ಧ. ಗ್ರಾ. ಯೋ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ – ಒಕ್ಕೂಟಗಳ ಪದಗ್ರಹಣ ಸಮಾರಂಭ

ಕುಂದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯನ್ನು ಕೇವಲ ಸಾಲ ನೀಡುವ  ಅಥವಾ ಲಾಭ ಮಾಡುವ ಉದ್ದೇಶದಿಂದ ಪ್ರಾರಂಭಿಸಿದ್ದಲ್ಲ. ಸಮುದಾಯದ ಜನರ ಸರ್ವಾಂಗೀಣ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಪರಿಚಯಿಸಲು ಮತ್ತು ಆ ಮೂಲಕ ಗ್ರಾಮೀಣ ಜನರನ್ನು ಸ್ವಾವಲಂಬಿಗಳು ಮತ್ತು ಸಶಕ್ತರಾಗಿಸುವ ಉದ್ದೇಶದಿಂದ ಯೋಜನೆ ರೂಪುಗೊಂಡಿದೆ. ಈ ಎಲ್ಲಾ ಅನುಷ್ಠಾನಗಳಿಗೆ ಸಾಲದ ಬೆಂಬಲವೂ ಅಗತ್ಯವಿರುವುದರಿಂದ ಸಾಲ ಯೋಜನೆ ಪರಿಚಯಿಸಲಾಗಿದೆ. ಆದರೆ, ಕ್ಷೇತ್ರದ ವತಿಯಿಂದ ಸಾಲ ನೀಡುವುದಿಲ್ಲ. ಬ್ಯಾಂಕ್ ಒದಗಿಸುವ ಸಾಲಗಳಿಗೆ ಕ್ಷೇತ್ರದ ದೃಢೀಕರಣವಿರುತ್ತದಷ್ಟೇ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರದೀಪ್ ಶೆಟ್ಟಿ ಹೇಳಿದರು.

ಯೋಜನೆಯ ಬಿ ಸಿ ಟ್ರಸ್ಟ್ ಅಂತರ್ಗತ ಕೋಟೇಶ್ವರ ವಲಯ ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಕೋಟೇಶ್ವರದಲ್ಲಿ ನಡೆದ ವಲಯದ ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆಯ ಪ್ರಗತಿ ಮತ್ತು ಗ್ರಾಮೀಣ ಜನರ ಆಶಯಗಳನ್ನು ಪರಿಗಣಿಸಿ ಇದೀಗ ಕೇಂದ್ರ ಸರ್ಕಾರವು ರಾಜ್ಯದಾದ್ಯಂತ ಆಧಾರ್, ಇ-ಶ್ರಮ್ ಇತ್ಯಾದಿ ಕಾರ್ಡುಗಳನ್ನು ನೀಡುವ ಸಿ ಎಸ್ ಸಿ ಸೇವಾ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ. ಇದರಿಂದ ಯೋಜನೆಯ ಪರಿಣಾಮಕಾರಿಯಾದ ಅನುಷ್ಠಾನಕ್ಕೆ ಬಲ ಬಂದಿದೆ. ಮಹಿಳಾ ಸಬಲೀಕರಣದ ಜ್ಞಾನವಿಕಾಸ ಕಾರ್ಯಕ್ರಮಗಳು, ಅನಾಥರು, ಅಶಕ್ತರಿಗೆ ಚೈತನ್ಯ ತುಂಬುವ ಕಾರ್ಯಗಳು ವೇಗ ಪಡೆದಿವೆ. ತಾಲೂಕುಗಳೂ ಜಾಸ್ತಿಯಾಗಿದ್ದರಿಂದ ಯೋಜನೆಯ ಎರಡನೇ ಕೇಂದ್ರವನ್ನು ಕೋಟೇಶ್ವರದಲ್ಲೇ ತೆರೆಯಲಾಗಿದೆ ಎಂಬ ವಿವರಗಳನ್ನವರು ನೀಡಿದರು.

ವಲಯದ ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಟ್ಟು ಒಂಭತ್ತು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ದಾಖಲೆಗಳ ಹಸ್ತಾಂತರದ ಮೂಲಕ ನೆರವೇರಿಸಲಾಯಿತು. ಸಭೆಯ ಮುನ್ನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸಲಾಯಿತು.

ಕುಂದಾಪುರದ ಆಪ್ತ ಸಮಾಲೋಚಕಿ ಸ್ವರ್ಣ  ಧಾರ್ಮಿಕ ಉಪನ್ಯಾಸ ನೀಡಿ, ಶ್ರೀ ಸತ್ಯನಾರಾಯಣ ಪೂಜಾ ಮಹತ್ವವನ್ನು ವಿಷದಪಡಿಸುತ್ತಾ ನಮ್ಮ ವೇದ, ಉಪನಿಷತ್ತು, ಪುರಾಣಗಳ ಒಳ್ಳೆಯ ಅಂಶಗಳನ್ನು ನಾವಿಂದು ಅನುಸರಿಸದೆ, ಕಿರಿಯ ಜನಾಂಗಕ್ಕೆ ವರ್ಗಾಯಿಸುವಲ್ಲಿ ಸೋತು, ಕಾಲ ಕೆಟ್ಟಿದೆ ಎಂದು ಹಲುಬುತ್ತೇವೆ. ಆದರೆ ವಾಸ್ತವವಾಗಿ ಕಾಲ ಕೆಟ್ಟಿಲ್ಲ, ಮನುಷ್ಯನ ಸ್ವಾರ್ಥದಿಂದ ಬುದ್ಧಿ ಕೆಟ್ಟಿದೆ ಎಂದರು.

ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಗೋಪಾಡಿ ಗ್ರಾ. ಪಂ. ಅಧ್ಯಕ್ಷೆ ಸರೋಜಾ, ದೊಡ್ಡೋಣಿ ನೀರೇಶ್ವಾಲ್ಯ ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೆ. ಸುರೇಶ್, ಕೋಟೇಶ್ವರ ವಲಯ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಕುಂದಾಪುರ ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾ ಚಂದ್ರ ಇವರುಗಳು ಮುಖ್ಯ ಅತಿಥಿಗಳಾಗಿದ್ದು ಶುಭ ಹಾರೈಸಿದರು.

ಕೋಟೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಗಿಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟಗಳ ಪದಾಧಿಕಾರಿಗಳು, ವಲಯ ಮೇಲ್ವಿಚಾರಕ ನಾಗರಾಜ್ ಎಚ್.,  ಸೇವಾ ಪ್ರತಿನಿಧಿಗಳು,  ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಸುಶೀಲಾ ಶೇಟ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜಯಂತಿ ಶೆಟ್ಟಿ ವರದಿ ವಾಚಿಸಿದರು. ಪ್ರಸನ್ನ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಸುಶೀಲಾ ಕೆ. ಎಸ್. ವಂದಿಸಿದರು.

ಮಂಕುತಿಮ್ಮನ ಕಗ್ಗ ಆಧುನಿಕ ಭಗವದ್ಗೀತೆ ಇದ್ದಂತೆ – ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ.ಗೋಪಿನಾಥ್

ಕೋಲಾರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗವನ್ನು ಆಧುನಿಕ ಭಗವದ್ಗೀತೆ ಎಂದು ಕರೆಯುತ್ತಾರೆ. ಮಂಕುತಿಮ್ಮನ ಕಗ್ಗವನ್ನು ಅರ್ಥ ಮಾಡಿಕೊಂಡರೆ ಬದುಕಿನಲ್ಲಿ ಎಲ್ಲಾ ಸವಾಲುಗಳನ್ನು ಧೈರ್ಯವಾಗಿ ಎದುರಿಸಬಹುದು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಇಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಕೆಯುಡಬ್ಲ್ಯೂಜೆ ಸಂಸ್ಥಾಪಕರಾದ ಡಿ.ವಿ.ಜಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇರುವುದರಲ್ಲಿ ತೃಪ್ತಿ ಪಡುವುದು ನಿಜವಾದ ಜೀವನ ಎಂಬ ಸೂತ್ರವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಡಿ.ವಿ.ಜಿ ಅವರು ಬದಕಿನಲ್ಲಿ ಎಷ್ಟೇ ಕಷ್ಟಗಳಿದ್ದರೂ ಸಹ ಹಾಸ್ಯದಿಂದಲೇ ಮಾತನಾಡುತ್ತಿದ್ದರು. ಹಾಸ್ಯಕ್ಕೆ ಮತ್ತೊಂದು ಹೆಸರು ಡಿ.ವಿ.ಜಿ. ಅವರಿಗೆ ಬಂದ ಪ್ರಶಸ್ತಿ ಕಾಣಿಕೆಗಳನ್ನು ಬಳಸಿಕೊಳ್ಳದೆ ಗೋಖಲೆ ಸಂಸ್ಥೆಗೆ ಕೊಟ್ಟಿರುವುದು ಅವರ ಪ್ರಾಮಾಣಿಕತೆಗೆ ಮತ್ತೊಂದು ಮಕುಟಪ್ರಾಯ ಎಂದರು.

ಹೊಟ್ಟೆಪಾಡಿಗಾಗಿ ಬೇರೆ ವೃತ್ತಿ ನೋಡಿಕೊಳ್ಳಿ ಜನರ ಸೇವೆಗಾಗಿ ಮತ್ತು ಸಮಾಜ ಸೇವೆಗಾಗಿ ಮಾತ್ರ ರಾಜಕೀಯ ಮಾಡಿ ಎಂದು ಹೇಳಿದ್ದರು. ಆದರೆ ಇಂದಿನ ಪರಿಸ್ಥಿತಿಯ ಚಿತ್ರಣವೇ ಬೇರೆಯಾಗಿದೆ. ಅವರು ಮಾರ್ಗದರ್ಶನ ನೀಡದ ಕ್ಷೇತ್ರವಿಲ್ಲ. ಎಲ್ಲಾ ಕ್ಷೇತ್ರಗಳಿಗೂ ಅವರ ಮಾರ್ಗದರ್ಶನ ಪ್ರಸ್ತುತ. ಡಿ.ವಿ.ಜಿ ಅವರ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲದಿದ್ದರೂ ಅವರನ್ನು ನೆನೆಯುವ ಕೆಲಸ ಮಾಡೋಣ. ಅವರ ಆದರ್ಶಗಳನ್ನು ನೆನಪಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಬದುಕಿನ ಎಷ್ಟೇ ಕಷ್ಟದಲ್ಲಿಯೂ ಹಣ ಮತ್ತು ಪ್ರಸಿದ್ಧಿಯ ವ್ಯಾಮೋಹದ ಹಿಂದೆ ಹೋಗದೆ ಸ್ವಾಭಿಮಾನದಿಂದ ಸಾಹಿತ್ಯ ರಚನೆ ಮಾಡಿದ ಡಿವಿಜಿಯವರು ಇಂದಿನ ಪೀಳಿಗೆಯ ಪತ್ರಕರ್ತರಿಗೆ ಆದರ್ಶವಾಗಬೇಕೆಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಡಿ.ವಿ.ಜಿ ಅವರ ಜೀವನ ಚರಿತ್ರೆಯನ್ನು ಮೆಲುಕು ಹಾಕಲು ಪ್ರತಿಯೊಬ್ಬ ವ್ಯಕ್ತಿಯೂ ದಿನಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಹನೀಯರ ಪುಸ್ತಕಗಳನ್ನು ಓದಿದಾಗ ಮಾತ್ರ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಪತ್ರಕರ್ತರಿಗೆ ಪತ್ರಿಕಾ ಮೌಲ್ಯಗಳನ್ನು ತುಂಬುವ ಮೂಲಕ ಸಮಾಜದ ನೊಂದವರ ಧ್ವನಿಯಾಬೇಕೆಂದರು. ಇಂದು ಅದೇ ದಾರಿಯಲ್ಲಿ ಯುವ ಪತ್ರಕರ್ತರು ಮುನ್ನಡೆಯುವ ದಿಸೆಯಲ್ಲಿ ಡಿ.ವಿ.ಜಿ. ಅವರ ಜಯಂತಿಯನ್ನು ಪ್ರತಿಯೊಬ್ಬ ಪತ್ರಕರ್ತರು ಮಾಡುವ ಮೂಲಕ ಅವರಿಂದ ನಾವು ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದರು.

ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟೇಶ್ ಮಾತನಾಡಿ, ಇಂದು ಪತ್ರಿಕಾರಂಗ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬದನ್ನು ಮನಗಂಡು ಹಿರಿಯರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಿದಾಗ ಮಾತ್ರ ಪತ್ರಿಕಾರಂಗದ ಗೌರವ ಹೆಚ್ಚುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ ಮಾತನಾಡಿ ಸಮಾಜದ ಪ್ರತಿಯೊಬ್ಬರು ಡಿ.ವಿ.ಜಿ ಅವರ ಹಾದಿಯಲ್ಲಿ ಸಾಗಿ ಅವರಲ್ಲಿದ್ದ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಡಿ.ವಿ.ಜಿ ಅವರಿಗೆ ನೀಡುವ ನಿಜವಾದ ಗೌರವ ಎಂದರು.

ಡಿ.ವಿ.ಗುಂಡಪ್ಪ ಅವರನ್ನು ಆಧುನಿಕ ಸರ್ವಜ್ಞ ಎಂದರೆ ತಪ್ಪಾಗಲಾರದು. ಅವರು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಬರೆದಿರುವ ಕೃತಿಗಳನ್ನು ಓದುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕೆಂದರು.

ಕಾರ್ಯಕ್ರಮದಲ್ಲಿ ಮಾಮಿ, ಬಾಲನ್, ಎನ್.ಸತೀಶ್, ಈಶ್ವರ್, ರಮೇಶ್, ಎನ್.ಗಂಗಾಧರ್, ಕಿರಣ್, ಗೋಪಿ, ಮುಕ್ತಿಯಾರ್ ಅಹಮದ್, ಮದನ್, ರಾಘವೇಂದ್ರ ಪ್ರಸಾದ್, ಅಮರ್, ಎನ್.ಶಿವಕುಮಾರ್, ಪ್ರಕಾಶ್, ಶಿವು ಉಪಸ್ಥಿತರಿದ್ದರು.

ಶ್ರೀನಿವಾಸಪುರ : ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗದಿಂದ ಪುನೀತ್ ರಾಜ್ಕುಮಾರ್ ಅವರ 48ನೇ ಹುಟ್ಟು ಹಬ್ಬ ಆಚರಣೆ

ಶ್ರೀನಿವಾಸಪುರ: ಪಟ್ಟಣದಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಬಲಗದ ವತಿಯಿಂದ ಶುಕ್ರವಾರ ಪುನೀತ್ ರಾಜ್ಕುಮಾರ್ ಅವರ 48ನೇ ಹುಟ್ಟು ಹಬ್ಬ ಆಚರಿಸಲಾಯಿತು.

  ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಉಚಿತ ರಕ್ತದಾನ ಶಿಬಿರದಲ್ಲಿ 135 ಮಂದಿ ರಕ್ತದಾನ ಮಾಡಿದರು. 35 ಮಂದಿ ನೇತ್ರದಾನ ಮಾಡಲು ನೋಂದಾಯಿಸಿಕೊಂಡರು. 

  ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು. ಸಾರ್ವಜನಿಕರಿಗೆ ಪುನೀತ್ ರಾಜ್ಕುಮಾರ್ ಅವರು ಹೆಚ್ಚಾಗಿ ಇಷ್ಟಪಡುತ್ತಿದ್ದ ಬಿರಿಯಾನಿ ಹಾಗೂ ಮೊಟ್ಟೆ ಊಟ ನೀಡಲಾಯಿತು.

  ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಸರಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜಿ.ಎಸ್.ಶ್ರೀನಿವಾಸ್, ತಾಲ್ಲೂಕು ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ ಎಲ್ಲಾ ಸದ್ಯಸರು ಉಪಸ್ಥಿತರಿದ್ದರು.

ಚಾಕಪ್ಪಲ್ಲಿ ಗ್ರಾಮದ ಸಮೀಪ ಚಲಿಸುತ್ತಿದ್ದ ಕಾರು ಆಯತಪ್ಪಿ ಹಳ್ಳಕ್ಕೆ ಬಿದ್ದು ದಂಪತಿಯ ಸಾವು

ಶ್ರೀನಿವಾಸಪುರ: ತಾಲ್ಲೂಕಿನ ಚಾಕಪ್ಪಲ್ಲಿ ಗ್ರಾಮದ ಸಮೀಪ ಶುಕ್ರವಾರ ಬೆಳಿಗ್ಗೆ ಚಲಿಸುತ್ತಿದ್ದ ಕಾರೊಂದು ಆಯತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದ ಪರಿಣಾಮವಾಗಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಆಂಧ್ರಪ್ರದೇಶದ ಮದನಪಲ್ಲಿಯ ಶೇಖ್ ಷಫಿವುಲ್ಲಾ (62), ಶಾಹೀನಾ ಬೇಗಂ (55) ಮೃತರು. ಅವರು ತಮ್ಮ ಮಗಳನ್ನು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಿಟ್ಟಿ ಹಿಂದಿರುಗುವಾಗ ಘಟನೆ ನಡೆದಿದೆ. ಮೃತ ದೇಹಗಳನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಡಿವೈಎಸ್‍ಪಿ ಜಯಶಂಕರ್, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ದಯಾನಂದ, ಗೌನಿಪಲ್ಲಿ ಠಾಣೆ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ರಾಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಿತ್ರಸಂಗಮದ ರಜತ್ಸೋವದಲ್ಲಿ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಗೆ ಸನ್ಮಾನ

ಕುಂದಾಪುರ:ನಿಮ್ಮ ಜೊತೆ ಸೇರಿ ನನಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಸಂತೋಷದ ವಿಷಯವಾಗಿದೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಮಿತ್ರಸಂಗಮ ಸಂಸ್ಥೆ ಜನಪರ ಕಾರ್ಯಗಳನ್ನು ಸಮಾಜಕ್ಕೆ ನೀಡುತ್ತಾ ಆಶಕ್ತರಿಗೆ ನೆರವು ನೀಡಿ ಸಮಾಜ ಮುಖಿಯಾಗಿ ತನ್ನದೇ ಆದ ವಿಶಿಷ್ಠ ಸೇವೆಯನ್ನು ನೀಡಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ, ಗ್ರಾಮಗಳ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮುಖ್ಯ ಎಂದು ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.
“ಸನ್ಮಾನ ಎನ್ನುವುದು ಎಂದಿಗೂ ನನಗೆ ಖುಷಿ ಕೊಡುವುದಿಲ್ಲ” ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಬೀಜಾಡಿ ಗೋಪಾಡಿ ಮಿತ್ರಸಂಗಮದ ರಜತ ಮಹೋತ್ಸವದ ಅಂಗವಾಗಿ ಊರ ಗೌರವದ ನಮ್ಮೂರ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮಿತ್ರಸಂಗಮದ ಗೌರವಧ್ಯಕ್ಷ ವಾದಿರಾಜ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶಿ೯ ರಾಜೇಶ್ ಆಚಾರ್, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ದೀಪಾನಂದ ಉಪಾಧ್ಯಾಯ ಉಪಸ್ಥಿತರಿದ್ದರು.
ಗಣೇಶ್ ಐಶ್ವರ್ಯ ಬೀಜಾಡಿ ಸ್ವಾಗತಿಸಿದರು. ಮಿತ್ರಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪಾಂಡುರಂಗ ಬೀಜಾಡಿ ವಂದಿಸಿದರು.

ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತ

ಕೋಲಾರ:- ತಾಲ್ಲೂಕಿನಾದ್ಯಂತ ಬಿದ್ದ ಆಲಿಕಲ್ಲು ಮಳೆಯಿಂದ ಸತತ ಎರಡು ತಿಂಗಳಿಂದ ಬೆಂಕಿಯ ಕಾವಲಿಯಾಗಿದ್ದ ಇಳೆ ತಂಪಾದರೂ, ಅನೇಕ ಕಡೆ ಟಮೋಟೋ,ಮಾವುಮತ್ತಿತರ ಬೆಳೆಗಳಿಗೆ ಹಾನಿಯಾದ ವರದಿಯಾಗಿದೆ.
ಸಂಜೆ ಸುಮಾರು 5-30ರ ಸುಮಾರಿಗೆ ಆರಂಭಗೊಂಡ ಮಳೆ ಕೇವಲ 20 ನಿಮಿಷ ಸುರಿಯಿತಾದರೂ ಮಳೆಯ ರಭಸ ಹಾಗೂ ಆಲಿಕಲ್ಲಿಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಮಳೆ ಜತೆಗೆ ಬಿರುಗಾಳಿ ಬೀಸಿದ್ದರಿಂದಾಗಿ ಗಾಳಿಯ ಹೊಡೆತಕ್ಕೆ ಅನೇಕ ಕಡೆ ತೋಟಗಾರಿಕಾ ಬೆಳೆಗಳು ನಾಶವಾಗಿದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಕಷ್ಟಕ್ಕೀಡಾಯಿತು.

ಅಕ್ರಮ ಎಂದೇಳಿ ವಶಪಡಿಸಿಕೊಂಡಿದ್ದ ಆಹಾರ ಧಾನ್ಯ ಮಳೆಯಿಂದ ನೀರುಪಾಲು- ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ-ಬ್ಯಾಲಹಳ್ಳಿ ಗೋವಿಂದಗೌಡ ಆಕ್ರೋಷ

ಕೋಲಾರ;- ಅಧಿಕಾರಿಗಳ ನಿರ್ಲಕ್ಷದಿಂದಾಗಿ ಯುಗಾದಿಗೆ ಬಡವರ ಮನೆಯಲ್ಲಿ ಯುಗಾದಿ ಹಬ್ಬದಂದು ಹಸಿವು ನೀಗಿಸಿ ಸಂಭ್ರಮಕ್ಕೆ ಕಾರಣವಾಗಬೇಕಾಗಿದ್ದ ಲಕ್ಷಾಂತರ ಮೌಲ್ಯದ ಅಕ್ಕಿ, ಬೇಳೆ, ಬೆಲ್ಲ ಮಳೆಯಿಂದಾಗಿ ನೀರುಪಾಲದ ಘಟನೆ ಗುರುವಾರ ನಡೆದಿದೆ.
ಕಳೆದ ಮಾ.9 ರಂದು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಧಾಳಿ ಹಡೆಸಿ ಅಕ್ರಮ ದಾಸ್ತಾನು ಹಾಗೂ ಚುನಾವಣೆ ಹಿನ್ನೆಲೆ ವಶಕ್ಕೆ ಪಡೆದಿದ್ದ ಆಹಾರ ಧಾನ್ಯಗಳು ಇಂದು ದಿಢೀರನೆ ಸುರಿದ ಭಾರಿ ಆಲಿಕಲ್ಲು ಮಳೆಗೆ ನೀರುಪಾಲಾಗಿದ್ದು, ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಕೋಲಾರ,ಚಿಕ್ಕಬಳ್ಳಾಫುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಆಗ್ರಹಿಸಿದ್ದಾರೆ.
ಇತ್ತೀಚೆಗೆ ತಾಲ್ಲೂಕಿನ ಬ್ಯಾಲಹಳ್ಳಿಯ ಶ್ರೀನಾಥ್ ಎಂಬುವವರ ಶೆಡ್‍ನಲ್ಲಿ ಜನತೆಗೆ ಯುಗಾದಿ ಹಬ್ಬಕ್ಕೆಂದು ಹಂಚಲು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಪುಡ್‍ಕಿಟ್ ಸಿದ್ದಪಡಿಸಲು ಮುಂದಾಗಿದ್ದರು. ಇದನ್ನು ಸಹಿಸದ ಅಧಿಕಾರಿಗಳು ಧಾಳಿ ನಡೆಸಿ ಆಹಾರಧಾನ್ಯ,ದಿನಸಿಯನ್ನು ವಶಪಡಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಬಡ ಜನರ ಊಟವಾಗಬೇಕಾಗಿದ್ದ ಈ ಆಹಾರ ಧಾನ್ಯಗಳನ್ನು ಮಳೆ,ಬಿಸಿಲಿಂದ ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಮೊದಲೇ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಇಂದು ಬಿದ್ದ ಮಳೆಗೆ ಲಕ್ಷಾಂತರ ಮೌಲ್ಯದ ಈ ಆಹಾರಧಾನ್ಯಗಳು ನೀರುಪಾಲಾಗಿದೆ ಎಂದು ಗೋವಿಂದಗೌಡ ದೂರಿದರು.
ಕೋಲಾರ ತಾಲ್ಲೂಕು ಬ್ಯಾಲಹಳ್ಳಿ ಗ್ರಾಮದಲ್ಲಿ ದಾಳಿ ಮಾಡಿ ವಶ ಪಡಿಸಿಕೊಂಡಿದ್ದ ಆಹಾರ ಧಾನ್ಯಗಳು,ಕೆಜಿಎಫ್ ಶಾಸಕಿ ರೂಪಕಲಾ ಅವರಿಗೆ ಸೇರಿದ್ದು, ಕೆಜಿಎಫ್ ಕ್ಷೇತ್ರದಲ್ಲಿನ ಬಡ ಜನತೆಗೆ ಯುಗಾದಿ ಆಚರಣೆಗೆ ವಿತರಿಸಲು ಕ್ರಮವಹಿಸಲಾಗಿತ್ತು. ಆದರೆ ಸುಳ್ಳು ಆರೋಪದಡಿ ವಶಪಡಿಸಿಕೊಂಡ ಅಧಿಕಾರಿಗಳು ಅದರ ಸುರಕ್ಷತೆಗೂ ಒತ್ತು ನೀಡಬೇಕಾಗಿತ್ತು ಆದರೆ ಆ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.
ಒಂದು ವಾರದ ಹಿಂದೆ ವಶಕ್ಕೆ ಪಡೆದಿದ್ದ ಆಹಾರ ಸಾಮಗ್ರಿಗಳನ್ನು ಸ್ಥಳಾಂತರ ಮಾಡದ ಅಧಿಕಾರಿಗಳ ಬೇಜಾವಬ್ದಾರಿಯಿಂದಾಗಿಯೇ ಇಂದು ಆಹಾರ ಧಾನ್ಯಗಳು ನೀರುಪಾಲಾಗಿದೆ, ಈ ನಷ್ಟವನ್ನು ಅಧಿಕಾರಿಗಳೇ ತುಂಬಿಕೊಡಲು ಆಗ್ರಹಿಸಿದ ಅವರು, ಬಡವರ ಹೊಟ್ಟೆ ಮೇಲೆ ಬರೆ ಹಾಕುವ ಕೆಲಸ ಖಂಡನೀಯ ಎಂದು ಕಿಡಿಕಾರಿದರು.
ಮಳೆ ನಿಂತ ನಂತರ ನೂರಾರು ಮಂದಿ ಅಲ್ಲಿಗೆ ಭೇಟಿ ನೀಡಿ, ಆಹಾರ ಧಾನ್ಯಗಳು ಮಳೆಯಿಂದ ನೀರುಪಾಲಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದರು.

ಮಾರ್ಚ್ 17ರಂದು ಬೆಳ್ಮಣ್ಣು ಜೇಸಿಐ ಘಟಕಕ್ಕೆ ಭಾರತೀಯ ಜೇಸಿಐನ ರಾಷ್ಟೀಯ ಉಪಾಧ್ಯಕ್ಷರ ಅಧಿಕೃತ ಭೇಟಿ ಸಮಾರಂಭ

ಭಾರತೀಯ ಜೇಸಿಐನ ವಲಯ 15ರಲ್ಲಿ ಹಿರಿಯ ಘಟಕಗಳಲ್ಲಿ ಒಂದಾದ ಜೇಸಿಐ ಬೆಳ್ಮಣ್ಣು ಘಟಕಕ್ಕೆ ಭಾರತೀಯ ಜೇಸಿಐನ ರಾಷ್ಟೀಯ ಉಪಾಧ್ಯಕ್ಷರಾದ ಡಾ. ಸುಶಾಂತ್ ಅವರು ಮಾರ್ಚ್ 17ರಂದು ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬೆಳ್ಮಣ್ಣು ಜಂತ್ರ ಶಿವಗಿರಿ ಬಳಿ ನವೀಕರಣಗೊಳಿಸಿದ ಪ್ರಯಾಣಿಕರ ತಂಗುದಾಣ ಶಾಶ್ವತ ಯೋಜನೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ರಮೇಶ್ ಕುಮಾರ್ 4 ಬಾರಿ ಶಾಸಕರಾಗಿ 2 ಬಾರಿ ಸ್ವೀಕರ್ ಆಗಿ ಮಂತ್ರಿಯಾಗಿ ಈ ಪಟ್ಟಣಕ್ಕೆ ನಿಮ್ಮ ಕೊಡುಗೆ ಏನು: ಜಿ.ಕೆ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮಿಸ್ಟರ್ ರಮೇಶ್ ಕುಮಾರ್ 4 ಬಾರಿ ಶಾಸಕರಾಗಿ 2 ಬಾರಿ ಸ್ವೀಕರ್ ಆಗಿ ಮಂತ್ರಿಯಾಗಿ ಈ ಪಟ್ಟಣಕ್ಕೆ ನಿಮ್ಮ ಕೊಡುಗೆ ಏನೆಂದು ಪ್ರಶ್ನಿಸಿದ ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ.
ಪಟ್ಟಣದ ಅಂಬೇಡ್ಕರ್ ಪಾಳ್ಯ, ಸಂತೆ ಮೈದಾನ, ಹಳೇಪೇಟೆ, ಶಂಕರಮಠ, ರಾಮಕ್ರಷ್ಣಾರಸ್ತೆ, ಕಟ್ಟೆಕೆಳಗಿನಪಾಳ್ಯ, ಮಾರುತಿ ನಗರ, ವಾರ್ಡಗಳಲ್ಲಿ ಅದ್ದೂರಿಯಾಗಿ ಪಟಾಕಿಗಳನ್ನು ಸಿಡಿಸಿ ಪುಷ್ಪಮಾಲೆಗಳನ್ನು ಹಾಕಿ ಜೈ ಕಾರಗಳನ್ನು ಕೂಗುತ್ತಾ ಬರಮಾಡಿಕೊಂಡು ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೆಂಕಟಶಿವಾರೆಡ್ಡಿ, ಈ ಪಟ್ಟಣದ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನೂ ಇಲ್ಲಾ ಕೇವಲ ಸುಳ್ಳು ಬರವಸೆಗಳನ್ನು ಹೇಳುತ್ತಾ ಜನರನ್ನು ಮರಳು ಮಾಡುತ್ತಿದ್ದೀಯಾ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ, ಪುರಸಭೆ ಕಾಂಪ್ಲೆಕ್ಸ್, ಕಛೇರಿ, ನೂತನ ಬಸ್ ನಿಲ್ದಾಣ, ನ್ಯಾಯಾಲಯ, ನನ್ನ ಅವದಿಯಲ್ಲಿ ಆಗಿದ್ದು ನನ್ನ ಅಧಿಕಾರ ಅವದಿಯಲ್ಲಿ ಹಗಲಿರುಳು ಶ್ರಮಿಸಿ ಪಟ್ಟಣದ ಎಲ್ಲಾ ವಾರ್ಡಗಳ ಅಭಿವೃದ್ದಿಗಾಗಿ ಕೋಟ್ಯಾಂತರ ರೂಗಳನ್ನು ತಂದಿದ್ದು ನಾನೇ ಎಂದರು.