ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:17ನೇ ವರ್ಷದ ಸಾರ್ವಜನಿಕ ಶ್ರೀ ಮಹಾಶಿವರಾತ್ರಿ ಸಂಭ್ರಮ, ಅಬ್ಬನಡ್ಕ ಭಜನಾ ಮಂಡಳಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ

ಅಬ್ಬನಡ್ಕ: ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೇತೃತ್ವದಲ್ಲಿ ಆದಿತ್ಯವಾರ ಕುಂಟಲಗುಂಡಿಯಲ್ಲಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ವೇದಿಕೆಯಲ್ಲಿ 17ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಮಹಾಶಿವರಾತ್ರಿ ಸಂಭ್ರಮ, ದ್ವಿತೀಯ ವರ್ಷದ ಭಜನೋತ್ಸವ ಸಂಭ್ರಮ, ಸನ್ಮಾನ ಕಾರ್ಯಕ್ರಮ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಸದಸ್ಯರೆಲ್ಲರನ್ನೂ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾರ್ಕಳ ತಾಲೂಕು ಭಜನಾ ಒಕ್ಕೂಟದ ಅಧ್ಯಕ್ಷರಾದ ಪಳ್ಳಿ ಶ್ರೀಕಾಂತ್ ಪ್ರಭು, ಕಾರ್ಕಳ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷರಾದ ಎರ್ಲಪಾಡಿ ಶ್ರೀನಿವಾಸ ಪ್ರಭು, ಉದ್ಯಮಿ ಹರೀಶ್ ನಂದಳಿಕೆ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದ ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಭಜನಾ ಮಂಡಳಿಯ ಅಧ್ಯಕ್ಷರಾದ ಸುಲೋಚನಾ ಕೋಟ್ಯಾನ್, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನಿಕಟ ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್, ಕಾರ್ಯದರ್ಶಿ ಲಲಿತಾ ಆಚಾರ್ಯ ಉಪಸ್ಥಿತಿತರಿದ್ದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಪ್ರಾರ್ಥನೆಗೈದರು, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು, ಪೂರ್ವಾಧ್ಯಕ್ಷ ಸುರೇಶ್ ಕಾಸ್ರಬೈಲು ಹಾಗೂ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸನ್ಮಾನಿತರ ಪರಿಚಯ ವಾಚಿಸಿದರು, ಸಂಘದ ನಿರ್ದೇಶಕರಾದ ಕಿರಣ್ ಶೆಟ್ಟಿ ವಂದಿಸಿದರು.

ಪಕಲ ಮಂಜರಪಲ್ಕೆ ಸಂತ ಅಂತೋನಿಯವರ ದೇವಾಲಯದ ನೂತನ ಕಟ್ಟಡಕ್ಕೆ ಬಿಷಪ್ ಜೆರಾಲ್ಡರಿಂದ ಶಿಲಾನ್ಯಾಸ

ಕಾರ್ಕಳ, ಫೆ.21: ಇಲ್ಲಿನ ಪಾಕಳದ ಮಂಜರಪಲ್ಕೆ ಸಂತ ಅಂತೋನಿಯವರ ದೇವಾಲಯಕ್ಕೆ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಫೆ.21ರ ಮಂಗಳವಾರದಂದು ಜರುಗಿತು.

ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಅವರು ಇತರ ಗಣ್ಯರೊಂದಿಗೆ ಶಿಲಾನ್ಯಾಸವನ್ನು ನೆರವೇರಿಸಿದರು.

ಇಲ್ಲಿನ ಸೇಂಟ್ ಅಂತೋನಿ ದೇವಸ್ಥಾನವು ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ, ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯು ತೀವ್ರವಾಗಿ ಬೆಳೆದಿದೆ, ಹೊಸ ಮತ್ತು ವಿಶಾಲವಾದ ದೇಗುಲದ ಅಗತ್ಯವನ್ನು ಪರಿಗಣಿಸಿ, ಹೊಸ ಕಟ್ಟಡದ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ 6.5 ಕೋಟಿ ರೂ.

ಇದೇ ಸಂದರ್ಭದಲ್ಲಿ ಸಂತ ಅಂತೋನಿಯವರಿಗೆ ಪವಿತ್ರ ಮಹಾಮಸ್ತಕಾಭಿಷೇಕ ಮತ್ತು ನೊವೆನಾ ಪ್ರಾರ್ಥನೆಗಳು ನಡೆದವು.

ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಈ ದೇಗುಲದಲ್ಲಿ ಕೇವಲ ಕ್ರೈಸ್ತರು ಮಾತ್ರವಲ್ಲದೆ ಅನ್ಯ ಧರ್ಮೀಯರೂ ಸಹ ಸಂತ ಅಂತೋನಿಯವರ ಕೃಪೆಗೆ ಪಾತ್ರರಾಗಿದ್ದಾರೆ. ಸೇಂಟ್ ಅಂತೋನಿ ತನ್ನ ಪವಾಡಗಳಿಗೆ ಹೆಸರುವಾಸಿಯಾಗಿದ್ದಾನೆ, ಅವನು ನಮ್ಮಲ್ಲಿ ಪ್ರತಿಯೊಬ್ಬರನ್ನು ಆಕರ್ಷಿಸುತ್ತಾನೆ ಮತ್ತು ನಮ್ಮನ್ನು ಯೇಸುಕ್ರಿಸ್ತನ ಬಳಿಗೆ ಕರೆದೊಯ್ಯುತ್ತಾನೆ. ಈ ಪ್ರಾರ್ಥನಾ ಮಂದಿರವು ಪ್ರಾರಂಭವಾಗಿ 50 ವರ್ಷಗಳನ್ನು ಪೂರೈಸುತ್ತಿದೆ. ಈಗಾಗಲೇ ಅನೇಕರು ಈ ಯೋಜನೆಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ ಮತ್ತು ಇನ್ನೂ ಕೆಲವರು ತಮ್ಮ ಬೆಂಬಲವನ್ನು ಖಾತ್ರಿಪಡಿಸಿದ್ದಾರೆ, ಅವರೆಲ್ಲರ ಮೇಲೆ ಭಗವಂತನ ಅನುಗ್ರಹವನ್ನು ನಾನು ಬಯಸುತ್ತೇನೆ. ಇಂಜಿನಿಯರ್ ದೀಪಕ್ ಪ್ರಾರ್ಥನಾ ಮಂದಿರವನ್ನು ಸುಂದರವಾಗಿ ವಿನ್ಯಾಸಗೊಳಿಸಿದ್ದಾರೆ. ಈ ದೇಗುಲಕ್ಕೆ ಬರುವ ಭಕ್ತರಿಗೆ ಸ್ಥಳಾವಕಾಶದ ಕೊರತೆ ಉಂಟಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಇಂದು ಕಟ್ಟಡಗಳನ್ನು ನಿರ್ಮಿಸುವುದು ಅಷ್ಟು ಸುಲಭವಲ್ಲ. ಈ ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಮಗೆ ಭಕ್ತರ ಬೆಂಬಲವೂ ಬೇಕು.

ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ಮಣ್ ಚರ್ಚ್‌ನ ಪ್ಯಾರಿಷ್ ಪಾದ್ರಿ ಫ್ರೆಡ್ರಿಕ್ ಮಸ್ಕರೇನ್ಹಸ್ “ಈ ಸ್ಥಳದಲ್ಲಿ ನಾನು ತಿಂಗಳಿನಿಂದ ಪಡೆದ ಸಹಕಾರಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಸಂತ ಅಂತೋನಿ ನಮ್ಮೆಲ್ಲರಿಗೂ ಆಶೀರ್ವಾದವನ್ನು ಧಾರೆಯೆರೆಯಲಿ. ಎಲ್ಲಾ ಭಕ್ತರು ಮತ್ತು ದಾನಿಗಳಿಗೂ ನಾನು ಧನ್ಯವಾದ ಹೇಳುತ್ತೇನೆ.

ಸಹಾಯಕ ಪ್ಯಾರಿಷ್ ಪಾಧರ್ ಅಂಕಿತ್ ಡಿಸೋಜ, ಶಿರ್ವ ವಲಯ ಪ್ರಧಾನರಾದ ವಂ| ಡಾ ಲೆಸ್ಲಿ ಡಿಸೋಜಾ, ಫಾದರ್ ಕ್ಲೆಮೆಂಟ್ ಮಸ್ಕರೇನ್ಹಸ್ , ಫಾದರ್ ವಲೇರಿಯನ್ ಡಿಸಿಲ್ವಾ, ಫಾದರ್ ಸದಾನಂದ್, ಸಿಸ್ಟರ್ ಮರೀನಾ, ಸುಪೀರಿಯರ್ ಕಾನ್ವೆಂಟ್ ,ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಗ್ರೆಗೊರಿ ಮೆನೆಜಸ್, ಕಾರ್ಯದರ್ಶಿ ಡೊಮಿನಿಕ್ ಆಂಡ್ರೇಡ್, ಸಂಚಾಲಕ, ಡೊಮಿನಿಕ್ ಆಂಡ್ರೇಡ್, 20 ಆಯೋಗಗಳ ಸಂಚಾಲಕ, ರೆಮಿಡಿಯಾ ಡಿಸೋಜಾ, ಅಲ್ಫೋನ್ಸೋ ಅಗೇರಾ, ಸಂಸ್ಥಾಪಕ ಸಮಿತಿ ಸದಸ್ಯರು, ಐರಿನ್ ಕ್ಯಾಸ್ಟೆಲಿನೊ, ಕುಟುಂಬದ ಸದಸ್ಯರಾದ ಐರಿನ್ ಕ್ಯಾಸ್ಟೆಲಿನೊ ಪವಾಡ ಮೂರ್ತಿ, ವಾಸ್ತುಶಿಲ್ಪಿ ದೀಪಕ್ ಡಿಸೋಜ, ಕಟ್ಟಡ ಸಮಿತಿ ಮತ್ತು ಹಣಕಾಸು ಸಮಿತಿಯ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮತದಾರರು ರಾಜ್ಯದ ಹಿತಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು : ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮತದಾರರು ರಾಜ್ಯದ ಹಿತಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಜೆವಿ ಕಾಲೋನಿಯಲ್ಲಿ ಬುಧವಾರ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ನಡೆಯುತ್ತಿರುವ ವಾಕ್ಸಮರ ಹಾಗೂ ಕಿತ್ತಾಟದಲ್ಲಿ ನಾಗರಿಕರು ಬಡವಾಗಿದ್ದಾರೆ. ಅಭಿವೃದ್ಧಿ ಶೂನ್ಯವಾಗುತ್ತಿದೆ ಎಂದು ಹೇಳಿದರು.
ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗುವುದು ಶತಸಿದ್ಧ. ಅವರು ಮುಖ್ಯ ಮಂತ್ರಿಯಾದ 24 ಗಂಟೆಗಳಲ್ಲಿ ಸ್ತ್ರೀ ಶಕ್ತಿ ಸಂಘಗಳು ಪಡೆದುಕೊಂಡಿರುವ ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಅವರು ನುಡಿದಂತೆ ನಡೆಯುತ್ತಾರೆ. ಅವರ ಕೈ ಬಲಪಡಿಸುವ ಹೊಣೆ ಮತದಾರರ ಮೇಲಿದೆ ಎಂದು ಹೇಳಿದರು.
‘ನಾನು ನಾಲ್ಕು ಬಾರಿ ಶಾಸಕನಾಗಿದ್ದರೂ ನನ್ನ ಆಸ್ತಿ ಪ್ರಮಾಣ ಹೆಚ್ಚಿಲ್ಲ. ಬೆಂಗಳೂರಿನಲ್ಲಿ ಇರುವ ಒಂದು ನಿವೇಶನದಲ್ಲಿ ಮನೆ ಕಟ್ಟಲು ಸಾಧ್ಯವಾಗಿಲ್ಲ. ತಂದೆಯಿಂದ ಬಂದ ಆಸ್ತಿಯಲ್ಲಿ ನೀವನ ನಿರ್ವಹಿಸುತ್ತಿದ್ದೇನೆ. ಜನರಿಗೆ ಇದರ ಅರಿವಿದೆ. ಬೇರೆಯವರ ವಿಚಾರವೂ ಗೊತ್ತಿದೆ. ಮತದಾರರು ಚುನಾವಣೆಯಲ್ಲಿ ಆಶೀರ್ವಾದ ಮಾಡಿದಲ್ಲಿ, ಅವರ ಕ್ಷೇಮಾಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ, ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ಸಾಲವಾಗಿ ನೀಡುತ್ತಿರುವುದು ನಬಾರ್ಡ್ ಬ್ಯಾಂಕ್ ಹಣ. ಕೇಂದ್ರ ಸರ್ಕಾರದ ಕೊಡುಗೆ. ಆದರೆ ಕೆಲವರು ತಮ್ಮ ಜೇಬಿನಿಂದ ನೀಡಿದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮತದಾರರು ಎಚ್ಚರವಹಿಸಬೇಕು. ಜೆಡಿಎಸ್ ಗೆಲುವಿಗೆ ಮನಸ್ಸು ಮಾಡಬೇಕು ಎಂದು ಹೇಳಿದರು.
ಕೆಜಿಎಸ್ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ಎನ್.ಶ್ರೀನಿವಾಸ್, ಗಣೇಶ್, ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಮುಖಂಡರಾದ ನಾರಾಯಣಸ್ವಾಮಿ, ಟಿ.ವೆಂಕಟೇಶ್, ಪ್ರಸನ್ನ, ರಾಮಚಂದ್ರಗೌಡ, ರವಿ, ಗಣೇಶ್ ಇದ್ದರು.

ಶ್ರೀನಿವಾಸಪುರ: ಪಟ್ಟಣದಲ್ಲಿ ಪಕ್ಷಾತೀತವಾಗಿ ಎಲ್ಲ ವಾರ್ಡ್‍ಗಳ ಅಭಿವೃದ್ಧಿಗೆ ಒತ್ತುನೀಡಲಾಗುವುದು : ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್

ಶ್ರೀನಿವಾಸಪುರ: ಪಟ್ಟಣದಲ್ಲಿ ಪಕ್ಷಾತೀತವಾಗಿ ಎಲ್ಲ ವಾರ್ಡ್‍ಗಳ ಅಭಿವೃದ್ಧಿಗೆ ಒತ್ತುನೀಡಲಾಗುವುದು ಎಂದು ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ವಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುವುದು. ರಸ್ತೆ, ಚರಂಡಿ ದುರಸ್ತಿ ಹಾಗೂ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಮಾತನಾಡಿ, ಸರ್ವ ಸದಸ್ಯರ ಸಭೆಗೆ ಆದಾಯ ಮತ್ತು ಖರ್ಚಿನ ಮಾಹಿತಿ ನೀಡಬೇಕು. ಹಾಗೆ ಮಾಡದೆ ಸಭೆ ನಡೆಸುವುದು ಸರಿಯಾದ ಕ್ರಮವಲ್ಲ. ಪುರಸಭೆಯಲ್ಲಿ ಜನನ ಮರಣ ಮಾಹಿತಿ ಸಮರ್ಪಕವಾಗಿಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಿರು. ವಿರೋಧ ಪಕ್ಷದ ಸದಸ್ಯರು ಅದಕ್ಕೆ ಧ್ವನಿಗೂಡಿಸಿದರು. ಆ ಕುರಿತು ಕ್ರಮ ಕೈಗೊಳ್ಳುವ ಭರವಸೆ ದೊರೆತ ಮೇಲೆ ಸಭೆ ಮುಂದುವರಿಯಿತು.
ಪುರಸಭೆ ಕಚೇರಿ ಮುಂದೆ ಪಾರ್ಕ್ ನಿರ್ಮಾಣ, ಎಲ್ಲ ವಾರ್ಡ್‍ಗಳಿಗೆ ವಾರ್ಡ್ ಸಂಖ್ಯೆ ನೀಡಿಕೆ, ಪಾರ್ಕಿಂಗ್ ಟೈಲ್ಸ್ ಅಳವಡಿಕೆ, ಪುರಸಭೆ ಸಿಬ್ಬಂದಿ ವಿಶ್ರಾಂತಿ ಗೃಹಗಳ ನಿರ್ಮಾಣ, ನೀರು ಸರಬರಾಜಿಗೆ ಹೊರಗುತ್ತಿಗೆ ನೀಡಿಕೆ, ಪೌರ ಕಾರ್ಮಿಕರಿಗೆ ಬೆಳಿಗಿನ ಉಪಹಾರ ನೀಡಿಕೆ, ಘನ ತ್ಯಾಜ್ಯ ನಿರ್ವಹಣೆ ಮುಂತಾದ 27 ಅಂಶಗಳಿಗೆ ಅನುಮೋದನೆ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ನಿರೀಕ್ಷಕ ವಿ.ನಾಗರಾಜ್, ಎಂಜಿನಿಯರ್ ಶ್ರೀನಿವಾಸ್, ಸಂತೋಷ್, ಸುರೇಶ್ ಇದ್ದರು.

ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ : ಸೌಮ್ಯ

ಕೋಲಾರ : ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆಯ ನಿರ್ದೇಶಕರಾದ ಸೌಮ್ಯ ಅವರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ತಾ ಇಲಾಖೆ ಮತ್ತು ಮಾಧ್ಯಮಗಳ ನಡುವೆ ಸಮನ್ವಯತೆ ಮೂಢಿಸಲು ಮತ್ತು ಇಲಾಖೆಯಿಂದ ಪತ್ರಕರ್ತರಿಗೆ ಮತ್ತು ಸಣ್ಣ ಪತ್ರಿಕೆಗಳಿಗೆ ಆಗಬೇಕಾದ ಸೌಲಭ್ಯಗಳ ಕುರಿತು ಇಲಾಖೆಯ ನಿರ್ದೇಶಕರೊಂದಿಗೆ ಆಯೋಜಿಸಿದ್ದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಸಾರ್ವಜನಿಕರಿಗೆ ಮಾಹಿತಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತಿರುವ ಮಾದ್ಯಮಗಳಿಗೆ ಇರುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಜಿಲ್ಲಾಡಳಿತ ಕಚೇರಿಯು ನಗರದಿಂದ ಸುಮಾರು 8-10 ಕಿ.ಮಿ. ದೂರ ಇರುವುದರಿಂದ ಯಾವೂದೇ ಕಾರ್ಯಕ್ರಮಗಳ ಕುರಿತು ಮಾದ್ಯಮಗಳಿಗೆ ಒಂದು ದಿನದ ಮುಂಚೆ ಮಾಹಿತಿ ನೀಡಬೇಕು, ಪತ್ರಕರ್ತರಿಗೆ ಜಿಲ್ಲಾಡಳಿತ ಕಚೇರಿಯಲ್ಲಿ ವಿಶ್ರಾಂತಿ ಕೊಠಡಿ ಸೌಲಭ್ಯ ಅಗತ್ಯತೆ ಇದೆ. ಸಾಧ್ಯವಾದಷ್ಟು ಸಭೆಗಳನ್ನು ಪತ್ರಿಕಾ ಗೋಷ್ಠಿಗಳನ್ನು ಮಧ್ಯಾಹ್ನದ ಒಳಗೆ ಆಯೋಜಿಸಿದರೆ ಅನುವುಂಟಾಗುವುದು, ಸಂಜೆ ವೇಳೆ ಮಾಧ್ಯಮದವರಿಗೆ ಕೆಲಸದ ಹೆಚ್ಚಿನ ಒತ್ತಡ ಇರುವುದನ್ನು ಜಿಲ್ಲಾ ಆಡಳಿತದ ಗಮನಕ್ಕೆ ತರಲಾಗುವುದು, ಚುನಾವಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಹೊಂದಿಕೊಂಡು ಹೋಗಬೇಕಾಗಿರುವುದು ಅನಿವಾರ್ಯವಾಗುವುದು ಎಂದು ತಿಳಿಸಿದರು. 

ಟೆಂಡರ್‌ಗಳನ್ನು ಸುದ್ದಿ ರೂಪದಲ್ಲಿ ಕೊಡದೆ ಜಾಹಿರಾತು ರೂಪದಲ್ಲಿ ನೀಡಬೇಕೆಂದು ಸಂಬಂಧ ಪಟ್ಟ ಇಲಾಖೆಗೆ ತಿಳಿಸಲಾಗುವುದು. ಜಾಹಿರಾತುಗಳನ್ನು ನೇರವಾಗಿ ಮಾದ್ಯಮಗಳಿಗೆ ನೀಡದೆ ವಾರ್ತಾ ಮತ್ತು ಸಾರ್ವಜನಿಕರ ಸಂರ್ಪಕ ಇಲಾಖೆಯ ಮೂಲಕವೇ ನೇರವಾಗಿ ನೀಡಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು. 

ಎಂ.ಸಿ.ಎ. ಏಜೆನ್ಸಿ ಶೇ 15 ರಷ್ಟು ಕಮೀಷನ್ ಪಡೆದು ಸಹ ಜಾಹಿರಾತು ಬಿಲ್‌ಗಳನ್ನು ವರ್ಷಾನುಗಟ್ಟಲೇ ಬಾಕಿ ಇಟ್ಟಿಕೊಂಡಿರುವ ಕುರಿತು ಸಂಬಂಧಪಟ್ಟ ಎಂ.ಸಿ.ಎ. ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ಬೇಗನೆ ಪತ್ರಿಕೆಗಳ ಬಿಲ್‌ಗಳನ್ನು ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯ ಅಧಿಕಾರಿಗಳು ತುರ್ತು ಪತ್ರಿಕಾಗೋಷ್ಠಿ ಸಂದರ್ಭಗಳಲ್ಲಿ ವಾರ್ತಾಇಲಾಖೆಯ ಸಭಾಂಗಣದಲ್ಲಿ ಆಯೋಜಿಸಿದಲ್ಲಿ ಪತ್ರಕರ್ತರಿಗೆ ಹೆಚ್ಚಿನ ಅನುಕೂಲಕರವಾಗುವುದು ಎಂಬ ನಿಮ್ಮಗಳ ಸಲಹೆಯನ್ನು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು. 

ಕೆಲವೊಂದು ಸಭೆಗಳಲ್ಲಿ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ ಸಭೆಯ ನಂತರ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಸಭೆಯ ಮುಗಿಯುವುದು ಸಂಜೆ ಅಗುವುದರಿಂದ ಪತ್ರಕರ್ತರು ಜಿಲ್ಲಾಡಳಿತ ಕಚೇರಿಗೆ ಬರುವುದಕ್ಕೆ ತೊಂದರೆ ಅಗಲಿದೆ ಎಂಬುವುದು ನಿಜ. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯಿಂದಲೇ ಮಾಹಿತಿಯನ್ನು ರವಾನಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. 

ಮಾದ್ಯಮದವರನ್ನು ಹೊರಗಿನ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕಾದ ಸಂದರ್ಭದಲ್ಲಿ ಊಟ ,ತಿಂಡಿ, ನೀರುಗಳಿಗೆ ಕೊರತೆಯಾಗದಂತೆ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು ಶೀಘ್ರದಲ್ಲಿ ಪತ್ರಕರ್ತರಿಗೆ ಅಧ್ಯಯನ ಪ್ರವಾಸವನ್ನು ಆಯೋಜಿಸುವುದಾಗಿ ಆಶ್ವಾಸನೆ ನೀಡಿದರು. 

ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಪತ್ರಿಕೆಗಳ ಉಳಿವಿಗೆ ವಾರ್ತಾ ಇಲಾಖೆಯು ಕೈಗೊಳ್ಳಬೇಕಾದ ಕ್ರಮಗಳು, ಪತ್ರಕರ್ತರ ಜೊತೆ ವಾರ್ತಾ ಇಲಾಖೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಬಗ್ಗೆ, ಪತ್ರಕರ್ತರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಬಗ್ಗೆ, ಸಮರ್ಪಕವಾಗಿ ಜಾಹಿರಾತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಕ್ರಮ ವಹಿಸುವುದು,ಕೆಲವು ಕಾರ್ಯಕ್ರಮಗಳಿಗೆ ಪತ್ರಕರ್ತರು ಬರಲು ಸಾಧ್ಯವಾಗದ ಸಂದರ್ಭದಲ್ಲಿ ಕಾರ್ಯಕ್ರಮದ ಭಾವಚಿತ್ರ ಸುದ್ಧಿಯ ಜೊತೆಗೆ ವಿಡಿಯೋ ಕ್ಲಿಪಿಂಗ್‌ಗಳನ್ನು ಪತ್ರಕರ್ತರ ಸಂಘದ ವ್ಯಾಟ್ಸಾಫ್ ಗ್ರೂಪ್‌ಗಳಿಗೆ ಕಳುಹಿಸುವುದು, ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿ ಸಂಗ್ರಹಕ್ಕೆ ಬಂದ ಸಂದರ್ಭದಲ್ಲಿ ಪತ್ರಕರ್ತರು ಕುಳಿತುಕೊಳ್ಳಲು ಕೊಠಡಿ ವ್ಯವಸ್ಥೆ ಮಾಡಲು ವಾರ್ತಾ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ಸಂವಾದದಲ್ಲಿ ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್, ಹಿರಿಯ ಪತ್ರಕರ್ತರಾದ ಅಬ್ಬಣಿಶಂಕರ್, ಹೆಚ್.ಎನ್.ಮುರಳೀಧರ್, ಕೋ.ನಾ.ಮಂಜುನಾಥ್, ಎನ್.ಮುನಿವೆಂಕಟೇಗೌಡ, ಎಸ್.ರವಿಕುಮಾರ್, ಎಸ್.ಚಂದ್ರಶೇಖರ್, ಸಮೀರ್‌ಅಹಮದ್, ರಾಜೇಂದ್ರ ಸಿಂಹ, ಎಸ್.ರವಿಕುಮಾರ್, ಸಿ.ಜಿ.ಮುರಳಿ, ರಮೇಶ್, ನಾಗರಾಜ್,  ಮಾತನಾಡಿದರು,   

ವೇದಿಕೆಯಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಸ್ಕಂದಕುಮಾರ್,  ಎಸ್.ಸಚ್ಚಿದಾನಂದ, ಬೆಟ್ಟಣ್ಣ, ಆಸೀಫ್‌ಪಾಷ, ಸಿ.ಕೆ.ಲಕ್ಷ್ಮಣ್, ಶಮ್ಗರ್, ಎನ್, ಸತೀಶ್, ಕೆ.ಜಿ.ಮಂಜುನಾಥ್, ಎಂ.ಲಕ್ಷ್ಮಣ, ಮದನ್, ಎನ್.ಶಿವಕುಮಾರ್, ಎನ್.ಗಂಗಾಧರ್, ಗೋಪಿ, ಸುಹಾಸ್, ಚಂದ್ರು, ಜೆ.ಎಂಬರೀಶ್, ನವೀನ್ ವಾರ್ತಾಇಲಾಖೆಯ ಅಧಿಕಾರಿಗಳಾದ ಮಂಜೇಶ್, ಸುಧಾ ಮುಂತಾದವರು ಉಪಸ್ಥಿತರಿದ್ದರು.

ಕುಂದಾಪ್ರ ಕನ್ನಡ ಅಕಾಡೆಮಿಗೆ ಸಚಿವರ ತಿರಸ್ಕಾರ – ರೊಚ್ಚಿಗೆದ್ದ ಕುಂದಗನ್ನಡಿಗರು – ಸಚಿವ ಸುನೀಲ್ ಕುಮಾರ್ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಆಗದಿದ್ದರೆ, ತಮ್ಮ ಸ್ಥಾನ ತೊರೆಯಲಿ- ಬಿ. ಅಪ್ಪಣ್ಣ ಹೆಗ್ಡೆ

ಕುಂದಾಪುರ, ಫೆ.೨೨: ಕರ್ನಾಟಕ ರಾಜ್ಯಕ್ಕೆ, ಭಾರತ ದೇಶಕ್ಕೆ ಸರ್ವ ರಂಗಗಳಲ್ಲೂ ಅದ್ಭುತವಾದ ಕೊಡುಗೆಗಳನ್ನು ನೀಡಿದ ವಿಶಿಷ್ಟ ಊರು ಕುಂದಾಪುರದ ಹೆಮ್ಮೆಯಾದ ವಿಶಿಷ್ಟ ಭಾಷೆಯಾದ ಕುಂದಾಪ್ರ ಕನ್ನಡ ಭಾಷೆಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು ತಿಳುವಳಿಕೆಯ ಕೊರತೆಯಿಂದ ಮತ್ತು ಉದ್ಧಟತನದಿಂದ ಎಕಾಎಕಿ ತಿರಸ್ಕರಿಸಿದ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರ ವರ್ತನೆಯು ಮೂವತ್ತು ಲಕ್ಷಕ್ಕೂ ಹೆಚ್ಚು ಕುಂದಾಪ್ರ ಕನ್ನಡ ಭಾಷಿಗರನ್ನು ರೊಚ್ಚಿಗೆಬ್ಬಿಸಿದೆ.

ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಯ ದಶಕಗಳ ಬೇಡಿಕೆಯ ಕುರಿತು ಶಾಸಕ ಮಂಜುನಾಥ ಭಂಡಾರಿಯವರು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸಾರ್ವಜನಿಕ ಮಹತ್ವದ ಜರೂರು ವಿಷಯವಾಗಿ ಪರಿಗಣಿಸಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಮನವಿ ಸಲ್ಲಿಸಿದ್ದರು. ಆದರೆ, ವಿಶಿಷ್ಟವಾದ ಕುಂದಾಪ್ರ ಕನ್ನಡದ ಮಹತ್ವವನ್ನರಿಯದೆ, ಈ ಬಗ್ಗೆ ಯಾವ ಅಧ್ಯಯನವನ್ನೂ ಮಾಡದೆ, ಪರಿಣತರ ಸಲಹೆಗಳನ್ನೂ ಪಡೆದುಕೊಳ್ಳದೆ, ಸಚಿವರು ವಿರೋಧ ಪಕ್ಷದವರಿಂದ ಪ್ರಸ್ತಾವನೆ ಎಂಬ ಒಂದೇ ಕಾರಣದಿಂದ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದು ಲಕ್ಷಾಂತರ ಮಂದಿ ಕುಂದ ಕನ್ನಡಿಗರಿಗೆ ಅತೀವ ಬೇಸರ ತರಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರ ನಡೆಯನ್ನು ಖಂಡಿಸಿ ಮಾಜಿ ಶಾಸಕ, ಹಿರಿಯ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಕುಂದಾಪುರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿ ನಡೆಸಿ, ಸಚಿವ ಸುನಿಲ್ ಕುಮಾರ್ ಅವರ ವರ್ತನೆಯನ್ನು ಖಂಡಿಸಿದ್ದಾರೆ.

ನಿನ್ನೆ ಸಂಜೆ 4 ಗಂಟೆಗೆ ಹರಿಪ್ರಸಾದ್ ಅಕ್ಷತ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮುತ್ಸದಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆಯವರು ಪತ್ರಿಕಾ ಗೋಷ್ಟಿಯಲ್ಲಿ ನೀಡಿದ ಹೇಳಿಕೆಯ ಪೂರ್ಣಪಾಠ ಇಂತಿದೆ –


“ಮೊತ್ತ ಮೊದಲು ನಾನು ಕನ್ನಡ ಸಂಸ್ಕ್ರತಿ ಇಲಾಖೆಯ ಮತ್ತು ವ್ಯಿದ್ಯುತ್ ಮಂತಿ ಸುನೀಲ್ ಕುಮಾರ್ ಇವರ ಬೆಜವಾಬ್ದಾರಿ ಕುಂದಾಪ್ರ ಕನ್ನಡಕ್ಕೆ ಕುಂದಾಪ್ರ ಅಕಾಡೆಮಿ ನೀಡಲಿಕೆ ಆಗುವುದಿಲ್ಲ ಎಂದು ವಿಧಾನ ಸಭೆಯಲ್ಲಿ ನೀಡಿದ ಲಿಖಿತ ಉತ್ತರವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಪತ್ರಿಕೆ ಗೋಷ್ಟಿಯಲ್ಲಿ ತಿಳಿಸಿ ಸಚಿವ ಸುನೀಲ್ ಕುಮಾರ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಆಗದಿದ್ದರೆ, ತಮ್ಮ ಸ್ಥಾನ ತೊರೆಯಲಿ “ಎಂದು ಹೇಳಿದರು.

ಮುಂದುವರೆಸಿ ಅವರು ಕುಂದಾಪುರ ಶುದ್ಧ ಕನ್ನಡದ ನೆಲ. ಇದರ ಮೇಲೆ ಬೇರೆ ಭಾಷೆಯ ಪ್ರಭಾವವಿಲ್ಲ. ಕರ್ನಾಟಕ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಕನ್ನಡದ ಉಚ್ಚಾರ ಮಾಡಲಾಗುತ್ತಿದೆಯಾದರೂ ಕುಂದಾಪ್ರ ಕನ್ನಡದ ಪರಿಶುದ್ಧತೆ, ಜಾನಪದ ಸಾಹಿತ್ಯದ ವೈಶಿಷ್ಟ್ಯ, ಸಂಸ್ಕೃತಿ ಬೇರೆಲ್ಲೂ ಇಲ್ಲ. ಸಾವಿರಾರು ವರ್ಷಗಳಿಂದ ತನ್ನತನ ಉಳಿಸಿಕೊಂಡಿರುವ ಈ ಭಾಷೆಯ ವೈಶಿಷ್ಟ್ಯ ಮತ್ತು ಚೆಲುವಿಗೆ ಇನ್ನೊಂದರ ಹೋಲಿಕೆ ಸಾಧ್ಯವಿಲ್ಲ. ಜನಪದ ಸಾಹಿತ್ಯದಲ್ಲಿ ಕುಂದಾಪ್ರ ಕನ್ನಡದಷ್ಟು ಸೊಗಡು ಎಲ್ಲಿಯೂ ಇಲ್ಲ. ಸಾವಿರಾರು ಪದಗಳ ಕುಂದಾಪ್ರ ಕನ್ನಡ ನಿಘಂಟು ಮಾಡಿದವರಿಗೂ ಈ ಭಾಷೆಯ ಎಲ್ಲ ಹಳೆಯ ಪದ ಪ್ರಯೋಗಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕುಂದಾಪ್ರ ಕನ್ನಡದ ಆಳ-ಅಗಲ ಅಷ್ಟು ವಿಸ್ತಾರವಾದುದು. ಈ ವಿಶಿಷ್ಟ ಭಾಷೆಯ ಉಳಿವು, ಅಧ್ಯಯನಕ್ಕಾಗಿ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿಯನ್ನು ಸರ್ಕಾರ ಸ್ಥಾಪಿಸಬೇಕು ಎಂದು ಬಹುತೇಕ ಸಾಹಿತ್ಯ ಸಮ್ಮೇಳನ, ಸಮಾವೇಶಗಳಲ್ಲಿ ಆಗ್ರಹಪಡಿಸಲಾಗುತ್ತಿದೆ.

ಈ ವಿಷಯವಾಗಿ ಸರ್ಕಾರಕ್ಕೆ ಮನವಿಯನ್ನೂ ನೀಡಲಾಗಿತ್ತು. ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆ ಬಗ್ಗೆ ವಿವಿಧ ವಿಧ್ವಾಂಸರಿಂದ ಮಾಹಿತಿ ಸಂಗ್ರಹಿಸಿ ವಿಧಾನ ಪರಿಷತ್ ನಲ್ಲಿ ಶಾಸಕ ಮಂಜುನಾಥ ಭಂಡಾರಿಯವರು ಪ್ರಸ್ತಾಪ ಮಾಡಿ, ಸರ್ಕಾರದಿಂದ ಉತ್ತರ ಬಯಸಿದ್ದರು. ಆದರೆ, ಸಚಿವ ಸುನಿಲ್ ಕುಮಾರ್ ಈ ಬಗ್ಗೆ ನಿರಾಶಾದಾಯಕ ಉತ್ತರ ನೀಡಿದ್ದಲ್ಲದೆ, ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂಬ ಅಸಮರ್ಪಕ ಹೇಳಿಕೆಯನ್ನು ನೀಡಿದ್ದಾರೆ.

ಈ ಬಗ್ಗೆ ಯಾರೊಂದಿಗೂ ಸಮಾಲೋಚಿಸದೆ, ಅಧ್ಯಯನ ಮಾಡದೆ, ಕರ್ನಾಟಕದಲ್ಲಿ ವಿವಿಧ ರೀತಿಯ ಕನ್ನಡ ಮಾತನಾಡುವುದು ಸಾಮಾನ್ಯ ಎಂಬಂತೆ ಉತ್ತರ ನೀಡಿರುವುದು ತಿಳುವಳಿಕೆ ಇಲ್ಲದವರ ಉತ್ತರ ಎಂದೇ ತಿಳಿಯಬೇಕಾಗುತ್ತದೆ. ಸಚಿವರು ಉಡುಪಿ ಜಿಲ್ಲೆಯವರೇ ಆಗಿದ್ದು, ಅವರ ಕ್ಷೇತ್ರದ ಬಹಳಷ್ಟು ಗ್ರಾಮಗಳಲ್ಲಿ ಕುಂದಾಪ್ರ ಕನ್ನಡ ಭಾಷೆಯ ಜನರೇ ಇದ್ದರೂ ಈ ರೀತಿಯ ಅಸಡ್ಡೆಯ ಉತ್ತರ ನೀಡಿರುವುದು ಖಂಡನೀಯ.

ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಹಾಗೂ ಮಂಗಳೂರು ವಿ ವಿ ಯಲ್ಲಿ ಕುಂದಾಪ್ರ ಕನ್ನಡ ಪೀಠಕ್ಕೆ ಅನುದಾನ ಮಂಜೂರಾತಿ ಬಗ್ಗೆ ಮುಖ್ಯ ಮಂತ್ರಿಗಳನ್ನು ಒತ್ತಾಯಿಸುವ, ಮತ್ತು ಹೋರಾಟ ನಡೆಸುವುದು ಅನಿವಾರ್ಯವಾಗಿದೆ.

ರಾಜ್ಯದ ಧಾರವಾಡ, ಬಳ್ಳಾರಿ, ಮಂಗಳೂರು, ಮಡಿಕೇರಿ ಮೊದಲಾದ ಪ್ರದೇಶಗಳಲ್ಲಿ ಕನ್ನಡದ ಮೇಲೆ ಮರಾಠಿ, ತೆಲುಗು, ತಮಿಳು, ಮಲಯಾಳಮ್ ಇತ್ಯಾದಿ ಅನ್ಯಭಾಷೆಗಳ ಪ್ರಭಾವವಿದೆ. ಆದರೆ ಕುಂದಾಪ್ರ ಕನ್ನಡದ ಮೇಲೆ ಯಾವುದರ ಪ್ರಭಾವವೂ ಇಲ್ಲದೆ ಶುದ್ಧವಾಗಿದೆ. ಹಿಂದಿನ ರಾಜ ಮಹಾರಾಜರ ಕಾಲದಲ್ಲೂ ಕುಂದಾಪ್ರ ಕನ್ನಡಕ್ಕೆ ಮಹತ್ವವಿತ್ತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ಲಕ್ಷ್ಮೇಶ್ವರದಲ್ಲಿನ ಶಾಸನವೊಂದರಲ್ಲೂ ಕುಂದಾಪ್ರ ಕನ್ನಡದ ಉಲ್ಲೇಖವಿದೆ. ಪಂಪ, ರನ್ನರ ಕಾವ್ಯಗಳಲ್ಲೂ ಕುಂದಾಪ್ರ ಕನ್ನಡದ ಪದಗಳಿವೆ. ಇಷ್ಟೆಲ್ಲಾ ಸಮೃದ್ಧಿಯಾದ ಭಾಷೆಯ ಬಗ್ಗೆ ಅರಿವಿಲ್ಲದೆ ಉತ್ತರಿಸಿರುವುದು ಸಚಿವರ ಜ್ಞಾನದ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅಪ್ಪಣ್ಣ ಹೆಗ್ಡೆ ಖಂಡಿಸಿದ್ದಾರೆ. ಮಾತ್ರವಲ್ಲ ಚುನಾವಣೆಯೊಳಗೆ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಯ ಘೋಷಣೆ ಮಾಡದಿದ್ದರೆ, ಸಮಾನ ಮನಸ್ಕರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿಯೂ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೊಂಡ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಟಿ. ಗಣಪತಿ ಶ್ರೀಯಾನ್, ಕುಂದಾಪುರ ಜಿಲ್ಲಾ ರಚನೆ ಹೋರಾಟ ಸಮಿತಿ ಅಧ್ಯಕ್ಷ ಮುಂಬಾರು ದಿನಕರ ಶೆಟ್ಟಿ, ಶಂಕರನಾರಾಯಣ ತಾಲ್ಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸ್ವಾವಲಂಬನಾ ಸಂಘದ ಅಧ್ಯಕ್ಷ ಪ್ರೊ. ವೆಂಕಟೇಶ ಪೈ, ಬಂಟರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಕುಂದಾಪ್ರ ಕನ್ನಡದ ವಿಶಿಷ್ಟತೆಯ ಬಗ್ಗೆ ವಿವರಿಸಿ, ಅಕಾಡೆಮಿ ಸ್ಥಾಪನೆಯ ಬಗ್ಗೆ ಒತ್ತಾಯಿಸಿದರು. ಚುನಾವಣೆ ಸಮೀಪಸುತ್ತಿರುವ ಈ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ನೀಡಿದ ಈ ಬಾಲಿಶ ಹೇಳಿಕೆ ಮೂವತ್ತು ಲಕ್ಷಕ್ಕೂ ಹೆಚ್ಚು ಕುಂದಾಪ್ರ ಕನ್ನಡಿಗರನ್ನು ಕೆರಳಿಸಿದೆ. ಮಾತ್ರವಲ್ಲ ವಿರೋಧ ಪಕ್ಷಗಳಿಗೆ ಒಂದು ಅಸ್ತ್ರವನ್ನೂ ನೀಡಿದಂತಾಗಿದೆ. ಈ ಪ್ರದೇಶದ ವಿವಿಧ ಹೋರಾಟ ಸಮಿತಿಗಳಿಗೆ ಹೊಸ ಕೆಚ್ಚು ತುಂಬಿದೆ. ಪತ್ರಕರ್ತ ಯು. ಎಸ್. ಶೆಣೈ ಸ್ವಾಗತಿಸಿ, ವಂದಿಸಿದರು.

ಮಕ್ಕಳ ಅಪಕರಣ- ಸದನದಲ್ಲಿ ಗೋವಿಂದರಾಜು ಪ್ರಶ್ನೆಗೆ ಗೃಹ ಸಚಿವರ ಉತ್ತರ:ಐದು ವರ್ಷಗಳಲ್ಲಿ 6160 ಪೋಕ್ಸೋ,12532 ಬಾಲ್ಯವಿವಾಹ ಪ್ರಕರಣ ದಾಖಲು

ಕೋಲಾರ:- ರಾಜ್ಯದಲ್ಲಿ ನಡೆಯುತ್ತಿರುವ ಮಕ್ಕಳ ಅಪಹರಣ, ದೌರ್ಜನ್ಯ ಪ್ರಕರಣಗಳ ಮಾಹಿತಿ ಹಾಗೂ ತಡೆಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಪ್ರಶ್ನಿಸಿದ ವಿಧಾನಪರಿಷತ್‍ನಲ್ಲಿ ಸದಸ್ಯ ಇಂಚರ ಗೋವಿಂದರಾಜು ಅವರಿಗೆ ಉತ್ತರಿಸಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಕಳೆದ ಐದು ವರ್ಷಗಳಲ್ಲಿ 6160 ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಸದನಕ್ಕೆ ಉತ್ತರ ನೀಡಿದರು.
ಎಂಎಲ್‍ಸಿ ಗೋವಿಂದರಾಜು ವಿಧಾನಪರಿಷತ್‍ನಲ್ಲಿ ಮಾತನಾಡಿ, ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ ಮಕ್ಕಳ ಅಪಹರಣ ಮತ್ತು ಅಪರಾಧಗಳ ಪ್ರಕರಣಗಳು, ಹಾಗೂ ಕಳೆದ ಎಂಟು ವರ್ಷಗಳಲ್ಲಿ ಸುಮಾರು ಐದು ಪಟ್ಟು ಹೆಚ್ಚು ಮಕ್ಕಳ ಮೇಲೆ ಅಪರಾಧಗಳು ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಸರ್ಕಾರ ಇದುವರೆಗೂ ತೆಗೆದುಕೊಂಡ ಕ್ರಮ, ಎಷ್ಟು ಪ್ರಕರಣಗಳನ್ನು ಇತ್ಯಾರ್ಥಪಡಿಸಲಾಗಿದೆ ಇದರಲ್ಲಿ ಎಷ್ಟು ಜನರು ಶಿಕ್ಷೆಗೆ ಒಳಗಾಗಿದ್ದಾರೆ ಮಾಹಿತಿ ನೀಡುವಂತೆ ಕೋರಿದರು.
ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆಗಳ ಪ್ರಕಾರ 2013 ರಲ್ಲಿ ರಾಜ್ಯದಲ್ಲಿ 1353 ಪ್ರಕರಣಗಳಿದ್ದರೆ, 2021 ರಲ್ಲಿ 7261 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 2020 ರಿಂದ ಸುಮಾರು 2563 ಪ್ರಕರಣಗಳನ್ನು ಪೊಲೀಸರು ಇನ್ನೂ ತನಿಖೆ ಮಾಡಬೇಕಿದೆ ಹಾಗೂ 2022 ರಲ್ಲಿ ತನಿಖೆ ಮಾಡಬೇಕಾದ ಒಟ್ಟು ಪ್ರಕರಣ ಸಂಖ್ಯೆಯು ಇದೀಗ 9824 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
ಇದಲ್ಲದೇ ಮಕ್ಕಳ ವಿರುದ್ದ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು 13,903 ಪ್ರಕರಣಗಳು ನ್ಯಾಯಾಲಗಳಲ್ಲಿ ವಿಚಾರಣೆ ಬಾಕಿ ಉಳಿದಿದ್ದು, 4673 ಪ್ರಕರಣಗಳನ್ನು 2021 ರಲ್ಲಿ ವಿಚಾರಣೆಗೆ ಕಳುಹಿಸಲಾಗಿರುತ್ತದೆ. ಇನ್ನು ಸೈಬರ್ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದ್ದು, 2019ಕ್ಕೆ ಹೋಲಿಸಿದರೆ 2020 ರಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳಲ್ಲಿ 400 ಪ್ರತಿಶತದಷ್ಟು ಹೆಚ್ಚಾಗಿರುವ ಬಗ್ಗೆ ರಾಷ್ಟ್ರೀಯ ಅಪರಾಧ ಬ್ಯೂರೋ ವರದಿಯಲ್ಲಿದೆ ಎಂದು ಸರ್ಕಾರದ ಗಮನಕ್ಕೆ ತಂದರು.
ಇದರ ಅಂಕಿ-ಅಂಶಗಳಂತೆ ಮಕ್ಕಳ ಮೇಲಿನ ಆನ್‍ಲೈನ್ ಅಪರಾಧಗಳ 842 ಪ್ರಕರಣಗಳಲ್ಲಿ 738 ಪ್ರಕರಣಗಳು ಮಕ್ಕಳನ್ನು ಲೈಂಗಿಕವಾಗಿ ಆಶ್ಲೀಲವಾಗಿ ಚಿತ್ರಿಸುವ, ಪ್ರಕಟಿಸುವ ಅಥವಾ ರವಾನಿಸುವ ಪ್ರಕರಣವಾಗಿದೆ ಎಂಬುದಾಗಿ ಇದಲ್ಲದೇ ಮಕ್ಕಳು ಸ್ಮಾರ್ಟ್‍ಫೋನ್ ಮತ್ತು ಇಂಟರ್‍ನೆಟ್‍ಗೆ ದಾಸರಾಗುತ್ತಿರುವುದರಿಂದ ಮಕ್ಕಳ ಮೇಲೆ ಆಗುತ್ತಿರುವಂತಹ ಅಪರಾಧ ಪ್ರಕರಣಗಳು ಏರುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮೊಬೈಲ್ ಕೊಡಿಸುವ ಪೋಷಕರು ತಮ್ಮ ಮಕ್ಕಳ ಚಲನವಲನದತ್ತ ಗಮನ ಹರಿಸಬೇಕಾಗಿರುತ್ತದೆ ಎಂಬುದಾಗಿ ಸುದೀರ್ಘವಾಗಿ ಗೋವಿಂದರಾಜುರವರು ಗೃಹ ಸಚಿವರ ಗಮನಕ್ಕೆ ಬಂದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವರಾದ ಅರಗಜ್ಞಾನೇಂದ್ರ, ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಕಳೆದ 5 ವರ್ಷದಲ್ಲಿ, ಗಂಡು ಮಕ್ಕಳ ಸಂಖ್ಯೆ: 2858, ಹೆಣ್ಣು ಮಕ್ಕಳ ಸಂಖ್ಯೆ: 6160, ಪೋಕ್ಸೋ ಪ್ರಕರಣಗಳ ಸಂಖ್ಯೆ:12532, ಬಾಲ್ಯ ವಿವಾಹ ತಡೆ ಕಾಯ್ದೆ ಪ್ರಕರಣಗಳ ಸಂಖ್ಯೆ:853, ಬಾಲ ಕಾರ್ಮಿಕ ತಡೆ ಕಾಯ್ದೆ ಪ್ರಕರಣಗಳು:319, ಜೆ.ಜೆ. ಕಾಯ್ದೆ ಪ್ರಕರಣಗಳ ಸಂಖ್ಯೆ:292, ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ವರದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಅಂಕಿ-ಅಂಶಗಳನ್ನು ಗಮನಿಸಿದಲ್ಲಿ ಸರಾಸರಿ 10 ರಿಂದ 20 ಶೇಕಡಾ ಹೆಚ್ಚಾಗಿರುವುದು ಕಂಡುಬಂದಿರುತ್ತದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಜೆ.ಜೆ. ಕಾಯ್ದೆ ಪ್ರಕರಣಗಳ ಸಂಖ್ಯೆ:292, ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ವರದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಅಂಕಿ-ಅಂಶಗಳನ್ನು ಗಮನಿಸಿದಲ್ಲಿ ಸರಾಸರಿ 10 ರಿಂದ 20 ಶೇಕಡಾ ಹೆಚ್ಚಾಗಿರುವುದು ಕಂಡುಬಂದಿರುತ್ತದೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವರ ಉತ್ತರಕ್ಕೆ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದಾಗ ಮಾತನಾಡಿದ ಸಚಿವರು, ಸದಸ್ಯರು ಸಂಕ್ಷೀಪ್ತವಾಗಿ ವಿವರಗಳನ್ನು ನೀಡಿರುತ್ತಾರೆ. ಇದನ್ನು ನಾನು ಒಪ್ಪುತ್ತೇನೆ. ಈ ಸಂಬಂಧವಾಗಿ ಅತ್ಯಾಚಾರ, ಪೋಕ್ಸೋ ಪ್ರಕರಣಗಳ ತನಿಖೆಯನ್ನು ಅಪರಾಧ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ, 2018 ರಲ್ಲಿನ ತಿದ್ದುಪಡಿಯಂತೆ ನಿಗದಿಪಡಿಸಿರುವ 60 ದಿನಗಳ ಕಾಲಮಿತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆಯ ಮೂಲಕ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.
ಚಾಲ್ತಿಯಲ್ಲಿರುವ ಸಾಮಾಜಿಕ ಜಾಲತಾಣಗಳಾದ ಬ್ಲಾಗ್, ಟ್ವಿಟರ್, ಫೇಸ್ ಬುಕ್, ಪೊಲೀಸ್ ವೆಬೆ ಸಸೈಟ್ ಹಾಗೂ ಇತರೆ ಜಾಲತಾಣಗಳ ಮೂಲಕ ಮಾನವ ಕಳ್ಳ ಸಾಗಾಣಿ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಪ್ರಕಟಿಸುವ ಕಾರ್ಯವನ್ನು ಚುರುಕುಗೊಳಿಸುವುದಾಗಿ ಸದನಕ್ಕೆ ಸಚಿವರು ಉತ್ತರ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಮೇಲೆ ವಿಚಾರಸಂಕಿರಣ

ಕ್ರೈಸ್ತ ವಿದ್ಯಾಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಋಷಿವನ, ಆಧ್ಯಾತ್ಮಿಕತೆಯ ಸಂಸ್ಥೆ-ಕುತ್ತಾರು ಇವುಗಳ ಜಂಟಿ ಆಶ್ರಯದಲ್ಲಿ 18 ಫೆಬ್ರವರಿ 2023 ರಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ಎಂಬ ವಿಷಯದ ಮೇಲೆ ವಿಚಾರಸಂಕಿರಣವು ಜರಗಿತು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣವು ಕೇವಲ ಒಂದು ತರಗತಿ ಅಥವಾ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ಬದುಕುವ ಕಲೆಯನ್ನು ಕಲಿಸಬೇಕು ಹಾಗೂ ನಮ್ಮನ್ನು ಸಮಾಜದ ಕೆಡುಕುಗಳ ವಿಮೋಚನೆಗಾಗಿ ಪ್ರೇರೇಪಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸಂತ ಅಲೋಷಿಯಸ್ ಕಾಲೇಜಿನ ಲೊಯೋಲಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ರಿಚ್ಚರ್ಡ್ ಗೊನ್ಸಾಲ್ವಿಸ್ ರವರು ಶಿಕ್ಷಣ ನೀತಿಯ ಸಮಗ್ರ ನೋಟವನ್ನು ನೀಡಿದರೆ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ವಲೇರಿಯನ್ ರೊಡ್ರಿಗಸ್ ರವರು ಶಿಕ್ಷಣ ನೀತಿಯ ವಿಮರ್ಶೆ ಮಾಡಿದರು.

ಮೊದಲನೆಯ ಗೋಷ್ಠಿಯ ಚರ್ಚೆಯನ್ನು ಸಂತ ಅನ್ನ ಬಿಎಡ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಪ್ಲೋಸಿ ಡಿಸೋಜ ಹಾಗೂ ಎರಡನೆಯ ಗೋಷ್ಠಿಯ ಚರ್ಚೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ವಂ. ಡಾ. ಗ್ರೆಗರಿ ಡಿಸೋಜರವರು ನಿರ್ವಹಿಸಿದರು.

ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಲಾವಿಭಾಗದ ಮುಖ್ಯಸ್ಥರಾದ ಪ್ರೊ. ಜಯರಾಜ್ ಅಮೀನ್ ರವರು ಶಿಕ್ಷಣ ನೀತಿಯ ಬಗ್ಗೆ ಕೆಲವು ವಿಚಾರಗಳನ್ನು ಮಂಡಿಸಿದರು. ಋಷಿವನದ ನಿರ್ದೇಶಕರಾದ ವಂ. ಡಾ. ಅರ್ಚಿಬಾಲ್ಢ್ ಗೊನ್ಸಾಲ್ವಿಸ್ ಮತ್ತು ಕ್ರೈಸ್ತ ಪೀಠದ ಮುಖ್ಯಸ್ಥರಾದ ವಂ. ಡಾ. ಐವನ್ ಡಿ’ಸೋಜರವರ ಮಾರ್ಗದರ್ಶನದಲ್ಲಿ ಜರಗಿದ ಈ ಗೋಷ್ಠಿಯಲ್ಲಿ ಸುಮಾರು 250 ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವವರು ಭಾಗವಹಿಸಿದ್ದರು. ಋಷಿವನದ ಭೋದಕ ವೃಂದ ಹಾಗೂ ವಿದ್ಯಾರ್ಥಿಗಳು ವಿಚಾರಸಂಕಿರಣದ ಎಲ್ಲಾ ವ್ಯವಸ್ಥೆಯನ್ನು ಮಾಡಿದರು.

ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯರಿಂದ ಕುಂದಾಪುರ ಗಡಿಯಾರ ಗೋಪುರವನ್ನು ಆಕರ್ಷಣೆ ಶೈಲಿಯಲ್ಲಿ ನವೀಕರಣ

ಕುಂದಾಪುರ:ಇನ್ನರ್ ವ್ಹೀಲ್ ಕ್ಲಬ್ ಕುಂದಾಪುರ ದಕ್ಷಿಣ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಸವಿ ನೆನಪಿಗಾಗಿ ಈಗಾಗಲೇ ನಂದಿಕೇಶ್ವರ ಫ್ರೇಂಡ್ಸ್ ನಿರ್ಮಿಸಿದ್ದ ಗಡಿಯಾರ ಗೋಪುರವನ್ನು ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯರು ವಿನೂತನ ರೀತಿಯ ಆಕರ್ಷಣೆ ಶೈಲಿಯಲ್ಲಿ ನವೀಕರಣಗೊಳಿಸಿದ್ದಾರೆ.

ಇನ್ನರ್ ವ್ಹೀಲ್ ಕ್ಲಬ್ಬಿನ ಜಿಲ್ಲಾ ಸಭಾಪತಿ ಶ್ರೀಮತಿ ಕವಿತಾ ನಿಯತ್ ನವೀಕರಿಸಿದ ಗಡಿಯಾರ ಗೋಪುರ ಉದ್ಘಾಟಿಸಿ, ನಗರ ಸೌಂದರ್ಯ ಹೆಚ್ಚಿಸುವಲ್ಲಿ ವೃತ್ತಗಳು, ಗಡಿಯಾರ ಗೋಪುರಗಳು ಸಹಕಾರಿ ಎಂದು ಹೇಳಿದರು.

ಇನ್ನರ್ ವ್ಹೀಲ್ ಕ್ಲಬ್ಬಿನ ಅಧ್ಯಕ್ಷರಾದ ಸುಮಾ ಪುತ್ರನ್ ಸ್ವಾಗತಿಸಿ, ಕಾರ್ಯದರ್ಶಿ ರಶ್ಮಿ ಶೇಟ್ ವಂದಿಸಿದರು.

ಪುರಸಭಾ ಸದಸ್ಯರಾದ ಮೋಹನದಾಸ ಶೆಣೈ, ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಪುಷ್ಪಾ ಶೇಟ್, ರೋಟರಿ ವಲಯ ಒಂದರ ಸಹಾಯಕ ಗವರ್ನರ್ ರೊ ಡಾ ಉಮೇಶ್ ಪುತ್ರನ್, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಇನ್ನರ್ ವ್ಹೀಲ್ ನ ಸದಸ್ಯರು ಹಾಗೂ ಹೂವಿನ ಮಾರುಕಟ್ಟೆಯವರು ಉಪಸ್ಥಿತರಿದ್ದರು.