆಗಳನ್ನು ಬುಧವಾರ ಉದ್ಗಾಟಿಸಿ ಮಾತನಾಡಿದರು.
70ಲಕ್ಷ ಮೊತ್ತದಲ್ಲಿ ಎಂಎಸ್‍ಸಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಗೋದಾಮು, ಮಳಿಗಗೆಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿ, ಈ ಮಳಿಗೆಗಳು ಸಾರ್ವಜನಿಕವಾಗಿ ಉಪಯೋವಾಗುವಂತೆ ಬಳಸಿಕೊಂಡು ಆರ್ಥಿಕವಾಗಿ ಸಭಲರಾಗುವಂತೆ ಕಿವಿಮಾತು ಹೇಳಿದರು.
ಕಸಬಾ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಅಯ್ಯಪ್ಪ, ಉಪಾಧ್ಯಕ್ಷೆ ಶಾಂತಮ್ಮ, ನಿರ್ದೇಶಕರಾದ ಶಬ್ಬೀರ್‍ಅಹಮ್ಮದ್, ಬಿ.ವೆಂಕಟರೆಡ್ಡಿ, ಸಿ.ನಾರಾಯಣಸ್ವಾಮಿ, ಟಿ.ರಾಮಚಂದ್ರಪ್ಪ, ಬೈರಾರೆಡ್ಡಿ, ಭಾಗ್ಯಮ್ಮ, ಸಿ.ಗುರ್ರಪ್ಪ, ಮುನಿಸ್ವಾಮಿ, ಎಚ್.ಮುನಿಯಪ್ಪ, ಸಿಇಒ ಸಿ.ವಿ.ಶಿವಾರೆಡ್ಡಿ, ಸಿಬ್ಬಂದಿಗಳಾದ ಎಂ.ದೀಪಕ್, ಸಿ.ಎಸ್.ವಿನೋದ್, ಎಸ್.ಜಿ.ವೆಂಕಟೇಶ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎ.ವಿ.ಶ್ರೀನಿವಾಸ್, ಮುಖಂಡರಾದ ಸೀತರಾಮಡ್ಡಿ, ವೆಂಕಟೇಶ್, ಸೋಮಾಯಜಲಪಲ್ಲಿ ಮಂಜುನಾಥರೆಡ್ಡಿ, ಲಕ್ಷಣರೆಡ್ಡಿ, ಅಕ್ಬರ್‍ಷರೀಫ್ ಇದ್ದರು.
15, ಎಸ್‍ವಿಪುರ್ 2 : ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರ ಹಾಗು ರೈತ ಸೇವ ಸಹಕಾರ ಸಂಘದ ನೂತನ ಗೋದಾಮು ಮತ್ತು ಮಳಿಗೆಗಳನ್ನು ಕೆ.ಆರ್.ರಮೇಶ್‍ಕುಮಾರ್ ಉದ್ಗಾಟಿಸಿ ಮಾತನಾಡಿದರು.

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ವತಿಯಿಂದ ವಿಎಲ್ಎಸ್ಐ ಸಿಸ್ಟಮ್ ವಿನ್ಯಾಸ

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್  ಕಾಲೇಜಿನ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ವತಿಯಿಂದ ವಿಎಲ್ಎಸ್ಐ ಸಿಸ್ಟಮ್ ವಿನ್ಯಾಸ ಎಂಬ ವಿಷಯದ ಬಗ್ಗೆ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ  ಸಿಐಯೆಂಟ್ ಸೆಮಿಕಂಡಕ್ಟರ್ ಇದರ ಪ್ರೋಗ್ರಾಮ್ ಮ್ಯಾನೇಜರ್ ಆಗಿರುವ ರಿಝ್ವಾನ್ ರೋಶನ್ ಹಾಗೂ ಕಾರ್ಮಿಕ್  ಡಿಸೈನ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕರಾದ ದಿಲೀಪ್ ಮೊಗವೀರ ಇವರು ಆಗಮಿಸಿದ್ದು ವಿಧ್ಯಾರ್ಥಿಗಳಿಗೆ ಕಾರ್ಯಗಾರ ನಡೆಸಿಕೊಟ್ಟರು. ಸೆಮಿಕಂಡಕ್ಟರ್ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ತಿಳಿಸುತ್ತ, ಚಿಪ್ ತಯಾರಿಸುವ ಬಗೆ, ಸೆಮಿಕಂಡಕ್ಟರ್ ಕಂಪೆನಿಯಲ್ಲಿನ ಅವಕಾಶಗಳನ್ನು ಸವಿವರವಾಗಿ ತಿಳಿಸಿಕೊಟ್ಟರು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಗಳು ಮುಂದಿನ ಹತ್ತು ವರ್ಷಗಳಲ್ಲಿ ಸೆಮಿಕಂಡಕ್ಟರ್ ತಂತ್ರಜ್ಞಾನ ಯಾವ ಮಟ್ಟದಲ್ಲಿ ಅಭಿವೃದ್ಧಿ ಹೊಂದಲಿದೆ ಹಾಗೂ ಅತಿಹೆಚ್ಚಿನ ಅವಕಾಶಗಳನ್ನು ಕಲ್ಪಿಸಿದೆ ಹಾಗಾಗಿ ಎಲೆಕ್ಟ್ರಾನಿಕ್ ವಿಭಾಗವನ್ನು ಆಯ್ಕೆ ಮಾಡಿದ ನೀವು ಅದರ ಬಗ್ಗೆ ಹೆಮ್ಮೆಯಿಂದ ಇರಬೇಕು ಹಾಗು ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಯುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದು ವಿಧ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ|ಅಬ್ದುಲ್ ಕರೀಮ್, ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಬಾಲನಾಗೇಶ್ವರ್, ಆರ್ಟಿಫ಼ಿಶಿಯಲ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫ಼ೆಸರ್ ವರುಣಕುಮಾರ್, ಸಿಬ್ಬಂದಿ ವರ್ಗ, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರಾಧ್ಯಾಪಕಿ ಸುಷ್ಮ  ಶೆಟ್ಟಿ ಸ್ವಾಗತಿಸಿ ,  ವಿಧ್ಯಾರ್ಥಿನಿ ಸಿಂಚನ ದೇವಾಡಿಗ ವಂದಿಸಿ , ಫ಼ಾತಿಮ ನಿರೂಪಿಸಿದರು.

ಸಂವಿಧಾನದ ಆಶಯದಂತೆ ನಡೆದುಕೊಂಡಾಗ ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ : ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಸಂವಿಧಾನದ ಆಶಯದಂತೆ ನಡೆದುಕೊಂಡಾಗ ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ದೊಡ್ಡಬಂದಾರ್ಲಹಳ್ಳಿಯಲ್ಲಿ ಮಂಗಳವಾರ, ಒಟ್ಟು ರೂ.40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಅಂಬೇಡ್ಕರ್ ಸಮುದಾಯ ಭವನ, ಅಂಗನವಾಡಿ ಕಟ್ಟಡ ಹಾಗೂ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಸ್ಥರು ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕಿನ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಎತ್ತಿನ ಹೋಳೆ ನೀರು ಹರಿದುಬರಲಿದೆ. ಆಗ ನೀರಿನ ಸಮಸ್ಯೆ ನೀಗುತ್ತದೆ. ಜಲ್ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಪೂರೈಸಲಾಗುವುದು ಎಂದು ಹೇಳಿದರು.
ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗಿದೆ. ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಬಡವರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಎಸ್ಸಿ ಎಸ್ಟಿ ಸಮುದಾಯದ ರೈತರು ಕೃಷಿ ಕೊಳವೆ ಬಾವಿ ನಿರ್ಮಿಸಲು ಅರ್ಜಿ ನೀಡಿದಲ್ಲಿ, ಸೌಲಭ್ಯ ಕಲ್ಪಿಸಲಾಗುವುದು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌತಮಿ ಮುನಿರಾಜು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಮುಖಂಡರಾದ ಎನ್.ಮುನಿಸ್ವಾಮಿ, ತಿಮ್ಮಯ್ಯ, ಸಂಜಯ್ ರೆಡ್ಡಿ, ವಿ.ಆಂಜನೇಯಲು, ಮುಳಬಾಗಿಲಪ್ಪ, ವಿ.ಮುನಿಯಪ್ಪ, ಸಿಆರ್‍ಪಿ ಟಪರಾಜ್ ಇದ್ದರು.

ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನಿಡುವುದರ ಮೂಲಕ ಸ್ಥಿರ ಸರ್ಕಾರ ರಚಿಸಲು ಸಹಕರಿಸಬೇಕು : ಸಚಿವ ಆರ್.ಅಶೋಕ್

ಶ್ರೀನಿವಾಸಪುರ: ಮತದಾರರು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನಿಡುವುದರ ಮೂಲಕ ಸ್ಥಿರ ಸರ್ಕಾರ ರಚಿಸಲು ಸಹಕರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಪಟ್ಟಣದ ಮುಳಬಾಗಿಲು ವೃತ್ತದಿಂದ ಎಂಜಿ ರಸ್ತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ರೋಡ್ ಷೋನಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಮತದಾರರು ಸುಭದ್ರ ಸರ್ಕಾರ ಬಯಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಬಿಜೆಪಿ ಅವರ ಮೊದಲ ಆಯ್ಕೆಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ 70, ಜೆಡಿಎಸ್ 20 ಸ್ಥಾನ ಗೆದ್ದರೆ ಹೆಚ್ಚು. ಇನ್ನು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅವರು ಕೋಲಾರದಲ್ಲಿ ಗೆಲ್ಲುವ ಭರವಸೆ ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದುಬರುತ್ತಾರೆ ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್, ಕಾಂಗ್ರೆಸ್ ಮುಖಂಡರು ಮೂರು ತಲೆಮಾರಿಗೆ ಸಾಕಾಗುಷ್ಟು ಸಂಪತ್ತು ಗಳಿಸಿದ್ದಾರೆ ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜೈಲಿಗೆ ಹೋಗದಂತೆ ನೋಡಿಕೊಂಡರೆ ಸಾಕು. ತಾಲ್ಲೂಕು ರೆಡ್ಡಿ, ಸ್ವಾಮಿ ನಾಯಕತ್ವದಲ್ಲಿ ಆಭಿವೃದ್ಧಿ ಶೂನ್ಯವಾಗಿದೆ. ಈ ಬಾರಿ ಮತದಾರರು ಬದಲಾವಣೆ ಬಯಸಿದ್ದಾರೆ. ಅದರ ಲಾಭ ಬಿಜೆಪಿಗೆ ದೊರೆಯಲಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಶಾಸಕರು ಹಾಗೂ ಮಾಜಿ ಶಾಸಕರಿಗೆ ವಯಸ್ಸಾಗಿದೆ. ಅವರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಮತದಾರರು ಅವರನ್ನು ಮನೆಗೆ ಕಳಿಸಬೇಕು. ಮಾತಿನಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಎಂಬುದನ್ನು ಶಾಸಕರು ಅರಿಯಬೇಕು. ಅವರು ನೀಡಿದ್ದ ಯಾವುದೇ ಭರವಸೆ ಈಡೇರಿಲ್ಲ. ಆದರೆ ಬಿಜೆಪಿ ಸರ್ಕಾರದ ಸಾಧನೆ ಪರಿಗಣಿಸಿ ಮತದಾರರು ಬಿಜೆಪಿ ಗೆಲ್ಲಿಸುತ್ತಾರೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದೇಶದ ಘನತೆ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳು ಸಮಾಜದ ಕಟ್ಟ ಕಡೆ ವ್ಯಕ್ತಿಯ ಅಭ್ಯುದಯಕ್ಕೆ ಪೂರಕವಾಗಿವೆ. ರಾಜ್ಯ ಸರ್ಕಾರದ ಸಾಧನೆ ಜನರ ಗಮನ ಸೆಳೆದಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಶೋಕರೆಡ್ಡಿ, ಮುಖಂಡರಾದ ಬಿ.ಪಿ.ವೆಂಕಟಮುನಿಯಪ್ಪ, ಆರ್.ಎನ್.ಚಂದ್ರಶೇಖರ್, ರಾಮಾಂಜಿ, ರಮೇಶ್, ಜಯಣ್ಣ, ನಾರಾಯಣಸ್ವಾಮಿ, ಷಫಿವುಲ್ಲಾ, ನಾಗರಾಜ್, ರೆಡ್ಡಪ್ಪ,

ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಪ್ರಾಕ್ತನ ವಿದ್ಯಾರ್ಥಿ ಸಂಘ (ರಿ) ಕುಂದಾಪುರ – ನೋಟೀಸು


ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಪ್ರಾಕ್ತನ ವಿದ್ಯಾರ್ಥಿ ಸಂಘ (ರಿ) ಕುಂದಾಪುರ ಇದರ ವಾರ್ಷಿಕ ಮಹಾಸಭೆಯು ಶನಿವಾರ ದಿನಾಂಕ 18-03-2023ರಂದು ಅಪರಾಹ್ನ 3ಗಂಟೆಗೆ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ. ಈ ಸಭೆಗೆ ಎಲ್ಲಾ ಸದಸ್ಯರು, ಸದಸ್ಯರಾಗ ಬಯಸುವವರು ಮತ್ತು ಈ ಹಿಂದಿನ ಎಲ್ಲಾ ಸಂಘದ ಪದಾಧಿಕಾರಿಗಳು ಭಾಗವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ಚರ್ಚ್ ರಸ್ತೆಯ ಮನೆ ಆವರಣದಲ್ಲಿ ಹೆಬ್ಬಾವು ಹಿಡಿಯಲಾಯಿತು. ಜನ ಬೆಳಕಿನೊಂದಿಗೆ ನಡೆದಾಡಬೇಕು

ಕುಂದಾಪುರ, ಮಾ.14: ಕುಂದಾಪುರ ಚರ್ಚ್ ರಸ್ತೆಗೆ ಸಂಬಂಧಿಸಿದ ಕಾನ್ವೆಂಟ್ ಕ್ರಾಸ್ ರಸ್ತೆಯ ಒಸ್ವಲ್ಡ್ ಕರ್ವಾಲ್ಲೊ ಮನೆಯ ನೆರೆಮನೆಯ ಆವರಣದಲ್ಲಿ ನಿನ್ನೆ ರಾತ್ರಿ ಹೆಬ್ಬಾವು ಕಂಡು ಬಂದಿದೆ. ಕೊನೆಗೆ ಅದನ್ನು ಹಿಡಿಯಲಾಗಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎನ್ನುವುದೇ ಈ ವಾರ್ತೆಯ ಮುಖ್ಯ ಉದ್ದೇಶ.

ಸ್ಥಳೀಯ ಪ್ರದೇಶದಲ್ಲಿ ಈಗ ತಾಪಮಾನ ಹೆಚ್ಚಾಗಿದ್ದು, ಬಿಲ, ಪೊದೆಯಲ್ಲಿ, ಮಣ್ಣಿನ ಒಳಗಡೆ ಇರುವ ಸರಿಸ್ರಪಗಳು, ತಾಪಮಾನ ತಾಳದೆ ಹೊರಗೆ ಬರುತ್ತವೆ, ನಮ್ಮ ಪರಿಸರದಲ್ಲಿ ಹೆಚ್ಚಾಗಿ ಹಾವುಗಳು ಹೊರಗೆ ಬಂದು ಸುತ್ತಾಡುತ್ತೀವೆ ಎಂದು ತಿಳಿದು ಬಂದಿದೆ, ಹಾಗಾಗಿ ಜನ ಜಾಗ್ರತೆ ವಹಿಸಬೇಕು. ಸಂಜೆ, ರಾತ್ರೆ ಹೊತ್ತು ನಿಮ್ಮ ಮನೆ ಆವರಣದಲ್ಲಿ, ದಾರಿ, ರಸ್ತೆ ಬದಿಯಲ್ಲಿ ನೆಡೆಯುವಾಗ ಅಥವ ತಮ್ಮ ಕೆಲಸಗಳನ್ನು ಮಾಡುತ್ತೀರುವಾಗ, ಅಥವಾ ವಾಕಿಂಗ್ ಮಾಡುತ್ತೀರುವಾಗ ಜಾಗ್ರತೆ ವಹಿಸಬೇಕು. ಭಯಂಕ ವಿಷಜಂತುಗಳು ಹೊರಬಂದು ಅಡಗಿಕೊಂಡಿರುವ ಸಾಧ್ಯತೆ ಇದೆ. ಆದರಿಂದ ಜನರು ಜಾಗ್ರತೆಯನ್ನು ವಹಿಸಬೇಕು

ಅರಭಿಕೊತ್ತನೂರು ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾರ್ಗದರ್ಶನ ಸಮಯ ವ್ಯರ್ಥ ಮಾಡದಿರಿ,ಶ್ರದ್ಧೆಯಿಂದ ಅಭ್ಯಾಸ ಮಾಡಿ- ಬಾಲಾಜಿ ಕರೆ

ಕೋಲಾರ:- ಎಸ್ಸೆಸ್ಸೆಲ್ಸಿ ನಿಮ್ಮ ಜೀವನದ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಗೆ ಇನ್ನೂ ಕೇವಲ 15 ದಿನಗಳು ಮಾತ್ರವಿದೆ, ಪ್ರತಿಕ್ಷಣವೂ ಉಪಯುಕ್ತವಾಗಿದೆ, ಸಮಯ ವ್ಯರ್ಥ ಮಾಡದೇ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಾಧನೆ ಸುಲಭ ಎಂದು ಜಿಲ್ಲಾ ಶಿಕ್ಷಣ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಹಿರಿಯ ಉಪನ್ಯಾಸಕ ಬಾಲಾಜಿ ಕರೆ ನೀಡಿದರು.
ಮಂಗಳವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ಮಾರ್ಗದರ್ಶನ ನೀಡಿದ ಅವರು, ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು, ಓದಲು ಕಿವಿಮಾತು ಹೇಳಿದರು.
ಹೊರಗಿನ ತಿಂಡಿ ತಿನ್ನದೇ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ನಿರಂತರ ಅಭ್ಯಾಸ ಮಾಡಿ ಶೇ.100 ಸಾಧನೆಗೆ ಪರಿಶ್ರಮ ಹಾಕಿ ಎಂದು ತಿಳಿಸಿದ ಅವರು, ಬೆಳಗಿನ ಜಾವ 5 ಗಂಟೆಗೆ ಏಳುವ ಅಭ್ಯಾಸ ಮಾಡಿಕೊಳ್ಳಿ, ಪರೀಕ್ಷೆಗೆ ಇನ್ನು ಕೇವಲ 14 ದಿನವಿದ್ದು, ಅನುಭವಿ ಶಿಕ್ಷಕರು ಪರೀಕ್ಷೆಗೆ ಅತಿ ಮುಖ್ಯವಾದ ಪ್ರಶ್ನೆಗಳನ್ನು ಓದಲು ಮಾರ್ಗದರ್ಶನ ನೀಡುವುದರಿಂದ ಶಾಲೆಗೆ ಗೈರಾಗದಿರಿ ಎಂದು ಸೂಚಿಸಿ, ಏಕಾಗ್ರತೆ ಬರುವಂತಾಗಲು ಹಲವಾರು ಸೂತ್ರಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
ಪಠ್ಯಪುಸ್ತಕ ಅಭ್ಯಾಸ ಮಾಡಿ ಎಂದ ಅವರು, ತರಗತಿಯಲ್ಲಿ ಶಿಕ್ಷಕರ ಬೋಧನೆ ಸಂದರ್ಭದಲ್ಲಿ ಏಕಾಗ್ರತೆಯಿಂದ ಆಲಿಸಿ, ಪಠ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಯಾವುದೇ ಆತಂಕವಿಲ್ಲದೇ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಿ ಎಂದರು.
ರಾತ್ರಿ 10-30 ಗಂಟೆಯವರೆಗೂ ಓದುವ ಅಭ್ಯಾಸ ರೂಢಿಸಿಕೊಳ್ಳಲು ಸಲಹೆ ನೀಡಿದ ಅವರು, ಯಾವುದೇ ಪ್ರಶ್ನೆ ಕುರಿತು ಗೊಂದಲವಿದ್ದರೆ ಯಾವುದೇ ಮುಜುಗರಕ್ಕೆ ಒಳಗಾಗದೇ ನಿಮ್ಮ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪಠ್ಯ ಪುಸ್ತಕ ಓದುವರಿಂದ ಮಾತ್ರವೇ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶೇ.100 ಅಂಕ ಪಡೆಯಲು ಸಾಧ್ಯ ಎಂದ ಅವರು, ಇಲಾಖೆ ನೀಡಿರುವ `ನನ್ನನ್ನೊಮ್ಮೆ ಗಮನಿಸಿ’ ವಿಷಯವಾರು ಅಭ್ಯಾಸ ಪ್ರತಿಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಯಾವುದೇ ವಿದ್ಯಾರ್ಥಿ ತೇರ್ಗಡೆಯಾಗುವುದು ಕಷ್ಟವಲ್ಲ, ಆದರೆ, ಪರಿಪೂರ್ಣ ಅಂಕ ಗಳಿಸಬೇಕೆಂಬ ವಿದ್ಯಾರ್ಥಿಗಳು ಪಠ್ಯ ಪುಸ್ತಕವನ್ನು ಆಳವಾಗಿ ಅಭ್ಯಾಸ ಮಾಡಬೇಕೆಂದರು.
ಶಾಲೆಯಲ್ಲಿ ಉತ್ತಮ ಸಂಪನ್ಮೂಲ ಶಿಕ್ಷಕರಿದ್ದು, ಅವರ ನೆರವು ಪಡೆಯಿರಿ, ನಿಮ್ಮ ಗುರಿ ಕೇವಲ ಪರೀಕ್ಷೆ ಆಗಿರಲಿ, ಪರೀಕ್ಷೆ ಮುಗಿಯುವವರೆಗೂ ನಿಮ್ಮ ಉಳಿದೆಲ್ಲಾ ಆಟೋಟ ಇತರೆ ಚಟುವಟಿಕೆಗಳನ್ನು ನಿಯಂತ್ರಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಹಿರಿಯ ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ,ವೆಂಕಟರೆಡ್ಡಿ, ಶ್ವೇತಾ, ಸುಗುಣಾ,ಲೀಲಾ, ಫರೀದಾ, ಚೈತ್ರ, ಶ್ರೀನಿವಾಸಲು ಮತ್ತಿತರರಿದ್ದರು.

ಎಲ್ಲ ವರ್ಗದ ಜನರ ಅಭ್ಯುದಯಕ್ಕಾಗಿ ಮತದಾರರು ಜೆಡಿಎಸ್ ಬೆಂಬಲಿಸಬೇಕು:ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಎಲ್ಲ ವರ್ಗದ ಜನರ ಅಭ್ಯುದಯಕ್ಕಾಗಿ ಮತದಾರರು ಜೆಡಿಎಸ್ ಬೆಂಬಲಿಸಬೇಕು. ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ ಮುಖಂಡರು ಹೇಳುವುದರ ಮೂಲಕ ಅಲ್ಪ ಸಂಖ್ಯಾತರ ಮತ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದ ಸಂಗತಿ ಎಂಬುದು ಪ್ರಜ್ಞಾವಂತ ಮತದಾರರಿಗೆ ತಿಳಿದಿದೆ ಎಂದು ಹೇಳಿದರು.
ಕಾಂಗ್ರೆಸ್ ಹಿಂದಿನಿಂದಲೂ ಅಲ್ಪ ಸಂಖ್ಯಾತರನ್ನು ಮತ ಬ್ಯಾಂಕ್ ಮಾಡಿಕೊಂಡಿತ್ತು. ಈಗ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಜನರೂ ಕಾಂಗ್ರೆಸ್ ನಿಂದ ಅಂತ ಕಾಯ್ದುಕೊಳ್ಳುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕಿನಲ್ಲಿ ಏನಾದರೂ ಅಭಿವೃದ್ಧಿಯಾಗಿದ್ದರೆ, ಅದು ನಾನು ಶಾಸಕನಾಗಿದ್ದ 4 ಅವಧಿಯಲ್ಲಿ ಮಾತ್ರ. ಶಾಸಕ ರಮೇಶ್ ಕುಮಾರ್ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ಜನರ ಎದುರು ಕಣ್ಣೀರು ಸುರಿಸಿ, ಮಾತಿನಿಂದ ಹೊಟ್ಟೆ ತುಂಬಿಸುತ್ತಿದ್ದಾರೆ. ಜಾಕೀರ್ ಹುಸೇನ್ ಮೊಹಲ್ಲಾ ನಿರ್ಮಿಸಿದ್ದು ನಾನು ಶಾಸಕನಾಗಿದ್ದ ಅವಧಿಯಲ್ಲಿ. ಆದರೆ ಈಗ ಅದು ಅಭಿವೃದ್ಧಿ ಕಾಣದೆ ತಿಪ್ಪೆಯಂತಾಗಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಏಜಾಜ್ ಮಾತನಾಡಿ, ಬಿಜೆಪಿ ಅಲ್ಪ ಸಂಖ್ಯಾತರ ಹಿತ ಕಾಯುವಲ್ಲಿ ವಿಫಲವಾಗಿದೆ. ಕಾಂಗ್ರೆಸ್, ಬಿಜೆಪಿ ಬಿ ಟೀಂನಂತೆ ವರ್ತಿಸುತ್ತಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಅಲ್ಪ ಸಂಖ್ಯಾತರ ಆಶಾಕಿರಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅಂಥ ನಾಯಕರಿಂದ ಅಂತರ ಕಾಯ್ದುಕೊಳ್ಳಬೇಕು. ಜೆಡಿಎಸ್ ಬೆಂಬಲಿಸಬೇಕು ಎಂದು ಹೇಳಿದರು.
ಅಂಜುಮನ್ ಸಂಸ್ಥೆ ಮುಖ್ಯಸ್ಥ ಜಮೀರ್ ಅಹ್ಮದ್ ಮಾತನಾಡಿ, ಶಾಸಕ ಕೆ.ಆರ್.ರಮೇಶ್ ಕುಮಾರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸಮಾಡಿ ಗೆಲ್ಲಿಸಿದ್ದು ಗುಟ್ಟಾಗಿ ಉಳಿದಿಲ್ಲ. ಕೆ.ಎಚ್.ಮುನಿಯಪ್ಪ ಸೋಲಿಗೆ ಕಾರಣರಾದವರಿಗೆ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ. ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಕಲ್ಲುಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಇದೆಲ್ಲವನ್ನೂ ಸಹಿಸದ ಅನ್ಯ ಪಕ್ಷಗಳ ಮತದಾರರು ಜೆಡಿಎಸ್ ಕಡೆ ವಾಲುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಮುಖಂಡರಾದ ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ, ಬಿ.ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ರವಿ, ವೇಣುಗೋಪಾಲರೆಡ್ಡಿ, ಜಗನ್ನಾಥ್, ಪುರಸಭೆ ಸದಸ್ಯರಾದ ವಹೀದಾ ಬೇಗಂ, ಶಬ್ಬೀರ್ ಖಾನ್, ರಸೂಲ್ ಖಾನ್, ಜಬೀನ್ ತಾಜ್, ನಸೀರ್ ಅಹ್ಮದ್ ಖಾನ್, ಸೈಯದ್ ನಿಜಾಮುದ್ದೀನ್, ರಿಯಾನಾಖಾನಂ, ಜಯಲಕ್ಷ್ಮಿ ಇದ್ದರು.