ಶ್ರೀನಿವಾಸಪುರ 2 : ಸಣ್ಣ ಪುಟ್ಟ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಮುಖಂಡ ಕಾರ್ಯದರ್ಶಿ ವೀರಭದ್ರಸ್ವಾಮಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಧರಣಿ ನಡೆಸಿ ಪ್ರತಿಭಟಿಸಿ ಮಾತನಾಡಿದರು.
ಐವತ್ತು ಆರವತ್ತು ವರ್ಷಗಳ ಹಿಂದೆ ಖರೀದಿ ಮಾಡಿ ಸಾಗುವಳಿ ಮಾಡುತ್ತಿರುವ ಸಣ್ಣ ಪುಟ್ಟ ರೈತರ ಜಮೀನಗಳನ್ನು ಪದೇ ಪದೇ ಸೆಟಲೈಟ್ ಸರ್ವೆ ನೆಪದಲ್ಲಿ ಗುರುತು ಹಾಕಿ ಅರ್ಧ ಎಕರೆ ಮುಕ್ಕಾಲು ಎಕರೆ ಬಿಡಬೇಕು ಎಂದು ತೊಂದರೆ ನೀಡುತ್ತಾರೆ ಎಂದು ಆರೋಪಿಸಿದರು.
ರೈತ ಸಂಘ ಹಾಗು ಹಸಿರು ಸೇನೆ ತಾಲೂಕು ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ಮಾತನಾಡಿ ದಶಕಗಳ ಹಿಂದೆಯೆ ಅರಣ್ಯ ಇಲಾಖೆ ತಮ್ಮ ಅರಣ್ಯ ಭೂಮಿಯನ್ನು ಗಡಿ ಗುರುತು ಮಾಡಿ ಕಲ್ಲು ನೆಟ್ಟಿದ್ದರು. ಈಗ ಮತ್ತೆ ಹೊಸದಾಗಿ ಸೆಟಲೈಟ್ ಸರ್ವೆ ಹೆಸರಿನಲ್ಲಿ ಕಿರುಕಳ ನೀಡುತ್ತಿದ್ದಾರೆ ಎಂದರು. ಸರ್ವೆ ಮಾಡುವುದಾದರೆ ಕಂದಾಯ ಇಲಾಖೆ, ಅರಣ್ಯ ಇಲಾಖೆ ಜೊತೆಯಲ್ಲಿ ಸರ್ವೆ ಮಾಡಲಿ ಎಂದರು.
ಇತ್ತೀಚಿಗೆ ನವಿಲು, ಜಿಂಕೆಗಳು ಮುಂತಾದ ಕಾಡು ಪ್ರಾಣಿಗಳಿಂದ ಉಪಟಳಗಳಿಂದ ರೈತರು ನಷ್ಟಕ್ಕೆ ಒಳಗಾಗಿರುವ ಬಗ್ಗೆ ಅರಣ್ಯ ಇಲಾಖೆಯವರು ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದರು.
ರೈತ ಸಂಘದ ಪ್ರತಿಭಟನೆ ಮಾಹಿತಿ ಇದ್ದರೂ ಸಹ ಅರಣ್ಯ ಇಲಾಖೆ ಕಚೇರಿಯಲ್ಲಿ ರೈತರ ಅಹವಾಲು ಸ್ವೀಕರಿಸಲು ಅಧಿಕಾರಿಗಳು ಇಲ್ಲದೆ ರೈತರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ಧ ಅಕ್ರೋಶಗೊಂಡ ರೈತರು ತಾಲೂಕು ಕಚೇರಿ ಮುಂಭಾಗದಲ್ಲಿನ ಮುಖ್ಯರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ತಾಲೂಕು ಉಪತಹಶೀಲ್ದಾರ್ ಜಯಾರಾಮ್, ಶಿರಸ್ತೆದಾರ್ ಮನೋರ್ಮಾನೆ, ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಿ ರೈತರ ಮನವೊಲಿಸಿ ಅವರಿಂದ ಅಹವಾಲು ಸ್ವೀಕರಿಸಿ , ಮುಂದಿನ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಮೌಲ, ಗಂಗಾಧರ್, ರಾಮೇಗೌಡ, ವಿನೋದ್ ,ರಮೇಶ್ ಈರಪ್ಪರೆಡ್ಡಿ, ಶ್ರೀಧರ್ ಇದ್ದರು.