ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತ

ಕೋಲಾರ:- ತಾಲ್ಲೂಕಿನಾದ್ಯಂತ ಬಿದ್ದ ಆಲಿಕಲ್ಲು ಮಳೆಯಿಂದ ಸತತ ಎರಡು ತಿಂಗಳಿಂದ ಬೆಂಕಿಯ ಕಾವಲಿಯಾಗಿದ್ದ ಇಳೆ ತಂಪಾದರೂ, ಅನೇಕ ಕಡೆ ಟಮೋಟೋ,ಮಾವುಮತ್ತಿತರ ಬೆಳೆಗಳಿಗೆ ಹಾನಿಯಾದ ವರದಿಯಾಗಿದೆ.
ಸಂಜೆ ಸುಮಾರು 5-30ರ ಸುಮಾರಿಗೆ ಆರಂಭಗೊಂಡ ಮಳೆ ಕೇವಲ 20 ನಿಮಿಷ ಸುರಿಯಿತಾದರೂ ಮಳೆಯ ರಭಸ ಹಾಗೂ ಆಲಿಕಲ್ಲಿಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಮಳೆ ಜತೆಗೆ ಬಿರುಗಾಳಿ ಬೀಸಿದ್ದರಿಂದಾಗಿ ಗಾಳಿಯ ಹೊಡೆತಕ್ಕೆ ಅನೇಕ ಕಡೆ ತೋಟಗಾರಿಕಾ ಬೆಳೆಗಳು ನಾಶವಾಗಿದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಕಷ್ಟಕ್ಕೀಡಾಯಿತು.

ಅಕ್ರಮ ಎಂದೇಳಿ ವಶಪಡಿಸಿಕೊಂಡಿದ್ದ ಆಹಾರ ಧಾನ್ಯ ಮಳೆಯಿಂದ ನೀರುಪಾಲು- ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ-ಬ್ಯಾಲಹಳ್ಳಿ ಗೋವಿಂದಗೌಡ ಆಕ್ರೋಷ

ಕೋಲಾರ;- ಅಧಿಕಾರಿಗಳ ನಿರ್ಲಕ್ಷದಿಂದಾಗಿ ಯುಗಾದಿಗೆ ಬಡವರ ಮನೆಯಲ್ಲಿ ಯುಗಾದಿ ಹಬ್ಬದಂದು ಹಸಿವು ನೀಗಿಸಿ ಸಂಭ್ರಮಕ್ಕೆ ಕಾರಣವಾಗಬೇಕಾಗಿದ್ದ ಲಕ್ಷಾಂತರ ಮೌಲ್ಯದ ಅಕ್ಕಿ, ಬೇಳೆ, ಬೆಲ್ಲ ಮಳೆಯಿಂದಾಗಿ ನೀರುಪಾಲದ ಘಟನೆ ಗುರುವಾರ ನಡೆದಿದೆ.
ಕಳೆದ ಮಾ.9 ರಂದು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಧಾಳಿ ಹಡೆಸಿ ಅಕ್ರಮ ದಾಸ್ತಾನು ಹಾಗೂ ಚುನಾವಣೆ ಹಿನ್ನೆಲೆ ವಶಕ್ಕೆ ಪಡೆದಿದ್ದ ಆಹಾರ ಧಾನ್ಯಗಳು ಇಂದು ದಿಢೀರನೆ ಸುರಿದ ಭಾರಿ ಆಲಿಕಲ್ಲು ಮಳೆಗೆ ನೀರುಪಾಲಾಗಿದ್ದು, ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಕೋಲಾರ,ಚಿಕ್ಕಬಳ್ಳಾಫುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಆಗ್ರಹಿಸಿದ್ದಾರೆ.
ಇತ್ತೀಚೆಗೆ ತಾಲ್ಲೂಕಿನ ಬ್ಯಾಲಹಳ್ಳಿಯ ಶ್ರೀನಾಥ್ ಎಂಬುವವರ ಶೆಡ್‍ನಲ್ಲಿ ಜನತೆಗೆ ಯುಗಾದಿ ಹಬ್ಬಕ್ಕೆಂದು ಹಂಚಲು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಪುಡ್‍ಕಿಟ್ ಸಿದ್ದಪಡಿಸಲು ಮುಂದಾಗಿದ್ದರು. ಇದನ್ನು ಸಹಿಸದ ಅಧಿಕಾರಿಗಳು ಧಾಳಿ ನಡೆಸಿ ಆಹಾರಧಾನ್ಯ,ದಿನಸಿಯನ್ನು ವಶಪಡಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಬಡ ಜನರ ಊಟವಾಗಬೇಕಾಗಿದ್ದ ಈ ಆಹಾರ ಧಾನ್ಯಗಳನ್ನು ಮಳೆ,ಬಿಸಿಲಿಂದ ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಮೊದಲೇ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಇಂದು ಬಿದ್ದ ಮಳೆಗೆ ಲಕ್ಷಾಂತರ ಮೌಲ್ಯದ ಈ ಆಹಾರಧಾನ್ಯಗಳು ನೀರುಪಾಲಾಗಿದೆ ಎಂದು ಗೋವಿಂದಗೌಡ ದೂರಿದರು.
ಕೋಲಾರ ತಾಲ್ಲೂಕು ಬ್ಯಾಲಹಳ್ಳಿ ಗ್ರಾಮದಲ್ಲಿ ದಾಳಿ ಮಾಡಿ ವಶ ಪಡಿಸಿಕೊಂಡಿದ್ದ ಆಹಾರ ಧಾನ್ಯಗಳು,ಕೆಜಿಎಫ್ ಶಾಸಕಿ ರೂಪಕಲಾ ಅವರಿಗೆ ಸೇರಿದ್ದು, ಕೆಜಿಎಫ್ ಕ್ಷೇತ್ರದಲ್ಲಿನ ಬಡ ಜನತೆಗೆ ಯುಗಾದಿ ಆಚರಣೆಗೆ ವಿತರಿಸಲು ಕ್ರಮವಹಿಸಲಾಗಿತ್ತು. ಆದರೆ ಸುಳ್ಳು ಆರೋಪದಡಿ ವಶಪಡಿಸಿಕೊಂಡ ಅಧಿಕಾರಿಗಳು ಅದರ ಸುರಕ್ಷತೆಗೂ ಒತ್ತು ನೀಡಬೇಕಾಗಿತ್ತು ಆದರೆ ಆ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.
ಒಂದು ವಾರದ ಹಿಂದೆ ವಶಕ್ಕೆ ಪಡೆದಿದ್ದ ಆಹಾರ ಸಾಮಗ್ರಿಗಳನ್ನು ಸ್ಥಳಾಂತರ ಮಾಡದ ಅಧಿಕಾರಿಗಳ ಬೇಜಾವಬ್ದಾರಿಯಿಂದಾಗಿಯೇ ಇಂದು ಆಹಾರ ಧಾನ್ಯಗಳು ನೀರುಪಾಲಾಗಿದೆ, ಈ ನಷ್ಟವನ್ನು ಅಧಿಕಾರಿಗಳೇ ತುಂಬಿಕೊಡಲು ಆಗ್ರಹಿಸಿದ ಅವರು, ಬಡವರ ಹೊಟ್ಟೆ ಮೇಲೆ ಬರೆ ಹಾಕುವ ಕೆಲಸ ಖಂಡನೀಯ ಎಂದು ಕಿಡಿಕಾರಿದರು.
ಮಳೆ ನಿಂತ ನಂತರ ನೂರಾರು ಮಂದಿ ಅಲ್ಲಿಗೆ ಭೇಟಿ ನೀಡಿ, ಆಹಾರ ಧಾನ್ಯಗಳು ಮಳೆಯಿಂದ ನೀರುಪಾಲಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದರು.

ಮಾರ್ಚ್ 17ರಂದು ಬೆಳ್ಮಣ್ಣು ಜೇಸಿಐ ಘಟಕಕ್ಕೆ ಭಾರತೀಯ ಜೇಸಿಐನ ರಾಷ್ಟೀಯ ಉಪಾಧ್ಯಕ್ಷರ ಅಧಿಕೃತ ಭೇಟಿ ಸಮಾರಂಭ

ಭಾರತೀಯ ಜೇಸಿಐನ ವಲಯ 15ರಲ್ಲಿ ಹಿರಿಯ ಘಟಕಗಳಲ್ಲಿ ಒಂದಾದ ಜೇಸಿಐ ಬೆಳ್ಮಣ್ಣು ಘಟಕಕ್ಕೆ ಭಾರತೀಯ ಜೇಸಿಐನ ರಾಷ್ಟೀಯ ಉಪಾಧ್ಯಕ್ಷರಾದ ಡಾ. ಸುಶಾಂತ್ ಅವರು ಮಾರ್ಚ್ 17ರಂದು ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬೆಳ್ಮಣ್ಣು ಜಂತ್ರ ಶಿವಗಿರಿ ಬಳಿ ನವೀಕರಣಗೊಳಿಸಿದ ಪ್ರಯಾಣಿಕರ ತಂಗುದಾಣ ಶಾಶ್ವತ ಯೋಜನೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ರಮೇಶ್ ಕುಮಾರ್ 4 ಬಾರಿ ಶಾಸಕರಾಗಿ 2 ಬಾರಿ ಸ್ವೀಕರ್ ಆಗಿ ಮಂತ್ರಿಯಾಗಿ ಈ ಪಟ್ಟಣಕ್ಕೆ ನಿಮ್ಮ ಕೊಡುಗೆ ಏನು: ಜಿ.ಕೆ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮಿಸ್ಟರ್ ರಮೇಶ್ ಕುಮಾರ್ 4 ಬಾರಿ ಶಾಸಕರಾಗಿ 2 ಬಾರಿ ಸ್ವೀಕರ್ ಆಗಿ ಮಂತ್ರಿಯಾಗಿ ಈ ಪಟ್ಟಣಕ್ಕೆ ನಿಮ್ಮ ಕೊಡುಗೆ ಏನೆಂದು ಪ್ರಶ್ನಿಸಿದ ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ.
ಪಟ್ಟಣದ ಅಂಬೇಡ್ಕರ್ ಪಾಳ್ಯ, ಸಂತೆ ಮೈದಾನ, ಹಳೇಪೇಟೆ, ಶಂಕರಮಠ, ರಾಮಕ್ರಷ್ಣಾರಸ್ತೆ, ಕಟ್ಟೆಕೆಳಗಿನಪಾಳ್ಯ, ಮಾರುತಿ ನಗರ, ವಾರ್ಡಗಳಲ್ಲಿ ಅದ್ದೂರಿಯಾಗಿ ಪಟಾಕಿಗಳನ್ನು ಸಿಡಿಸಿ ಪುಷ್ಪಮಾಲೆಗಳನ್ನು ಹಾಕಿ ಜೈ ಕಾರಗಳನ್ನು ಕೂಗುತ್ತಾ ಬರಮಾಡಿಕೊಂಡು ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೆಂಕಟಶಿವಾರೆಡ್ಡಿ, ಈ ಪಟ್ಟಣದ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನೂ ಇಲ್ಲಾ ಕೇವಲ ಸುಳ್ಳು ಬರವಸೆಗಳನ್ನು ಹೇಳುತ್ತಾ ಜನರನ್ನು ಮರಳು ಮಾಡುತ್ತಿದ್ದೀಯಾ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ, ಪುರಸಭೆ ಕಾಂಪ್ಲೆಕ್ಸ್, ಕಛೇರಿ, ನೂತನ ಬಸ್ ನಿಲ್ದಾಣ, ನ್ಯಾಯಾಲಯ, ನನ್ನ ಅವದಿಯಲ್ಲಿ ಆಗಿದ್ದು ನನ್ನ ಅಧಿಕಾರ ಅವದಿಯಲ್ಲಿ ಹಗಲಿರುಳು ಶ್ರಮಿಸಿ ಪಟ್ಟಣದ ಎಲ್ಲಾ ವಾರ್ಡಗಳ ಅಭಿವೃದ್ದಿಗಾಗಿ ಕೋಟ್ಯಾಂತರ ರೂಗಳನ್ನು ತಂದಿದ್ದು ನಾನೇ ಎಂದರು.

ಕಾಳ್ಗಿಚ್ಚು ಹಂಚುವ ಕಿಡಿಗೇಡಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ರೈತ ಸಂಘ ಅಗ್ರಹ

ಕೋಲಾರ,ಮಾ.16: ಕಾಳ್ಗಿಚ್ಚು ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡುವ ಜೊತೆಗೆ ಕರಪತ್ರದ ಮುಖಾಂತರ ಜನ ಜಾಗೃತಿ ಮೂಡಿಸಿ ಕಾಳ್ಗಿಚ್ಚು ಹಂಚುವ ಕಿಡಿಗೇಡಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸುವಂತೆ ರೈತ ಸಂಘದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲಯ್ಯರವರಿಗೆ ಮನವಿ ನೀಡಿ ಅಗ್ರಹಿಸಲಾಯಿತು.
ಪ್ರತಿ ವರ್ಷ ಬೇಸಿಗೆ ಬಂತೆಂದರೆ ಅರಣ್ಯಕ್ಕೆ ಬೆಂಕಿಯ ಅಪಾಯವೂ ಬರುತ್ತದೆ ಎಂಬ ಮುಂಜಾಗ್ರತೆ ಇದ್ದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಯಾವುದೇ ಮುಂಜಾಗ್ರತ ಕ್ರಮ ವಹಿಸದೆ ಮೂಕ ಪ್ರಾಣಿಗಳ ಜೀವ ಜೊತೆ ಚೆಲ್ಲಾಟ ಆಡುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಸಂಪತ್ತಿನ ವನ್ಯ ಜೀವಿಗಳ ಮಾರಣ ಹೋಮ ಅಷ್ಟೇ ಅಲ್ಲ ಹಠಾತ್ ನೆರೆ ಹಾವಳಿಯ ಪ್ರಮಾಣವೂ ಹೆಚ್ಚುತ್ತದೆ ಏಕೆಂದರೆ ನೀರನ್ನು ಹೀರಿಕೊಳ್ಳುವ ಸೂಕ್ಷ್ಮ ರಂದ್ರಗಳೆಲ್ಲವೂ ಬೂದಿಯಲ್ಲಿ ಮುಚ್ಚಿ ಹೋಗುತ್ತದೆ. ಕಾಡಿನ ಬೆಂಕಿಗೆ ಕಾರಣಗಳು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗುವ ಜೊತೆಗೆ ಅರಣ್ಯ ಅತಿಕ್ರಮಣ, ಕಳ್ಳ ಕೃಷಿ, ಬೇಟೆಗಾರರ ಹಾವಳಿ , ಕೃಷಿ ತ್ಯಾಜ್ಯಗಳ ನಿರ್ಲಕ್ಷದ ವಿಲೇವಾರಿ ಹಾಗೂ ಮೋಜಿಗೆಂದೆ ಕಡ್ಡಿ ಗೀರುವವರ ಕೃತ್ಯದಿಂದಾಗಿ ಬೆಂಕಿ ಹಬ್ಬುತ್ತದೆ ಮಾನವೀಯತೆ ಇಲ್ಲದ ಮನುಷ್ಯನ ಒಂದು ನಿಮಿಷದ ಚೆಲ್ಲಾಟ ಮೂಖ ಪ್ರಾಣಿಗಳ ಆಕ್ರಂದನ ಶಾಪವಾಗಿ ಪರಿಣಮಿಸುತ್ತದೆ ಎಂದು ಆರೋಪ ಮಾಡಿದರು.
ಅರಣ್ಯಕ್ಕೆ ಬೆಂಕಿ ಬಿದ್ದಾಗ ಹತೋಟಿಗೆ ತರಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತ ಜೊತೆಗೆ ಯಾವುದೇ ಗುಣಮಟ್ಟದ ಉಪಕರಣಗಳಿಲ್ಲ ಸಾವಿರಾರು ಹೆಕ್ಟೆರ್ ಅರಣ್ಯದಲ್ಲಿ ಬೆಂಕಿ ನಂದಿಸಲು ಅಷ್ಟೇ ಸಾಮಥ್ರ್ಯವುಳ್ಳ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅರಣ್ಯ ಸಿಬ್ಬಂದಿಯ ಪ್ರಾಣ ಹಾಗೂ ಅರಣ್ಯ ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕೆಂದು ಸಲಹೆ ನಿಡಿದರು.
ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಬೇಸಿಗೆಯಲ್ಲಿ ಬೆಂಕಿ ಎಂಬುದು ಅರಣ್ಯಕ್ಕೆ ಸೀಮಿತವಾಗದೆ ಕೃಷಿ ಕ್ಷೇತ್ರದ ಬಿಡು ಬಿದ್ದಿರುವ ಕಡೆ ಬೆಂಕಿ ಕಡ್ಡಿ ಗೀಚುವ ಕಿಡಿಗೇಡಿಗಳಿಂದ ರೈತರು ಕೃಷಿ ಭೂಮಿಗೆ ಬೆಂಕಿ ತಗುಲಿ ಡ್ರಿಪ್ , ಮಲ್ಚಿಂಗ್ ಪೇಪರ್ ಜೊತೆಗೆ ಕೈಗೆ ಬಂದ ಬೆಳೆ ನಾಶವಾಗುತ್ತಿದೆ. ಇದರಿಂದ ರೈತರಿಗೂ ಲಕ್ಷಾಂತರ ರೂ ನಷ್ಟ ಉಂಟಾಗುತ್ತಿದೆ ಎಂಧು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಕಾಳ್ಗಿಚ್ಚು ಬಗ್ಗೆ ಅರಣ್ಯ ಇಲಾಖೆ ಕರಪತ್ರದ ಮೂಲಕ ಜನ ಜಾಗೃತಿ ಮೂಡಿಸಿ ಅರದಲ್ಲೂ ಅರಣ್ಯ ಪಕ್ಕದಲ್ಲಿರುವ ಹಳ್ಳಿಗಳ ಜನರಲ್ಲಿ ಜಾಗೃತಿ ಮೂಡಬೇಕು, ಮತ್ತು ಬೇಸಿಗೆ ಕಳೆಯುವವರೆಗೂ ಜಿಲ್ಲಾದ್ಯಂತ ಅರಣ್ಯ ಗಸ್ತು ಸಮಿತಿ ತಂಡ ರಚನೆ ಮಾಡಿ ಬೆಂಕಿ ಹಚ್ಚುವ ಕಿಡಿಗೇಡಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಅರಣ್ಯ ಹಾಗೂ ಮೂಕ ಪ್ರಾಣಿಗಳ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು
ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಧ ಏಡುಕೊಂಡಲಯ್ಯರವರು ಬೆಂಕಿ ನಿಯಂತ್ರಣಕ್ಕೆ ಸಿಬ್ಬಂದಿ ಹಗಲಿರಳು ಕೆಲಸ ನಿರ್ವಹಿಸುತ್ತಿದ್ದಾರೆ ಕರಪತ್ರದ ಮುಖಾಂತರ ಜನಜಾಗೃತಿ ಮೂಡಿಸಿ ಅರಣ್ಯ ಉಳಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾ.ಅ ಯಲುವಳ್ಳಿ ಪ್ರಬಾಕರ್, ಮಂಗಸಂದ್ರ ತಿಮ್ಮಣ್ಣ, ಮಾಸ್ತಿ ಹರೀಶ್, ಪೆಮ್ಮದೊಡ್ಡಿ ಯಲ್ಲಪ್ಪ, ಪಾರುಕ್‍ಪಾಷ, ಬಂಗಾರಿ ಮಂಜು, ವಿಜಯಪಾಲ್, ವೆಂಕಟೇಶ್, ಸಂದೀಪ್‍ರೆಡ್ಡಿ, ರಾಮಸಾಗರ ವೇಣು, ವೆಂಕಟೇಶಪ್ಪ,ಭಾಸ್ಕರ್, ಚಲ, ಸುನಿಲ್‍ಕುಮಾರ್, ಶೈಲ, ನಾಗರತ್ನ, ಚೌಡಮ್ಮ, ಗೀರಿಶ್ ಮುಂತಾದವರಿದ್ದರು.